ಅಂಕಣಇತಿಹಾಸದೇಶ

ಪೂರ್ವ ಜನ್ಮದಲ್ಲಿ ತನ್ನನ್ನು ಪ್ರೀತಿಸಿದ ಹುಡುಗಿಗೆ ಶಾಪವಿತ್ತ ಗಣೇಶ!! ಇಂದಿಗೂ ವಿಘ್ನೇಶ್ವರನ ಪೂಜೆಯಲ್ಲಿ ತುಳಸಿಗಿಲ್ಲ ಪ್ರಾಮುಖ್ಯತೆ..

ಹಿಂದೂ ಸಾಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆಯಲ್ಲದೇ, “ತುಳಸಿ” ಯು ಪ್ರಕೃತಿಯಿಂದ ನಮಗೆ ದೊರೆತ ದಿವ್ಯೌಷಧಿಯೂ ಹೌದು!! ಮಹಾಭಾರತ ಕಾಲದಲ್ಲಿ ಘಟೋತ್ಕಜ ಸಹ ಹೊರಲಾಗದ ಶ್ರೀ ಮಹಾ ವಿಷ್ಣುವನ್ನು ಒಂದು ತುಳಸಿ ದಳ ಎಬ್ಬಿಸಿತು ಎನ್ನುವ ಬಗ್ಗೆ ತಿಳಿದಿದ್ದೇವೆ. ಅಷ್ಟು ಶಕ್ತಿಯನ್ನು ಹೊಂದಿರುವ ಈ ತುಳಸಿ ಪುರಾಣಗಳಲ್ಲಿ ಒಂದು ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿದೆ!! ಆದರೆ ಎಲ್ಲಾ ಕಾರ್ಯಗಳಿಗೂ ಮೊದಲು ಪೂಜಿತನಾಗುವ ಏಕದಂತನಿಗೆ ತುಳಸಿ ಮಾತ್ರ ನಿಷಿದ್ಧವಾಗಿದೆ!! ಹಾಗಾದರೆ ವಿನಾಯಕನಿಗೇಕೆ ತುಳಸಿಯನ್ನು ಕಂಡರೆ ಆಗದು??

ತುಳಸಿಯನ್ನು ಪವಿತ್ರ ದೇವತೆ ಎಂದು ಹೇಳಲಾಗುತ್ತದೆ!! ತುಳಸಿ ದರ್ಶನದಿಂದ ಪಾಪ ಪರಿಹಾರವಾಗುತ್ತದೆಯಲ್ಲದೇ ತುಳಸಿ ಸ್ಪರ್ಶದಿಂದ ಪವಿತ್ರತೆ ಮತ್ತು ಮೋಕ್ಷಪ್ರಾಪ್ತಿಯಾಗುತ್ತದೆ ಎಂದೂ ಹೇಳುವುದುಂಟು!! ಅಷ್ಟೇ ಅಲ್ಲದೇ, ತುಳಸಿ ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಾಭ ಎಂದು ತುಳಸಿಗೆ ಭಾರತದಲ್ಲಿ ವಿಶೇಷವಾಗಿ ಪೂಜೆ ಮಾಡುವುದುಂಟು ಇಂತಹ ತುಳಸಿಯು ವಿನಾಯಕನ ಪೂಜೆಯಲ್ಲಿ ಮಾತ್ರ ನಿಷಿದ್ಧವಾಗಿರುವುದೇ ನಿಜಕ್ಕೂ ಅಚ್ಚರಿಯ ವಿಚಾರ!!

ಹೌದು… ‘ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್’ ಎಂದು ಹೇಳುವುದುಂಟು!! ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಹಾಗೂ ಗೌರವ ಸ್ಥಾನವಿದ್ದು, ಎಲ್ಲಾ ಧಾರ್ಮಿಕ ಆಚರಣೆಗೂ ತುಳಸಿಯನ್ನು ಬಳಸುತ್ತಾರೆ. ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು ಪಡೆದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.

ಆದರೆ ವಿನಾಯಕನ ಪೂಜೆಗೆ ಮಾತ್ರ ತುಳಸಿಯನ್ನು ಉಪಯೋಗಿಸುವುದಿಲ್ಲ ಯಾಕೆ ಗೊತ್ತೇ??

ಪುರಾತನ ಕಾಲದಿಂದಲೂ ತುಳಸಿ ಗಿಡಗಳಿಗೆ ಸಂಬಂಧಿಸಿದ ಕಥೆಯೊಂದು ಪ್ರಚಾರದಲ್ಲಿದೆ. ಅದೇನೆಂದರೆ, ಸೌಂದರ್ಯವತಿಯಾದ ಒರ್ವ ಅಪ್ಸರೆಯಾಗಿದ್ದ ತುಳಸಿ ಧೀರ ಹಾಗೂ ಸುಂದರ ಪುರುಷನೊಬ್ಬನನ್ನು ವಿವಾಹವಾಗಲು ಇಚ್ಛಿಸಿದಲ್ಲದೇ ವಿವಾಹವಾಗಲು ಉತ್ತಮ ಪುರುಷನಿಗಾಗಿ ದೇವರ ಬಳಿ ನಾನಾ ರೀತಿಯ ಜಪ, ವ್ರತ ಹಾಗೂ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದಳು. ಹೀಗೆ ಒಂದು ದಿನ ಕಾಡಿನ ಮಧ್ಯೆ ಹೋಗುತ್ತಿದ್ದಾಗ ಗಂಗಾ ನದಿಯ ದಡದಲ್ಲಿ ಕೂತು ಧ್ಯಾನದಲ್ಲಿ ಮಗ್ನನಾದ ಗಣಪತಿಯು ಅಪ್ಸರೆಯ ಕಣ್ಣಿಗೆ ಬೀಳುತ್ತಾನೆ.

ಗಣಪತಿಯನ್ನು ಕಂಡೊಂಡನೆಯೇ ಆತನ ಸೌಂದರ್ಯವನ್ನು ಕಂಡ ಈಕೆ ಗಣಪತಿಯನ್ನು ವಿವಾಹವಾಗಲು ಇಚ್ಛಿಸುತ್ತಾಳೆ. ಬೇಗನೇ ಗಣೇಶನ ಹತ್ತಿರ ಹೋಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಲು ಸಿದ್ಧಳಾದಲ್ಲದೇ ಧ್ಯಾನಮಗ್ನನಾದ ಗಣಪತಿಯ ಬಳಿ ಹೋಗಿ ಗಣಪತಿಯು ಧ್ಯಾನದಿಂದ ಮೇಲೇಳುವಂತೆ ಮಾಡಲು ಗಣಪತಿಯನ್ನು ನಾನಾ ನಾಮಾವಳಿಗಳಿಂದ ಕೂಗುತ್ತಾಳೆ. ಆಕೆಯ ಕೂಗು ಕೇಳಿದ ಗಣಪನು ಧ್ಯಾನದಿಂದ ಎದ್ದು ಅಪ್ಸರೆಯನ್ನು ಕೇಳುತ್ತಾನೆ!! ನನ್ನ ಧ್ಯಾನವನ್ನು ಭಂಗ ಮಾಡಲು ಕಾರಣವೇನು ಎಂದು!!!

Why is Tulsi not offered to Lord Ganesha?

ಇದಕ್ಕುತ್ತರಿಸಿದ ಅಪ್ಸರೆಯು ನೀನು ನನಗೆ ತುಂಬಾ ಇಷ್ಟವಾಗಿರುವೆ. ನಾನು ನಿನ್ನನ್ನೇ ವಿವಾಹವಾಗುತ್ತೇನೆ ಎಂದು ಹೇಳುತ್ತಾಳೆ. ಅಪ್ಸರೆಯ ಮಾತು ಕೇಳಿದ ಗಣಪನು ವಿವಾಹ ಮಾಡಿಕೊಂಡು ಮೋಹ ಬಂಧನದಲ್ಲಿ ಬಂಧಿತನಾಗಲು ನನಗೆ ಇಷ್ಟವಿಲ್ಲ ಎಂದು ಹೇಳುತ್ತಾನೆ. ಗಣಪನ ಪ್ರತಿಕ್ರಿಯೆಗೆ ಕೆಂಡಾಮಂಡಲವಾದ ಅಪ್ಸರೆಯು ನೀನು ನನ್ನನ್ನು ವಿವಾಹವಾಗಲೇಬೇಕು ಎಂದು ಪಟ್ಟುಹಿಡಿಯುತ್ತಾಳೆ. ಆದರೆ ಅದಕ್ಕೆ ವಿನಾಯಕನು ನಿರಾಕರಿಸುತ್ತಾನೆ. ವಿವಾಹ ಮಾಡಿಕೊಂಡರೆ, ತನ್ನ ತಪಸ್ಸಿಗೆ ಭಂಗವಾಗುತ್ತದೆ ಎನ್ನುತ್ತಾನೆ. ಇದರೊಂದಿಗೆ ಕೋಪಕೊಂಡ ಆಕೆ ಗಣೇಶನಿಗೆ ಶಾಪವಿಡುತ್ತಾಳೆ. ಆತನ ವಿವಾಹ ಬಲವಂತವಾಗಿ, ಇಷ್ಟವಿಲ್ಲದೇ ನಡೆಯುತ್ತದೆ” ಎನ್ನುತ್ತಾಳೆ.

ಇದಕ್ಕೆ ಕೋಪಗ್ರಸ್ಥನಾಗ ವಿನಾಯಕ ಒಬ್ಬ ರಾಕ್ಷಸನೊಂದಿಗೆ ನಿನ್ನ ವಿವಾಹವಾಗುತ್ತದೆ, ಆತನಿಂದ ಎಲ್ಲಾ ಕಷ್ಟಗಳನ್ನು ಎದುರಿಸ ಬೇಕಾಗುತ್ತದೆ, ಎಂದು ವಿನಾಯಕನು ಶಾಪವಿಟ್ಟನು. ಮರುಕ್ಷಣ ತನ್ನ ತಪ್ಪನ್ನು ತಿಳಿದುಕೊಂಡ ಆ ಅಪ್ಸರೆಯು ಶಾಪ ವಿಮೋಚನೆ ಮಾಡುವಂತೆ ಗಣೇಶನನ್ನು ಪ್ರಾರ್ಥಿಸುತ್ತಾಳೆ. ಗಣೇಶನು ಆಗ, ಶಾಪ ವಿಮೋಚನೆ ಮಾಡಲಾರೆ ಎಂದು, ನೀನು ಪೃಥ್ವಿಯ ಮೇಲೆ ವೃಕ್ಷವಾಗಿ ಜನಿಸು ಎಂದು ಶಾಪ ನೀಡುತ್ತಾನೆ. ನಂತರ ತನ್ನ ತಪ್ಪಿನ ಅರಿವಾದ ಅಪ್ಸರೆಯು ಗಣಪತಿಯ ಬಳಿ ಕ್ಷಮೆ ಕೇಳುತ್ತಾಳೆ. ತನ್ನ ಕೋಪವನ್ನು ನಿಯಂತ್ರಣಕ್ಕೆ ತಂದುಕೊಂಡ ಗಣಪನು ಹೇ ಮಾತೆ, ತುಳಸಿ ಗಿಡವಾಗಿ ಜನ್ಮ ಪಡೆಯುವ ನಿನ್ನನ್ನು ಶ್ರೀಕೃಷ್ಣನು ವಿವಾಹವಾಗುತ್ತಾನೆ ನೀನು ಸುಖವಾಗಿರುವೆ. ಅಷ್ಟೇ ಅಲ್ಲದೇ ತುಳಸಿ ಗಿಡ ಇಲ್ಲದೇ ವಿಷ್ಣುವಿಗೆ ಪೂಜೆ ನಡೆಯುವುದಿಲ್ಲ, ಅದರಲ್ಲಿ ಅನೇಕ ಔಷಧಿ ಗುಣಗಳು ಕೂಡ ಇರುತ್ತದೆಯೆಂದು ವಿನಾಯಕನು ತುಳಸಿಗೆ ವರವನ್ನು ನೀಡುತ್ತಾನೆ.

ಅದರಂತೆಯೇ ಈ ತುಳಸಿಯು ಶಂಕಚೂದ ಎನ್ನುವ ರಾಕ್ಷಸನನ್ನು ವಿವಾಹ ಮಾಡಿಕೊಂಡಳಲ್ಲದೇ ಕೆಲವು ದಿನಗಳ ಕಾಲ ಕಷ್ಟಗಳನ್ನು ಅನುಭವಿಸಿ, ಆಕೆ ಮರಣಿಸುತ್ತಾಳೆ. ಮತ್ತೇ ತುಳಸಿ ಗಿಡದ ರೂಪದಲ್ಲಿ ಜನ್ಮಿಸುತ್ತಾಳೆ. ಅಲ್ಲಿನಿಂದ ತುಳಸಿ ಗಿಡದ ಎಲೆಗಳನ್ನು ವಿಷ್ಣುವಿನ ಪೂಜೆಗೆ ಉಪಯೋಗಿಸುತ್ತಿದ್ದಾರೆ. ಈಗಲೂ ಕೂಡ ತುಳಸಿ ಎಲೆಗಳು ಇಲ್ಲದೇ ವಿಷ್ಣು ಪೂಜೆ ಪೂರ್ತಿಯಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ತುಳಸಿಗೆ ಗಣಪ ಆಸರೆ ನೀಡದ ಕಾರಣ ಇಂದಿಗೂ ತುಳಿಸಿಯನ್ನು ಗಣಪನಿಗೆ ಅರ್ಪಿಸುವುದಿಲ್ಲ ಎಂದು ಪುರಾಣದ ಕಥೆಗಳು ಹೇಳುತ್ತವೆ.

ಒಟ್ಟಿನಲ್ಲಿ ತುಳಸಿ ಬಹುಪಯೋಗಿ ಸಸ್ಯವಾಗಿದ್ದು, ತುಳಸಿ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ಪವಿತ್ರ. ಹಾಲಿನ ಸಮುದ್ರದಲ್ಲಿ ಹುಟ್ಟಿದ ತುಳಸಿಯನ್ನು, ಹಾಲಿನಿಂದಲೇ ಪೂಜಿಸಿದರೆ, ಬೇಗನೆ ಪ್ರಸನ್ನಳಾಗಿ ಸಂಪತ್ತು ಅನುಗ್ರಹಿಸುತ್ತಾಳೆಂಬ ವಾಡಿಕೆ ಬಹಳ ಹಿಂದಿನದು. ಶಿವನಿಗೆ ಬಿಲ್ವಪತ್ರೆ, ಗಣಪತಿಗೆ ಗರಿಗೆ ಪ್ರಿಯವಾದಂತೆ ವಿಷ್ಣುವಿಗೆ ತುಳಸಿ ಬಹುಪ್ರಿಯವಾಗಿದೆ!! ಅಷ್ಟೇ ಅಲ್ಲದೇ, ಎಲ್ಲಾ ದೇವತೆಗಳ ಪೂಜೆಯಲ್ಲಿ ತುಳಸಿ ಪ್ರಾಮುಖ್ಯತೆಯನ್ನು ಪಡೆದಿದ್ದರೆ, ಕಳೆದ ಜನ್ಮದಲ್ಲಿ ಗಣಪತಿ ತುಳಸಿಗೆ ಇತ್ತ ಶಾಪದಿಂದಾಗಿ, ಗಣಪತಿಯ ಪೂಜೆಯಲ್ಲಿ ಮಾತ್ರ ತುಳಸಿಗೆ ಪ್ರಾಮುಖ್ಯತೆ ನೀಡಲಾಗುದಿಲ್ಲ ಎಂದು ಪುರಾಣಗಳ ಮೂಲಕ ತಿಳಿದು ಬರುತ್ತೆ!!

ಮೂಲ:
http://www.kannadaprabha.com/

-Postcard team

Tags

Related Articles

FOR DAILY ALERTS
Close