ಪ್ರಚಲಿತ

ಪಠ್ಯದಲ್ಲಿ ಬರಲಿದ್ದಾರೆ ವಿಶ್ವ ಸಂತ!! ಇನ್ನು ಮಕ್ಕಳು ಬಾಲ್ಯದಲ್ಲಿಯೇ ಕಲಿಯಲಿದ್ದಾರೆ ವಿವೇಕಾನಂದರ ಚರಿತ್ರೆ!!

ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎಂದ ವೇದಾಂತದ ಸಿಡಿಲಮರಿ ಎಂದೇ ಖ್ಯಾತರಾಗಿರುವ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಯುವಕರಿಗೆ ಕರೆ ನೀಡಿದ್ದರ ವಿಚಾರ ನಾವೆಂದೂ ಮರೆಯುವಂತಿಲ್ಲ!! ಆದರೆ ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರೆನಿಸಿದ ಸ್ವಾಮಿ ವಿವೇಕಾನಂದರು ಇನ್ನು ಮುಂದೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ರಾರಾಜಿಸಲಿದ್ದಾರೆ.

ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ಹೆಸರುವಾಸಿಯಾಗಿರುವ ವಿವೇಕಾನಂದರು ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಾರ ಮಾಡಿ ಸನ್ಯಾಸಿಯಾಗಿ ದೇವರ ಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದ್ದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ.

ಆದರೆ ಇದೀಗ ವೇದಾಂತದ ಸಿಡಿಲಮರಿ ಎಂದೇ ಖ್ಯಾತರಾಗಿರುವ ಸ್ವಾಮಿ ವಿವೇಕಾನಂದರ ಬಗ್ಗೆ ಇನ್ನು ಮುಂದೆ ಮಕ್ಕಳು ತಮ್ಮ ಪಠ್ಯಕ್ರಮದಲ್ಲಿ ತಿಳಿದುಕೊಳ್ಳಲಿದ್ದಾರೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ. ಹೌದು… ಉಳಿದ ಸನ್ಯಾಸಿಗಳಿಗಿಂತಲೂ ವಿವೇಕಾನಂದರ ಹೆಸರು ಹೆಚ್ಚು ಕೇಳಿ ಬರಬೇಕಾದರೆ ಅದಕ್ಕೆ ಕಾರಣ ಅವರ ಪ್ರಖರ ವ್ಯಕ್ತಿತ್ವ ಮತ್ತು ಅದ್ಭುತ ಸಾಧನೆಯೇ ಹೊರತು ಬೇರಾವ ವಿಚಾರವೂ ಅಲ್ಲ. ವಿವೇಕಾನಂದರದ್ದು ಬಹುಮುಖ ಪ್ರತಿಭೆ!! ವೀರ ಸನ್ಯಾಸಿ, ಅಪ್ರತಿಮ ದೇಶಭಕ್ತ, ಕರ್ಮ-ಭಕ್ತಿ-ಜ್ಞಾನಗಳೆಂಬ ತ್ರಿವೇಣಿ ಸಂಗಮದಲ್ಲಿ ಮಿಂದವರು. ಅಷ್ಟೇ ಅಲ್ಲದೇ, ತಾವಾಗಿ ಯಾರನ್ನೂ ಏನೂ ಕೇಳುವುದಿಲ್ಲ ಎಂಬಂತಹ ಕಠೋರ ವ್ರತವನ್ನು ಕೈಕೊಂಡು ಯಶಸ್ವಿಯಾದ ಮಹಾ ಸಾಹಸಿಗರು.

Image result for vivekananda in chicago speech

ಇಂತಹ ವಿಶ್ವಸಂತ ಚಿಕಾಗೋದಲ್ಲಿ ಮಾಡಿರುವ ಐತಿಹಾಸಿಕ ಭಾಷಣ, ಇನ್ನು ಮುಂದೆ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಹಾಗಾಗಿ, “ಸ್ವಾಮೀಜಿ ಭಾಷಣವನ್ನು ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವಾಗಿ ಸೇರ್ಪಡೆಗೊಳಿಸಲಿದ್ದೇವೆ” ಎಂದು ಪಶ್ಚಿಮ ಬಂಗಾಳದ ಶಾಲಾ ಶಿಕ್ಷಣ ಮಂಡಳಿ ತಿಳಿಸಿರುವುದೇ ಹೆಮ್ಮೆಯ ವಿಚಾರವಾಗಿದೆ.

ಈಗಾಗಲೇ ಬಂಗಾಳ ಶಾಲೆಗಳ ಪಠ್ಯಕ್ರಮದಲ್ಲಿ ಸಿಂಗೂರ್ ಚಳುವಳಿ, ಖ್ಯಾತ ಯೋಜನೆಯಾದ ಕನ್ಯಾಶ್ರೀಯ ಬಗ್ಗೆ ಪಾಠವನ್ನು ಅಳವಡಿಸಲಾಗಿದೆ. ಆದರೆ ಇದೀಗ ಹೊಸ ಪ್ರಯತ್ನ ಎನ್ನುವಂತೆ ವಿವೇಕನಂದರ ಚಿಕಾಗೋ ಭಾಷಣವನ್ನು ಅಳವಡಿಸಲಾಗುತ್ತಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!! ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿ ನೆರೆದಿದ್ದ ಜನರನ್ನು ಆಕರ್ಷಿಸಿದ್ದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು 1893ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂತಲ್ಲದೇ ಅವರ ಭಾಷಣದ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸೋದರಿಯರೇ ಮತ್ತು ಸೋದರರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದ್ದಂತೂ ಅಕ್ಷರಶಃ ನಿಜ.

ಅಷ್ಟಕ್ಕೂ ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣವಾದರೂ ಏನು ಗೊತ್ತೇ?? ಇಲ್ಲಿದೆ ಕನ್ನಡ ಅನುವಾದ;

ಅಮೆರಿಕದ ಸೋದರಿಯರೇ ಮತ್ತು ಸೋದರರೇ!

ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಾಂತರ ಹಿಂದುಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, “ಇಲ್ಲಿ ಕಂಡು ಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ” ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

Image result for vivekananda in chicago speech

ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ “ಎಕ್ಸ್ಕ್ಲೂಶನ್” ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.

ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೆÇೀಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.

ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- “ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅವರದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ”

ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು.

Image result for vivekanda in chicago speach

ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ. (ಸಂಗ್ರಹ: https://goo.gl/r9svfB )

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರಲ್ಲದೇ ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಆದರೆ ಇದೀಗ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿರುವ ಐತಿಹಾಸಿಕ ಭಾಷಣ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಲಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!! ಆದರೆ ಕರ್ನಾಟಕದಲ್ಲಿರುವ ಮಕ್ಕಳು ಮೊಘಲರ ಇತಿಹಾಸವನ್ನು ತಿಳಿದಷ್ಟು ಭಾರತದ ಇತಿಹಾಸವನ್ನು ತಿಳಿದಿಲ್ಲ!! ಹಾಗಿರಬೇಕಾದರೆ ನಮ್ಮ ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿರುವ ಭಾಷಣ ಅದ್ಯಾವಾಗ ಅಳವಡಿಯಾಗುತ್ತೋ ಗೊತ್ತಿಲ್ಲ!!

– ಅಲೋಖಾ

ಪಶ್ಚಿಮಬಂಗಾಳ: ಪಠ್ಯವಾಗಲಿದೆ ವಿವೇಕಾನಂದರ ಚಿಕಾಗೋ ಭಾಷಣ

Tags

Related Articles

Close