ಇತಿಹಾಸ

ಪತ್ನಿಯೊಡನೆ ನಿನ್ನ ನೆನಪಿನ ನಿಶಾನಿ ಕೊಡೆಂದು ಕೇಳಿದ ರಣರಂಗದಲ್ಲಿದ್ದ ಸೇನಾನಿ! ತನ್ನ ತಲೆಯನ್ನೆ ಕಡಿದು ತಟ್ಟೆಯಲ್ಲಿಟ್ಟು ಕಳುಹಿಸಿದಳಲ್ಲ ಹಾಡಿ ರಾಣಿಯೆಂಬ ಕ್ಷತ್ರಾಣಿ!!

ಮಾತೃ ಭೂಮಿ ಮತ್ತು ಧರ್ಮ ರಕ್ಷಣೆಗಿಂತ ದೊಡ್ಡ ಕರ್ತವ್ಯ ಈ ಭೂಮಿ ಮೇಲೆ ಇಲ್ಲ ಎನ್ನುವ ಸತ್ಯವನ್ನು ತನ್ನ ನವ ವಿವಾಹಿತ ಗಂಡನಿಗೆ ತಿಳಿಸಿಕೊಡಲು ತನ್ನ ತಲೆಯನ್ನೆ ಕಡಿದು ತಟೆಯಲ್ಲಿಟ್ಟು ಗಂಡನಿಗೆ ತಲುಪಿಸುವಂತೆ ಆಜ್ಞೆ ಕೊಡುತ್ತಾಳೆ ಕ್ಷತ್ರಿಯ ಕುಲ ನಾರಿ ಹಾಡಿ ರಾಣಿ! ಎಂಥಾ ವೀರಾಗ್ರಣಿ ಇರಬೇಕು ಆ ಹೆಣ್ಣು ಮಗಳು. ಯುದ್ದ ನಿರತನಾಗಿರುವ ತನ್ನ ಗಂಡ ಕರ್ತವ್ಯ ವಿಮುಖನಾಗದಂತೆ ಮಾಡಲು ಪ್ರಾಣಾರ್ಪಣೆ ಮಾಡಿದ ಈ ಮಾತೆಗೆ ಶರಣು ಶರಣು.

ಹಾಡಿ ರಾಣಿಯ ವೀರಗಾಥೆ

ಸಂಭಲಪುರದ ಸರದಾರ ರಾವ್ ರತನ್ ಸಿಂಗನ ನವ ವಿವಾಹಿತ ಪತ್ನಿ ಹಾಡಿ ರಾಣಿ. ಪರಾಕ್ರಮಕ್ಕೆ ಇನ್ನೊಂದೆ ಹೆಸರಾಗಿದ್ದ ಬೂಂದಿಯ ಶಾಸಕ ಶತ್ರುಶಾಲ ಹಾಡನ ಮಗಳೆ ಹಾಡಿ ರಾಣಿ. ಆಕೆಯ ನಿಜ ನಾಮಧೇಯ ಏನೆಂಬುದು ಗೊತ್ತಿಲ್ಲವಾದರೂ ಆಕೆ ಹಾಡಿ ರಾಣಿಯೆಂದೆ ಚಿರಪರಿಚಿತಳು. ಭಾರತದಲ್ಲಿ ಆಗ ಮತಾಂಧ ಔರಂಗಜೇಬನ ಅತ್ಯಾಚಾರಗಳು ಮೇರೆ ಮೀರಿದ ಕಾಲ. ದಕ್ಷಿಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಬುಂದೇಲ ಖಂಡದಲ್ಲಿ ಛತ್ರಸಾಲ, ಪಂಜಾಬಿನಲ್ಲಿ ಗುರು ಗೋವಿಂದ ಸಿಂಗ್, ಮಾರವಾಢದಲ್ಲಿ ರಾಠೋರ್ ದುರ್ಗಾದಾಸ್ ಮುಗಲ್ ಸೇನೆಯನ್ನು ತರಿಯುತ್ತಿದ್ದ ಕಾಲವದು.

ಮುಗಲರ ವಿರುದ್ದ ಹಿಂದೂ ಮತ್ತು ಸಿಖ್ಖರ ಯುದ್ದ ಹೇಗಿತ್ತೆಂದರೆ ಸ್ವತಃ ಔರಂಗಜೇಬನ ಸಾಮ್ರಾಜ್ಯದ ಪ್ರಮುಖ ಸ್ಥಂಭದಂತಿದ್ದ ಆಮೇರಿನ ರಾಜಾ ಜಯಸಿಂಹ ಮತ್ತು ಮಾರವಾಢದ ಜಸವಂತ ಸಿಂಗರೂ ಮುಗಲರ ವಿರುದ್ದ ತಿರುಗಿ ಬೀಳುತ್ತಾರೆ. ನಿರ್ಲಜ್ಜ-ಕಾಮುಕ ಔರಂಗಜೇಬನ ಕಿವಿಗೆ ರಾಜಕುಮಾರಿ ಚಾರುಮತಿಯ ಸೌಂದರ್ಯದ ವಿಷಯ ಬೀಳುತ್ತದೆ. ಆತ ಚಾರುಮತಿಯನ್ನು ಪಡೆಯಲು ಬಯಸುತ್ತಾನೆ. ಈ ವಿಷಯ ಚಾರುಮತಿಯ ಕಿವಿಗೆ ಬಿದ್ದ ಕೂಡಲೆ ಮೇವಾಡದ ರಾಣಾ ರಾಜಸಿಂಹನಲ್ಲಿ ವಿವಾಹದ ಪ್ರಸ್ತಾವ ಕಳಿಸಿ ತನ್ನ ಮಾನ ಪ್ರಾಣ ಕಾಪಾಡುವಂತೆ ಆಗ್ರಹಿಸುತ್ತಾಳೆ.

ರಾಜಸಿಂಹನ ವಿವಾಹ ತಾನು ಬಯಸಿದ ಚಾರುಮತಿಯೊಂದಿಗೆ ಆಗಲಿದೆ ಎಂದು ತಿಳಿದ ಔರಂಗಜೇಬ ಕುಪಿತನಾಗಿ ಮೇವಾಡದ ಮೇಲೆ ಯುದ್ದ ಘೋಷಿಸುತ್ತಾನೆ. ಮೇವಾಡದ ರಾಜ ಯುದ್ದ ಸನ್ನದ್ದರಾಗಿ ರಣ ರಂಗಕ್ಕೆ ಹೊರಡುತ್ತಾರೆ. ಯುದ್ದದಲ್ಲಿ ತನಗೆ ಸಹಾಯ ಮಾಡುವಂತೆ ಹಾಡ ಸರದಾರನಿಗೆ ಕರೆ ಕಳುಹಿಸುತ್ತಾರೆ. ಆದರೆ ಹಾಡ ಸರದಾರ ಆಗ ತಾನೆ ಮದುವೆಯಾಗಿ ತನ್ನ ಪತ್ನಿಯ ಬಾಹುಗಳಲ್ಲಿ ಬಂಧಿಯಾಗಿದ್ದ. ಆತನಿಗೆ ಯುದ್ದ ಮಾಡುವ ಮನಸ್ಸಿರಲಿಲ್ಲ. ಹಾಡಿ ರಾಣಿಯ ಕೈಯ ಮದರಂಗಿ ರಂಗು ಇನ್ನೂ ಮಾಸಿರಲಿಲ್ಲ, ಅಷ್ಟು ಬೇಗನೆ ಯುದ್ದಕ್ಕೆ ಹೋಗಲು ಸರದಾರ ಒಪ್ಪುವುದಿಲ್ಲ.

ಕ್ಷತ್ರಿಯ ರಾಣಿ ತನ್ನ ಪತಿಗೆ ಕರ್ತವ್ಯದ ಪರಿಪಾಲನೆ ಮಾಡುವಂತೆ ಬುದ್ದಿ ಹೇಳಿ ತಿಲಕವಿಟ್ಟು ರಣರಂಗಕ್ಕೆ ಹೋಗುವಂತೆ ಮನವೊಲಿಸುತ್ತಾಳೆ. ಮನಸಿಲ್ಲದ ಮನಸ್ಸಿನಿಂದ ರತನ್ ಸಿಂಗ್ ಯುದ್ದ ಭೂಮಿಗೆ ಹೊರಡುತ್ತಾನೆ. ಯುದ್ದ ಭೂಮಿಯಲ್ಲಿ ತನ್ನ ಮುದ್ದಿನ ರಾಣಿಯ ನೆನಪು ಆತನಿಗೆ ಎಡಬಿಡದೆ ಕಾಡುತ್ತಿರುತ್ತದೆ ಮತ್ತು ಆತ ಅಡಿಗಡಿಗೂ ರಾಣಿಗೆ ಪ್ರೇಮ ಸಂದೇಶ ಕಳುಹಿಸಿಸುತ್ತಿರುತ್ತಾನೆ. ತನ್ನ ಪತಿ ಕರ್ತವ್ಯ ವಿಮೂಢನಾಗಿರುವ ವಿಚಾರ ಹಾಡಿ ರಾಣಿಯ ಗಮನಕ್ಕೆ ಬರುತ್ತದೆ. ರತನ್ ಸಿಂಗ್ ತನ್ನ ನೆಚ್ಚಿನ ಮಡದಿಯಲ್ಲಿ ತನಗೆ ಪ್ರೇಮದ ಕಾಣಿಕೆಯಾಗಿ ಯಾವುದಾದರೂ ನಿಶಾನಿಯನ್ನು ಕಳುಹಿಸಿಕೊಡುವಂತೆ ಸಂದೇಶ ವಾಹಕನಲ್ಲಿ ಹೇಳಿ ಕಳುಹಿಸುತ್ತಾನೆ.

ಸುದ್ದಿ ತಿಳಿದ ರಾಣಿ ತನ್ನ ಪತಿ ಕಿಂಕರ್ತವ್ಯಮೂಢನಾಗಿದ್ದಾನೆ ಎಂದು ತಿಳಿದು ಹರಿತವಾದ ಖಡ್ಗದಿಂದ ತನ್ನ ತಲೆಯನ್ನೆ ಕಡಿದು ಹಾಕುತ್ತಾಳೆ! ಸಾಯುವುದಕ್ಕೂ ಮುನ್ನ ಸಂದೇಶವಾಹಕನಿಗೆ ತನ್ನ ತಲೆಯನ್ನು ಹರಿವಾಣದಲ್ಲಿಟ್ಟು ಪತಿ ರತನ್ ಸಿಂಗನಿಗೆ ಉಡುಗೊರೆಯಾಗಿ ನೀಡಬೇಕೆಂದು ಹೇಳುತ್ತಾಳೆ. ರಾಣಿಯ ಈ ವ್ಯವಹಾರ ಕಂಡು ಸಂದೇಶವಾಹಕ ದಂಗಾಗುತ್ತಾನೆ. ಆತನಿಗೆ ಏನು ಮಾಡಬೇಕೆಂದೆ ತೋಚುವುದಿಲ್ಲ. ಕ್ಷಣ ಕಾಲದ ನಂತರ ಸುಧಾರಿಸಿಕೊಂಡು ಹಾಡಿ ರಾಣಿಯ ತಲೆಯನ್ನು ಹರಿವಾಣದಲ್ಲಿಟ್ಟು ರೇಷ್ಮೆ ವಸ್ತ್ರ ಮುಚ್ಚಿ ಯುದ್ದ ಭೂಮಿಗೆ ಕೊಂಡು ಹೋಗಿ ರತನ್ ಸಿಂಗ್ ಗೆ ನೀಡುತ್ತಾನೆ.

ವಸ್ತ್ರ ಸರಿಸಿ ನೋಡಿದ ರತನ್ ಸಿಂಗನ ಎದೆ ಒಡೆದು ಹೋಗುತ್ತದೆ. ಆತ ನೆಲಕ್ಕೆ ಕುಸಿದು ಆಕಾಶವೆ ಬಿರಿಯುವಂತೆ ವಿಲಾಪಿಸುತ್ತಾನೆ. ತಾನು ಕರ್ತವ್ಯದಿಂದ ವಿಮುಖನಾಗಬಾರದೆಂದು ತನಗೆ ಬುದ್ದಿ ಕಲಿಸಲು ರಾಣಿ ತನ್ನ ಪ್ರಾಣವನ್ನೆ ಅರ್ಪಿಸಿದಳೆನ್ನುವ ಸತ್ಯ ರತನ್ ಸಿಂಗ್ ಗೆ ಗೊತ್ತಾಗುತ್ತದೆ. ತನ್ನ ತಪ್ಪನ್ನು ತಿದ್ದಿಕೊಂಡ ರತನ್ ಸಿಂಗ್ ಮುಂದಿನ ಯುದ್ದಗಳಲ್ಲಿ ಮಹಾಕಾಲನಂತೆ ರೌದ್ರ ರೂಪ ತಾಳಿ ಶತ್ರುಗಳ ರುಂಡ ಚೆಂಡಾಡುತ್ತಾನೆ, ರತನ್ ಸಿಂಗನ ಪರಾಕ್ರಮದಿಂದಾಗಿ ರಜಪೂತ ಸೇನೆ ಯುದ್ದ ಗೆಲ್ಲುತ್ತದೆ ಮತ್ತು ಮುಗಲರ ಸೇನೆ ಹೀನಾಯವಾಗಿ ಸೋಲುತ್ತದೆ. ಆ ದಿನ ರತಪೂತ ಯುದ್ದ ಗೆದ್ದಿದ್ದರೆ ಅದಕ್ಕೆ ಹಾಡ ಸರದಾರ ರತನ್ ಸಿಂಗನ ಪರಾಕ್ರಮ ಎಷ್ಟು ಕಾರಣವೊ ಅಷ್ಟೇ ಹಾಡಿ ರಾಣಿಯ ಬಲಿದಾನವೂ ಕಾರಣ.

ಎಂತಹ ಬಲಿದಾನ, ಎಂತಹ ಸಾಹಸ ಹಾಡಿ ರಾಣಿಯದ್ದು. ಆಕೆಯ ಬಲಿದಾನ ಇಂದಿಗೂ ರಾಜಸ್ತಾನದ ಜನಪದ ಗೀತೆಗಳಲ್ಲಿ ಹಾಸುಹೊಕ್ಕಿದೆ.

“ಚೂಢಾವತ್ ಮಾಂಗೀ ಸೈನಾನೀ, ಸರ್ ಕಾಟ್ ಭೇಜ್ ದಿಯೋ ಕ್ಷತ್ರಾಣೀ”

ಸೇನಾನಿ ಪತಿ ಪ್ರೇಮದ ನಿಶಾನಿ ಕಳಿಸಿಕೊಡೆಂದು ಪತ್ನಿಯನ್ನು ಕೇಳಿದರೆ ತನ್ನ ತಲೆಯನ್ನೇ ಕಡಿದು ಕೊಟ್ಟಳು ಕ್ಷತ್ರಾಣಿ!! ನಿನಗೆ ನಮೋ ನಮಃ ಹಾಡಿ ರಾಣಿ…

-Postcard team

wikipedia

Tags

Related Articles

FOR DAILY ALERTS
Close