ಅಂಕಣಇತಿಹಾಸಪ್ರಚಲಿತ

ಮೊಘಲರ ವಿರುದ್ಧ ಶಸ್ತ್ರವನ್ನೆತ್ತಿದ ಮೊದಲ ಸಿಖ್ ಮಹಿಳೆ ಮೈ ಭಾಗೋ! ಈಕೆಯ ಸಾಹಸ ಇಂದಿನ ನಾರಿಯರಿಗೂ ಆದರ್ಶ!

ಸಂತಾ,ಬಂತಾ ,ಸರ್ದಾರ್ಜಿಗಳ ಬಗ್ಗೆಯೇ ಹಲವಾರು ಹಾಸ್ಯ ತುಣುಕುಗಳು ಹರಿದಾಡುವ ಕಾಲವೊಂದಿತ್ತು,ಇಂದಿಗೂ ಕೆಲವೊಮ್ಮೆ ಹರಿದಾಡುತ್ತವೆ. ಆದರೆ ನಿಜವಾದ ವಿಷಯವೇನೆಂದರೆ ಸಿಖ್ಹರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು.ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರಿರುವು ಪಂಜಾಬಿನಿಂದ ಎನ್ನುವುದು ಅವಗಣಿಸಲ್ಪಡುವ ವಿಷಯವೇ ಅಲ್ಲ.ಇಂದಿಗೂ ಸೈನ್ಯದಲ್ಲಿ ಸಿಖ್ ರೆಜಿಮೆಂಟ್ ಮತ್ತು ಪಂಜಾಬ್ ರೆಜಿಮೆಂಟ್ ಗಳಿವೆ.ಇಂದಿಗೂ ಭಾರತ ಸೈನ್ಯದ ಆಯಕಟ್ಟಿನ ಅಧಿಕಾರಿಗಳಾಗಿ ಕಡಿಮೆಯೆಂದರೆ ೫ ತಿಂದ ೧೦% ಸಿಖ್ಖರಿದ್ದಾರೆ.
ಭಾರತೀಯ ವಾಯುಸೇನೆಯ ಅಧಿಕಾರಿ ಕೂಡ ಪಂಜಾಬಿನ ಸಿಖ್.ಪಂಚ ನದಿಗಳ ನಾಡಾದ ಪಂಜಾಬ್ ತನ್ನ ಗಡಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವುದು ಬಹುಷಃ ಅವರ ದುರ್ದೈವ. ಹಲವಾರು ವರ್ಷಗಳಿಂದಲೂ ಭಾರತದ ಮೇಲೆ ದಾಳಿ ನಡೆಸುವ ಯಾರೇ ಆದರೂ ಪಂಜಾಬವನ್ನು ಖಂಡಿತಾ ಆಕ್ರಮಿಸುತ್ತಿದ್ದರು.ಬಹುಷಃ ತಮ್ಮ ಮೇಲಾಗುತ್ತಿದ್ದ ಆಕ್ರಮಣಗಳಿಂದಾಗಿ ಸಿಖ್ಹರು ಧೈರ್ಯ ಮತ್ತು ಸಾಹಸಗಳನ್ನೇ ಮೈಗೂಡಿಸಿಕೊಂಡು ಬೆಳೆದರು.ಮೊಘಲರು ಅತೀ ಹೆಚ್ಚು ಬಾರಿ ಆಕ್ರಮಣವನ್ನು ನಡೆಸಿದ್ದು ಕೂಡಾ ಇವರ ಮೇಲೆಯೇ ಇರಬಹುದು.ಪ್ರತೀಬಾರಿ ಆಕ್ರಮಣವಾದಾಗಲೂ ಎದೆ ಎತ್ತಿ ಹೋರಾಡಿ ಮೊಘಲರನ್ನು ಹಿಮ್ಮೆಟ್ಟಿಸಿದ ಶ್ರೇಯವೂ ಕೂಡ ಇವರಿಗೆ ಸಲ್ಲಬೇಕು.ಹಾಗೆ ನೋಡಿದರೆ ಪಂಜಾಬ್ ನ ಹೆಣ್ಣು ಮಕ್ಕಳೂ ಸಾಹಸದಲ್ಲಿ ಯಾರಿಗೂ ಕಮ್ಮಿ ಇಲ್ಲ.ಮನೆಯ ಗಂಡಸರು ಸೈನ್ಯಸೇರಿ ಗಡಿಯಲ್ಲಿ ಸೇವೆ ಸಲ್ಲಿಸುವಾಗ ಪಂಜಾಬ್ ನ ಹೆಣ್ಣು ಮಕ್ಕಳೇ ಮನೆಯನ್ನು ಸಂಭಾಳಿಸುತ್ತಾರೆ.

ಹೀಗೆ ಸಾಹಸಕ್ಕೆ ಹೆಸರಾದ ಪಂಜಾಬ್ ನ ಮೊದಲ ಮಹಿಳಾ ಯೋಧೆಯೇ ಮಾತಾ ಭಾಗ್ ಕೌರ್.(ಮೈ ಭಾಗೋ ಜಿ). ಕಳೆದ ೩೦೦ ವಷಗಳಿಂದಲೂ ಸಂತ ಯೋಧೆ ಎಂದು ಸಿಖ್ಖರಿಂದ ಕರೆಸಿಕೊಳ್ಳುವ ಅಪರೂಪದ ಸೇನಾನಿ ಈಕೆ.೧೭೦೫ ರ ಡಿಸೆಂಬರ್ ೨೯ ರಂದು ನಡೆದ ಪ್ರಸಿದ್ಧ ಮುಕಾತ್ಸರ್ ಕದನದಲ್ಲಿ ಮೊಘಲರ ವಿರುದ್ಧ ೪೦ ಸಿಖ್ಖ್ ಯೋಧರನ್ನು ಧೈರ್ಯದಿನ ಮುನ್ನಡೆಸಿದ್ದರು ಮಾತಾ ಭಾಗ್ ಕೌರ್.ಬಾಲ್ಯದಿಂದಲೇ ಈಕೆಯ ತಂದೆ ಈಕೆಯನ್ನು ಪುರುಷರಿಗೆ ಸಮಾನವಾಗಿ ಯುದ್ಧವಿದ್ಯೆಯಲ್ಲಿ ತರಬೇತು ನೀಡಿ ಬೆಳೆಸಿದ್ದರು.ಪಂಜಾಬ್ ನ ಇಂದಿನ ತಾರ್ನ್ ತರಂ ಜಿಲ್ಲೆಯಲ್ಲಿ ಸಿಖ್ ಧರ್ಮನಿಷ್ಠ ಮತ್ತು ಗುರು ಹರಗೋಬಿಂದರ ಸೈನ್ಯದ ಮಾಲೋಷ ಅವರ ಪುತ್ರಿಯಾಗಿ ಜನಿಸಿದ್ದ ಭಾಗ್ ಕೌರ್ ಮುಂದೆ ನಿಧನ್ ಸಿಂಗ್ ಅವರನ್ನು ವಿವಾಹವಾದರು.ಇವರ ಅಜ್ಜ ಭಾಯ್ ಪೆರೋ ಷಾ ಅವರು ೫ ನೇ ಗುರುಗಳಾದ ಗುರು ಅರ್ಜುನ್ ದೇವ್ ಸಿಂಗ್ ರ ಕಾಲದಲ್ಲಿ ಸಿಖ್ ಧರ್ಮ ಸ್ವೀಕರಿಸಿದ್ದ ೮೪ ಗ್ರಾಮಗಳ ಮುಖ್ಯಸ್ಥರಾಗಿದ್ದರು.

Image result for mai bhago

ಮೊದಲಿನಿಂದಲೂ ಪರಧರ್ಮದ ಬಗ್ಗೆ ಅಸಹಿಷ್ಣುಗಳಾದ ಮೊಘಲರಿಗೆ ಗುರು ಹರಗೋಬಿಂದ ಸಿಂಗ್ ರನ್ನು ಬಂಧಿಸಲೇ ಬೇಕೆಂಬ ಹಠವಿತ್ತು.ಹೀಗಾಗಿ ಔರಂಗಝೇಬ್ ನ ಆದೇಶದ ಮೇರೆಗೆ ವಜೀರ್ ಖಾನ್ ನೇತೃತ್ವದಲ್ಲಿ ಯುದ್ಧಕ್ಕೆ ಹೊರಟಿದ್ದರು.ಗುರುಗಳ ರಕ್ಷಣೆಗಾಗಿ ೪೦ ಜನ ಖಾಲ್ಸಾ ಯೋಧರು ನೇಮಿಸಲ್ಪಟ್ಟಿದ್ದರು. ಖಾಲ್ಸಾ ಯೋಧರು ಸಿಖ್ಖರ ಒಂದು ಪಂಗಡವಾಗಿದ್ದು ,ಇವರು ಹಲವು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ.ಹೀಗಿರುವಾಗ ಒಂದು ಸಂದರ್ಭದಲ್ಲಿ ಗುರುಗಳು ಮತ್ತು ೪೦ ಯೋಧರಿದ್ದ ಸ್ಥಳವನ್ನು ಮೊಘಲರು ಸುತ್ತುವರೆದು ಯೋಧರಿಗೂ ಗುರುಗಳಿಗೂ ಆಹಾರದ ಅಭಾವವುಂಟಾಗುತ್ತದೆ.ಇಂತಹಾ ಸಂದರ್ಭದಲ್ಲಿ ೪೦ ಯೋಧರು ಗುರುಗಳಿಗೆ “ ಬೇಡವ ( ಗುರಗಳ ಮೇಲಿನ ನಿಷ್ಠೆಯ ನಿರಾಕರಣೆಯನ್ನು ಲಿಖಿತ ರೂಪದಲ್ಲಿ ನೀಡುವುದು)” ನೀಡಿ ಸ್ವತಃ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಊರಿಗೆ ಹಿಂತಿರುಗಿದರು.೧೭೦೫ ರಲ್ಲಿ ಆನಂದಪುರ್ ಸಾಹಿಬ್ ನಲ್ಲಿದ್ದ ಯುದ್ಧದಂತಹಾ ಪ್ರತಿಕೂಲ ಸಮಯದಲ್ಲಿ ಸಿಖ್ಖರು ಗುರುಗಳನ್ನು ಏಕಾಂಗಿಯಾಗಿಸಿ ಹಿಂತಿರುಗಿದ್ದಾರೆ ಎಂದು ತಿಳಿದ ಭಾಗ್ ಕೌರ್ ಅತೀವ ದುಃಖಿತಳಾದಳು.ಹಿಂತಿರುಗಿ ಬಂದ ಯೋಧರ ಮನೆಗಳಿಗೆ ತೆರಳಿ ಅವರು ಮಾಡಿರುವ ಕೃತ್ಯವು ನಾಚಿಗೆಗೇಡಿನದ್ದೆಂದು ಖಂಡಿಸಿ ಮನವರಿಕೆ ಮಾಡಿಸಿದಳು.ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿ ಗುರುಗಳನ್ನು ಹುಡುಕಲು ಹೋರಾಟ ಖಾಲ್ಸಾ ಸೈನಿಕರೊಂದಿಗೆ ಅವರ ಮುಂದಾಳತ್ವವನ್ನು ವಹಿಸಿಕೊಂಡು ತಾನೂ ಅವರೊಂದಿಗೆ ಹೊರಟಳು.

ಆದರೆ ಗುರುಗಳನ್ನು ಭೇಟಿಯಾಗುವುದಕ್ಕೂ ಮುನ್ನವೇ ಅವರು ಖಿದ್ರಾನಾ ಎಂಬ ಜಲಾಶಯದ ಬಳಿಯಲ್ಲಿ ವಿರಮಿಸಬೇಕಾಯಿತು.ಏಕೆಂದರೆ ಗುರುಗಳನ್ನು ಬಂಧಿಸಲು ಹೊಂಚು ಹಾಕುತ್ತಿದ್ದ ಮೊಘಲರು ಆ ಪ್ರದೇಶವನ್ನು ಸುತ್ತುವರಿದಿದ್ದರು.ಈ ಸಮಯದಲ್ಲಿ ಸರೋವರದ ಬಳಿಯಲ್ಲಿ ಡೇರೆಗಳನ್ನು ನಿರ್ಮಿಸಿ ಸಿಖ್ ಯೋಧರು ಪೊದೆಗಳ ಹಿಂದೆ ಅಡಗಿ ಕುಳಿತರು. ಹತ್ತು ಸಾವಿರದ ಸಂಖ್ಯೆಯಲ್ಲಿದ್ದ ಮೊಘಲರನ್ನು ಎದುರಿಸಲು ಭಾಗ್ ಕೌರ್ ನೇತೃತ್ವದ ೪೦ ಜನರ ಸೈನ್ಯವು ಯಾವುದೇ ಭಯವಿಲ್ಲದೆ ಸಿದ್ಧವಾಗಿತ್ತು.ನೀರು ಕುಡಿಯಲು ಸರೋವರದ ಬಳಿಗೆ ಬಂದ ಮೊಘಲ್ ಸೈನಿಕರನ್ನು ಮರೆಯಿಂದಲೇ ಘಾಸಿಗೊಳಿಸಿದಾಗ ನೀರಿನ ಅಭಾವದಿಂದಾಗಿ ಮೊಘಲ್ ಸೈನಿಕರು ತತ್ತರಿಸತೊಡಗಿದರು.ಇಂತಹಾ ಸಮಯದಲ್ಲಿ ಖಾಲ್ಸಾ ಸೈನಿಕರು ವೀರಾವೇಶದಿಂದ ಮೊಘಲರ ಮೇಲೆರಗಿ ಆಕ್ರಮಣವನ್ನು ಪ್ರಾರಂಭಿಸಿತು.ಸ್ವತಃ ಭಾಗ್ ಕೌರ್ ಖಾಲ್ಸಾ ಸಮವಸ್ತ್ರವನ್ನು ಮತ್ತು ತಲೆಯಲ್ಲಿ ಕೇಸ್ಕಿಯನ್ನು ಧರಿಸಿ ಸಿಂಹಿಣಿಯಂತೆ ಮುಂಚೂಣಿಯಲ್ಲಿ ಹೋರಾಡಿದಳು.ಕೊನೆಗೂ ಬೃಹತ್ ಸಂಖ್ಯೆಯಲ್ಲಿದ್ದ ಮೊಘಲ್ ಸೈನಿಕರು ಸೋತು ಹಿಂದೆಸರಿಯಬೇಕಾಯಿತು.ಹತ್ತಿರದ ಬೆಟ್ಟದಿಂದ ಯುದ್ಧವನ್ನು ವೀಕ್ಷಿಸುತ್ತಿದ್ದ ಗುರುಗಳು ತಾವೂ ಸ್ವತಃ ಬಾಣಗಳನ್ನು ಪ್ರಯೋಗಿಸುತ್ತ ಯುದ್ಧಭೂಮಿಗೆ ಆಗಮಿಸಿದ್ದರು.ಅವರ ಸಾಹಸವನ್ನು ನೋಡಿದ ಗುರುಗಳು,ಖಾಲ್ಸಾ ಸೈನಿಕರು ನೀಡಿದ್ದ ಬೇಡವಾ ವನ್ನು ಹರಿದೆಸೆದು ೪೦ ಜನರನ್ನು ಚಾಲೀಸ್ ಮುಕ್ತೇ ಎಂದು ಆಶೀರ್ವದಿಸಿದರು.ಆದರೆ ಯುದ್ಧದಲ್ಲಿ ಭೀಕರವಾಗಿ ಗಾಯಗೊಂಡಿದ್ದ ೪೦ ಜನ ಖಾಲ್ಸಾ ಯೋಧರೂ ಸಾವನ್ನಪ್ಪಿದ್ದರು.ಯೋಧರನ್ನು ಮುನ್ನಡೆಸಿದ್ದ ಭಾಗ್ ಕೌರ್ ಕೂಡ ಮಾರಣಾಂತಿಕವಾಗಿ ಗಾಯಗೊಂಡಿದ್ದಳು.

ಬಳಿಕ ಚೇತರಿಸ್ಕೊಂಡ ಮೈ ಭಾಗೋ ಗುರು ಗೋಬಿಂದ ಸಿಂಗ್ ಜೀ ಯವರೊಂದಿಗೆ ಅವರ ಅಂಗರಕ್ಷಕಳಾಗಿ ಉಳಿದುಕೊಂಡಳು.ಖಾಲ್ಸ ಯೋಧರ ಸಮವಸ್ತ್ರದೊಂದಿಗೆ ಸೇವೆ ಸಲ್ಲಿಸಿದ ಪ್ರಥಮ ಮಹಿಳೆಯಾಗಿ ಇತಿಹಾಸ ರಚಿಸಿದರು.೧೭೦೮ ರಲ್ಲಿ ಗುರುಗಳ ಕಾಲಾನಂತರ ಧ್ಯಾನದಲ್ಲೇ ನಿರತರಾದರು.ಜಿನಿವಾರದಲ್ಲಿರುವ ಅವರ ಗುಡಿಸಲನ್ನು ಈಗ “ ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೋ ಜಿ” ಆಗಿ ಪರಿವರ್ತಿಸಲಾಗಿದೆ.ಧರ್ಮದ ರಕ್ಷಣೆಗಾಗಿ ಸಿಂಹಿಣಿಯಂತೆ ಪುರುಷ ಯೋಧರಿಗೆ ಸಮವಾಗಿ ಹೋರಾಡಿದ ಈಕೆ ಸಮಸ್ತ ಸಿಖ್ ಮಹಿಳೆಯರಿಗೆ ಆದರ್ಶವಾಗಿ ಇನ್ನೂ ಜನಮಾನಸದಲ್ಲಿ ನೆಲೆಸಿದ್ದಾಳೆ.೧೦ ಸಾವಿರ ಮೊಘಲರನ್ನು ಸೋಲಿಸಿದ ೪೧ ಜನರ ಸೈನ್ಯವನ್ನು ಇತಿಹಾಸವಂದೂ ಮರೆಯದಿರಲಿ..

-Deepashree M

Tags

Related Articles

FOR DAILY ALERTS
Close