ಪ್ರಚಲಿತ

ಐತಿಹಾಸಿಕ ಬಜೆಟ್ ಮಂಡಿಸಿದ ಕೇಂದ್ರ: ಎಲ್ಲಾ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ ಮೋದಿ ಸರಕಾರ!

ದೇಶದ ಜನತೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ್ದಾರೆ.

ಕರ್ನಾಟಕ ವೂ ಸೇರಿದಂತೆ ಇಡೀ ದೇಶದ ಜನರಿಗೆ ಅನುಕೂಲವಾಗುವಂತಹ ಜನಸ್ನೇಹಿ ಬಜೆಟ್ ಅನ್ನು ಪ್ರಧಾನಿ ಮೋದಿ ಸರ್ಕಾರ ಮಂಡಿಸಿದ್ದು, ಬಡ ಮಧ್ಯಮ ವರ್ಗದ ಜನರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ದೇಶದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡದ ಮೋದಿ ಸರ್ಕಾರ ಎಂಬ ಆರೋಪವನ್ನು ಪ್ರತಿ ಪಕ್ಷಗಳು, ಕೆಲ ಸದ್ದು ಜೀವಿಗಳು ಮಾಡುತ್ತಲೇ ಬರುತ್ತಿದ್ದರು. ಇದಕ್ಕೆ ಉತ್ತರ ಎಂಬಂತೆ ಈ ಬಾರಿಯ ಬಜೆಟ್‌ನಲ್ಲಿ ಜನರಿಗೆ ಬಹುಮುಖ್ಯವಾಗಿ ಉಪಯೋಗವಾಗುವಂತೆ ಸಾಂಕ್ರಾಮಿಕ ರೋಗಗಳ ಮಾಹಿತಿಯನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನೀಡಲು ಮೋದಿ ಸರ್ಕಾರ ಯೋಜನೆ ಕೈಗೊಂಡಿದೆ.

ತೆರಿಗೆಗೆ ಸಂಬಂಧಿಸಿದಂತೆಯೂ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮೂರು ಲಕ್ಷದ ವರೆಗೆ ಶೂನ್ಯ ತೆರಿಗೆ, ಮೂರರಿಂದ ಆರು ಲಕ್ಷ ಆದಾಯ ಹೊಂದಿದವರಿಗೆ ಶೇ. ಐದರಷ್ಟು, ಆರರಿಂದ ಒಂಬತ್ತು ಲಕ್ಷ ದವರೆಗೆ ಶೇ. ಹತ್ತು ಮತ್ತು ಒಂಬತ್ತರಿಂದ ಹನ್ನೆರಡು ಲಕ್ಷದ ವರೆಗೆ ಶೇ. ಹದಿನೈದು, ಹನ್ನೆರಡರಿಂದ ಹದಿನೈದು ಲಕ್ಷದ ವರೆಗೆ ಶೇ. ಇಪ್ಪತ್ತು ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಶೇ. ಮೂವತ್ತು ವರೆಗೆ ತೆರಿಗೆ ಇದ್ದು, ಏಳು ಲಕ್ಷದೊಳಗಿನ ಆದಾಯ ಹೊಂದಿದವರಿಗೆ ಹೊಸ ಆದಾಯ ತೆರಿಗೆ ಪದ್ಧತಿ ಯಲ್ಲಿ ಯಾವುದೇ ಆದಾಯ ತೆರಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ತನ್ನ ೨೦೨೩ ರ ಜಜೆಟ್‌ನಲ್ಲಿ ತಿಳಿಸಿದೆ.

ವೈದ್ಯಕೀಯ ಸೇವೆಯನ್ನು ಮೇಲ್ ದರ್ಜೆಗೆ ಏರಿಸುವುದಕ್ಕೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಸ್ಥಾಪಿಸುವುದಾಗಿ ತಿಳಿಸಿದೆ. ಭಾರತದಲ್ಲಿ ೧೫೭ ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವುದಾಗಿಯೂ ತಿಳಿಸಿದೆ.

ಮಹಿಳೆಯರ ಸಬಲೀಕರಣಕ್ಕೆ ಪ್ರಧಾನಿ ಮೋದಿ ಸರ್ಕಾರ ಈ ಹಿಂದಿನಿಂದಲೂ ಒತ್ತು ನೀಡುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿಯೂ ಭರ್ಜರಿ ಗಿಫ್ಟ್ ನೀಡಿದೆ. ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ೨ ಲಕ್ಷದ ವರೆಗಿನ ಠೇವಣಿಗೆ ಎರಡು ವರ್ಷಕ್ಕೆ ಶೇ. ೭.೫ ಬಡ್ಡಿ ನೀಡುವುದಾಗಿ ಈ ಬಜೆಟ್ ತಿಳಿಸಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆಯ ಠೇವಣಿ ಮಿತಿಯನ್ನು ೧೫ ರಿಂದ ೩೦ ಲಕ್ಷಕ್ಕೆ ಏರಿಸಲಾಗಿದೆ. ಜಂಟಿ ಖಾತೆಗೆ ೬೦ ಲಕ್ಷದ ವರೆಗೂ ಅವಕಾಶ ನೀಡಲಾಗಿದೆ.

ಗರೀಬ್ ಅನ್ನ ಯೋಜನೆಯಡಿ ಮುಂದಿನ ಒಂದು ವರ್ಷಗಳ ಕಾಲ ಉಚಿತ ಪಡಿತರ ವಿತರಿಸಲಾಗುತ್ತಿದ್ದು, ಇದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಆ ಮೂಲಕ ದೇಶದ ಬಡ ಜನರು ಆಹಾರಕ್ಕೆ ಸಂಕಷ್ಟ ಅನುಭವಿಸದಂತೆ ಈ ಬಜೆಟ್‌ನಲ್ಲಿಯೂ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.

ದೇಶದಲ್ಲಿ ೫೦ ಹೊಸ ಏರ್ಪೋರ್ಟ್‌ಗಳ ಸ್ಥಾಪನೆ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ‌ ಶಾಲೆಗಳ ಮೂಲಕ 3.5 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ 38,800 ಶಿಕ್ಷಕರನ್ನು ನೇಮಿಸುವ ಭರವಸೆಯನ್ನು ಸಹ ನೀಡಿದೆ.

ರೈಲ್ವೆ ವಲಯಕ್ಕೆ ಸಂಬಂಧಿಸಿದಂತೆಯೂ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ರೈಲ್ವೆ ವೆಚ್ಚಕ್ಕೆ ೨.೪೦ ಲಕ್ಷ ಕೋಟಿ ರೂ. ಗಳನ್ನು ಮೀಸಲಿರಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಪ್ಯಾನ್ ಕಾರ್ಡ್ ಮಾತ್ರವೇ ಸಾಕು, ಹಲವಾರು ಯೋಜನೆಗಳ ಮೂಲಕ ಸಿರಿ ಧಾನ್ಯ ಬೆಳೆಸಲು ಸರ್ಕಾರದಿಂದ ನೆರವು ನೀಡುವುದಾಗಿಯೂ ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹಾಗೆಯೇ ಪರಿಸರ ಸಂರಕ್ಷಣೆಗೆ ಕಂಪನಿ ಗಳಿಂದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಯೋಜನೆ, ಉದ್ಯೋಗ ಸೃಷ್ಟಿಗೆ ಹತ್ತು ಲಕ್ಷ ಕೋಟಿ ರೂ. ಮೀಸಲು, ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಒತ್ತು, ನಗದು ರೂಪದಲ್ಲಿ ಕೃಷಿ ಸಾಲ ಒದಗಿಸಲು ಕ್ರಮ, ರಾಜ್ಯಗಳಾದ್ಯಂತ ೩೦ ಅಂತಾರಾಷ್ಟ್ರೀಯ ಕೌಶಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಕ್ರಮ, ಕೃತಕ ಬುದ್ಧಿಮತ್ತೆ ಅಧ್ಯಯನಕ್ಕೆ ಮೂರು ಕೇಂದ್ರಗಳ ಸ್ಥಾಪನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೆಚ್ಚ ೬೬% ಗಳಷ್ಟು ಹೆಚ್ಚಳ, ಕೃಷಿ ಸ್ಟಾರ್ಟಪ್‌ಗಳಿಗೆ ಉತ್ತೇಜನ, ಕೃಷಿ ವೇಗವರ್ಧಕ ನಿಧಿ ಸ್ಥಾಪಿಸುವ ಭರವಸೆಯನ್ನೂ ಕೇಂದ್ರ ಸರ್ಕಾರ ನೀಡಿದೆ. ಹಾಗೆಯೇ ಮೀನುಗಾರರು, ಕುಶಲಕರ್ಮಿಗಳ ನೆರವಿಗೆ ೬ ಸಾವಿರ ಕೋಟಿ ರೂ. ಘೋಷಣೆ ಮಾಡಲಾಗಿದೆ.

ಪ್ರಮುಖವಾಗಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ನೀಡುವುದಾಗಿ ಘೋಷಣೆ ಮಾಡಿದೆ.

ಒಟ್ಟಿನಲ್ಲಿ ದೇಶದ ಮಧ್ಯಮ ಮತ್ತು ಬಡ ವರ್ಗವನ್ನು ಗಮನದಲ್ಲಿರಿಸಿಕೊಂಡು ಮಹತ್ವಾಕಾಂಕ್ಷೆಯ ಬಜೆಟ್ ಅನ್ನು ಮಂಡನೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ ಜನರಿಗೆ ಮತ್ತಷ್ಟು ಹತ್ತಿರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close