ಅಂಕಣಪ್ರಚಲಿತ

ಮನುಷ್ಯರಿಗೆ ಅರ್ಥವಾಗದೇ ಉಳಿದಿರುವ ವಿಚಿತ್ರ ಗುಹೆಯಲ್ಲಿ 33 ಕೋಟಿ ದೇವತೆಗಳ ಮೂರ್ತಿಗಳಿಗೂ ಇಲ್ಲಿ ಪೂಜೆ ನಡೆಯುತ್ತೆ!! ಅಷ್ಟಕ್ಕೂ ಇದು ನಾಗಲೋಕಕ್ಕೆ ದಾರಿ……

ಹಿಂದೂ ಪುರಾಣಗಳ ಪ್ರಕಾರ ಸಹಸ್ರಾರು ದೇವತೆಗಳನ್ನು ಪೂಜಿಸುವ ನಾವುಗಳು ಸ್ವರ್ಗಲೋಕ, ಪಾತಾಳಲೋಕ ಮತ್ತು ಭೂ ಲೋಕಗಳೆಂಬ ಮೂರು ಲೋಕಗಳು ಇವೆ ಎನ್ನುವ ಉಲ್ಲೇಖಗಳ ಬಗ್ಗೆಯೂ ನಾವು ತಿಳಿದಿದ್ದೇವೆ. ಅಷ್ಟೇ ಅಲ್ಲದೇ ಈ ಪುರಾಣಗಳ ಪ್ರಕಾರ ಪಾತಾಳಲೋಕವನ್ನು ನಾಗಲೋಕ ಎಂದು ಸಹ ಭಾವಿಸಲಾಗುತ್ತದೆ. ಅಂತಹ ನಾಗಲೋಕ ಇಂದಿಗೂ ಇದೆ ಎಂದರೆ ನೀವು ನಂಬ್ತೀರಾ?

ಸೂರ್ಯ ಸಿದ್ಧಾಂತದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಪಾತಾಳ ಲೋಕ ಮತ್ತು ಉತ್ತರ ದಿಕ್ಕಿನಲ್ಲಿ ಜಂಬೂ ದ್ವೀಪವಿದೆ ಎಂದು ಉಲ್ಲೇಖಿಸಿದ್ದರೆ, ವಿಷ್ಣು ಪುರಾಣವು ದೈವಿಕ ಅಲೆದಾಡುವ ಋಷಿ ನಾರದರ ಪಾತಾಳ ಭೇಟಿಯ ಬಗ್ಗೆ ಹೇಳುತ್ತದೆ. ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳು, ಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿದ್ದು ಎಂದು ಪಾತಾಳವನ್ನು ವರ್ಣಿಸಲಾಗಿದೆ. ಗಾಳಿಯಲ್ಲಿ ಮಧುರ ಪರಿಮಳವಿದೆ ಮತ್ತು ಮಧುರ ಸಂಗೀತ ಸೇರಿಕೊಂಡಿದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ಕೆನ್ನೀಲಿ, ಮರಳಿನಂತೆ, ಹಳದಿ ಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ ಎಂದು ಉಲ್ಲೇಖಿಸಿದೆ.

ಭಾರತೀಯ ಧರ್ಮಗಳಲ್ಲಿ, ಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತಗಳನ್ನು ಸೂಚಿಸುತ್ತದೆ. ಅಂದರೆ ಭೂಮಿಯ ಕೆಳಗಿರುವ ಪ್ರಾಂತವಾದ ಪಾತಾಳವನ್ನು ಅನೇಕ ವೇಳೆ ಭೂಗತಲೋಕ ಅಥವಾ ಅಧೋಲೋಕ ಎಂದು ಅನುವಾದಿಸಲಾಗುತ್ತದೆ. ಪಾತಾಳವು ಏಳು ಪ್ರದೇಶಗಳು ಅಥವಾ ಏಳು ಲೋಕಗಳಿಂದ ಕೂಡಿದೆ, ಅವುಗಳಲ್ಲಿ ಏಳನೇಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆ ಎನ್ನುವುದನ್ನೂ ಹೇಳಲಾಗುತ್ತದೆ.

ಭಾಗವತ ಪುರಾಣದ ಪ್ರಕಾರ, ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಇಲ್ಲಿನ ಜೀವನ ಆಹ್ಲಾದಕರ, ಸಂಪತ್ತು ಮತ್ತು ಐಷಾರಾಮ ದಿಂದ ಕೂಡಿದ್ದು, ಮತ್ತು ಯಾತನಾ ರಹಿತವಾಗಿದೆ. ಅಸುರರ ವಾಸ್ತುಶಿಲ್ಪಿ ಮಯನು ವಿದೇಶಿಯರಿಗಾಗಿ ಆಭರಣಯುಕ್ತ ಅರಮನೆಗಳು, ದೇಗುಲಗಳು, ಮನೆಗಳು, ಅಂಗಳಗಳು, ಮತ್ತು ವಸತಿಗೃಹಗಳನ್ನು ನಿರ್ಮಿಸಿದ್ದಾನೆ. ಕೆಳಗಿನ ಲೋಕಗಳಲ್ಲಿ ಸೂರ್ಯನ ಬೆಳಕಿಲ್ಲ, ಆದರೆ ಪಾತಾಳದ ನಿವಾಸಿಗಳು ಧರಿಸುವ ಆಭರಣಗಳ ಹೊಳಪಿನಿಂದ ಕತ್ತಲು ಕಣ್ಮರೆಯಾಗುತ್ತದೆ. ಪಾತಾಳದಲ್ಲಿ ವೃದ್ಧಾಪ್ಯ, ಬೆವರು, ರೋಗಗಳಿಲ್ಲ ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೇ ಈ ನಾಗಲೋಕಕ್ಕೆ ಅಧಿಪತಿ ವಾಸುಕಿ ನೂರು ಎಡೆಗಳನ್ನು ಹೊತ್ತಿರುವುದರ ಜೊತೆಗೆ ಆದಿಕೇಶವನು ಭೂಮಿಯನ್ನು ಅರ್ಥಾತ್ ಇಡೀ ಭೂಮಂಡಲವನ್ನೂ ಕೂಡ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಎಂದು ಕೆಲ ಪುರಾಣಗಳು ಹೇಳುತ್ತವೆ!! ಆದಿಶೇಷನು ಕೂಡ ಈ ನಾಗಲೋಕದಲ್ಲಿ ಇದ್ದಾನೆ ಎಂದು ಭಾವಿಸಲಾಗಿದ್ದು, ಅಂತಹ ಭಾಗಗಳಲ್ಲಿ ಏಳು ಲೋಕಗಳು ಇವೆ ಎಂದು ಭಾವಿಸಲಾಗಿದೆ. ಅವು ಅತಳ, ವಿತಳ, ಸುತಳ ತಳಾತಳ, ರಸತಳ, ಮಹಾತಳ ಹಾಗೂ ಪಾತಾಳ ಎನ್ನುವ ಏಳು ಲೋಕಗಳು ಅಲ್ಲಿವೆ ಎಂದು ಹೇಳುತ್ತಾರೆ. ಹಾಗಾಗಿ ಪಾತಾಳ ಲೋಕಕ್ಕೆ ಸಂಬಂಧಿಸಿದಂತಹ ಒಂದು ಪ್ರಾಂತ್ಯ ಭೂಮಿಯಲ್ಲಿ ಇಂದಿಗೂ ಕೂಡ ಇದ್ದು, ಅಲ್ಲಿ 33 ಕೋಟಿ ದೇವತೆಗಳ ಮೂರ್ತಿಗಳಿಗೂ ಪೂಜೆ ನಡೆಯುತ್ತೆ ಎಂದರೆ ನಂಬ್ತೀರಾ?? ಆದರೆ ಅದನ್ನು ನೀವು ನಂಬಲೇಬೇಕು!!

ಹೌದು… ಕ್ಷೀರ ಸಾಗರದಲ್ಲಿದ್ದ ವಾಸುಕಿ ಸರ್ಪವು ಭೂಮಿಯ ಮೇಲೆ ಇರುವ ಒಂದು ಪವಿತ್ರವಾದ ಸರ್ಪವಾಗಿದೆ. ಕ್ಷೀರ ಸಾಗರದ ಕಥೆ ಏನೆಂದರೆ ದೇವತೆಗಳು ಹಾಗು ರಾಕ್ಷಸರು ಅಮೃತಕ್ಕಾಗಿ ಹೋರಾಡುತ್ತಿರುವಾಗ (ಸರ್ಪದ ಮೂಲಕ ಎಳೆಯುತ್ತಿರುತ್ತಾರೆ) ವಾಸುಕಿ ಸರ್ಪದ ಮಹತ್ವ ಬಹು ದೊಡ್ಡದು!! ಜೀಮೂತಕೇತುವು ಎಂಬ ರಾಜನ ಕಥೆಯನ್ನು ಕೆದಕುತ್ತಾ ಹೋದರೆ, ಜೀಮೂತಕೇತುವಿಗೆ ಜೀಮೂತವಾಹನ ಎಂಬ ಕುಮಾರನು ಇದ್ದನು. ಈತ ಸಕಲ ಜೀವರಾಶಿಗಳನ್ನು ಸಮಾನವಾಗಿ ಪ್ರೇಮಿಸುತ್ತಿದ್ದನಲ್ಲದೇ, ತಂದೆ-ತಾಯಿಯ ಮೇಲೆ ಅಪರಿಮಿತವಾದ ಭಕ್ತಿಯನ್ನು ಹೊಂದಿದ್ದ. ಆ ಕಾರಣದಿಂದಾಗಿ ತನ್ನ ತಂದೆಯ ಅಣತಿಯಂತೆ ರಾಜ್ಯಭಾರ ಮಾಡಲು ಆರಂಭಿಸಿದ.

ಆದರೆ ಈ ಜೀಮೂತವಾಹನ ತನ್ನ ರಾಜ್ಯವನ್ನು ಮಂತ್ರಿಗಳಿಗೆ ಒಪ್ಪಿಸಿ ಕೋರಿದನ್ನೆಲ್ಲಾ ನೀಡುವ ಕಲ್ಪವೃಕ್ಷವನ್ನು ಕೂಡ ಬಡವರಿಗೆ ದಾನವಾಗಿ ನೀಡಿದ. ಒಂದು ದಿನ ಪರ್ಣಶಾಲೆಗಾಗಿ ಮಲಯ ಪರ್ವತ ಎಂಬ ಬೆಟ್ಟದ ಮೇಲೆ ಹೋದಾಗ ಅಲ್ಲಿ ಗೌರಿದೇವಿಯನ್ನು ಇಂಪಾದ ವೀಣಾಗಾನ ಮೂಲಕ ಪ್ರಾರ್ಥಿಸುತ್ತಿದ್ದ ಮಲಯಮತಿಯನ್ನು ಕಂಡು, ಪ್ರೇಮಿಸಿ, ವಿವಾಹವನ್ನು ಮಾಡಿಕೊಂಡನು. ಹಾಗೇ ಪರ್ವತದ ಮೇಲೆ ವಿಹಾರಿಸುತ್ತಿರುವಾಗ ಆತನಿಗೆ ಒಂದು ಬಿಳಿಯ ಪರ್ವತದ ಹಾಗೆ ಕಾಣುತ್ತಿರುವ ಹಾವುಗಳ ಗುಡ್ಡ ಕಂಡು ಆಶ್ಚರ್ಯಪಟ್ಟನು. ಅಷ್ಟೇ ಅಲ್ಲದೇ ಆ ಎಲ್ಲಾ ಹಾವುಗಳನ್ನು ಕಂಡು ವ್ಯಥೆಯನ್ನೂ ಪಟ್ಟುಕೊಂಡನು.

ಹಾಗಾಗಿ ಅಲ್ಲಿಯೇ ಅಳುತ್ತಿದ್ದ ಒಬ್ಬ ತಾಯಿಯನ್ನು ಕಂಡು ಅಲ್ಲಿ ನಡೆಯುತ್ತಿರುವ ವಿಷಯವನ್ನು ಆಕೆಯ ಬಳಿಯೇ ತಿಳಿದುಕೊಂಡಾಗ – “ಈ ದಿನ ಗುರುತ್ಮಾಂತುಕನಿಗೆ ತನ್ನ ಮಗನಾದ ಶಂಖಚೂಡನು ಆಹಾರವಾಗಿ ತೆರಳುತ್ತಿದ್ದಾನೆ ಎಂದು ಆಕೆ ಹೇಳಿದಳು. ಅಷ್ಟೇ ಅಲ್ಲದೇ, “ಗುರುತ್ಮಾಂತುಕನಿಗೆ ಹಾವುಗಳೇ ಬದ್ಧ ವಿರೋಧಿಗಳಾಗಿದ್ದು, ಆತನು ನಾಗಲೋಕದ ಮೇಲೆ ದಾಳಿ ನಡೆಸಿ ಹಾವುಗಳನ್ನು ಕನಿಕರವೇ ಇಲ್ಲದೇ ತಿನ್ನುತ್ತಿದ್ದನು. ಆ ಸಮಯದಲ್ಲಿ ನಾಗರಾಜನಾದ ವಾಸುಕಿಯು ಗುರುತ್ಮಾಂತುಕನ ಜೊತೆ ಒಪ್ಪಂದ ಮಾಡಿಕೊಂಡು ಪ್ರತಿ ದಿನ ಹಾವುಗಳನ್ನು ಆಹಾರವಾಗಿ ಕಳುಹಿಸುತ್ತೇನೆ ಎಂದು ಪ್ರಾರ್ಥಿಸಿ ಒಪ್ಪಿಸಿದರು. ಆ ನಿಯಮದಂತೆ ಈ ದಿನ ನನ್ನ ಮಗನ ಸರದಿ” ಎಂದು ಹೇಳಿದಳು!! ಆಗ…. ಶಂಖಚೂಢನ ಬದಲಾಗಿ ತಾನೇ ಗುರುತ್ಮಾಂತುಕನಿಗೆ ಆಹಾರವಾಗುತ್ತೇನೆ ಎಂದು ಆ ತಾಯಿಗೆ ಹೇಳಿ, ಬಲಿಪೀಠದ ಮೇಲೆ ಪೆದ್ದ ಬಂಡೆಯ ಮೇಲೆ ಜೀಮೂತವಾಹನನು ಮಲಗಿದನು. ಗುರುತ್ಮಾಂತುಕನು ಬಂಡೆಯ ಮೇಲೆ ಇರುವ ಜೀಮೂತವಾಹನನ್ನು ತಿನ್ನಲು ಮುಂದಾದನು.

ಕೆಲವು ಕ್ಷಣಗಳ ನಂತರ ಏನೋ ತಪ್ಪಾಗಿದೆ ಎಂದು ಸಂದೇಹವನ್ನು ಪಟ್ಟು, ತಿನ್ನುವುದನ್ನು ನಿಲ್ಲಿಸಿ ತಾನು ತಿನ್ನುತ್ತಿರುವುದು ಜೀಮೂತವಾಹನನ್ನು ಎಂದು ತಿಳಿದುಕೊಂಡನು. ಆತ ಮಾಡಿದ ತಪ್ಪಿಗೆ ತಾನೇ ನೊಂದುಕೊಂಡು, ಅತ್ತ ಶಂಖಚೂಡನು ಚಿಕ್ಕ ಮಕ್ಕಳ ಹಾಗೆ ಅಳುತ್ತಾ ಅಲ್ಲಿಯೇ ಕುಳಿತುಕೊಂಡಿದ್ದರೆ ಇತ್ತ ಜೀಮೂತವಾಹನನ ಪತ್ನಿ, ತಂದೆ, ತಾಯಿ ಸೇರಿ ಅಳುತ್ತಿದ್ದರು. ಹೇಗಾದರೂ ಮಾಡಿ ಅವರ ದುಃಖವನ್ನು ಹೋಗಲಾಡಿಸಬೇಕು, ಇಲ್ಲವಾದರೇ ತನಗೆ ಮನಃಶಾಂತಿ ಲಭಿಸುವುದಿಲ್ಲ ಎಂದು ದೇವಲೋಕಕ್ಕೆ ತೆರಳಿ ಅಮೃತವನ್ನು ತೆಗೆದುಕೊಂಡು ಬಂತು ಜೀಮೂತವಾಹನವನ್ನು ಬದುಕಿಸುತ್ತಾನೆ. ಆಗ ಎಲ್ಲರೂ ಸಂತೋಷ ಪಟ್ಟರಲ್ಲದೇ, ಜೀಮೂತವಾಹನನು ಗುರುತ್ಮಾಂತುಕನ ಶಕ್ತಿ- ಸಾಮಥ್ರ್ಯವನ್ನು ಹೊಗಳಿ, ರಾಜನನ್ನು ಬದುಕಿಸಿದನು. ಹಾಗೆಯೇ ಈಗಾಗಲೇ ತಿಂದ ಹಾವುಗಳನೆಲ್ಲಾ ಬದುಕಿಸಿ ಪುಣ್ಯವನ್ನು ಕಟ್ಟಿಕೋ ಎಂದು ಹೇಳಿದನು. ಹಾಗಾಗಿ ಗುರುತ್ಮಾಂತುಕನು ಅಂಗೀಕಾರ ಮಾಡಿ ಎಲ್ಲಾ ಹಾವುಗಳನ್ನು ಬದುಕಿಸಿದನು.

ಅದಕ್ಕೆ ಬಲ ಎಂಬಂತೆ ಉತ್ತರಾಖಂಡದಲ್ಲಿನ ಫಿತುರ್ಗಡ್ ಜಿಲ್ಲೆಯಲ್ಲಿ ಕಾಣಬಹುದಾಗಿದ್ದು, ಇಲ್ಲಿಂದ ಸುಮಾರು 85 ಕಿಲೋ ಮೀಟರ್ ದೂರದಲ್ಲಿ ಪಾತಾಳ ಭುವನೇಶ್ವರ ಎಂಬ ಗುಹೆ ಇದೆ. ಈ ಗುಹೆಯಲ್ಲಿ ನಾಗಲೋಕದ ರಹಸ್ಯಗಳು ಅಡಕವಾಗಿದ್ದು, ಈ ಗುಹೆಯಲ್ಲಿ ವಾಸುಕಿ ಸರ್ಪದ ವಾಸಸ್ಥಾನಗಳು ಕಾಣಿಸುತ್ತಿದೆ. ಅಷ್ಟೇ ಅಲ್ಲದೇ ಮನುಷ್ಯರಿಗೆ ಅರ್ಥವಾಗದೇ ಇರುವ ವಿಚಿತ್ರವಾಗಿ ಉಳಿದಿರುವ ಗುಹೆಯಾಗಿದ್ದು, ಆ ಗುಹೆಗೆ ಹೋಗುವುದು ಕೂಡ ಅಷ್ಟು ಸುಲಭದ ಕೆಲಸವಲ್ಲ.

ಅಷ್ಟೇ ಅಲ್ಲದೇ, ಈ ಗುಹೆಯಲ್ಲಿ ವಾಸುಕಿ ಸರ್ಪವು ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದನಂತೆ. ಅದಕ್ಕೆ ನಿದರ್ಶನ ಎಂಬಂತೆ ಇಲ್ಲಿ ಶಿವಲಿಂಗ ದರ್ಶನವನ್ನು ಪಡೆಯಬಹುದಾಗಿದೆ. ಈ ಗುಹೆಯ ಬಗ್ಗೆ ಸ್ಕಂದ ಪುರಾಣದಲ್ಲಿ ಅನೇಕ ವಿವರವನ್ನು ನೀಡಲಾಗಿದ್ದು, ಈ ಗುಹೆಯಲ್ಲಿ ವಿಭಿನ್ನವಾದ ಶಬ್ಧಗಳು ಕೇಳಿಸುತ್ತವೆ ಎಂದು ಹೇಳಲಾಗುತ್ತದೆ.

ಹೌದು… ನೂರಾ ಅರುವತ್ತು ಅಡಿ ಉದ್ದ ಮತ್ತು ತೊಂಬತ್ತು ಅಡಿ ಆಳದಲ್ಲಿ ಈ ಗುಹೆ ಇದ್ದು, ಮನುಷ್ಯರಿಗೆ ಅರ್ಥವಾಗದೇ ಉಳಿದಿರುವ ವಿಚಿತ್ರ ಗುಹೆಯಾಗಿದೆ. ಅಷ್ಟೇ ಅಲ್ಲದೇ ಇಲ್ಲಿ ಶಿವನ ಜೊತೆಗೆ ಮೂವತ್ತು ಮೂರು ಕೋಟಿ ದೇವತೆಗಳ ಮೂರ್ತಿಗಳನ್ನು ಪೂಜೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ಗುಹೆಯನ್ನು ತೇತ್ರಾಯುಗದಲ್ಲಿ ಸೂರ್ಯವಂಶಕ್ಕೆ ಸೇರಿದ ಒಬ್ಬ ರಾಜ ಋತುಪೂರ್ಣ ಎಂಬುವವನು ಕಂಡು ಹಿಡಿದಿದ್ದಾನೆ ಎಂದು ಹೇಳಲಾಗಿದೆ!! ಆದರೆ ಮುಚ್ಚಿಹೋಗಿದ್ದ ಈ ಗುಹೆಯನ್ನು ಮತ್ತೆ ಕಲಿಯುಗದಲ್ಲಿ ಆದಿ ಶಂಕರಾಚಾರ್ಯರು ಈ ಗುಹೆಯನ್ನು 1091ನೇ ವರ್ಷದಲ್ಲಿ ಕಂಡು ಹಿಡಿದ್ದು, ಅಂದಿನಿಂದ ಈ ಗುಹೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಇನ್ನು ಈ ಗುಹೆಯಲ್ಲಿ ರಣದ್ವಾರ, ಪಾಪದ್ವಾರ, ಧರ್ಮದ್ವಾರ ಮತ್ತು ಮೋಕ್ಷದ್ವಾರ ಎನ್ನುವ ನಾಲ್ಕು ದ್ವಾರ ಬಾಗಿಲುಗಳಿವೆ!! ಆದರೆ ಈ ನಾಲ್ಕು ದ್ವಾರಗಳಲ್ಲಿ ಪಾಪದ್ವಾರ ಎನ್ನುವ ದ್ವಾರವು ರಾವಣನ ಮರಣದ ನಂತರ ಮುಚ್ಚಿ ಹೋದರೆ, ರಣದ್ವಾರವು ಮಹಾಭಾರತದ ಯುದ್ದದ ನಂತರ ಮುಚ್ಚಿ ಹೋಗಿದೆ ಎಂದು ಹೇಳಲಾಗುತ್ತದೆ. ಇನ್ನೂ ಧರ್ಮದ್ವಾರ ಮತ್ತು ಮೋಕ್ಷದ್ವಾರವು ಇಂದಿಗೂ ಹಾಗೆಯೇ ಉಳಿದಿದ್ದು, ಇದೇ ನಾಗಲೋಕಕ್ಕೆ ದಾರಿ ಎನ್ನುವುದನ್ನು ಸಹ ಹೇಳಲಾಗುತ್ತದೆ.

ಅಷ್ಟೇ ಅಲ್ಲದೇ, ವುಪರಿತಲಂನಿಂದ 90 ಅಡಿ ಎತ್ತರದಲ್ಲಿರುವ ಈ ಗುಹೆಯಲ್ಲಿ ಶೇಷನಾಗನ ಆಕಾರದಲ್ಲಿ ಒಂದು ಆಕೃತಿ ಕಾಣಿಸುತ್ತದೆ. ಅದರ ಮೇಲೆ ಒಂದು ಸಹಜ ನಿರ್ಮಾಣವಿದ್ದು, ಶೇಷನಾಗನ ವಿಷವುಳ್ಳ ಚಿತ್ರವು ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನು ಪೂರ್ವಕಾಲದಲ್ಲಿ ಈ ಚಿತ್ರವುಳ್ಳ ಪ್ರದೇಶದಲ್ಲಿ ಲಕ್ಷಾಧಿ ಹಾವುಗಳು ಇದ್ದವಂತೆ ಎಂದು ಹೇಳಲಾಗುತ್ತಿದ್ದು, ಈ ಪ್ರದೇಶದಲ್ಲಿ ಅರ್ಜುನನ ಮೊಮ್ಮಗನಾದ ಜನಮೆಯ ಮಹಾರಾಜ ತನ್ನ ತಂದೆಯನ್ನು ಹಾವು ಕಚ್ಚಿದ್ದರಿಂದ ನಾಗಜಾತಿಯನ್ನೇ ನಾಶ ಮಾಡಬೇಕು ಎಂದು, ಒಂದು ಸರ್ಪಯಾಗವನ್ನು ಮಾಡಿದನು. ಈ ಯಾಗದಲ್ಲಿ ಕೆಲ ಲಕ್ಷಾಧಿ ಹಾವುಗಳು ಮರಣ ಹೊಂದಿದ್ದವು ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈ ಗುಹೆಯಲ್ಲಿ ಜನಮೇಯ ಮಾಡಿದ ಸರ್ಪಯಾಗ ಕುಂಡ ಕೂಡ ಇನ್ನೂ ಹಾಗೆಯೇ ಇದೆ ಎನ್ನುವುದೇ ಇದಕ್ಕೆ ಸಾಕ್ಷಿ!!

– ಅಲೋಖಾ

Tags

Related Articles

Close