ಪ್ರಚಲಿತ

ತುಳುನಾಡಿನ ದೈವಗಳ ಹೆಸರಿನಲ್ಲಿ ಹಣ ಮಾಡುವವರು ದೈವದ ವಕ್ರ ದೃಷ್ಟಿ ಗೆ ತುತ್ತಾಗುವುದು ಖಚಿತ!

ತುಳುನಾಡು ಮತ್ತು ದೈವಾರಾಧನೆಗೆ ಅವಿನಾಭಾವ ಸಂಬಂಧ ಇದೆ. ದೈವಾರಾಧನೆ ತುಳುನಾಡಿನ ಕಲೆ ಸಂಸ್ಕೃತಿ, ಬದುಕಿನ ಭಾಗ ಮಾತ್ರವಲ್ಲ. ಬದುಕಿನ ಆಗಾಧ ನಂಬಿಕೆ, ಶಕ್ತಿ ಸಹ ಹೌದು. ದೇವರಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ, ದೈವಗಳಿಗೂ ಈ ನೆಲದಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ಈ ಮಣ್ಣಿನಲ್ಲಿ ಹುಟ್ಟಿದವರಿಗೆ ದೈವಾರಾಧನೆಯ ಬಗ್ಗೆ, ದೈವಗಳ ಬಗ್ಗೆ ಭಕ್ತಿ, ಭಯ, ಗೌರವ ಭಾವನೆ ಎಲ್ಲಾ ಇದೆ.

ದೈವಗಳನ್ನು ಚಲನಚಿತ್ರ‌ದಲ್ಲಿ ತರುವುದು ಬಿಡಿ, ವಿಡಿಯೋ ಮಾಡಲು, ಫೋಟೋ ತೆಗೆಯುವುದಕ್ಕೂ ಭಯ ಪಡುವ ಕಾಲವೊಂದಿತ್ತು. ಕೇವಲ ಭಯದಿಂದ ಮಾತ್ರವಲ್ಲ. ಭಕ್ತಿ‌ಯಿಂದಲೂ ದೈವದ ಕಳದಲ್ಲಿ ಫೋಟೋ ವಿಡಿಯೋ ಗಳನ್ನು ನಿಷೇಧ ಮಾಡಲಾಗಿತ್ತು. ಕಾಲ ಬದಲಾದಂತೆ ಮನುಷ್ಯನ ನಡವಳಿಕೆಯೂ ಬದಲಾಯಿತು. ದೈವಗಳನ್ನು ಚಿತ್ರ‌ಗಳಲ್ಲಿ, ಫೋಟೋ, ವಿಡಿಯೋ‌ಗಳಲ್ಲಿ ಹಿಡಿದಿಡುವುದಕ್ಕೂ ಆರಂಭವಾಯಿತು. ತೌಳವರ ನಂಬಿಕೆ ದೈವಾರಾಧನೆಯ ಬಗ್ಗೆ ಪ್ರಪಂಚದ ಮೂಲೆ ಮೂಲೆಗೆ ತಿಳಿಯುವಂತಾಯಿತು.

ಉತ್ತಮ ವಿಷಯ ಅಲ್ಲವೇ? ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ತುಳುನಾಡಿನ ದೈವಗಳು, ದೈವಗಳ ಬಗ್ಗೆ ಒಂದು ಕೂದಲೆಳೆಯಷ್ಟು ಸಹ ಮಾಹಿತಿ ಇಲ್ಲದ ಜನರಿಂದಲೂ ಆರಾಧಿಸಲ್ಪಟ್ಟವು. ಆರಾಧನೆ ಒಳ್ಳೆಯದೆ. ಭಯ, ಭಕ್ತಿ ಸಹ ಒಳ್ಳೆಯದೆ. ಆದರೆ ಎಳ್ಳಷ್ಟೂ ತಿಳಿಯದೆ ದೈವಗಳನ್ನು ಪ್ರತಿಷ್ಟಾಪನೆ ಮಾಡುವುದು, ಕಲ್ಲು ಹಾಕುವುದು, ಕಟ್ಟೆ ಕಟ್ಟುವುದು ಮನ ಬಂದಂತೆ ದೈವಾರಾಧನೆ ಮಾಡುವುದು, ಯಾವುದೇ ಕಟ್ಟು ಕಟ್ಟಳೆ ತಿಳಿಯದೆ ಹಣಕ್ಕಾಗಿ ದೈವಗಳ ಹೆಸರು ಬಳಕೆ ಮಾಡುವುದು ಎಷ್ಟು ಸರಿ..? ಅದು ದೈವಗಳಿಗೆ ಎಸಗುವ ಅಪಚಾರ ಅಲ್ಲವೇ.

ನೀವೇ ಆಲೋಚಿಸಿ, ತುಳುನಾಡಿನಲ್ಲಿ ಯಾರಿಗೆ ಏನೇ ಕಷ್ಟ ಬಂದರೂ ಮೊದಲು ನೆನಪಾಗುವುದು ಅವರು ದೈವಗಳು. ಹರಕೆ ಸಹ ದೈವಗಳಿಗೆ ಹೇಳಿಕೊಳ್ಳುತ್ತಾರೆ. ದೈವಗಳಿಲ್ಲದೆ ತುಳುನಾಡು ಅಪೂರ್ಣ. ಇಂತಹ ಬಲಿಷ್ಠ ನಂಬಿಕೆಗೆ ಕೊಡಲಿಯೇಟು ಬಿದ್ದಾಗ ಸಹಿಸುವುದಾದರೂ ಹೇಗೆ ಸಾಧ್ಯ. ದೈವದ ಹೆಸರಿನಲ್ಲಿ ತಮಾಷೆ ಮಾಡುವುದಕ್ಕೂ ತೌಳವರು ಹಿಂದೆ ಮುಂದೆ ನೋಡುತ್ತಾರೆ. ಅಂತದ್ದರಲ್ಲಿ ಇದೀಗ ತುಳುನಾಡಿನ ಹೊರತಾದ ಕೆಲ ಪ್ರದೇಶಗಳಲ್ಲಿ ದೈವದ ಹೆಸರಿನಲ್ಲಿ ಹಣ ಮಾಡುವುದಕ್ಕೆ ಹೊರಟ ದಂಧೆಗೆ ತೊಡಗಿದವರನ್ನು ತುಳುವರು ಹೇಗೆ ಕ್ಷಮಿಸಿಯಾರು?

‘ಕೊರಗಜ್ಜ ಕಟ್ಟೆ, ಗುಳಿಗಜ್ಜನ ಕಲ್ಲು ಹಾಕಿ, ಅದಕ್ಕೆ ಕೋಲೋತ್ಸವ ನಡೆಸುತ್ತೇವೆ. ಸಹಕಾರಕ್ಕಾಗಿ ಈ …… ಸಂಖ್ಯೆ‌ಗೆ ಗೂಗಲ್ ಪೇ, ಫೋನ್ ಪೇ ಮಾಡಿ’ ಎಂದು ಮನವಿ ಮಾಡುವವರಿಗೆ, ಈ ಮೊದಲು ಇಂತಹ ದೈವಗಳು ಸಹ ಇವೆ ಎಂಬುದೂ ಸಹ ತಿಳಿದಿರಲಿಕ್ಕಿಲ್ಲ. ಈಗ ಕಾಂತಾರಾ ಚಲನಚಿತ್ರ‌ದಲ್ಲಿ ಪಂಜುರ್ಲಿ, ಗುಳಿಗ ದೈವಗಳ ಬಗ್ಗೆ ತಿಳಿದುಕೊಂಡು, ಚಲನಚಿತ್ರ‌ದಿಂದ ಪ್ರೇರಣೆ ಪಡೆದು ಇಲ್ಲಿನ ದೈವಗಳನ್ನು ಘಟ್ಟದಾಚೆಗೂ ಕೊಂಡು ಹೋಗುವ ಹೆಸರಲ್ಲಿ ಹಣ ಮಾಡುವವರಿಗೆ ಸರಿಯಾದ ಉತ್ತರ ಆ ದೈವಗಳೇ ನೀಡಬೇಕಷ್ಟೇ.

ನಮ್ಮ ನಂಬಿಕೆಗಳನ್ನು ಗೌರವಿಸಿ‌. ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಆರ್ಥಿಕತೆ ಸುಧಾರಣೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ನಡೆಸಿದವರಿಗೆ, ಅದರಿಂದ ನಷ್ಟ‌ವೇ ಆಗುತ್ತದೆ ಹೊರತು ಯಾವುದೇ ಲಾಭವಿಲ್ಲ ಎನ್ನುವುದು ಸತ್ಯ. ಏಕೆಂದರೆ ತುಳುವರು ‘ಸತ್ಯ’ ಗಳೆಂದೇ ನಂಬಿರುವ ದೈವಗಳ ಹೆಸರಿನಲ್ಲಿ ಮಾಡುವ ಮೋಸಕ್ಕೆ ಆ ದೈವಗಳು ಕ್ಷಮೆ ನೀಡಲಾರವು.

ಒಂದು ವಿಷಯ ಜ್ಞಾಪಕದಲ್ಲಿ ಇರಲಿ, ಇಲ್ಲಿನ ಸತ್ಯಗಳನ್ನು ನಂಬಿ. ನಿಮಗೆ ಅವುಗಳು ಇಂಬು ಕೊಡುತ್ತವೆ. ಅದೇ ದೈವಗಳ ಹೆಸರಿನಲ್ಲಿ ಅನ್ಯಾಯ ಎಸಗಿದಿರೋ, ಅವುಗಳೇ ನಿಮಗೆ ಶಿಕ್ಷೆ ಸಹ ನೀಡುತ್ತವೆ. ದೇವರ ಕೋಪಕ್ಕಾದರೂ ಶೀಘ್ರ ಕ್ಷಮೆ ಸಿಗಬಹುದು. ಆದರೆ ದೈವಗಳ ಕೋಪ ಅಷ್ಟು ಸುಲಭದಲ್ಲಿ ಇಳಿಯುವುದಿಲ್ಲ. ನಿಮ್ಮ ಜನ್ಮ ಜನ್ಮಕ್ಕೂ ಸಾಕು ಎಂಬಷ್ಟು ಕಷ್ಟಗಳ ಸುರಿಮಳೆ ನಿಮ್ಮ ಜೀವನಕ್ಕೆ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಿ. ಇದು ತುಳುವರು ಕಂಡ ಸತ್ಯ.

ದೈವಾರಾಧನೆಯ‌ನ್ನು ಚಲನಚಿತ್ರ, ವಿಡಿಯೋ, ಶಾರ್ಟ್ ಮೂವಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರೇ ಗಮನಿಸಿ. ನಾವು ಇಡುವ ಒಂದು ತಪ್ಪು ಹೆಜ್ಜೆ ನಮ್ಮ ದೈವಗಳನ್ನೇ ಹೇಗೆ ಆರ್ಥಿಕತೆಯ ಮೂಲಗಳನ್ನಾಗಿ ಹಲವರು ಮಾಡುಕೊಳ್ಳುತ್ತಾರೆ ಎಂದು. ನಮ್ಮ ನಂಬಿಕೆಗೆ ಗಾಯವಾಗುವುದಕ್ಕೆ ಕಾರಣ ನಾವೇ ಆಗಿದ್ದೇವೆ. ಎಚ್ಚೆತ್ತುಕೊಳ್ಳೋಣ. ನಮ್ಮ ಸಂಸ್ಕೃತಿ, ನಂಬಿಕೆಗಳನ್ನು ಉಳಿಸುವ ಜವಾಬ್ದಾರಿ, ಕರ್ತವ್ಯ ಎಲ್ಲವೂ ನಮ್ಮದೆ. ತಿಳಿದಿರಲಿ.

Tags

Related Articles

Close