ಪ್ರಚಲಿತ

ತಾರಕಕ್ಕೇರಿದೆ ಗಿಡುಗ ಮತ್ತು ಡ್ರಾಗನ್ ನ ಜಾಗತಿಕ ವ್ಯಾಪಾರ ಯುದ್ದ!! ಚೀನಾದೊಂದಿಗಿನ ತನ್ನ ವ್ಯಾಪಾರದ ಯುದ್ಧವನ್ನು ಹೆಚ್ಚಿಸಿಕೊಳ್ಳಲಿರುವ ಟ್ರಂಪ್, ತಿರುಗೇಟು ನೀಡಲಿದ್ದಾರೆ ಜಿನ್ ಪಿಂಗ್!!

ಚೀನಾದ ಸೊಕ್ಕು ಮುರಿಯುವ ಸಂಕಲ್ಪವನ್ನು ಮಾಡಿರುವ ಟ್ರಂಪ್, ಜಾಗತಿಕ ವ್ಯಾಪಾರ ಯುದ್ದದಲ್ಲಿ ಮೇಲುಗೈ ಸಾಧಿಸಲಿರುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಚೀನಾ ಮತ್ತು ಅಮೇರಿಕಾ ವ್ಯಾಪಾರ ಯುದ್ದ ತಾರಕ್ಕೇರಿ ಜಾಗತಿಕವಾಗಿ ಎಲ್ಲಾ ದೇಶಗಳು ಆರ್ಥಿಕ ಹಿಂಜರಿತ ಅನುಭವಿಸುವ ಭೀತಿ ಎದುರಿಸುತ್ತಿದೆ. ಚೀನಾ ವಿರುದ್ದ ತನ್ನ ವ್ಯಾಪಾರ ಯುದ್ದವನ್ನು ತೀವ್ರಗೊಳಿಸಿರುವ ಟ್ರಂಪ್ ಆಡಳಿತ ಈ ವಾರದ ಅಂತ್ಯದ ವೇಳೆಗೆ, ಅಮೆರಿಕಾದ ವ್ಯವಹಾರಗಳಲ್ಲಿ ಚೀನೀ ಹೂಡಿಕೆಯನ್ನು ನಿರ್ಬಂಧಿಸಲು ಮತ್ತು ಚೀನಾಕ್ಕೆ ಕೆಲವು ಹೈಟೆಕ್ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೇರಿಕಾ ವ್ಯವಹಾರಗಳ ಸಾಮರ್ಥ್ಯವನ್ನು ನಿರ್ಬಂಧಿಸುವ ಯೋಜನೆಗಳ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಚೀನಾ ಡ್ರಾಗನ್ ಕಣ್ಣು ಕುಕ್ಕಲು ಅಮೇರಿಕಾ ಗಿಡುಗ ತಯಾರಾಗಿದೆ!

ಪ್ರಪಂಚದ ಎರಡು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿವೆ. ಎರಡೂ ದೇಶಗಳ ಸರ್ವಾಧಿಕಾರಿ ಧೋರಣೆಯ ಮೂರ್ಖ ಅಧ್ಯಕ್ಷರುಗಳಿಂದಾಗಿ ಇಡಿಯ ಜಗತ್ತೆ ನಷ್ಟ ಅನುಭವಿಸುವಂತಾಗುತ್ತಿದೆ. ವಿಶ್ವದ ತಂತ್ರಜ್ಞಾನ ಕೇಂದ್ರವಾಗಿ ಬೆಳೆಯಲು ಚೀನಾ ಮಹತ್ವಾಕಾಂಕ್ಷೆ ಹೊಂದಿದೆ. ಚೀನಾದ ಮಹಾತ್ವಾಕಾಂಕ್ಷೆಯನ್ನು ತಡೆಯಲೋಸುಗ ಅಮೇರಿಕಾ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಚೀನಾಕ್ಕೆ ಕೊಡಲು ನಿರ್ಬಂಧ ಹೇರುವ ಹುನ್ನಾರದಲ್ಲಿದೆ. ಜೂನ್ 15 ರಂದು ಟ್ರಂಪ್ ಆಡಳಿತವು $ 50 ಬಿಲಿಯನ್ ಮೌಲ್ಯದ ಚೀನೀ ಸರಕುಗಳ ಮೇಲೆ ಹೆಚ್ಚುವರಿ ಸುಂಕದ ಬೆದರಿಕೆ ಒಡ್ಡಿತು ಮತ್ತು ಭವಿಷ್ಯದಲ್ಲಿ $ 400 ಶತಕೋಟಿಯಷ್ಟು ಹೆಚ್ಚಿನ ಸುಂಕವನ್ನು ವಿಧಿಸಲಿದೆ ಎಂದು ಘೋಷಿಸಿತು.

ಟ್ರಂಪ್ ನ ಹೊಸ ಕ್ರಮವು ಚೀನಾ ಆರ್ಥಿಕತೆಗೆ ಭಾರೀ ಹೊಡೆತವನ್ನು ಉಂಟುಮಾಡುತ್ತದೆ, ಭವಿಷ್ಯದಲ್ಲಿ ಚೀನಾ ತನ್ನ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈ ಕ್ರಮ ತಡೆ ಒಡ್ಡಲಿದೆ ಎನ್ನಲಾಗಿದೆ. ಅಮೇರಿಕಾದ ಏಟಿಗೆ ಪ್ರತಿ ಏಟು ನೀಡಲು ಚೀನಾ ಕೂಡಾ ಸಜ್ಜಾಗಿದೆ. ಅಮೇರಿಕಾದಿಂದ ಆಮದಾಗುವ ವಸ್ತುಗಳ ಪಟ್ಟಿ ತಯಾರಿಸಿ ತಾನೂ ಸುಂಕ ಹೆಚ್ಚಳ ಮಾಡಲು ಕಾಯುತ್ತಾ ಕುಳಿತಿದೆ. ಅಮೇರಿಕಾದ ಸುಂಕದ ವಿರುದ್ದ ತಾನೂ ಅದೆ ಪ್ರಮಾಣದ ಸುಂಕ ವಿಧಿಸಿ ಪ್ರತೀಕಾರ ತೀರಿಸುವುದಾಗಿ ಭರವಸೆ ನೀಡಿದೆ. ವಿಶೇಷವಾಗಿ ಟ್ರಂಪ್ ಅನ್ನು ಬೆಂಬಲಿಸುವ ರಿಪಬ್ಲಿಕನ್ ಮತದಾರರು ವಾಸಿಸುವ ಮಿಡ್ವೆಸ್ಟ್ ಪ್ರಾಂತ್ಯದ ರೈತರು ಮತ್ತು ಕೈಗಾರಿಕಾ ಕಾರ್ಮಿಕರ ಮೇಲೆ ಪರಿಣಾಮ ಬೀರುವ ಸುಂಕವನ್ನು ಉದ್ದೇಶಪೂರ್ವಕವಾಗಿ ವಿಧಿಸುತ್ತೇನೆ ಎಂದು ಗುಟುರು ಹಾಕಿದೆ. ನಾವು ಪಾಶ್ಚಾತ್ಯರಂತೆ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ನೀಡುವುದಿಲ್ಲ, ಬದಲಾಗಿ ಮುಸುಡಿ ಒಡೆಯುತ್ತೇವೆ ಅಂದು ಖಾರವಾಗಿ ಹೇಳಿದ್ದಾರೆ ಜಿನ್ ಪಿಂಗ್.

ದೊಡ್ಡಣ್ಣ-ಚಿಕ್ಕಣ್ಣ ಜಗಳದಲ್ಲಿ ಇತರ ದೇಶಗಳು ಕಕ್ಕಾಬಿಕ್ಕಿಯಾಗಿವೆ. ಚೀನಾದ ” ಮೇಡ್ ಇನ್ ಚೈನಾ 2025″ ಹೊಡೆತ ನೀಡಲು ಅಮೇರಿಕಾ ಒಂಟಿ ಕಾಲಿನಲ್ಲಿ ನಿಂತುಕೊಂಡಿದೆ. ಇವರಿಬ್ಬರ ಜಗಳದಲ್ಲಿ ಭಾರತ ಮಾತ್ರ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಅತ್ತ ಅಮೇರಿಕಾದ ಉತ್ಪನ್ನಗಳ ಮೇಲೆ ಎಲ್ಲರಿಗಿಂತ ಮೊದಲೇ ಆಮದು ಸುಂಕ ಹೆಚ್ಚಿಸಿರುವ ಭಾರತ ಇತ್ತ ಚೀನಾದಿಂದ ಹೆಚ್ಚು ಉತ್ಪನ್ನಗಳ ಆಮದನ್ನು ನಿರೀಕ್ಷಿಸುತ್ತಿದೆ. ಚೀನಾ ಭಾರತದ ಅತಿ ದೊಡ್ಡ ವ್ಯಾಪಾರಿ ಪಾಲುದಾರ. ಚೀನಾವು ಅಮೇರಿಕಾದ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಿಸಿರುವುದರಿಂದ, ಅತಂಹ ಉತ್ಪನ್ನಗಳನ್ನು ಚೀನಾ ಕಂಪನಿಗಳು ಭಾರತದಿಂದ ಆಮದು ಮಾಡಿಕೊಳ್ಳಲು ಬಯಸುತ್ತವೆ. ಒಂದೇ ಏಟಿಗೆ ಎರಡು ಹಕ್ಕಿ, ಅತ್ತವೂ ಲಾಭ, ಇತ್ತವೂ ಲಾಭ!!

ಚೀನಾ-ಅಮೇರಿಕಾ ನಾಟಕ ಎಷ್ಟು ದಿನ ನಡೆಯುತ್ತದೋ ತಿಳಿದಿಲ್ಲ, ಆದರೆ ‘ಹುಚ್ಚರ ಮದುವೆಯಲ್ಲಿ ಉಂಡವನೆ ಜಾಣ’ ಎನ್ನುವ ಗಾದೆ ಮಾತಿನಂತೆ ಭಾರತ ಈ ಸದವಕಾಶವನ್ನು ಸಂಪೂರ್ಣ ಉಪಯೋಗಿಸುವ ರಣತಂತ್ರ ಹೆಣೆಯುತ್ತಿದೆ. ಅಮೇರಿಕಾ-ಚೀನಾ ಜಗಳ ಭಾರತಕ್ಕೆ ಎರಡೂ ಕಡೆಯಿಂದಲೂ ಆದಾಯ ತಂದು ಕೊಟ್ಟರೆ ಅಷ್ಟೆ ಸಾಕು.

-ಶಾರ್ವರಿ

Tags

Related Articles

Close