ಪ್ರಚಲಿತ

ವಂದೇ ಭಾರತ್ ರೈಲು ಚಲಾಯಿಸಿದ ನಾರೀ ಶಕ್ತಿ

ಮಹಿಳೆಯರು ಯಾವುದರಲ್ಲಿಯೂ ಕಡಿಮೆ ಇಲ್ಲ. ಮನೆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಿಂದ ಹಿಡಿದು ಏರೋಪ್ಲೇನ್ ಹಾರಿಸುವ ವರೆಗೂ ಮಹಿಳೆಯರು ಮುಂದುವರಿದಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

ಇದು ಭಾರತದ ದಿಟ್ಟ ಮಹಿಳೆಯೊಬ್ಬರ ಕಥೆ. ವಂದೇ ಭಾರತ್ ರೈಲು ಓಡಿಸುವ ಮೂಲಕ ಭಾರತದ ಸುರೇಖಾ ಯಾದವ್ ಅವರು ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಸೊಲ್ಲಾಪುರದಿಂದ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನು ಚಲಾಯಿಸುವ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್‌‌ನ ಮೊದಲ ಲೋಕೋಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇಂತಹ ಹೊಸ ಇತಿಹಾಸ ಬರೆದ ಸುರೇಖಾ ಅವರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ವಂದೇ ಭಾರತ್ ರೈಲು ನಾರಿ ಶಕ್ತಿಯಿಂದ ಚಲಾಯಿಸಲ್ಪಡುತ್ತಿದೆ. ಸುರೇಖಾ ಯಾದವ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌‌ನ ಮೊದಲ ಲೋಕೋಪೈಲಟ್ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸುರೇಖಾ ಅವರು ಮಹಾರಾಷ್ಟ್ರ‌ದ ಸತಾರಾದವರಾಗಿದ್ದು, ೧೯೮೮ ರಲ್ಲಿ ಭಾರತದ ಮೊದಲ ರೈಲು ಚಾಲಕರಾದವರು. ಅವರ ಸಾಧನೆಗಳಿಗಾಗಿ ರಾಜ್ಯ, ರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳಿಗೂ ಅವರು ಭಾಜನರಾದವರು. ವಂದೇ ಭಾರತ್ ಓಡಿಸುವುದಕ್ಕೂ ಮೊದಲು ಅವರು ರೈಲ್ವೆ ಇನ್ಸ್ಟಿಟ್ಯೂಟ್ ‌ನಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.

ಈ ಅನುಭವದ ಬಗ್ಗೆ ಸುರೇಖಾ ಅವರು ಮಾತನಾಡಿದ್ದು, ವಂದೇ ಭಾರತ್ ರೈಲು ವೇಗ ಮತ್ತು ಸುಧಾರಿತ ತಂತ್ರಜ್ಞಾನ ಹೊಂದಿದೆ. ಸಾಂಪ್ರದಾಯಿಕ ರೈಲುಗಳಿಗೆ ಹೋಲಿಸಿದರೆ ಈ ರೈಲುಗಳನ್ನು ಓಡಿಸಲು ಹೆಚ್ಚಿನ ಜಾಗರೂಕತೆಯ ಅಗತ್ಯವಿದೆ. ಈ ರೈಲು ಚಲಾಯಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.

Tags

Related Articles

Close