ಪ್ರಚಲಿತ

ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳಿಗೆ ‘ಭಾರತ’ ಎಂದರೆ ಉರಿ ಏಕೆ?

‘ಭಾರತ’ ಎಂಬ ಹೆಸರು ಕೇಳಿದಾಗ ಪ್ರತಿಯೊಬ್ಬ ಭಾರತೀಯನಿಗೂ ಮೈಯೆಲ್ಲಾ ರೋಮಾಂಚನವಾಗುವುದು, ಪುಳಕವಾಗುವುದು ಸಹಜ. ಭಾರತ ಎಂದರೆ ಉಸಿರು ಎಂದುಕೊಂಡವರಿಗೆ, ದೇಶದ ಮೇಲೆ ಅಭಿಮಾನ, ಪ್ರೀತಿ ಹೊಂದಿದವರಿಗೆ ಈ ಹೆಸರಿನಲ್ಲಿ ಸಿಗುವ ಆನಂದ ಅಷ್ಟಿಷ್ಟಲ್ಲ. ಇದು ದೇಶ ಪ್ರೇಮಿಗಳ ಕಥೆಯಾದರೆ, ದೇಶ ವಿರೋಧಿಗಳಿಗೆ ಭಾರತ ಎಂಬ ಶಬ್ಧ ಕೇಳಿದಾಗ ಉರಿಯುತ್ತದೆ ಎಂಬುದಕ್ಕೆ ಈಗ ಸಾಕ್ಷಿಯೂ ಸಿಕ್ಕಂತಾಗಿದೆ.

ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ದೇಶದ ಹೆಸರಿಗೆ ಸಂಬಂಧಿಸಿದ ಹಾಗೆ ಮಹತ್ವದ ನಿರ್ಣಯ ಒಂದನ್ನು ಕೈಗೊಳ್ಳಲು ಮುಂದಾಗಿದೆ ಎನ್ನುವ ಮಾತುಗಳು ಮೂಲಗಳಿಂದ ಕೇಳಿ ಬರುತ್ತಿವೆ. ಭಾರತವನ್ನು ‘ಇಂಡಿಯಾ’ ಎಂದು ಕರೆಯುವ ಬದಲಾಗಿ ‘ರಿಪಬ್ಲಿಕ್ ಆಫ್ ಭಾರತ’ ಎಂಬುದಾಗಿ ನಾಮಕರಣ ಮಾಡುವ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂಬುದಾಗಿಯೂ ಹೇಳಲಾಗುತ್ತಿದೆ. ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಿರುವುದೇ ಈ ಮರುನಾಮಕರಣದ ಚರ್ಚೆಯನ್ನು ಹುಟ್ಟು ಹಾಕಿದೆ.

ಸೆಪ್ಟೆಂಬರ್ 18 – 22 ರ ವರೆಗೆ ಐದು ದಿನಗಳ ಕಾಲ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದಲ್ಲಿಯೇ ಇಂಡಿಯಾ ಹೆಸರನ್ನು ಬಿಟ್ಟು ಭಾರತ ಎಂಬುದಾಗಿಯೇ ಕರೆಯುವಂತೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಸಹ ಇದೆ. ಆದರೆ ಈ ವರೆಗೆ ಇದರ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲವಾಗಿದ್ದು, ಕೇಂದ್ರ ಸರ್ಕಾರ ಏನು ಚಿಂತನೆ ನಡೆಸುತ್ತಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಕೆಲ ಸಮಯದ ಹಿಂದಷ್ಟೇ ಆರ್ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೀ ಅವರು ಸಹ ‘ಇಂಡಿಯಾ’ ಬದಲು ‘ರಿಪಬ್ಲಿಕ್ ಆಫ್ ಭಾರತ್’ ಎಂಬುದಾಗಿಯೇ ನಮ್ಮ ದೇಶವನ್ನು ಕರೆಯುವಂತೆಯೂ ಸಲಹೆ ನೀಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಆದರೆ, ಕೇಂದ್ರ ಸರ್ಕಾರದ ವಿರೋಧಿಗಳು, ಇಂಡಿಯಾ ಒಕ್ಕೂಟದಲ್ಲಿ ಕೈ ಜೋಡಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮಾತ್ರ ದೇಶದ ಹೆಸರನ್ನು ಇಂಡಿಯಾ ಬದಲಿಗೆ ಭಾರತ ಎನ್ನುವುದಕ್ಕೆ ವಿರೋಧ, ಅಸಮಾಧಾನ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಮೈತ್ರಿಕೂಟದಿಂದ ಭಾರತ ಹೆಸರಿನ ಬಳಕೆಗೆ ತೀವ್ರ ಆಕ್ಷೇಪಗಳು ಸಹ ಕೇಳಿ ಬರುತ್ತಿವೆ. ಇಂಡಿಯಾ, ಭಾರತ ಎರಡು ಪದಗಳ ಬಳಕೆಗೂ ಸಂವಿಧಾನ ಒಪ್ಪಿಗೆ ನೀಡಿದ್ದರೂ, ಕಾಂಗ್ರೆಸ್ ಮತ್ತದರ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಿಗೆ ಮಾತ್ರ ‘ಭಾರತ’ ಎಂಬ ಪದ ಬಳಕೆ ಉರಿ ಹೆಚ್ಚಿಸಿದೆ ಎನ್ನುವುದು ಸತ್ಯ.

ತಮ್ಮ ರಾಜಕೀಯ ದುರುದ್ದೇಶಕ್ಕೆ ಭಾರತ ಎಂಬ ಪದ ಬಳಕೆ (ಭಾರತ್ ಜೋಡೋ ಯಾತ್ರೆ) ಮಾಡುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು, ದೇಶವನ್ನು ಭಾರತ ಎಂದು ಕರೆಯುವ ವಿಷಯದಲ್ಲಿ ಮಾತ್ರ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ. ನಮ್ಮ ಪುರಾಣ, ಇತಿಹಾಸಗಳಲ್ಲಿಯೂ ಭಾರತ ಎಂದೇ ನಮ್ಮ ದೇಶದ ಹೆಸರಿನ ಉಲ್ಲೇಖವಿದೆ. ಇಂಡಿಯಾ ಎಂಬುದು ವಿದೇಶಿಗರು ನಮ್ಮ ದೇಶವನ್ನು ಗುರುತಿಸಲು ಇರಿಸಿದ ಹೆಸರಾಗಿದೆ. ಹೀಗಿದ್ದರೂ ಭಾರತ ವಿರೋಧಿಗಳಿಗೆ ಇಂಡಿಯಾ ಹೆಸರಿನ ಮೇಲೆಯೇ ಮೋಹ ಇರುವುದು, ಪ್ರಧಾನಿ ಮೋದಿ, ಎನ್‌ಡಿಎ ಯನ್ನು ದ್ವೇಷಿಸುವ ಭರದಲ್ಲಿ ‘ಭಾರತ’ ಹೆಸರನ್ನು, ಈ ದೇಶವನ್ನು ಸಹ ದ್ವೇಷಿಸುವ ಹಾಗೆ ಮಾಡುತ್ತಿದೆ ಎನ್ನುವುದು ನಿಸ್ಸಂಶಯ.

ಒಳ್ಳೆಯ ವಿಚಾರಗಳಿಗೆ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡದ ವಿಪಕ್ಷಗಳಿಂದ ದೇಶದ ಅಭಿವೃದ್ಧಿ ಅಸಾಧ್ಯ ಎನ್ನುವುದಕ್ಕೆ ಇಂಡಿಯಾ ಒಕ್ಕೂಟದ ಪಕ್ಷಗಳೇ ಸಾಕ್ಷಿ ಎಂಬಂತಿವೆ. ಇಂಡಿಯಾ ಹೆಸರನ್ನು ತೆಗೆದು ಭಾರತ ಎಂದೇ ಕರೆಯುವುದು ಅನಾವಶ್ಯಕ ಎನ್ನುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಿಲುವು ದೇಶ ವಿರೋಧಿ ಮನಸ್ಥಿತಿಗೆ ಹಿಡಿದ ಕೈಗನ್ನಡಿಯೇ ಸರಿ.

Tags

Related Articles

Close