ಪ್ರಚಲಿತ

ಭಾರತೀಯರು ನಾವು ನಾವೆಲ್ಲಾ ಒಂದೇ! ಹಾಗಾದ್ರೆ ಏಕರೂಪ ನಾಗರಿಕ ನೀತಿಸಂಹಿತೆಗೆ ವಿರೋಧ ಯಾಕೆ? ನಮ್ಮ ದೇಶಕ್ಕೆ ಅದರ ಅಗತ್ಯ ಎಷ್ಟಿದೆ ತಿಳಿಯಬೇಕೆ? ಮುಂದೆ ಓದಿ!

ಏಕರೂಪ ನಾಗರಿಕ ನೀತಿಸಂಹಿತೆ ಭಾರತದೆಲ್ಲಡೆ ಪ್ರಸ್ತುತವಾಗಿ ಅತೀ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಿಷಯ ಎಂದರೆ ತಪ್ಪಾಗಲಾರದು. ಹೌದು, ಭಾರತದಲ್ಲಿ ಅಗತ್ಯವಾಗಿ ಈ ನೀತಿಸಂಹಿತೆ ಜಾರಿಯಾಗಬೇಕು ಎಂದು ವಿವಿದ ರೀತಿಯಲ್ಲಿ ಭಾರತ ಸರ್ಕಾರಕ್ಕೆ ಹಲವು ಮೂಲಗಳಿಂದ ಒತ್ತಡಗಳನ್ನು ಹೇರಲಾಗುತ್ತಿದೆ. ಅಷ್ಷಕ್ಕೂ ಈ ಸಂಹಿತೆಯು ಒಂದು ರೀತಿಯ ಪೌರ ನಾಗರಿಕ ಕಾನೂನು ಸಂಹಿತೆಯ ಕಲ್ಪನೆಯಾಗಿದ್ದು, ಇದು ನಮ್ಮ ನಡುವಿನ ಧರ್ಮ, ಜಾತಿ ಮತ್ತು ಜನಾಂಗ/ ಬುಡಕಟ್ಟುಗಳ ಹೊರತಾಗಿ ಎಲ್ಲಾ ಭಾರತೀಯರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯತೀತ ಪೌರಕಾನೂನುಗಳ ಮೂಲಕ ಆಡಳಿತ ನಡೆಸುವುದಾಗಿದೆ. ಈ ಕಾನೂನು ಜಾರಿಯಾದಲ್ಲಿ ನಮ್ಮ ಧರ್ಮ ಅಥವಾ ಜಾತಿ ಅಥವಾ ಇತರೆ ಬುಡಕಟ್ಟು ಜನಾಂಗಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ. ಇಂತಹ ಕಾನೂನುಗಳು ಹೆಚ್ಚಿನ ರಾಷ್ಟ್ರಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು ಎಲ್ಲಾರೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದಲ್ಲಿ ಪ್ರಸ್ತುತವಾಗಿ ಒಬ್ಬ ವ್ಯಕ್ತಿಯು ಜಾತಿಯ ಆಧಾರದ ಮೇಲೆ, ಧರ್ಮದ ಆಧಾರದ ಮೇಲೆ ಬಹುತೇಕ ಕಾನೂನುಗಳನ್ನು ನಿರ್ಣಯಿಸಲಾಗುತ್ತದೆ. ಅದೇ ರೀತಿ ತಪ್ಪಿತಸ್ಥರು ಈ ರೀತಿಯ ಕಟ್ಟುಪಾಡಿನ ಮೂಲಕ ಶಿಕ್ಷೆಯಿಂದ ಪಾರಾಗುತ್ತಾರೆ ಎಂದರೆ ತಪ್ಪಾಗಲಾರದು ಅದುವೇ ಸತ್ಯ ಕೂಡ ಹೌದು.ಭಾರತದಲ್ಲಿ ಪ್ರಸ್ತುತವಾಗಿ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರುಗಳು ಹಿಂದೂ ಕಾನೂನುಗಳ ವ್ಯಾಪ್ತಿಯೊಳಗೆ ಬಂದರೇ, ಭಾರತೀಯ ಮುಸಲ್ಮಾನರು, ಕ್ರೈಸ್ತರು ತಮ್ಮದೇ ಆದ ಕಾನೂನುಗಳನ್ನು ಹೊಂದಿದ್ದಾರೆ. ಭಾರತೀಯರು ಅಂತಾ ಕರೆದ ಮೇಲೆ ಎಲ್ಲರೂ ಒಂದೇ ತಾನೇ..? ಮತ್ಯಾಕೇ ಈ ರೀತಿಯ ಪ್ರತ್ಯೇಕ ಕಾನೂನುಗಳಿಂದ ನಾವೆಲ್ಲರೂ ಪ್ರತ್ಯೇಕವಾಗಬೇಕು ಅಲ್ವೇ..?

ಭಾರತದಲ್ಲಿ ಕೇವಲ ಅಪರಾಧಗಳಿಗೆ ಮಾತ್ರ ಇಬ್ಬಾಗದ ಕಾನೂನು ಅನ್ವಯಿಸುತ್ತಿಲ್ಲ ಸ್ವಾಮಿ, ಬದಲಾಗಿ ದಂಡಶಾಸನಗಳು ಮತ್ತು ಗುತ್ತಿಗೆ, ಪ್ರಾಮಾಣ್ಯ/ ರುಜುವಾತು, ಆಸ್ತಿ-ಪಾಸ್ತಿಗಳ ವರ್ಗಾವಣೆ, ಕಂದಾಯ ಪಾವತಿ/ ಕರಸಲ್ಲಿಕೆ ಇತರೆ ವಿಷಯಗಳಲ್ಲೂ ಮೇಲುಗೈ ಪಡೆದಿದೆ. ಅದೇ ರೀತಿ ಏಕರೂಪ ನಾಗರಿಕ ನೀತಿಸಂಹಿತೆಯ ಜಾರಿಯ ಬೇಡಿಕೆ ಚರ್ಚೆ ಈಗಿನದಲ್ಲ. ಅದು ವಸಾಹತು ಕಾಲದ ಅವಧಿಯಷ್ಟು ಹಿಂದಿನದಾಗಿದೆ. ಅಪರಾಧಗಳು, ಸಾಕ್ಷ್ಯಾ-ಪುರಾವೆಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ ೧೮೪೦ ರ ಲೆಕ್ಸ್ ಲೋಚಿ/ ಕಿ/ಸಿ ವರದಿಯು ಭಾರತದಲ್ಲಿ ಏಕರೂಪದ ನಾಗರಿಕತೆಯ ಕಾನೂನು ಸಂಹಿತೆಯ ಅಗತ್ಯತೆ ತುಂಬಾ ಇದೆ ಎಂದು ಸಾರಿ ಹೇಳಿದ್ದರು.

ಅಷ್ಟಕ್ಕೂ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯ ಜಾರಿ ಅಗತ್ಯವಾಗಿ ಬೇಕು ಏಕೆ ಗೊತ್ತೇ..!?

ಏನಿದು ಏಕರೂಪ ನಾಗರಿಕ ಸಂಹಿತೆ?ಮೊದಲು ತಿಳಿಯೋಣ

ಭಾರತ ಸಂವಿಧಾನದ ೪೪ ನೇ ವಿಧಿಯ ಅನುಸಾರವಾಗಿ ಅಗತ್ಯ ಬಂದರೆ, ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಅವಕಾಶವಿದ್ದು, ಭಾರತದ ಸಮಸ್ತ ಪ್ರಜೆಗಳಿಗೆ ಏಕರೂಪದ ನಾಗರಿಕ ಕಾನೂನುಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನಿಸಬೇಕು ಎಂಬ ನಿಬಂಧನೆಯನ್ನು ಇದು ವಿಧಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ದೇಶವೊಂದರಲ್ಲಿ ವಾಸಿಸುವ ಎಲ್ಲಾ ಪ್ರಜೆಗಳ ಧರ್ಮ, ಜಾತಿ ಮತ್ತು ಪಂಗಡ ಯಾವುದೇ ಇರಲಿ ಅವರಿಗೆಲ್ಲ ಒಂದೇ ರೀತಿಯ ಕಾನೂನು, ಅಂದರೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಜಾತ್ಯತೀತ ಪೌರ ಕಾನೂನುಗಳು ಎಂಬುದು ಏಕರೂಪದ ನಾಗರಿಕ ಸಂಹಿತೆಯ ಅರ್ಥ.!

ಈ ಸಂಹಿತೆಯ ವ್ಯಾಪ್ತಿಯಲ್ಲಿ ಮದುವೆ, ವಿಚ್ಛೇದನ, ದತ್ತುಸ್ವೀಕಾರ ಮತ್ತು ಆಸ್ತಿಪಾಸ್ತಿಯ ಉತ್ತರಾಧಿಕಾರ, ಗಳಿಕೆ ಮತ್ತು ನಿರ್ವಹಣೆಯ ಕುರಿತಾದ ಮುಂತಾದ ಕಾನೂನುಗಳು ಇದರ ವ್ಯಾಪ್ತಿಯಲ್ಲಿ ಬರುತ್ತದೆ.

ಭಾರತ ಸರ್ವಧರ್ಮ ಸಹಿಷ್ಣುತೆ ಎಂಬ ತತ್ವದ ಮೇಲೆ ನಿಂತಿರುವ ರಾಷ್ಟ್ರ, ಬಹುಸಂಖ್ಯಾತ ಹಿಂದೂಗಳು, ಅಲ್ಪ ಸಂಖ್ಯಾತರೆನಿಸಿಕೊಂಡ ಮುಸಲ್ಮಾನರು ಮತ್ತು ಕ್ರೈಸ್ತರು ಒಂದೇ ಸಂವಿಧಾನದಡಿಯಲ್ಲಿ ಬಂದರು ನಮ್ಮೊಳಗಿರುವ ಕಾನೂನುಗಳು ಮಾತ್ರ ಬೇರೆ ಬೇರೆಯಾಗಿವೆ. ಬಹುಸಂಖ್ಯಾತ ಹಿಂದೂಗಳು ಕೆಲವೊಂದು ಕಾನೂನಿಂದ ವಂಚಿರಾಗಿದ್ದೇವೆ. ಹಾಗಾಗಿ ಏಕರೂಪದ ನಾಗರಿಕ ಸಂಹಿತೆಯು ಜಾರಿಯಾದಲ್ಲಿ ಭಾರತದ ಎಲ್ಲಾ ಪ್ರಜೆಗಳಿಗೂ ಸಮಾನ ಸ್ಥಾನಮಾನ ಸಿಗಲಿದ್ದು, ಲಿಂಗ ಸಮಾನತೆ, ಯುವಜನತೆಯ ಭವಿಷ್ಯದ ಬಗೆಗಿನ ಆಕಾಂಕ್ಷೆಗಳಿಗೆ ಸಾಕಾರಗೊಳ್ಳಲಿದೆ. ಇದು ರಾಷ್ಟ್ರೀಯ ಸಮಗ್ರತೆಗೆ ಭದ್ರ ಬುನಾದಿ ಆಗಲಿದ್ದು , ಖಾಸಗಿ ಅಥವಾ ವೈಯಕ್ತಿಕ ಕಾನೂನುಗಳ ಪರಿಷ್ಕರಣೆಯಾಗಬೇಕು ಎಂಬ ಆಗ್ರಹದ ಪ್ರಮೇಯವೇ ಮುಂದಾಗುವುದಿಲ್ಲ.

ಅದರಲ್ಲೂ ಈ ಕಾನೂನು ಜಾರಿಗೆ ಬರಲು ಕೆಲವರ ವಿರೋಧ ವ್ಯಕ್ತವಾಗುತ್ತಿರುವುದು ಯಾಕೆ ಗೊತ್ತೇ..!?

ದೇಶದಲ್ಲಿ ನಿರ್ಧಿಷ್ಟ ಧರ್ಮ, ಸಮುದಾಯ ಮೂಲಕ ಸೃಷ್ಟಿಸುವ ಗೊಂದಲಕ್ಕೆ ಈ ಕಾನೂನು ಕಡಿವಾಣ ಹಾಕಲಿದೆ, ಧಾರ್ಮಿಕ ಸ್ವಾತಂತ್ರ್ಯ ದ ಹೆಸರಿನಲ್ಲಿ ದೇಶದೆಲ್ಲೆಡೆ ಗಲಭೆ ಸೃಷ್ಟಿಸಲು ಸಾಧ್ಯವಾಗುವುದಿಲ್ಲ, ಜನರ ಖಾಸಗಿ ಬದುಕಿನಲ್ಲೂ ಸರ್ಕಾರ ಪಾಲುದಾರನಾಗುವುದರಿಂದ ಅಕ್ರಮ ಆಸ್ತಿ – ಪಾಸ್ತಿ ಹೊಂದಲು ಸಾಧ್ಯವಿಲ್ಲ. ಏಕರೂಪದ ನಾಗರಿಕ ಸಂಹಿತೆಯು ಭಾರತೀಯ ರಾಷ್ಟ್ರೀಯತೆಗೆ ಮತ್ತಷ್ಟು ಬಲ ತುಂಬುತ್ತದೆ, ಅಷ್ಟೇ ಮಾತ್ರವಲ್ಲದೆ ದೇಶದಲ್ಲೀಗ ಪ್ರಸ್ತುತವಾಗಿ ಚಾಲ್ತಿಯಲ್ಲಿರುವ ಓಬೀರಾಯನ ಕಾಲದ ವೈಯಕ್ತಿಕ ಕಾನೂನುಗಳ ಫಲಶ್ರುತಿ ಎಂದೇ ಹೇಳಲಾಗುವ ಲಿಂಗ ಅಸಮಾನತೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿಯೂ ಮಹತ್ತರ ಪ್ರಭಾವ ಬೀರಬಲ್ಲದಾಗಿದ್ದು, ಜೊತೆಗೆ ಮಾನವ ಹಕ್ಕುಗಳನ್ನು, ವ್ಯಕ್ತಿಗಳ ಘನತೆಯನ್ನು ಉಲ್ಲಂಘಿಸುವಂತಹ ದಾರ್ಮಿಕ ಆಚರಣೆಗಳು ಹಾಗೂ ರೀತಿ ರಿವಾಜು / ಸಂಪ್ರದಾಯಗಳನ್ನು ಮಾತ್ರವೇ ನಿಗ್ರಹಿಸುತ್ತವೆ ವಿನಾಃ, ಸಮುದಾಯಗಳ ದಾರ್ಮಿಕ ಸ್ವಾತಂತ್ರ್ಯಗಳನ್ನು ಅತಿಕ್ರಮಿಸುವುದಿಲ್ಲ. ಅದಲ್ಲದೆ ಏಕರೂಪದ ನಾಗರಿಕ ಸಂಹಿತೆಯನ್ನು ಅಂಗೀಕರಿಸಿದ್ದಲ್ಲಿ ಅಸಮಂಜಸವಾದ ಕಾನೂನೊಂದನ್ನು ಅಲ್ಪಸಂಖ್ಯಾತರ ಮೇಲೆ ಹೊರಿಸಿ ದಾರ್ಮಿಕ ಬಹುಸಂಖ್ಯಾತರಿಂದ ದಬ್ಬಾಳಿಕೆಗೆ ಗುರಿಯಾಗುತ್ತಾರೆ ಹಾಗೂ ಕೋಮು ಗಲಭೆಯ ಹಿಂಚಾರದಿಂದ ಜನರ ಹತ್ಯೆಯಾಗಬಹುದು ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಸುವುದಲ್ಲಿ ಕೆಲವರು ರೂಡಿಯಾಗಿಸಿದ್ದಾರೆ. ಏಕರೂಪದ ನಾಗರಿಕ ನೀತಿಸಂಹಿತೆಯು ಜಾರಿಯಾಗುವುದರಿಂದ ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ವೈಯಕ್ತಿಕ ಕಾನೂನುಗಳನ್ನು ದುರ್ಬಲಗೊಳಿಸುವುದಿಲ್ಲ. ಬದಲಿಗೆ ಅವನ್ನು ಗೌರವಿಸುತ್ತದೆ. ನಮ್ಮ ಸರ್ವೋಚ್ಚ ನ್ಯಾಯಾಲಯವು ಸದಾ ಈ ಏಕರೂಪ ನಾಗರಿಕ ಸಂಹಿತೆಯ ಕಟ್ಟಾ ಬೆಂಬಲಿಗನಾಗಿದೆ ಎಂಬುದು ಸ್ವಾರಸ್ಯಕರ ಸಂಗತಿ.

ಭಾರತವು ಸಾಂಸ್ಕೃತಿಕ ವೈವಿಧ್ಯದ ದೇಶ ಎನ್ನುವುದು ಎಷ್ಟು ಸತ್ಯವೋ ನಾಗರಿಕ ನೀತಿ ಸಂಹಿತೆ ಜಾರಿಯಾಗುವುದರಿಂದ ಯಾವೊಬ್ಬ ಭಾರತೀಯ ನಿಗೂ ಅದರಿಂದ ತೊಂದರೆಯಾಗುವುದಿಲ್ಲ ಅನ್ನೋದು ಅಷ್ಟೇ ಸತ್ಯ. ಏಕರೂಪತೆ ಎಂಬುವುದು ಸ್ವೇಚ್ಛಾನುಸಾರಿ ವರ್ತನೆಯನ್ನು ಕಿರಿದಾಗಿಸುತ್ತದೆ. ಹಾಗೂ ವ್ಯಕ್ತಿಗಳ ಹಿನ್ನೆಲೆ ಅದೆಷ್ಟೇ ವಿಭಿನ್ನವಾಗಿದ್ದರೂ ಅವೆಲ್ಲವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೂ ಸಮಾನ ರೀತಿಯಲ್ಲಿ ಈ ಕಾನೂನು ರಕ್ಷಣೆ ನೀಡುವುದಂತೂ ಅಕ್ಷರಶಃ ಸತ್ಯ. ಅದರಲ್ಲೂ ನಮ್ಮ ಈ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ತಗ್ಗಿಸುವ ಲಿಂಗ ಅಸಮಾನತೆಯನ್ನು ಕಿತ್ತೊಗೆಯುವ ಸಾಮರ್ಥ್ಯವು ಈ ಕಾನೂನಿಗಿದ್ದು, ಅವರ ರಕ್ಷಣೆಯ ಹೊರೆಯನ್ನು ನೋಡಿಕೊಳ್ಳುತ್ತದೆ. ಅದೇನೇ ಇರಲಿ ಇತರೆ ಕಠಿಣ ಸಂದರ್ಭದಲ್ಲಿ ನಾನು ಭಾರತೀಯ ನಾವೆಲ್ಲಾ ಒಂದೇ ಎಂದು ಅರಚಾಡುವವರು ಈ ಕಾನೂನು ಜಾರಿಗೆ ತರುವಲ್ಲಿ ಅಡ್ಡಿ ಪಡಿಸುತ್ತಿದ್ದಾರೆ. ಆದರೆ ನಿಜವಾದ ಯಾವೊಬ್ಬ ಭಾರತೀಯ ಈ ಜಾರಿಗೆ ತರಲು ಅಡ್ಡಿ ಪಡಿಸಲಾರ ದೇಶದ ಸುರಕ್ಷತಾ ದೃಷ್ಟಿಯಿಂದ ಏಕರೂಪ ನಾಗರಿಕ ಸಂಹಿತೆಯು ಉತ್ತಮವಾಗಿದ್ದು ಈ ಕಾನೂನು ಆದಷ್ಟೂ ಬೇಗ ಜಾರಿಯಾಗಲಿ ಭಾರತೀಯರೆಲ್ಲರೂ ಒಂದೇ ಕಾನೂನಿನ ಸೂರಿನಲ್ಲಿ ಜೀವಿಸುವಂತಾಗಲಿ ಅನ್ನುವುದೇ ನನ್ನ ಆಶಯ.

ಕಾವ್ಯ ಅಂಚನ್

Tags

Related Articles

FOR DAILY ALERTS
Close