ಅಂಕಣ

ಕೋಟಿ-ಕೋಟಿ ಕೊಳ್ಳೆ ಹೊಡೆದ ಕಳ್ಳರನ್ನು ಮೋದಿ ಸರಕಾರ ಏಕೆ ಜೈಲಿಗೆ ತಳ್ಳುವುದಿಲ್ಲ? ಮೋದಿ ಸರಕಾರ ಏನು ಕಳ್ಳೆಪುರಿ ತಿನ್ನುತ್ತಿದೆಯೆ? ದೇಶದ ಹಣ ನುಂಗಿ ನೀರು ಕುಡಿದವರು ಜೈಲನಲ್ಲಿ ಹಿಟ್ಟು ಬೀಸುವುದು ಯಾವಾಗ?

ಇದು ಜನ ಸಾಮಾನ್ಯರನ್ನು ಕಾಡುವ ಪ್ರಶ್ನೆ. ಮೋದಿ ಸರಕಾರ ಬಂದ ಮೇಲೆ ಯೂಪಿಎ ಕಾಲದ ಎಲ್ಲಾ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮೋದಿ ಸರಕಾರದ ಕಠಿಣ ಕ್ರಮಗಳಿಂದಾಗಿ ಸಾವಿರಾರು ಕೋಟಿ ರುಪಾಯಿಗಳ ಆಸ್ತಿ ಮುಟ್ಟುಗೋಲು ಹಾಕಿ, ಅವುಗಳನ್ನು ಹರಾಜು ಮಾಡಿ ಹಣವನ್ನು ಮರಳಿ ಬ್ಯಾಂಕಿಗೆ ತುಂಬಿಕೊಡಲಾಗುತ್ತಿದೆ. ಆದರೆ ಈ ಹಗರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಮೋದಿ ಏಕೆ ಒದ್ದು ಒಳಗೆ ಹಾಕುವುದಿಲ್ಲ ಎನ್ನುವುದು ನಾಗರಿಕರ ಪ್ರಶ್ನೆ. ಹೀರೋ ಬೈಕಿನ ಮೇಲೆ ಬಂದು ರೌಡಿಗಳನ್ನು, ಕಳ್ಳ ಕಾಕರನ್ನು ಒದ್ದು ಒಳಗೆ ಹಾಕೋದಿಕ್ಕೆ ಇದೇನು ಸಿನಿಮಾವೆ?!

ನಮ್ಮದು ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ನಡೆಯುವುದು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಎಂಬ ಮೂರು ಅಂಗಗಳಿಂದ. ಕಾರ್ಯಾಂಗ ತನ್ನ ಕೆಲಸವನ್ನು ಸರಿಯಾಗಿಯೆ ಮಾಡುತ್ತಿದೆ. ಕಳ್ಳ ಕಾಕರನ್ನು, ಉಗ್ರರನ್ನು ಮಟ್ಟ ಹಾಕಲು ಕಠಿಣ ಕಾನೂನನ್ನು ರೂಪಿಸಿ ಜಾರಿಗೆ ತಂದಿರುವುದರಿಂದಲೆ ಇಂದು ದೇಶದಲ್ಲಿ ಭ್ರಷ್ಟಾಚಾರ, ಉಗ್ರರ ಉಪಟಳ ಮತ್ತು ಹಗರಣಗಳ ಸೊಲ್ಲಿಲ್ಲದಿರುವುದು. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎಷ್ಟು ಶಿಥಿಲವಾಗಿದೆ ಎಂದರೆ ಓಬೀ ರಾಯನ ಕಾಲದ ಕಾನೂನುಗಳೇ ಇನ್ನೂಇವೆ. ಮೋದಿ ಸರಕಾರ ಬಂದ ಮೇಲೆ ಇಂತಹ ಉಪಯೋಗವಿಲ್ಲದ ಕಾನೂನನ್ನು ಕಿತ್ತು ಹಾಕಿತು. ಇನ್ನು ಸಂವಿಧಾನ ಇಲ್ಲವೆ ಕಾನೂನಿನಲ್ಲಿ ಬದಲಾವಣೆ ತರಬೇಕಾದರೆ ಶಾಸಕಾಂಗದ ಸಹಾಯ ಬೇಕು, ಸದನದಲ್ಲಿ 2/3 ಬಹುಮತ ಬೇಕು.

ಕಳೆದ ಎರಡು ವರ್ಷಗಳಲ್ಲಿ ಸಂಸತ್ತಿನಲ್ಲಿ ವಿರೋಧ ಪ್ರದರ್ಶನ ಮಾಡುತ್ತಾ ಕಾರ್ಯಕಲಾಪಗಳೇ ನಡೆಯದಂತೆ ಮಾಡುತ್ತಿರುವುದು ವಿರೋಧ ಪಕ್ಷಗಳು. ಸಂಸತ್ತೇ ನಡೆಯದಿದ್ದರೆ ಕಾನೂನುಗಳು ರೂಪು ಗೊಳ್ಳುವುದಾದರೂ ಹೇಗೆ? ನಮ್ಮ ದೇಶದ ನ್ಯಾಯಾಂಗ ಪ್ರಕ್ರಿಯೆ ಎಷ್ಟು ದೀರ್ಘ ಮತ್ತು ಜೊಳ್ಳಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರವೆ ತುಂಬಿ ತುಳುಕಾಡುತ್ತಿದೆ. ಆರೋಪಿಗಳು ಹಣದ ಬಲದಿಂದ ನ್ಯಾಯಾಧೀಶರನ್ನೇ ಕೊಳ್ಳುವಂತಾಗಿರುವುದಕ್ಕೆ ಮೋದಿ ಹೊಣೆ ಆಗುತ್ತಾರೆಯೆ?

ಮೋದಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು 20 ವರ್ಷ ಪುರಾತನ ಕೋಲಿಜಿಯಮ್ ವ್ಯವಸ್ಥೆಯನ್ನು ಕಿತ್ತೊಗೆಯಲು ಬಯಸಿದಾಗ ಇದೆ ಜಡ್ಜ್ ಗಳು ಮತ್ತು ಲಾಯರ್ ಗಳು ಬೀದಿಗಿಳಿದು ಪ್ರತಿಭಟಿಸಿದ್ದಲ್ಲವೆ? ಕಾನೂನು ಸದನದಲ್ಲಿ ಕೊಳೆಯುತ್ತಿರುವುದಕ್ಕೆ ಕಾರಣ ಪ್ರತಿಪಕ್ಷಗಳಲ್ಲವೆ? ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಅಮ್ಮ-ಮಗ ಮತ್ತು ಐ ಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಕಾರ್ತಿ ಚಿದಂಬರ್ ಗೆ ಅರೆಸ್ಟ್ ವಾರಂಟ್ ಜಾರಿಯಾಗಿ ಜೈಲು ಪಾಲಾಗಿದ್ದರೂ ಹಣದ ಬಲದಿಂದ ಜಾಮೀನ ಮೇಲೆ ಹೊರಗೆ ತಿರುಗುತ್ತಿದ್ದರೆ ಅದಕ್ಕೆ ಮೋದಿ ಕಾರಣ ಹೇಗಾಗುತ್ತಾರೆ?

1996 ರಲ್ಲಿ ಲಾಲೂ ನಡೆಸಿದ ಮೇವು ಹಗರಣ ತಾರ್ಕಿಕ ಅಂತ್ಯ ಕಂಡದ್ದು ಎರಡು ದಶಕಗಳ ಬಳಿಕ. ಈಗ ಮೋದಿ ಸರಕಾರ ಬಂದ ಮೇಲೆ ತಾನೆ ಲಾಲೂ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವುದು? ಹಗರಣ ಮಾಡಿದವರು ದೇಶ ಬಿಟ್ಟೋಡದಂತೆ ಕಾನೂನು ರೂಪಿಸಿ ಕಳ್ಳರನ್ನು ಹಿಡಿಯಲು ಬಲೆ ಹೆಣೆದಿರುವುದು ಮೋದಿ ಸರಕಾರ. ನಮ್ಮ ದೇಶದ ಕಾನೂನಿನಲ್ಲೆ ಲೋಪ ದೋಷಗಳಿರುವುದಕ್ಕೆ ಮೋದಿ ಕಾರಣವೆ? ಅವರಿಗಿಂತ ಮುಂಚೆ ಬಂದ ಸರಕಾರಗಳು ಏಕೆ ಕಾನೂನಿನಲ್ಲಿ ಬದಲಾವಣೆ ತರಲಿಲ್ಲ? ಈಗ ಮೋದಿ ಸರಕಾರ ಕಾನೂನಿಲ್ಲಿ ಬದಲಾವಣೆ ಮಾಡುವುದನ್ನು ಪ್ರತಿಪಕ್ಷಗಳು ತಡೆಯುತ್ತಿರುವುದು ಏಕೆ? ನೆನಪಿಡಿ ಸೋನಿಯಾ ಗಾಂಧಿ ಇಂದ ಹಿಡಿದು ಸಲ್ಮಾನ್ ಖಾನ್ ವರೆಗೆ ಎಲ್ಲರೂ ಹೊರಗೆ ತಿರುಗುತ್ತಿರುವುದು ಜಾಮೀನಿನ ಮೇಲೆ ಹೊರತು ನಿರಪರಾಧಿಗಳೆಂದು ಸಾಬೀತಾಗಿ ಅಲ್ಲ.

ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆರ್ಥಿಕ ಅಪರಾಧಗಳು ದೊಡ್ಡ ಅಪರಾಧ ಎಂದು ಪರಿಗಣಿಸಲಾಗಿಲ್ಲ ಎಂದ ಮೇಲೆ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಹೇಗೆ? ಹಗರಣದ ಗಾತ್ರ ಮತ್ತು ಭಾಗಿಯಾದ ಜನರ ಸಂಖ್ಯೆಯನ್ನು ಪರಿಗಣಿಸಿ ಮತ್ತು ಕಾನೂನಿನ ಪ್ರತಿರೋಧಕತೆಯಿಂದಾಗಿ ತ್ವರಿತ ತೀರ್ಪುಗಳನ್ನು ಘೋಷಿಸುವುದು ಅಸಾಧ್ಯ. ನ್ಯಾಯಾಲಯಕ್ಕೆ ಸಾಕ್ಷಗಳೆ ಮುಖ್ಯ. ಆದರೆ ಇಂತಹ ದೊಡ್ಡ ಮೊತ್ತದ ಹಗರಣಗಳಲ್ಲಿ ನೇರವಾದ ಸಾಕ್ಷ್ಯಗಳಿರುವುದಿಲ್ಲ ಮತ್ತು ಇದ್ದರೂ ಅದನ್ನು ನಷ್ಟ ಮಾಡಲಾಗಿರುತ್ತದೆ. ಅಂತಹ ಸಮಯದಲ್ಲಿ ಪ್ರಕ್ರಿಯೆ ದೀರ್ಘಾವಧಿ ತೆಗೆದುಕೊಳ್ಳುತ್ತದೆ ಮತ್ತು ಶಿಕ್ಷೆ ನೀಡುವಾಗ ತಡವಾಗುತ್ತದೆ. ಕಾನೂನಿಗೆ ಸರ್ಜರಿ ಮಾಡದೆ ಅಪರಾಧಿಗಳನ್ನು ಒದ್ದು ಒಳಗೆ ಹಾಕಲಾಗುವುದಿಲ್ಲ. ಕಾನೂನಿನಲ್ಲಿ ಬದಲಾವಣೆ ತರಲು ವಿರೋಧ ಪಕ್ಷಗಳು ಬಿಡುವುದಿಲ್ಲ.

ಕಳ್ಳರ ಕಾಲರ್ ಪಟ್ಟಿ ಹಿಡಿದು ಒದ್ದು ಒಳಗೆ ಹಾಕಲು ಮೋದಿ ಪೋಲಿಸ್ ಅಲ್ಲ, ಪ್ರಧಾನ ಮಂತ್ರಿ. ಇನ್ನು ತ್ವರಿತಗತಿಯಲ್ಲಿ ತೀರ್ಪು ನೀಡಿ ಒದ್ದು ಒಳ ಹಾಕಲು ಮೋದಿ ನ್ಯಾಯಾಧೀಶರೂ ಅಲ್ಲ. ಮೋದಿಜಿ ಅವರ ಕೆಲಸ ಸರಿಯಾಗಿಯೆ ಮಾಡುತ್ತಿದ್ದಾರೆ. ಕಳ್ಳರೆಲ್ಲ ಜಾಮೀನಿನ ಮೇಲೆ ಹೊರಗೆ ತಿರುಗುತ್ತಿದ್ದಾರೆ. ಕಾನೂನಿನಲ್ಲಿ ಬದಲಾವಣೆ ತಂದರೆ ಎಲ್ಲರನ್ನೂ ಒದ್ದು ಒಳಗೆ ಹಾಕಬಹುದು. ಅದಕ್ಕೆ ಸದನದಲ್ಲಿ ಬಹುಮತ ಬೇಕು. ಮೋದಿ ಅವರು ಕಳ್ಳರನ್ನು ಒದ್ದು ಒಳಗೆ ಹಾಕಬೇಕಾದರೆ ಅವರ ಕೈ ಬಲಪಡಿಸಿ, ಮುಂದಿನ ಬಾರಿ ಭಾರೀ ಬಹುಮತ ನೀಡಿ ಗೆಲ್ಲಿಸಿ.

-ಶಾರ್ವರಿ

Tags

Related Articles

Close