ಪ್ರಚಲಿತ

ಪ್ರಧಾನಿ ಮೋದಿ ಸರ್ಕಾರಕ್ಕೆ ವಿಶ್ವ ಬ್ಯಾಂಕ್ ಪ್ರಶಂಸೆ

ಭಾರತದಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮ ಜಾರಿಗೆ ಬಂದ ಬಳಿಕ ದೇಶ ಮಹತ್ವದ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಜೊತೆಗೆ ಸಾಮಾನ್ಯ ಜನರು ಸಹ ಡಿಜಿಟಲ್ ವ್ಯವಸ್ಥೆಯನ್ನು ಅನುಸರಿಸಿ ವಹಿವಾಟುಗಳನ್ನು ನಡೆಸುವಲ್ಲಿ ಶಕ್ತರಾಗಿದ್ದಾರೆ‌. ದೇಶದಲ್ಲಿ ಡಿಜಿಟಲ್ ವಹಿವಾಟು ಸುಗಮವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ವಿಶ್ವ ಬ್ಯಾಂಕ್ ಶ್ಲಾಘಿಸಿದೆ.

ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಅವರು ಏರಿದ ಬಳಿಕ ಭಾರತದ ಆರ್ಥಿಕ ಚಟುವಟುಕೆಗೆ ಸಂಬಂಧಿಸಿದ ಹಾಗೆಯೂ ಮಹತ್ವದ ಬೆಳವಣಿಗೆಗಳಾಗಿರುವುದನ್ನು ಕಾಣಬಹುದು. ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆ ಭಾರತದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಆಗಾಧ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ವ್ಯವಹಾರ ಸುಗಮವಾಗಿ ನಡೆಯುತ್ತಿದ್ದು, ಭಾರತದ ಈ ಸಾಧನೆಗೆ ವಿಶ್ವಬ್ಯಾಂಕ್ ಶಹಬ್ಬಾಸ್ ಎಂದಿದೆ.

ವಿಶ್ವ ಬ್ಯಾಂಕ್, ಭಾರತದಲ್ಲಿ ನಡೆಯುವ ಜಿ20 ಶೃಂಗ ಸಭೆಯ ಪೂರ್ವಭಾವಿ ಎಂಬಂತೆ ಸಿದ್ಧಪಡಿಸಲಾದ ವಿಶ್ವ ಬ್ಯಾಂಕ್‌ನ ಜಿ20 ಜಾಗತಿಕ ಪಾಲುದಾರಿಕೆಗೆ ಸಂಬಂಧಿಸಿದ ವರದಿಯನ್ನು ಆಧರಿಸಿ, ಡಿಪಿಐ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಭಾರತದಲ್ಲಾದ ಮಹತ್ವದ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದೆ. ಕೇವಲ ಆರು ವರ್ಷಗಳಲ್ಲಿ ಭಾರತವು ಸುಮಾರು 47 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾಗಬಹುದಾದ ಸಾಧನೆಯನ್ನು ಭಾರತ ಮಾಡಿ ತೋರಿಸಿದೆ ಎಂಬುದಾಗಿಯೂ ಭಾರತ ಸರ್ಕಾರದ ಸಾಧನೆಗೆ ತಲೆದೂಗಿದೆ.

ಆಧಾರ್, ಜನ್ ಧನ್, ಯುಪಿಐ, ಒಎನ್‌ಡಿಸಿ, ಕೋವಿನ್ ಮೊದಲಾದ ಮಹತ್ವದ ಉಪಕ್ರಮಗಳ ಮೂಲಕ ಭಾರತ ಯಾವ ರೀತಿಯಲ್ಲಿ ದೃಢವಾದ ಸಾರ್ವಜನಿಕ ಸರಕು ಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿದೆ ಎನ್ನುವ ಬಗೆಗೂ ವಿಶ್ಲೇಷಣೆ ನಡೆಸಿ ವಿಶ್ವಬ್ಯಾಂಕ್ ಮಾಹಿತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಡಿಪಿಐ ಕ್ಷೇತ್ರದಲ್ಲಿ ಭಾರತವು ಮರೆಯಲಾಗದ ಛಾಪನ್ನು ಮೂಡಿಸಿದೆ. ಈ ಹೆಜ್ಜೆಗಳು ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಮಹತ್ತರವಾದ ಕ್ರಾಂತಿಯನ್ನೇ ಮಾಡಿವೆ. ಜೊತೆಗೆ ದೇಶದಲ್ಲಿ ಹಣಕಾಸು ಕ್ಷೇತ್ರದಲ್ಲಿನ ದಕ್ಷತೆಯನ್ನು ಸುಧಾರಿಸುವ ಮೂಲಕ ಮಹತ್ವದ ಸಾಧನೆ ಮೆರೆದಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಹೊಸ ಬಗೆಯ ಆಡಳಿತ ಮತ್ತು ಡಿಜಿಟಲ್ ರೂಪಾಂತರ ವ್ಯವಸ್ಥೆಗಾಗಿ ಜಾಗತಿಕ ಮಾನದಂಡವನ್ನು ರೂಪಿಸಿರುವ ಭಾರತವನ್ನು ವಿಶ್ವಬ್ಯಾಂಕ್ ಕೊಂಡಾಡಿದೆ. ಈ ಕ್ಷೇತ್ರದ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಉಪಕ್ರಮಗಳು, ಜಾಮ್ ಟ್ರಿನಿಟಿಯಂತಹ ಮಹತ್ವದ ಕ್ರಮಗಳ ಬಗೆಗೂ ವರ್ಲ್ಡ್ ಬ್ಯಾಂಕ್ ವರದಿಯಲ್ಲಿ ವಿಮರ್ಶಿಸಿದೆ. ಡಿಪಿಐ ಅನುಷ್ಠಾನ ಮಾಡಿರುವ ಭಾರತದ ಕ್ರಮಕ್ಕೂ ವಿಶ್ವ ಬ್ಯಾಂಕ್ ಕೃತಜ್ಞತೆ ತಿಳಿಸಿದೆ.

ಭಾರತದ ಆರ್ಥಿಕ ಪ್ರಗತಿಯ ಹಿಂದೆ ಡಿಪಿಐ ವ್ಯವಸ್ಥೆಯ ಕೊಡುಗೆ ಅಪಾರ. ಇದಕ್ಕೆ ಪೂರಕವಾದ ಇತರ ವ್ಯವಸ್ಥೆಗಳ ಬಗೆಗೂ ವಿಶ್ವಬ್ಯಾಂಕ್ ಉಲ್ಲೇಖಿಸಿದೆ. ಆಧಾರ್ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳು, ಇನ್ನಿತರ ನಿರ್ಣಾಯಕ ವ್ಯವಸ್ಥೆಗಳ ಕಾರಣದಿಂದಲೂ ಆರ್ಥಿಕ ವ್ಯವಸ್ಥೆ ಪ್ರಗತಿ ಸಾಧಿಸಿದೆ ಎಂದು ವರ್ಲ್ಡ್ ಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

ಪ್ರಧಾನಮಂತ್ರಿ ಜನ ಧನ ಯೋಜನೆಯು ಭಾರತದ ಆರ್ಥಿಕ ವಲಯದಲ್ಲಾದ ಪ್ರಗತಿಯ ಬಹುಮುಖ್ಯ ಮೈಲಿಗಲ್ಲಾಗಿದೆ. ಪ್ರಧಾನಿ ಮೋದಿ ಸರ್ಕಾರ ಜನ ಧನ ಯೋಜನೆ ಜಾರಿಗೆ ತಂದ ಬಳಿಕ ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ದಾಖಲೆ ನಿರ್ಮಿಸಿದೆ. ಈ ಎಲ್ಲಾ ಕಾರಣಗಳಿಂದಲೂ ಭಾರತದ ಆರ್ಥಿಕ ವಲಯ ಚೇತರಿಕೆ ಮತ್ತು ಪ್ರಗತಿ ಕಂಡಿದ್ದು, ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ಈ ಉಪಕ್ರಮಗಳು ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ.

Tags

Related Articles

Close