ಪ್ರಚಲಿತ

ವಿಶ್ವವೇ ಬಯಸುತ್ತಿದೆ ಭಾರತದ ಮಾರ್ಗದರ್ಶನ: ಪ್ರಧಾನಿ ಮೋದಿ

ಜಗತ್ತು ಹಿಂದೆಲ್ಲಾ ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೂ ಕೇವಲ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕ ಮತ್ತು ಇತರ ಶ್ರೀಮಂತ ರಾಷ್ಟ್ರಗಳ ಸಲಹೆ, ಸೂಚನೆಗೆ ಮಾತ್ರ ಮಣೆ ಹಾಕುತ್ತಿತ್ತು. ಆದರೆ ಕಾಲ ಬದಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿದೆ. ಭಾರತದ ಶಕ್ತಿ ಸಾಮರ್ಥ್ಯ ಏನು ಎಂಬುದು ಜಗತ್ತಿಗೆ ಪರಿಚಯವಾಗಿದೆ. ತತ್ಪರಿಣಾಮ, ಜಗತ್ತು ಇಂದು ಏನೇ ಮಹತ್ವವಾದ ಕೆಲಸಗಳನ್ನು ಮಾಡಬೇಕಾದರೂ ಭಾರತದ ನಿಲುವಿಗೆ ಮಣೆ ಹಾಕುವಷ್ಟರ ಮಟ್ಟಿಗೆ ಭಾರತ ಬದಲಾಗಿದೆ. ಈ ಬದಲಾವಣೆಯ ಹರಿಕಾರ ನಮ್ಮ ದೇಶದ ದೂರದೃಷ್ಟಿಯುಳ್ಳ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮುಂದಿನ ವಾರ ನಡೆಯುವ ಜಿ20 ಶೃಂಗ ಸಭೆಯ ಪೂರ್ವಾಭಾವಿಯಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರಸ್ತುತ ಜಗತ್ತು ಮಾರ್ಗದರ್ಶನಕ್ಕಾಗಿ ಭಾರತವನ್ನು ಎದುರು ನೋಡುವಂತಾಗಿದೆ. ಭಾರತದ ಮಾತುಗಳು ಮತ್ತು ದೃಷ್ಟಿಯನ್ನು ಪ್ರಪಂಚ ಭವಿತವ್ಯದ ಮಾರ್ಗಸೂಚಿ ಎಂಬ ಹಾಗೆ ಗುರುತಿಸಲು ಪ್ರಾರಂಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವದ ದೃಷ್ಟಿಯಲ್ಲಿ ಭಾರತ ಬದಲಾಗುತ್ತಿದೆ. ಪ್ರಪಂಚ ಭಾರತವನ್ನು ಗ್ರಹಿಸುವ ರೀತಿ ನೀತಿಯೂ ಬದಲಾಗುತ್ತಿದೆ. ಹಲವು ವರ್ಷಗಳಿಂದ ಭಾರತ ಎಂದರೆ ಕೇವಲ ಕೋಟ್ಯಂತರ ಹಸಿದ ಹೊಟ್ಟೆಗಳ ದೇಶ ಎಂಬುದಾಗಿ ಮಾತ್ರವೇ ವಿಶ್ವದೆದುರಲ್ಲಿ ಗುರುತಿಸಲ್ಪಟ್ಟಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವ ಭಾರತವನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ಭಾರತವು ಈಗ ಶತ ಕೋಟಿ ಮಹತ್ವಾಕಾಂಕ್ಷೆಯ ಮನಸ್ಸುಗಳ ಮತ್ತು ಎರಡು ಶತಕೋಟಿ ಕೌಶಲಪೂರ್ಣ ಪ್ರತಿಭೆಗಳನ್ನು ಒಳಗೊಂಡ ರಾಷ್ಟ್ರವಾಗಿ ಗುರುತಿಸಲ್ಪಡುವ ರಾಷ್ಟ್ರವಾಗಿ ಬೆಳೆದಿದೆ ಎಂದು ಪ್ರಧಾನಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪ್ರಪಂಚದ ಜಿಡಿಪಿ ಕೇಂದ್ರಿತ ದೃಷ್ಟಿಕೋನವು ಈಗ ಮಾನವ ಕೇಂದ್ರಿತ ದೃಷ್ಟಿಕೋನವಾಗಿ ಬದಲಾವಣೆ ಹೊಂದುತ್ತಿದೆ. ಈ ವಿಷಯದಲ್ಲಿ ಭಾರತವು ವೇಗ ವರ್ಧಕ ಪಾತ್ರವನ್ನು ವಹಿಸುತ್ತಿದೆ ಎಂಬುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ. 2047 ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾರ್ಪಾಡಾಗಲಿದೆ. ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮು ವಾದ ಇತ್ಯಾದಿಗಳಿಗೆ ನಮ್ಮ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಸ್ಥಾನವಿಲ್ಲ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿ20 ಅಧ್ಯಕ್ಷತೆಯನ್ನು ಭಾರತವು ವಹಿಸಿಕೊಂಡಿರುವುದರಲ್ಲಿ ಹಲವಾರು ಸಕಾರಾತ್ಮಕ ಪರಿಣಾಮಗಳಿವೆ. ಹಲವಾರು ಪರಿಣಾಮಗಳು ನಮ್ಮ ಹೃದಯಕ್ಕೆ ಹತ್ತಿರವಾಗಿವೆ ಎಂಬುದಾಗಿಯೂ ಪ್ರಧಾನಿ ನುಡಿದಿದ್ದಾರೆ. ವಿಶ್ವದ ಮಾರ್ಗದರ್ಶನಕ್ಕೆ ಭಾರತದ ‘ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್’ ಧ್ಖೇಯವು ಪೂರಕವಾಗುವ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಅಧ್ಯಕ್ಷತೆಯಲ್ಲಿ ನಜೆಯುವ ಜಿ20 ಶೃಂಗಸಭೆಯ ಧ್ಯೇಯ ವಾಕ್ಯ ವಸುದೈವ ಕುಟುಂಬಕಂ ಎಂಬುದು ಕೇವಲ ಘೋಷಣೆ ಮಾತ್ರವಲ್ಲ. ಅದು ನಮ್ಮ ಸಾಂಸ್ಕೃತಿಕ ಸಂಪ್ರದಾಯದ ಸಮಗ್ರ ತತ್ವಶಾಸ್ತ್ರ ಎಂಬ ಅಭಿಪ್ರಾಯವನ್ನು ಸಹ ಅವರು ಅಭಿವ್ಯಕ್ತ ಪಡಿಸಿದ್ದಾರೆ.

ವರ್ಷವಿಡೀ ನಡೆದ ಜಿ20 ಕಾರ್ಯಕ್ರಮದಲ್ಲಿ 1.5 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಭಾಗವಹಿಸಿದ್ದಾರೆ. ಇದರಲ್ಲಿ ಆಫ್ರಿಕಾವು ನಮಗೆ ದೊಡ್ಡ ಆದ್ಯತೆಯಾಗಿದೆ. ಎಲ್ಲ ರಾಷ್ಟ್ರಗಳ ಅಭಿಪ್ರಾಯವನ್ನು ಪಡೆಯದೆ ಭವಿತವ್ಯದಲ್ಲಿ ಯಾವುದೇ ಯೋಜನೆ ಯಶಸ್ಸು ಪಡೆಯುವುದು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಶೃಂಗ ಸಭೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳ ಆಕ್ಷೇಪಣೆಯನ್ನು ಸಹ ಅವರು ತಳ್ಳಿ ಹಾಕಿದರು. ದೇಶದ ಪ್ರತಿ ಭಾಗಗಳಲ್ಲಿಯೂ ಸಭೆ ನಡೆಸುವುದು ಒಂದು ರಾಷ್ಟ್ರದ ಸಹಜವಾದ ಪ್ರಕ್ರಿಯೆ ಎಂದು ಅವರು ಸಾರಿ ಹೇಳಿದರು.

ಒಟ್ಟಾರೆ ಹೇಳುವುದಾದರೆ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರ ಎಂಬ ಸ್ಥಾನವನ್ನು ಪಡೆದಿದೆ. ಭಾರತದ ಅಭಿವೃದ್ಧಿ ಇಡೀ ಪ್ರಪಂಚವನ್ನು ನಮ್ಮ ದೇಶದತ್ತ ತಿರುಗಿ ನೋಡುವ ಹಾಗೆ ಮಾಡಿದೆ. ನಮ್ಮ ದೇಶದ ಮೇಲೆ ಪ್ರಪಂಚ ಕಳೆದ ಒಂಬತ್ತು ವರ್ಷಗಳ ಹಿಂದೆ ಇರಿಸಿದ್ದ ನಕಾರಾತ್ಮಕ ಮನಸ್ಥಿತಿ ಈಗ ಬದಲಾಗಿದ್ದು, ಪ್ರಪಂಚದ ಅಭ್ಯುದಯವಾಗಬೇಕಾದರೆ ಭಾರತದ ಮಾರ್ಗದರ್ಶನ ಅತ್ಯಗತ್ಯ ಎಂಬುದನ್ನು ವಿಶ್ವದ ಹಲವು ರಾಷ್ಟ್ರಗಳು ಮನಗಂಡಿವೆ. ಇಂತಹ ಘನತೆ ಭಾರತದ ಪಾಲಿಗೆ ಒದಗಿರುವುದು ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಎಂಬುದರಲ್ಲಿ ಎರಡು ಮಾತಿಲ್ಲ.

Tags

Related Articles

Close