X

ಪ್ರೀತಿಯ ಸಿದ್ಧರಾಮಯ್ಯನವರೇ. . . . ನಾನು ಜಾತಿಯಲ್ಲಿ ಮಾದಿಗ (SC), ನಿಮಗೊಂದು ಬಹಿರಂಗ ಪತ್ರ ಬರೆಯುವ ಮನಸ್ಸಾಗಿದೆ. . . .

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮಸ್ಕಾರ…..,

ನಾನೊಬ್ಬ ಮಾದಿಗ ಜನಾಂಗದ ಹುಡುಗ. ನಾನು ನಿಮಗೆ ಪತ್ರ ಬರೆಯಬೇಕೆಂದು ಹಲವು ಬಾರಿ ಯೋಚಿಸಿದ್ದೆ. ಆದರೆ ಈಗ ಬರೆಯುತ್ತಿದ್ದೇನೆ. ಮಾದಿಗರ ಜಾತಿಗೆ ಸೇರಿದ ದಲಿತ ಹುಡುಗನೊಬ್ಬ ಯಾಕೆ ಈ ಪತ್ರ ಬರೆಯುತ್ತಿದ್ದಾನೆ ಎಂದು ನಿಮಗೆ ಖಂಡಿತಾ ಅಚ್ಚರಿಯಾಗಬಹುದು. ಯಾಕೆಂದರೆ ನೀವು ದಲಿತರಿಗೆ ಸಾಕಷ್ಟು ಮೀಸಲಾತಿ, ಸೌಲಭ್ಯವನ್ನು ಕೊಟ್ಟಿದ್ದೀರಿ. ಆದ್ದರಿಂದಲೇ ನಾನಿಂದು ಉನ್ನತವಾದ ಉದ್ಯೋಗದಲ್ಲಿದ್ದೇನೆ. ಉತ್ತಮವಾದ ಉದ್ಯೋಗದಲ್ಲಿರುವುದರಿಂದ ನನಗೆ ಹಣಕಾಸಿನ ಯಾವುದೇ ಸಮಸ್ಯೆಯೇ ಇಲ್ಲ.

ನನ್ನ ಪತ್ರದ ಉದ್ದೇಶವೇನು ಎಂಬ ಬಗ್ಗೆ ನಿಮ್ಮ ತಲೆ ಕೊರೆಯಬಹುದು. ನನ್ನ ಪತ್ರದಲ್ಲಿ ಒಂದು ಒಳ್ಳೆಯ ಉದ್ದೇಶವಿದೆ… ಆ ಉದ್ದೇಶವನ್ನು ತಿಳಿಸಲೆಂದೇ ನಾನು
ನಿಮಗೆ ಪತ್ರ ಬರೆಯುತ್ತಿದ್ದೇನೆ.. ಇನ್ನು ನೇರ ವಿಷಯಕ್ಕೆ ಬರುತ್ತೇನೆ… ಅದೇ ನಾನು ಶ್ರೀಮಂತನಾಗಿರುವುದರಿಂದ ಇನ್ನು ಮುಂದೆ ನನಗೆ ಯಾವುದೇ ಮೀಸಲಾತಿ ಬೇಡ….

ಸಿದ್ದರಾಮಯ್ಯನವರೇ ನೀವು ಹಲವು ಭಾಗ್ಯಗಳ ಮೂಲಕ ದಲಿತ, ಅಲ್ಪಸಂಖ್ಯಾತರಿಗೆ ವಿವಿಧ ರೀತಿಯ ಸೌಲಭ್ಯ ನೀಡುತ್ತಿದ್ದೀರಿ. ಜೊತೆಗೆ ಅಲ್ಪಸಂಖ್ಯಾತ-ದಲಿತರಿಗೆ 70 ಶೇ. ಒಳಮೀಸಲಾತಿ ಕಲ್ಪಿಸಬೇಕೆಂದು ಬಯಸುತ್ತೀರಿ. ಜೊತೆಗೆ ಖಾಸಗೀ ವಲಯದಲ್ಲೂ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದೀರಿ….

ಸ್ವಾಮೀ ಸಿದ್ದರಾಮಯ್ಯನವರೇ ದಲಿತ, ಅಲ್ಪಸಂಖ್ಯಾತರಲ್ಲದವರು ಏನು ತಪ್ಪು ಮಾಡಿದ್ದಾರೆ ಸ್ವಾಮಿ… ದಲಿತರಲ್ಲಿ ಸಾಕಷ್ಟು ಮಂದಿ ಬಡವರಿದ್ದಾರೆ. ಆದರೆ
ದಲಿತರಲ್ಲದವರಲ್ಲಿ ಶ್ರೀಮಂತರೇ ಇದ್ದಾರೆಯೇ ಸಿಎಂ ಸ್ವಾಮೀ? ನಾನೀಗ ದಲಿತನಾಗಿದ್ದರೂ ಊರಲ್ಲಿ ಶ್ರೀಮಂತನಾಗಿದ್ದೇನೆ. ನನ್ನ ಊರಲ್ಲಿ ಮೇಲ್ಜಾತಿಯವರೂ
ತುಂಬಾ ಮಂದಿ ಇದ್ದಾರೆ. ಪಾಪ ಅವರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ. ಆದರೆ ನಾನು ದಲಿತನಾಗಿರುವುದರಿಂದ ನನಗೆ ಈಗಲೂ ಹಲವು ರೀತಿಯ ಸೌಲಭ್ಯ ಸಿಗುತ್ತದೆ. ಆದರೆ ನಮ್ಮ ಊರಿನ ಮೇಲ್ಜಾತಿಯ ಬಡವರಿಗೆ ಇಂದಿಗೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಪಾಪ ಅವರಿಗೆ ಎಷ್ಟು ಬೇಜಾರಾಗಬಹುದು ಅಲ್ಲವೇ? ನನಗೆ ಇದರಿಂದ ಅಸಮಾನತೆ ಉಂಟಾಗುತ್ತಿದೆ ಎಂದು ಅನಿಸುತ್ತದೆ. ಕೇವಲ ಜಾತಿಯ ಆಧಾರದಲ್ಲಿ ಶ್ರೀಮಂತರ್ಯಾರು, ಬಡವರ್ಯಾರು ಎಂದು ಅಳೆಯುವ ನೀವು ಮೀಸಲಾತಿಯ ಮುಖಾಂತರ ಸಮಾಜವನ್ನು ಧ್ರುವೀಕರಣ ಮಾಡುತ್ತೀರಿ ಎಂದೆನಿಸುವುದಿಲ್ಲವೇ?

ಸಿದ್ದರಾಮ್ಯನವರೇ ನಿಮಗೆ ಪುರುಸೊತ್ತು ಇದ್ದರೆ ಚಾರ್ಮಾಡಿಯ 2 ಕಿ.ಮೀ. ದೂರದಲ್ಲಿರುವ ಅಲೈಖಾನ್ ಹೊರಟ್ಟಿ ಎಂಬ ಪ್ರದೇಶಕ್ಕೆ ತೆರಳಿದರೆ ನಿಮ್ಮ ಮೀಸಲಾತಿ ಸೌಲಭ್ಯ ಅಲ್ಲಿನವರಿಗೆ ಎಷ್ಟು ಭೂತವಾಗಿ ಪರಿಗಣಿಸಿದೆ ಎಂದು ಅರ್ಥವಾಗಬಹುದು. ಹೊರಟ್ಟಿಯ ಅತಿ ಹೆಚ್ಚು ಜನಾಂಗದವರು ಒಕ್ಕಲಿಗ ಗೌಡರು. ಸರಕಾರದ ನೀತಿ ನಿಯಮದ ಪ್ರಕಾರ ಒಕ್ಕಲಿಗ ಗೌಡರು ಮೇಲ್ಜಾತಿಗೆ ಸೇರಿದವರು. ಆದರೆ ಅವರೆಲ್ಲಾ ಕಡುಬಡವರು!!! ಆ ಊರಿಗೆ ಬಸ್, ಶಾಲೆ, ಆಸ್ಪತ್ರೆ, ರಸ್ತೆ, ವಿದ್ಯುತ್ ಹೀಗೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿನವರು ಹೆಚ್ಚಿನವರು ಒಕ್ಕಲಿಗ ಗೌಡರಾಗಿರುವುದರಿಂದ ಉನ್ನತ ಹುದ್ದೆ, ಉದ್ಯೋಗದಲ್ಲಿ ಸರಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಇದರಿಂದ ಅಲ್ಲಿನ ಹಲವಾರು ಪ್ರತಿಭಾವಂತ ಮಕ್ಕಳ ಭವಿಷ್ಯ ಕಮರಿ ಹೋಗಿದೆ. ಇದನ್ನೆಲ್ಲಾ ನೋಡುವಾಗ ಮೀಸಲಾತಿ ವ್ಯವಸ್ಥೆ ಎಷ್ಟೊಂದು ಕೆಟ್ಟದು ಎಂದೆನಿಸುವುದಿಲ್ಲವೇ?

ಇಂದು ಪರಿಸ್ಥಿತಿ ಯಾವ ಸ್ಥಿತಿ ಮುಂದುವರಿದಿದೆ ಎಂದರೆ ಸರಕಾರದ ಮೀಸಲಾತಿ ಸಿಗುತ್ತದೆ ಎಂದು ಹಲವಾರು ಜಾತಿಯವರು ತಮ್ಮನ್ನು ಮೀಸಲಾತಿ ಪಟ್ಟಿಗೆ
ಸೇರಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ ನೋಡಿ? ತಮ್ಮ ಜಾತಿಗೆ ಉದ್ಯೋಗದಲ್ಲಿ, ವಿದ್ಯಾಭ್ಯಾಸ, ಸೌಲಭ್ಯ ಮುಂತಾದ ವಿಚಾರದಲ್ಲಿ ಸರಕಾರದ ಸೌಲಭ್ಯ ಸಿಗದೇ ಇರುವುದರಿಂದ ಅನೇಕ ಮಂದಿ ಜಾತಿಯವರು ಇಂದು ದಲಿತ ಸ್ಥಾನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ರೀತಿ ಎಲ್ಲರೂ ಹೋರಾಟ ನಡೆಸುತ್ತಾ ಬಂದರೆ ಎಲ್ಲರಿಗೂ ಮೀಸಲಾತಿ ಕೊಡಲು ನಿಮ್ಮಿಂದ ಸಾಧ್ಯವೇ?

ಸರಕಾರದ ಸೌಲಭ್ಯ ಎನ್ನುವುದು ದೇಶದ ಬಡ ವ್ಯಕ್ತಿಗೆ ಸಿಗಬೇಕೇ ಹೊರತು ಅದು ಅವನ ಜಾತಿ, ಧರ್ಮದ ಆಧಾರದಲ್ಲಿ ಸಿಗಬಾರದು. ಇದು ಸಾಮಾಜಿಕ
ಧ್ರುವೀಕರಣವನ್ನು ಸೃಷ್ಟಿಸುತ್ತದೆ. ಯಾಕೆಂದರೆ ಎಲ್ಲಾ ಜಾತಿ, ಧರ್ಮದಲ್ಲೂ ಬಡವರು ಇದ್ದಾರೆ…

ನಾನೊಬ್ಬ ಮಾದಿಗ ಜಾತಿಗೆ ಸೇರಿದ ದಲಿತನಾಗಿದ್ದರೂ ನಾನು ನಿಮ್ಮ ಮೀಸಲಾತಿ ಸಿದ್ಧಾಂತದ ಬದ್ಧ ವೈರಿ. ಯಾಕೆಂದ್ರೆ ಪ್ರತೀ ಜಾತಿಯಲ್ಲೂ ಬಡವರು ಇದ್ದಾರೆ. ನನ್ನೂರಿನಲ್ಲಿ ನಾನು ಶ್ರೀಮಂತನಾಗಿದ್ದರೂ ಇಂದಿಗೂ ಎಲ್ಲಾ ಸೌಲಭ್ಯ ನಮ್ಮ ಕುಟುಂಬಕ್ಕೇ ಸಿಗುತ್ತದೆ. ಇದರಿಂದ ಮೇಲ್ಜಾತಿಯ ಬಡವರು ನಮಗೆ ಏನೂ ಸಿಗುವುದಿಲ್ಲ ಎಂಬ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಮೇಲ್ಜಾತಿಯವರಲ್ಲಿ ಒಳ್ಳೊಳ್ಳೆ ಬುದ್ದಿವಂತರು ಈ ಮೀಸಲಾತಿಯಿಂದ ವಂಚಿತರಾಗುವುದನ್ನು ನೋಡಿದಾಗ ನನ್ನ ಹೊಟ್ಟೆ ಚುರ್ ಅನ್ನುತ್ತದೆ.

ನನ್ನ ಗೆಳೆಯನ ಹೆಸರು ಪ್ರಕಾಶ್ ಭಟ್ ಅಂತ. ನಾನು ಮತ್ತು ಆತ ಒಂದೇ ಕ್ಲಾಸ್‍ಮೇಟ್. ಕ್ಲಾಸಲ್ಲಿ ಎಷ್ಟೊಂದು ಬುದ್ಧಿವಂತನೆಂದ್ರೆ ಈ ಮೀಸಲಾತಿ ಇಲ್ಲದೇ ಇರುತ್ತಿದ್ದರೆ ಆತ ಎಲ್ಲೋ ಇರುತ್ತಿದ್ದ. ಆದರೆ ಆತನ ದೌರ್ಭಾಗ್ಯಕ್ಕಿಂತ ಈ ಮೀಸಲಾತಿಯೇ ಅವನನ್ನು ಬಹುವಾಗಿ ಕಾಡಿದೆ. ಯಾಕೆಂದ್ರೆ ಆತ ಹಲವಾರು ಬಾರಿ ಬ್ಯಾಂಕ್ ಪರೀಕ್ಷೆ, ಪೋಸ್ಟ್ ಆಫೀಸ್ ಪರೀಕ್ಷೆಗಳನ್ನು ಬರೆದಿದ್ದ. ಆತ ಉತ್ತಮ ಅಂಕಗಳಿಂದ ಪಾಸ್ ಆಗುತ್ತಿದ್ದರೂ ಸರಕಾರಿ ಉದ್ಯೋಗ ಮಾತ್ರ ಸಿಕ್ಕಿಲ್ಲ. ಯಾಕೆಂದ್ರೆ ಮೀಸಲಾತಿ ವ್ಯವಸ್ಥೆಯಿಂದಾಗಿ ಆತನಿಗೆ ಸಿಗಬೇಕಾಗಿದ್ದ ಉದ್ಯೋಗವೆಲ್ಲಾ ದಲಿತ, ಅಲ್ಪಸಂಖ್ಯಾತರ ಪಾಲಾಗಿದೆ. ಇಂದು ಅವನಿಗೆ ವ್ಯವಸ್ಥೆಯ ಮೇಲೆ ಎಷ್ಟು ಸಿಟ್ಟಿದೆ ಎಂದ್ರೆ ಪರೀಕ್ಷೆ ಬರೆಯುವುದನ್ನೇ ಬಿಟ್ಟಿದ್ದಾನೆ. ಇದು ಕೇವಲ ಒಬ್ಬ ಪ್ರಕಾಶ್ ಭಟ್ಟನ ಪರಿಸ್ಥಿತಿಯಲ್ಲ, ಹಲವಾರು ಇಂಥದ್ದೇ ಯುವಕರು ನಮ್ಮ ಕಣ್ಣ ಮುಂದಿದ್ದಾರೆ.

ನಿಮಗೆ ಇನ್ನೊಂದು ಉದಾಹರಣೆ ಬೇಕಾದರೆ ಕೊಡುತ್ತೇನೆ. ನಮ್ಮ ರಾಜ್ಯದ ಒಬ್ಬ ಶ್ರೀಮಂತ ದಲಿತ ರಾಜಕಾರಣಿಯ ಮಗನಿಗೆ ರಾಜ್ಯದ ಉನ್ನತ ಹುದ್ದೆ ಸಿಗಲು
ಕಾರಣ ಆತನ ಜಾತಿ. ಶ್ರೀಮಂತನಾಗಿದ್ದರೂ ಕೂಡಾ ಆತನಿಗೆ ಸುಲಭವಾಗಿ ಉದ್ಯೋಗ ಸಿಕ್ಕಿತು. ಒಬ್ಬನನ್ನು ಬಡವ, ಶ್ರೀಮಂತ ಎಂದು ಅಳೆಯಲು ಆತನ ಜಾತಿಯೇ ಮಾನದಂಡವಾಗುತ್ತದೆಯೇ? ನಾನು ಒಬ್ಬ ದಲಿತನಾಗಿ ಈ ಪ್ರಶ್ನೆ ಕೇಳಿದ್ದಾನೆ ಎಂದೆನಿಸಬಹುದು. ಆದರೆ ನನ್ನಂತಹಾ ಅನೇಕ ಮಂದಿ ಯುವಕರ ಕನಸು ಕೂಡಾ ಅದೇ. ಸರಕಾರ ನಮ್ಮ ಓಟಿಗಾಗಿ ಒಂದಷ್ಟು ಸೌಲಭ್ಯ ನಮಗೆ ಕೊಟ್ಟು ಮೇಲ್ಜಾತಿಯವರನ್ನು ದೂರ ಮಾಡುವುದನ್ನು ನೋಡಿದಾಗ ನಮಗೂ ಬೇಜಾರಾಗುತ್ತದೆ. ಹಾಗೆಂದು ನಮ್ಮ ಜಾತಿಯಲ್ಲೂ ಬಡವರಿಲ್ಲ ಎಂದು ಅರ್ಥವಲ್ಲ. ಬಡವರಾಗಿದ್ದರೆ ಆತನ ಜಾತಿ, ಧರ್ಮವನ್ನು ನೋಡದೆ ನಿಷ್ಪಕ್ಷವಾಗಿ ಆತನನ್ನು ಮೇಲೆತ್ತುವ ಕೆಲಸವನ್ನು ಮುಖ್ಯಮಂತ್ರಿಗಳಾದ ನೀವು ಮಾಡಿ… ಆಗ ದೇಶದ ಬಡತನದ ಅಸಮಾನತೆ ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ…

ಸ್ವಾಮೀ ಸಿದ್ದರಾಮಯ್ಯ ನವರೇ ನಿಮಗೊಂದು ಸಲಹೆ ನೀಡುತ್ತಿದ್ದೇನೆ… ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಆ ಮೂಲಕ ಬಡವ, ಶ್ರೀಮಂತ ಎಂಬ
ಅಸಮಾನತೆಯನ್ನು ಹೋಗಲಾಡಿಸಿ.

1) ನಮ್ಮ ದೇಶದಲ್ಲಿರುವ ಶ್ರೀಮಂತರು, ಮಧ್ಯಮ ವರ್ಗದವರು ಹಾಗೂ ಬಡವರ್ಗದವರು ಎಂಬ ಮೂರು ವಿಭಾಗಗಳನ್ನು ಮಾಡಿ. ಅವರವರ ವಿಭಾಗಕ್ಕೆ ತಕ್ಕಂತೆ, ಅವರ ಮನೆಯ ಆದಾಯ, ಬಡತನ ಪ್ರಕಾರ ಮೀಸಲಾತಿ ಕೊಡಿಸಿ. ಇದರಿಂದ ಬಡವರು ಕೂಡಾ ಶ್ರೀಮಂತರಾಗುತ್ತಾರೆ.

2) ಇಂದು ಎಲ್ಲಾ ಮಕ್ಕಳಿಗೆ ಶಿಕ್ಷಣ ಉಚಿತ ಮತ್ತು ಕಡ್ಡಾಯ ಮಾಡಿದೆ ನಿಜ. ಆದ್ದರಿಂದ ಉನ್ನತ ವಿದ್ಯಾಭ್ಯಾಸ ಮಾಡಲಿಚ್ಛಿಸುವ ಅತಿ ಬಡ ವಿದ್ಯಾರ್ಥಿಗಳಿಗೆ ಅವರ
ವಿದ್ಯಾಭ್ಯಾಸ ಪೂರ್ಣವಾಗುವವರೆಗೆ ಉಚಿತ ಶಿಕ್ಷಣ ಕೊಡಿಸಿ… ಮಧ್ಯಮ ವರ್ಗದವರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡುವುದಿದ್ದರೆ ವಿದ್ಯಾಭ್ಯಾಸದ ಫೀಸ್
ಒಂದನ್ನು ತೆಗೆದುಕೊಳ್ಳಿ. ಆದರೆ ಶ್ರೀಮಂತ ಮಕ್ಕಳಿಂದ ವಿದ್ಯಾಭ್ಯಾಸದ ಫೀಸ್, ಡೊನೇಶನ್ ಎಲ್ಲವನ್ನೂ ಸ್ವೀಕರಿಸಿ.

3) ಉದ್ಯೋಗ ಕೊಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಮೆರಿಟ್, ಪ್ರತಿಭೆಯ ಪ್ರಕಾರ ಉದ್ಯೋಗ ಕಲ್ಪಿಸಬೇಕು. ಸರಕಾರಿ ಉದ್ಯೋಗದಲ್ಲಾಗಲೀ, ಖಾಸಗಿ
ಕಂಪೆನಿಗಳಲ್ಲಾಗಲೀ ಎಲ್ಲರಿಗೂ ಅವರವರ ಅರ್ಹತೆಗಣುಗುಣವಾಗಿ, ಪ್ರತಿಭೆಗನುಗುಣವಾಗಿ ಉದ್ಯೋಗ ಸಿಗಲಿ. ಇದರಿಂದ ಜಾತಿ ಮಧ್ಯೆ ಇರುವ ತಾರತಮ್ಯ
ನಿಲ್ಲುತ್ತದೆ. ದಲಿತಪಟ್ಟಿಗಾಗಿ ನಡೆಯುವ ಹೋರಾಟವೂ ನಿಲ್ಲುತ್ತದೆ.

4) ಬಡತನ ಎನ್ನುವುದಕ್ಕೆ ಜಾತಿ ಕಾರಣವಲ್ಲ. ಯಾಕೆಂದ್ರೆ ಇಂದು ಎಲ್ಲಾ ಜಾತಿ ಧರ್ಮಗಳಲ್ಲಿ ಶ್ರೀಮಂತರು, ಬಡವರು ಇದ್ದಾರೆ. ಆದ್ದರಿಂದ ಯಾವುದೇ ಸರಕಾರಿ
ಸೌಲಭ್ಯಕ್ಕಾಗಿ ಜಾತಿ ಮತ್ತು ಧರ್ಮವನ್ನು ಮಾನದಂಡ ಮಾಡಬೇಡಿ.

5) ಒಬ್ಬ ದಲಿತ ಅಥವಾ ಅಲ್ಪಸಂಖ್ಯಾತರು ಅತಿ ಶ್ರೀಮಂತರಾಗಿದ್ದರೆ ಅವರಿಗೆ ಮತ್ತೆ ಮತ್ತೆ ಮೀಸಲಾತಿ, ವಿವಿಧ ಸೌಲಭ್ಯ ನೀಡಿ ಶ್ರೀಮಂತರನ್ನೇ ಮತ್ತೆ ಮತ್ತೆ
ಶ್ರೀಮಂತರನ್ನಾಗಿ ಮಾಡುವುದರಲ್ಲಿ ಏನರ್ಥವಿದೆ. ಒಬ್ಬ ಶ್ರೀಮಂತರಾದ ಮೇಲೆ ಅವರ ಮೀಸಲಾತಿಯನ್ನು ರದ್ದುಗೊಳಿಸಿ.

6) ದೇಶದಲ್ಲಿ ಮೀಸಲಾತಿ ವ್ಯವಸ್ಥೆಯೇ ರದ್ದಾಗಬೇಕು. ಒಂದು ದೇಶದ ಪ್ರಜೆಗಳೆಂದ ಮೇಲೆ ಎಲ್ಲರೂ ಸಮಾನರು ಎಂಬ ಸಂವಿಧಾನದತ್ತ ಆಶಯವನ್ನು
ಎತ್ತಿಹಿಡಿಯುವಲ್ಲಿ ಪ್ರಯತ್ನಿಸಿ…

ಸಿದ್ದರಾಮಯ್ಯನವರೇ ನಾನೊಬ್ಬ ದಲಿತನಾಗಿದ್ದುಕೊಂಡಿ ಈ ರೀತಿ ಪತ್ರ ಬರೆದಿದ್ದಾನೆ ಎಂದು ಅಚ್ಚರಿಯಾಗಿರಬಹುದು. ಇಂದು ಮೀಸಲಾತಿಗಾಗಿ ಸಾಕಷ್ಟು
ಪ್ರತಿಭಟನೆ, ದೊಂಬಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೀಸಲಾತಿ ಎನ್ನುವುದು ರಾಜಕೀಯ ತಂತ್ರವಾಗಿದೆ ಎಂದು ನನಗೆ ಗೊತ್ತಿದೆ. ಆದರೂ ರಾಜಕೀಯ ಬಿಟ್ಟು ಬಸವಣ್ಣನ ತತ್ವವಾದ ಸಮಾನತೆಯನ್ನು ನಂಬುವವರಾಗಿದ್ದಾರೆ ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಕೊಳ್ಳುವಿರಾಗಿ ನಂಬುತ್ತೇನೆ. ಪ್ರೀತಿ ಇರಲಿ…

ಇಂತೂ ನಿಮ್ಮ ನೆಚ್ಚಿನ…

-ಎಚ್. ಡಿ. ಸುರೇಶ್ ಮಾದಿಗ,

ಕಲ್ಬುರ್ಗಿ

Editor Postcard Kannada:
Related Post