X

ಶ್ರೀರಾಮ ಮಂದಿರದ ಗರ್ಭಗೃಹದ ಬಾಗಿಲಿಗೆ 100 ಕೆಜಿ ಬಂಗಾರ ಲೇಪನ

ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾನುಕೋಟಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪುಣ್ಯ ಕಾಲಕ್ಕೆ ಸಾಕ್ಷಿಯಾಗಿ ಭಾರತ ಇತಿಹಾಸವನ್ನು ನಿರ್ಮಾಣ ಮಾಡಲಿದೆ. ಈ ಐತಿಹಾಸಿಕ ಘಳಿಗೆಗೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ.

ಈ ಹಿಂದೆ ನಾವು ಪುರಾಣಗಳಲ್ಲಿ ಓದಿದ್ದ, ರಾಮಾಯಣದಲ್ಲಿ ಶ್ರೀರಾಮನ ಅರಮನೆಯ ವೈಭವವನ್ನು, ರಸದೌತಣ ಸವಿದಿದ್ದ ಅದೇ ಸವಿಯನ್ನು, ಅಂತದ್ದೇ ವೈಭವವನ್ನು ನಾವು ಶ್ರೀರಾಮ ಮಂದಿರದಲ್ಲಿಯೂ ಕಾಣಬಹುದಾಗಿದೆ. ಹಿಂದೆಲ್ಲಾ ರಾಜರ ಕಾಲದಲ್ಲಿನ ವೈಭೋಗದ ಬಗ್ಗೆ ನಾವು ಕಥೆ, ಪುಸ್ತಕಗಳಲ್ಲಿ ಕೇಳಿದ್ದೆವಷ್ಟೇ. ಆ ಸಂಭ್ರಮವನ್ನು ನಮಗೆ ಸವಿಯುವ ಯೋಗವನ್ನು ಈ ಶ್ರೀರಾಮ ಮಂದಿರ ನಮಗೆ ಒದಗಿಸಿಕೊಡಲಿದೆ ‌ಎಂದರೆ ಅದು ಅತಿಶಯವಾಗಲಾರದೇನೋ.

ಇನ್ನೇನು ಕೆಲವೇ ದಿನಗಳಲ್ಲಿ ನನಸಾಗಲಿರುವ ಭವ್ಯ ಶ್ರೀರಾಮ ಮಂದಿರ ಎಂಬ ರಾಷ್ಟ್ರ ಮಂದಿರದ ಗರ್ಭ ಗೃಹಕ್ಕೆ ಚಿನ್ನದ ಲೇಪನ ಹೊಂದಿರುವ ಬಾಗಿಲನ್ನು ಬಳಕೆ ಮಾಡಲಾಗುತ್ತಿದೆ. ರಾಮ ಮಂದಿರದ ಮೇಲಿನ ಮಹಡಿಯಲ್ಲಿ ಈಗಾಗಲೇ ಬಾಗಿಲೊಂದನ್ನು ಇರಿಸಲಾಗಿದೆ.

ಈ ಬಾಗಿಲಿನ ವಿಶೇಷತೆಯೇನೆಂದರೆ, ಈ ಬಾಗಿಲಿಗೆ ನೂರು ಕೆಜಿ ಬಂಗಾರವನ್ನು ಲೇಪನ ಮಾಡಲಾಗಿದೆ. ಈ ದೇವಾಲಯದ ಗರ್ಭಗೃಹದ ಈ ಬಂಗಾರ ಲೇಪಿತ ಬಾಗಿಲು 12 ಅಡಿ ಎತ್ತರ ಮತ್ತು ಎಂಟು ಅಡಿ ಅಗಲವಿದೆ. ಈ ಬಾಗಿಲನ್ನು ಇನ್ನು ಮೂರು ದಿನಗಳಲ್ಲಿಯೇ ಗರ್ಭಗೃಹಕ್ಕೆ ಅಳವಡಿಸಲಾಗುತ್ತದೆ.

ಇನ್ನು ಇಡೀ ರಾಮ ಮಂದಿರದಲ್ಲಿ ಬಂಗಾರ ಲೇಪಿತ ಬಾಗಿಲನ್ನು ಒಳಗೊಂಡಂತೆ ಒಟ್ಟು ನಲವತ್ತಾರು ಬಾಗಿಲುಗಳಿರುವುದಾಗಿ ‌ಮೂಲಗಳು ಹೇಳಿವೆ. ಬೇರೆ ಬೇರೆ ರೀತಿಯ, ಭಿನ್ನ ವಿಭಿನ್ನ ಚಿತ್ರಗಳನ್ನು ಹೊಂದಿರುವ ಬಾಗಿಲುಗಳ ಸೌಂದರ್ಯವನ್ನು ನಾವು ಭವ್ಯ ಶ್ರೀರಾಮ ಮಂದಿರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಇದಕ್ಕೂ ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶದೆಲ್ಲೆಡೆ ಈ ಸಂಭ್ರಮವನ್ನು ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

Post Card Balaga:
Related Post