X

2023 ನೇ ವರ್ಷದ ಕೊನೆಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಕಳೆದ ಕ್ಯಾಲೆಂಡರ್ ವರ್ಷ ನಿನ್ನೆಯಷ್ಟೇ ಅಂತ್ಯವಾಗಿದೆ. ಇಂದಿನಿಂದ 2024 ನೇ ವರ್ಷಾರಂಭವಾಗಿದೆ. ಕಳೆದ ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ರವಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನ 2023 ನೇ ವರ್ಷದ ಕೊನೆಯ ಆವೃತ್ತಿಯನ್ನು ಮುಗಿಸಿದ್ದಾರೆ.

ಮನ್ ಕಿ ಬಾತ್‌ನ 108 ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಆವರು, ನಮ್ಮ ಭಾರತೀಯ ಸಮಾಜದಲ್ಲಿಯೂ 108 ಕ್ಕೆ ವಿಶೇಷ ಪ್ರಾಧಾನ್ಯತೆ ಇರುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ದೇಶದ ಅಭಿವೃದ್ಧಿಯ ಸ್ಫೂರ್ತಿಯನ್ನು ಸಹ ಶ್ಲಾಘನೆ ಮಾಡಿದ್ದಾರೆ. ಇಂದು ನಮ್ಮ ದೇಶವು ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತ ದೇಶ ಈಗ ಅಭಿವೃದ್ಧಿ ಹೊಂದಿದ ಭಾರತವಾಗುವ ಹುಮ್ಮಸ್ಸಿನಲ್ಲಿದೆ. ನಾವು ಈ ವರ್ಷದಲ್ಲಿಯೂ ಅಭಿವೃದ್ಧಿ ವಿಚಾರದಲ್ಲಿ ಅದೇ ಹುಮ್ಮಸ್ಸು, ಚೈತನ್ಯ ಮತ್ತು ವೇಗವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಭಾರತವು ಫಿಟ್ ಇಂಡಿಯಾ ಆಂದೋಲನದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿರುವುದನ್ನೂ ಶ್ಲಾಘಿಸಿದ ಅವರು, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವತ್ತಲೂ ಗಮನ ಹರಿಸುವಂತೆ ಸಲಹೆ ನೀಡಿದರು. ದೈಹಿಕವಾಗಿ ಹಗಲಿನಲ್ಲಿ ಸಂಯೋಜಿತವಾಗಿ, ಮಾನಸಿಕವಾಗಿ ಸದೃಢತೆ ಕಾಪಾಡಿಕೊಳ್ಳಲು ಏಳರಿಂದ ಎಂಟು ಗಂಟೆಯ ವರೆಗೆ ನಿದ್ರೆ ಮಾಡುವ ಅಗತ್ಯತೆಯನ್ನು ಅವರು ಚರ್ಚಿಸಿದರು. ಹಾಗೆಯೇ ದೈಹಿಕ ಕ್ಷಮತೆಗಾಗಿ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಹಾಗೆಯೂ ಅವರು ಸಲಹೆ ನೀಡಿದ್ದಾರೆ.

ರಾಸಾಯನಿಕ ಆಹಾರ ವಸ್ತುಗಳನ್ನು ಕೊಂಚ ದೂರವಿಟ್ಟು, ನೈಸರ್ಗಿಕ ಆಹಾರ ವಸ್ತುಗಳನ್ನು ಸೇವನೆ ಮಾಡುವತ್ತ ಗಮನ ಹರಿಸುವಂತೆಯೂ ಅವರು ಕರೆ ನೀಡಿದರು.

2023 ರ ಮಹತ್ವದ ಇಸ್ರೋ ಸಂಸ್ಥೆಯ ಚಂದ್ರಯಾನ -3 ನ್ನು ಸಹ ಈ‌ ಸಂದರ್ಭದಲ್ಲಿ ನೆನಪಿಸಿಕೊಂಡ ಅವರು, ನನ್ನ ಹಾಗೆಯೇ ಈ ದೇಶದ ವಿಜ್ಞಾನಿಗಳು, ಅದರಲ್ಲಿಯೂ ವಿಶೇಷವಾಗಿ ಮಹಿಳಾ ವಿಜ್ಞಾನಿಗಳ‌ ಬಗ್ಗೆ ದೇಶ ವಾಸಿಗಳು ಸಹ ಹೆಮ್ಮೆ ಪಡುತ್ತಾರೆ ಎಂದು ನಂಬಿರುವುದಾಗಿ ಅವರು ತಿಳಿಸಿದರು.

ಜೊತೆಗೆ ಕ್ರೀಡಾ ಕ್ಷೇತ್ರದ ಬಗೆಗೂ ಮಾತನಾಡಿರುವ ಅವರು, ನಮ್ಮ ದೇಶದ ಕ್ರೀಡಾಳುಗಳು 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಸಾಧನೆ ಮೆರೆದಿದ್ದಾರೆ. ನಮ್ಮ ದೇಶಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳು ಮತ್ತು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 111 ಪದಕಗಳು ಲಭಿಸಿವೆ. ವಿಶ್ವಕಪ್ ಕ್ರಿಕೆಟ್‌ನಲ್ಲೂ ಭಾರತೀಯ ತಂಡದ ಪ್ರದರ್ಶನ ಅದ್ಭುತವಾಗಿತ್ತು. ಇಡೀ ದೇಶವೇ ಭಾರತೀಯ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುತ್ತದೆ ಎಂದು ಅವರು ತಿಳಿಸಿದರು.

ಬಹು ಮುಖ್ಯವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯ ಬಹು ನಿರೀಕ್ಷಿತ ಶ್ರೀರಾಮ ಮಂದಿರ ಲೋಕಾರ್ಪಣೆಯಾಗಲಿದೆ. ಇಡೀ ರಾಷ್ಟ್ರಕ್ಕೆ ಇದೊಂದು ಹಬ್ಬದಂತೆ ಇರಲಿದ್ದು, ಉದ್ಘಾಟನೆಗೂ ಮೊದಲೇ ಜನರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಹಾಗೆಯೇ‌ ಸಾರ್ವಜನಿಕರು ರಾಮ ಲಲ್ಲಾನ ಬಗ್ಗೆ ರಚಿಸುತ್ತಿರುವ ಎಲ್ಲಾ ಸಾಹಿತ್ಯಗಳನ್ನು #RamBhajan ಸಾಮಾಜಿಕ ಮಾಧ್ಯಮದಲ್ಲಿ ಕ್ರೋಢೀಕರಣ ಮಾಡಿ ಎಂದು ಜನರಿಗೆ ಅವರು ಸೂಚಿಸಿದ್ದಾರೆ.

Post Card Balaga:
Related Post