X

ಗಮ್ಯ ಸ್ಥಾನ ತಲುಪಿದ ಇಸ್ರೋದ ಆದಿತ್ಯ ಎಲ್-1 ನೌಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕಳೆದ ವರ್ಷ ಚಂದ್ರಯಾನ -3 ಯಶಸ್ವಿಯಾಗಿ ನಡೆಸುವ ಮೂಲಕ ವಿಶ್ವದ ಯಾವ ರಾಷ್ಟ್ರ ಸಹ ಈ ವರೆಗೂ ಮಾಡಲಾಗದ ಸಾಧನೆ ಮಾಡಿ ಭಾರತದ ಹಿರಿಮೆಯನ್ನು ಚಂದ್ರನೆತ್ತರಕ್ಕೆ ಏರಿಸಿದೆ.

ಈ ಸಾಧನೆಯ ಬಳಿಕ ಇಸ್ರೋ ಮತ್ತೊಂದು ಸಾಧನೆ ಬರೆಯಲು ಹೊರಟಿದ್ದು ಸೂರ್ಯನ ಅಧ್ಯಯನಕ್ಕೆ ಕಳುಹಿಸಲಾದ ಆದಿತ್ಯ ಎಲ್-1 ನೌಕೆಯ ಮೂಲಕ. ಕಳೆದ ವರ್ಷ ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಾಗಿದ್ದ ಈ ನೌಕೆ ಸರಿಸುಮಾರು ಹದಿನೈದು ಲಕ್ಷ ಕಿಲೋ ಮೀಟರ್ ಕ್ರಮಿಸಿ ಇಂದು ತನಗೆ ನಿಗದಿ ಮಾಡಲಾಗಿದ್ದ ನಿಗದಿತ‌ ಸ್ಥಾನವನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಈ ಸಂಬಂಧ ಇಸ್ರೋ ಮಾಹಿತಿ ನೀಡಿದ್ದು, ಈ ನೌಕೆಯು ತನ್ನ ನಿಗದಿತ ಸ್ಥಾನವನ್ನು ತಲುಪಿದೆ. 126 ದಿನಗಳ ಪ್ರಯಾಣದಲ್ಲಿ ಹದಿನೈದು ಲಕ್ಷ ಕಿಲೋ ಮೀಟರ್ ಕ್ರಮಿಸಿದೆ‌. ಸಂಜೆ ಗಂಟೆ 4 ರ ವೇಳೆಗೆ ಈ ನೌಕೆ ತನ್ನ ಗಮ್ಯ ಸ್ಥಾನ ತಲುಪಿದೆ ಎಂದು ತಿಳಿಸಿದೆ. ಮುಂದಿನ ಐದು ವರ್ಷಗಳ ಕಾಲ ಇದೇ ಸ್ಥಳದಲ್ಲಿ ನಿಂತು ಇದು ಸೂರ್ಯನ ಅಧ್ಯಯನ ಮಾಡಲಿದೆ ಎಂದು ಇಸ್ರೋ ಹೇಳಿದೆ.

ಈ ಉಪಗ್ರಹವು ಬಾಹ್ಯಾಕಾಶದಲ್ಲಿರುವ ಭಾರತದ 400 ಕ್ಕೂ ಹೆಚ್ಚು ಸುಮಾರು ಐವತ್ತು ಸಾವಿರ ಕೋಟಿ ರೂ. ಮೌಲ್ಯದ ಇತರ ಉಪಗ್ರಹಗಳ ರಕ್ಷಣೆಯ ಕೆಲಸವನ್ನೂ ಇದು ಮಾಡಲಿದೆ.

ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯು 440N ಲಿಕ್ವಿಡ್ ಅಪೋಜಿ ಮೋಟರ್ (LAM) ಅನ್ನು ಸಹ ಹೊಂದಿದೆ. ಇದರ ಸಹಾಯದಿಂದಲೇ ಈ ನೌಕೆಯನ್ನು ಹಾಲೋ ಕಕ್ಷೆಗೆ ಕಳುಹಿಸಲಾಗಿದೆ. ಈ ಮೋಟಾರು ಇಸ್ರೋದ ಮಾರ್ಸ್ ಆರ್ಬಿಟರ್ ಮಷಿನ್‌ನಲ್ಲಿ ಬಳಸಲಾದ ಹಾಗೆಯೇ ಇದೆ. ಜೊತೆಗೆ ಎಂಟು 22N ಥ್ರಸ್ಟರ್‌ಗಳು ಮತ್ತು 10N ಥ್ರಸ್ಟರ್‌ಗಳನ್ನು ಸಹ ಒಳಗೊಂಡಿದೆ. ನೌಕೆಯ ನಿಯಂತ್ರಣದ ವಿಷಯದಲ್ಲಿ ಇದು ಅಗತ್ಯವಾಗಿದೆ.

ಬಾಹ್ಯಾಕಾಶದ ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನ ಮಾಡುವ ಸ್ಥಳವೇ ಎಲ್-1. ಈ ಕಕ್ಷೆಯ ಅವಧಿ 117.86 ದಿನಗಳಾಗಿವೆ.

Post Card Balaga:
Related Post