X

ಪಿಡಿಪಿಗೆ ಬಿಗ್ ಶಾಕ್! ಜಮ್ಮು-ಕಾಶ್ಮೀರ ಸರ್ಕಾರ ಪತನ! ಅಧಿಕಾರದಿಂದ ಕೆಳಗಿಳಿದ ಬಿಜೆಪಿ. 

ಕಳೆದ 3 ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ನಡೆಸುತ್ತಿದ್ದ ಪಿಡಿಪಿ ಹಾಗೂ ಭಾರತೀಯ ಜನತಾ ಪಕ್ಷದ ಸರ್ಕಾರ ಇಂದು ಪತನವಾಗಿದೆ. 3 ವರ್ಷಗಳಿಂದ ಮೈತ್ರಿ ಸರ್ಕಾರವನ್ನು ನಡೆಸಿಕೊಂಡು ಬರುತ್ತಿದ್ದ ಈ ಎರಡು ಪಕ್ಷಗಳು ಇಂದು ತಮ್ಮ ಮೈತ್ರಿಯನ್ನು ಮುರಿದುಕೊಂಡಿವೆ. ಈ ಬಗ್ಗೆ ಅಧಿಕೃತ ಪ್ರಕಟನೆಯನ್ನು ಮಾಡಿದ ಭಾರತೀಯ ಜನತಾ ಪಕ್ಷ ತಾವು ಪಿಡಿಪಿ ಪಕ್ಷದೊಂದಿಗೆ ಮುಂದುವರೆಯುದಿಲ್ಲ ಎಂದು ಘೋಷಿಸಿದೆ. 

ಭಾರತೀಯ ಜನತಾ ಪಕ್ಷದ ಅಸ್ತಿತ್ವವೇ ಇಲ್ಲದ ಮುಸ್ಲಿಂ ಬಾಹುಲ್ಯದ ಕಣಿವೆ ರಾಜ್ಯ ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಬರೋಬ್ಬರಿ 25 ಸ್ಥಾನಗಳನ್ನು ಪಡೆಯುವ ಮೂಲಕ ಹೊಸ ಇತಿಹಾಸ ಬರೆದಿತ್ತು. ಈ ಚುನಾವಣೆಯಲ್ಲಿ ಪಿಡಿಪಿ 28, ಎನ್.ಸಿ. 15 ಸ್ಥಾನಗಳನ್ನು ಪೇರಿಸಿ ಕಾಂಗ್ರೆಸ್ ಕೇವಲ 12 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಈ ವೇಳೆ ಭಾರತೀಯ ಜನತಾ ಪಕ್ಷ ಹಾಗೂ ಪಿಡಿಪಿ ಮೈತ್ರಿ ಮಾಡಿಕೊಂಡು ಜಮ್ಮು ಕಾಶ್ಮೀರದಲ್ಲಿ ಸರ್ಕಾರವನ್ನು ರಚಿಸಿದ್ದವು.

 

ಮೈತ್ರಿ ಸರ್ಕಾರದಲ್ಲಿ ಪಿಡಿಪಿ ನಾಯಕಿ ಮೆಹಬೂಬ ಮುಪ್ತಿ ಮುಖ್ಯಮಂತ್ರಿಯಾಗಿಯೂ, ಭಾರತೀಯ ಜನತಾ ಪಕ್ಷದ ನಾಯಕ ಉಪಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿ ಆಡಳಿತ ನಡೆಸುತ್ತಿದ್ದರು. ಆದರೆ ಈ ಸರ್ಕಾರ ಅದ್ಯಾಕೋ ಕೇಂದ್ರ ಸರ್ಕಾರದ ಭಯೋತ್ಪಾದನಾ ನಿಗ್ರಹ ಕ್ರಮಕ್ಕೆ ಹೊಂದುತ್ತಿರಲಿಲ್ಲ. ಪಿಡಿಪಿ ಪಕ್ಷ ಉಗ್ರ ನಿಗ್ರಹಕ್ಕೆ ಸಹಕಾರ ನೀಡುತ್ತಿಲ್ಲ ಅನ್ನೋದು ಭಾರತೀಯ ಜನತಾ ಪಕ್ಷದ ನಾಯಕರ ಆರೋಪ. ಈ ಹಿನ್ನೆಲೆಯಲ್ಲಿ ಇಂದು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಹೊರಬಂದಿದೆ. 

ಅಧಿಕಾರ ವಹಿಸಿದಾಗಿನಿಂದಲೂ ಕಣಿವೆ ರಾಜ್ಯದಲ್ಲಿ ಪ್ರತ್ಯೇಕವಾದಿಗಳು ಹಾಗೂ ಉಗ್ರರ ಬಗ್ಗೆ ಪಿಡಿಪಿ ಪಕ್ಷ ಮೃದು ಧೋರಣೆಯನ್ನು ಅನುಸರಿಸುತ್ತಾ ಬರುತ್ತಿದೆ. ಪ್ರತ್ಯೇಕವಾದಿಗಳು ಕಲ್ಲು ಎಸೆಯುವುದರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕಠಿಣ ಕ್ರಮವನ್ನೂ ಕೈಗೊಳ್ಳದೆ ಇರವುದು ಭಾರತೀಯ ಜನತಾ ಪಕ್ಷದ ರಾಜೀನಾಮೆಯ ನಿಲುವಿಗೆ ಕಾರಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಭದ್ರತೆ ಹಾಗೂ ಸುರಕ್ಷತೆಯ ವೈಫಲ್ಯ, ಪಿಡಿಪಿ ಜೊತೆಗೆ ತತ್ವ ಸಿದ್ಧಾಂತಗಳ ಹೊಂದಾಣಿಕೆಯಾಗದ ಕಾರಣ, ಮತ್ತು ಮೈತ್ರಿ ಧರ್ಮದ ಪಾಲನೆ ಮಾಡದ ಕಾರಣ ಭಾರತೀಯ ಜನತಾ ಪಕ್ಷ ಅಧಿಕಾರದಿಂದ ಹೊರಬಂದಿದೆ.

ಈ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮೈತ್ರಿ ಸರ್ಕಾರದಿಂದ ಹೊರ ಬಂದಿರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. “ನಮ್ಮ ಪಕ್ಷ ಹಾಗೂ ಸರ್ಕಾರ ಮೊದಲು ಪ್ರಾಮುಖ್ಯತೆ ನೀಡೋದು ಉಗ್ರ ನಿಗ್ರಹಕ್ಕೆ. ಆದರೆ ಮುಖ್ಯಮಂತ್ರಿ ಮೆಹಬೂಬ ಮುಪ್ತಿಯವರ ನೇತೃತ್ವದ ಪಿಡಿಪಿ ಪಕ್ಷ ನಮ್ಮ ಕ್ರಮಕ್ಕೆ ಸ್ಪಂಧಿಸುತ್ತಿಲ್ಲ. ಉಗ್ರರ ನಿಗ್ರಹಕ್ಕೆ ಇಲ್ಲಿನ ಮುಖ್ಯಮಂತ್ರಿಗಳು ಸಹಕಾರ ನೀಡುತ್ತಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಹೊರಬರುತ್ತಿದ್ದೇವೆ. ಈ ಬಗ್ಗೆ ನಾವು ನಮ್ಮ ನಿಲುವನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದೇವೆ. ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆ ಧೃಷ್ಟಿಯಿಂದ ಮೈತ್ರಿ ಸರ್ಕಾರದಿಂದ ಹೊರಬರುತ್ತಿದ್ದೇವೆ” ಎಂದಿದ್ದಾರೆ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಆರಂಭವಾಗಿದೆ. ಬಹುತೇಕ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವ ಸಾಧ್ಯತೆ ನಿಶ್ಚಳವಾಗಿದೆ. ಈ ಮೂಲಕ ಉಗ್ರ ನಿಗ್ರಹ ನೆಪವೊಡ್ಡಿರುವ ಭಾರತೀಯ ಜನತಾ ಪಕ್ಷ ತನ್ನ ನೇತೃತ್ವದ ಕೇಂದ್ರ ಸರ್ಕಾರದ ಮೂಲಕ ಜಮ್ಮು ಹಾಗೂ ಕಾಶ್ಮೀರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಉಗ್ರರನ್ನು ನಿಗ್ರಹಿಸಿ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

-ಸುನಿಲ್ ಪಣಪಿಲ

Editor Postcard Kannada:
Related Post