X

ಬಾಲಿವುಡ್ ಚಾಂದನಿ ಇನ್ನಿಲ್ಲ!! ಕರ್ನಾಟಕದಲ್ಲಿ ಶ್ರೀದೇವಿ ಮಾಡಿದ ಮೋಡಿ ಏನು ಗೊತ್ತಾ?

ತಮ್ಮ ಸೌಂದರ್ಯಕ್ಕೆ ಮತ್ತು ಅದ್ಭುತ ಅಭಿನಯಕ್ಕೆ ಹೆಸರುವಾಸಿಯಾಗಿದ್ದ, 5 ದಶಕಗಳ ಅವಧಿಯಲ್ಲಿ ಸುಮಾರು 300 ಚಿತ್ರಗಳಲ್ಲಿ ನಟಿಸಿ ತಮ್ಮ ಕಲಾವಂತಿಕೆಯನ್ನು ಮೆರೆದಿರುವ ಹವಾ ಹವಾಯಿ ನಟಿ ಎಂದೇ ಖ್ಯಾತರಾಗಿದ್ದ ಶ್ರೀದೇವಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಅನಿಲ್ ಕಪೂರ್ ಅವರೊಂದಿಗೆ, ಪತಿ ಬೋನಿ ಕಪೂರ್ ನಿರ್ದೇಶನದಲ್ಲಿ ನಟಿಸಿದ ಶ್ರೀದೇವಿ ಬಾಲಿವುಡ್ ಚಾಂದನಿ ಎಂದೇ ಗುರುತಿಸಲ್ಪಟ್ಟಿದ್ದು, ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಹೀರೋಗಳ ಪ್ರಭಾವ ಹೊಂದಿದ್ದ ಭಾರತೀಯ ಚಿತ್ರರಂಗವನ್ನು ಶ್ರೀದೇವಿ ತಮ್ಮ ಮೋಹನ ನೋಟ, ಅತ್ಯದ್ಭುತ ನಟನೆ, ನೃತ್ಯದಿಂದ ಹಿಡಿತದಲ್ಲಿ ತೆಗೆದುಕೊಂಡು ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದರು. ಶ್ರೀದೇವಿಯ ಮೋಹಕ ನಗೆಗೆ ಮನ ಸೋಲದವರೇ ಇಲ್ಲ.

1963 ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಅಯ್ಯಪ್ಪನ್ -ರಾಜೇಶ್ವರಿ ದಂಪತಿಯ ಪುತ್ರಿಯಾಗಿ ಜನಿಸಿದ ಶ್ರೀದೇವಿ 4 ವರ್ಷದವರಾಗಿದ್ದಾಗಲೇ ಬಾಲನಟಿಯಾಗಿ ತಮಿಳಿನ “ತುನೈವಾನ್” ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಕಲಾಪ್ರೌಢಿಮೆಯನ್ನು ಮೆರೆದಿದ್ದ ಶ್ರೀದೇವಿ 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಪಡೆದಿದ್ದರು.

ಅಮ್ಮ ಯಾಂಗರ್ ಅಯ್ಯಪ್ಪನ್ ಎಂಬ ಮೂಲ ಹೆಸರಿನ ಈ ನಟಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದರು. ನಂತರ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿ, ಹಲವು ವರ್ಷಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದರು. 4ನೇ ವರ್ಷದಿಂದ 54ನೇ ವರ್ಷದವರೆಗೂ ಬಾಲಿವುಡ್ ದಿವಾ ಎಂದರೆ ನೆನಪಾಗುವ ಈ ನಟಿ, ಪದ್ಮಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಒಲಿದಿದ್ದವು.

‘ಸದ್ಮಾ’ ಚಿತ್ರದ ಮೂಲಕ ಜಗತ್ಪ್ರಸಿದ್ಧಿ!!

ಬಾಲಿವುಡ್‍ನಲ್ಲಿ ಸೈ ಎನಿಸಿಕೊಂಡಿರುವ ಶ್ರೀದೇವಿಗೆ ಪ್ರಖ್ಯಾತಿ ತಂದುಕೊಟ್ಟ ಮೊದಲ ಚಿತ್ರ 1983ರಲ್ಲಿ ಬಿಡುಗಡೆಯಾದ ‘ಹಿಮ್ಮತ್ ವಾಲಾ”. ಜಿತೇಂದ್ರ ನಾಯಕರಾಗಿದ್ದ ಈ ಚಿತ್ರದ ಮೂಲಕ ಶ್ರೀದೇವಿ ಸಿಡಿಲ ತೊಡೆಗಳ ನಟಿ ಎಂದೇ ಪ್ರೇಕ್ಷಕರ ನಿದ್ದೆ ಕೆಡಿಸಿದ್ದರು!! ಆದರೆ ಇಂತಹ ಸೌಂದರ್ಯದ ಖನಿಗೆ ಅದ್ಭುತ ನಟನೆಯೂ ಗೊತ್ತಿದೆ ಎಂದು ಜಗತ್ತು ಗುರುತಿಸಿದ್ದು, ಕಮಲಹಾಸನ್ ನಾಯಕ ನಟನಾಗಿದ್ದ ‘ಸದ್ಮಾ’ ಚಿತ್ರದ ಮೂಲಕ!!

ಇದು 1982ರಲ್ಲಿ ಮೂಂಡ್ರಮ್ ಪಿರೈ ಹೆಸರಿನ ತಮಿಳಿನಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಈ ಚಿತ್ರದ ಹಿಂದಿ ಅವತರಣಿಕೆ 1983ರಲ್ಲಿ ‘ಸದ್ಮಾ’ ಹೆಸರಿನಲ್ಲಿ ಬಿಡುಗಡೆಯಾಯಿತು. ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಶ್ರೀದೇವಿ ನಟನೆಯಿಮದಲೇ ಜಗತ್ಪ್ರಸಿದ್ಧಿ ಹೊಂದಿದ್ದರು!!

ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಶ್ರೀದೇವಿ!!

13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.

ಬಹುಭಾಷಾ ನಟಿಯಾಗಿರುವ ಇವರು ಕನ್ನಡದ ‘ಭಕ್ತಕುಂಬಾರ’ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರೊಂದಿಗೆ ಮುಕ್ತಾ ಬಾಯಿಯಾಗಿ ನಟಿಸಿದ್ದರು. ‘ಹೆಣ್ಣು ಸಂಸಾರದ ಕಣ್ಣು’, ಸಂಪೂರ್ಣ ರಾಮಾಯಣ, ಯಶೋಧಾ ಕೃಷ್ಣ, ಬಾಲ ಭಾರತ, ಸೇರಿದಂತೆ 6 ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ತಮಿಳಿನ 76, ಹಿಂದಿಯ 71, ತೆಲುಗಿನ 72 ಹಾಗೂ 26 ಮಲಯಾಳಂ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ವಿವಿಧ ಭಾಷೆಗಳ ಸುಮಾರು 260 ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು, ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಭಿನಯದಿಂದ ದೂರ ಉಳಿದಿದ್ದರು.

13ನೇ ವರ್ಷದಲ್ಲಿ ಮೂಂಡ್ರು ಮುಡಿಚು ಎಂಬ ತಮಿಳು ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದ ಇವರು ಹಲವು ವರ್ಷಗಳ ಕಾಲ ಬ್ರೇಕ್ ಪಡೆದು, ಮತ್ತೆ ‘ಇಂಗ್ಲಿಷ್ ವಿಂಗ್ಲಿಷ್’ ಮೂಲಕ ಮತ್ತೆ ನಟಿಸಿದ ಈ ನಟಿ, ಮಧ್ಯಮ ವರ್ಗದ, ಇಂಗ್ಲಿಷ್ ಬಾರದ ಹೆಣ್ಣು ಮಕ್ಕಳಲ್ಲಿ ಇಂಗ್ಲಿಷ್ ಕಲಿತು, ಮೂಡಿಸಿದ ಆತ್ಮವಿಶ್ವಾಸ ಅಷ್ಟಿಷ್ಟಲ್ಲ. ವಯಸ್ಸಿಗೆ ತಕ್ಕಂತೆ ಮಾಡಿದ ಈ ಪಾತ್ರದ ಮೂಲಕ ತಮ್ಮ ಮನೋಜ್ಞ ಅಭಿನಯವನ್ನು ತೋರಿದ್ದರು.

ಇತ್ತೀಚಿನ “ಮಾಮ್” ಚಿತ್ರದಲ್ಲಿ ಅಭಿನಯಿಸಿದ್ದ ಇವರು 5 ಫಿಲ್ಮ್ ಫೇರ್, 2013 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಮೋಹಕ ತಾರೆ 54 ಹರೆಯದ ಶ್ರೀದೇವಿ ದುಬೈನಲ್ಲಿ ಹೃದಯಾಘಾತದಿಂದ ಶನಿವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ದುಬೈನಲ್ಲಿ ಕುಟುಂಬ ಸದಸ್ಯರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪತಿ ಬೋನಿಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ದುಬೈಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನಿ ಕಪೂರ್ ಹಾಗೂ ಖುಷಿ ಕಪೂರ್ ಸೇರಿ ಅಪಾರ ಅಭಿಮಾನಿಗಳನ್ನು ಈ ನಟಿ ಅಗಲಿದ್ದಾರೆ.

ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ನರೇಂದ್ರ ಮೋದಿ !!

ಆರೋಗ್ಯವಾಗಿದ್ದು, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್ ಸೇರಿ ದೇಶದ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಸುದ್ದಿ ತಿಳಿಯುತ್ತಿದ್ದಂತೆ, ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಮನೋಜ್ಞ ಅಭಿನಯದಿಂದ, ಅಪಾರ ಅಭಿಮಾನಿಗಳನ್ನು ಹೊಂದಿದ್ದ ಶ್ರೀದೇವಿ ಸಾವಿನ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ, ಖ್ಯಾತ ನಟಿಯ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ನ ಖ್ಯಾತ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ಖುದಾ ಘವಾ ಚಿತ್ರದಲ್ಲಿ ಅಮಿತಾಬ್ ಅವರೊಂದಿಗೆ ನಟಿಸಿದ್ದ ಶ್ರೀದೇವಿಯ ಬಗ್ಗೆ ಟ್ವೀಟ್ ಮಾಡಿದ ಬಾಲಿವುಡ್ ಬಿಗ್ ಬಿ ತಮ್ಮ ಸಹನಟಿಯ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಮುಂಬೈನ ಅಂಧೇರಿಯಲ್ಲಿರುವ ಶ್ರೀದೇವಿ ಅವರ ನಿವಾಸದೆದರು ನೆರೆಯುತ್ತಿದ್ದರೆ ಇತ್ತ “ಶ್ರೀದೇವಿ ಅವರ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ ಇಂದು ಬಾಲಿವುಡ್ ಪಾಲಿಗೆ ಕರಾಳ ದಿನ” ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಜತೆಗೆ ಖ್ಯಾತ ಹಾಸ್ಯ ನಟ ಜಾನಿ ಲಿವರ್, ಪ್ರೀತಿ ಝಿಂಟಾ, ರಿತೇಶ್ ದೇಶ್ ಮುಖ್, ಸಿದ್ಧಾರ್ಥ ಮೆಲ್ಹೋತ್ರಾ, ಕ್ರಿಕೆಟಿಗ ರವೀಂದ್ರ ಜೆಡೆಜಾ ಸೇರಿ ಹಲವು ಸಂತಾಪ ಸೂಚಿಸಿದ್ದಾರೆ.

– ಅಲೋಖಾ

Editor Postcard Kannada:
Related Post