X

ಡೀಪ್‌ಫೇಕ್ ವಿರುದ್ಧ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಸಿದ್ಧತೆ

ಸಾರ್ವಜನಿಕ ವಲಯದಲ್ಲಿ ಇತ್ತೀಚೆಗೆ ಆತಂಕ ಸೃಷ್ಟಿ ಮಾಡಿದ್ದ ಡೀಪ್‌ಫೇಕ್ ಸಂಬಂಧ ಕೇಂದ್ರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.

ಡೀಪ್‌ಫೇಕ್‌ ಗೆ ಸಂಬಂಧಿಸಿದ ಹಾಗೆ ತಪ್ಪು ಮಾಹಿತಿಗಳನ್ನು ಎದುರಿಸಲು ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸುವ ಬಗೆಗೂ ಚಿಂತನೆ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ. ಹಾಗೆಯೇ ಇದಕ್ಕೆ ಹೊರತಾದಂತೆಯೂ ಕೇಂದ್ರದ ಎಲೆಕ್ಟ್ರಾನಿಕ್, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ಮತ್ತು ಶುಕ್ರವಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಕಾರ್ಯನಿರ್ವಾಹಕರ ಜೊತೆಗೆ ಸಭೆಯನ್ನು ನಡೆಸುವುದಾಗಿಯೂ ತಿಳಿಸಿದೆ.

ಈ ಸಭೆಯು ಕುಶಲತೆಯಿಂದ ಕೂಡಿದ ವಿಡಿಯೋಗಳು ಮತ್ತು ಚಿತ್ರಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ, ಐಟಿ ನಿಯಮಗಳಿಗೆ ಸಂಬಂಧಿಸಿದ ಹಾಗೆ ಸಾಮಾನ್ಯ ಅನುಸರಣೆಯ ಬಗ್ಗೆ ಕೇಂದ್ರೀಕೃತವಾಗಿದೆ.

ಇಂಟರ್ನೆಟ್ ಬಳಸಿ ಎಐ ಮತ್ತು ಇನ್ನಿತರ ರೀತಿಯ ವಿಷಯಗಳನ್ನು ಬೇಡದ, ತಪ್ಪು ವಿಚಾರಗಳಿಗೆ ಬಳಕೆ ಮಾಡುವ ಜನರು ಸಾಮಾಜಿಕವಾಗಿ ಅವ್ಯವಸ್ಥೆ ಸೃಷ್ಟಿ ಮಾಡಲು, ಅಸ್ವಸ್ಥತೆ ಮತ್ತು ಹಿಂಸಾಚಾರವನ್ನು ಪ್ರಚೋದನೆ ಮಾಡಲು ಬಳಸುತ್ತಾರೆ. ಇಂಟರ್ನೆಟ್ ಮತ್ತು ಕೃತಕ ಬುದ್ಧಿಮತ್ತೆ ಈ ಎರಡನ್ನೂ ಸಾಮಾಜಿಕ ಸ್ವಾಸ್ಥ್ಯ ಕದಡಲು ಬಳಕೆ ಮಾಡುವ ಮೂಲಕ ಅಶಾಂತಿ ಸೃಷ್ಟಿ ಮಾಡುವ ಕೆಲಸವನ್ನು ಕೆಲವು ಜನರು ಮಾಡುತ್ತಿದ್ದಾರೆ. ಇವೆರಡನ್ನೂ ತಪ್ಪು ರೀತಿಯಲ್ಲಿ, ಕೆಟ್ಟ ರೀತಿಯಲ್ಲಿ ಬಳಕೆ ಮಾಡುತ್ತಿರುವುದು ದುರಾದೃಷ್ಟಕರ ಎಂದು ರಾಜೀವ್ ಚಂದ್ರಶೇಖರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ಅಪರಾಧಗಳ ಕಡಿವಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಮಹತ್ವದ ಕ್ರಮಗಳನ್ನು ಜಾರಿಗೆ ತಂದಿದೆ. ಹಾಗೆಯೇ ಹೊಸ ಐಟಿ ನಿಯಮವನ್ನು ಸಹ ಈ ವರ್ಷ ರಚನೆ ಮಾಡಿದ್ದೇವೆ. ಅಗತ್ಯ ಬಿದ್ದ ಪಕ್ಷದಲ್ಲಿ ಡೀಪ್‌ಫೇಕ್ ಅಥವಾ ತಪ್ಪು ಮಾಹಿತಿ ದೊಡ್ಡ ಪ್ರಮಾಣದಲ್ಲಿ ಬೆದರಿಕೆಯನ್ನು ಉಂಟು ಮಾಡುವುದಕ್ಕೆ ತಡೆ ಒಡ್ಡುತ್ತೇವೆ. ಇದನ್ನು ಖಚಿತ ಪಡಿಸಿಕೊಳ್ಳಲು ಹೊಸ ಚೌಕಟ್ಟು ರೂಪಿಸುವುದಕ್ಕೂ ಮುಂದಾಗುವುದಾಗಿ ಅವರು ಹೇಳಿದ್ದಾರೆ.

ಡೀಪ್‌ಫೇಕ್ ಜಾಲಕ್ಕೆ ಹಲವಾರು ಮಂದಿ, ಬಹು ಮುಖ್ಯವಾಗಿ ಸಾರ್ವಜನಿಕವಾಗಿ ಹೆಚ್ಚು ಜನಪ್ರಿಯತೆ ಹೊಂದಿರುವ ವ್ಯಕ್ತಿಗಳು ಅದರಲ್ಲಿಯೂ ಮಹಿಳೆಯರು ಹೆಚ್ಚು ಬಾಧಿತರಾಗಿದ್ದು, ಈ‌ ಸಂಬಂಧ ಸುದ್ದಿಗಳನ್ನು ನಾವು ಮಾಧ್ಯಮಗಳಲ್ಲಿಯೂ ನೋಡಿದ್ದೇವೆ. ಒಬ್ಬ ವ್ಯಕ್ತಿಯ ಗುರುತನ್ನು ಬೇರೆಯವರ ಹಾಗೆ ತಪ್ಪಾಗಿ ಬಿಂಬಿಸಿ, ಆ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡಲು ಡೀಪ್‌‌ಫೇಕ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿತ್ತು. ಇದರ ನಕಾರಾತ್ಮಕ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ, ಇಂತಹ ಮೋಸದ ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿರುವುದಾಗಿದೆ.

Post Card Balaga:
Related Post