X

ರಾಜಕೀಯಕ್ಕೆ ಧುಮುಕುವ ಉಮೇದಿನಲ್ಲಿದ್ದ ಮುಂಬೈ ದಾಳಿಯ ರೂವಾರಿಗೆ ಅಮೇರಿಕಾ ನೀಡಿತು ಬಿಗ್ ಶಾಕ್!!

ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಕಾಲುಗೆರೆದು ಜಗಳಕ್ಕೆ ಇಳಿಯುತ್ತಿದ್ದ ಪಾಕಿಸ್ತಾನ ಈಗಾಗಲೇ ವಿಶ್ವದೆಲ್ಲೆಡೆ ಭಯೋತ್ಪಾದನಾ ರಾಷ್ಟ್ರವಾಗಿ
ಹೊರಹೊಮ್ಮುತ್ತಿರುವ ವಿಚಾರ ತಿಳಿದೇ ಇದೆ!! ಆದರೆ ಇದೀಗ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹವಣಿಸುತ್ತಿರುವ ಮುಂಬೈ ದಾಳಿಯ ರೂವಾರಿ, ಜಮತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನೇತೃತ್ವದ ರಾಜಕೀಯ ಪಕ್ಷವನ್ನು ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಸರಕಾರವು ವಿದೇಶಿ ಉಗ್ರ ಸಂಘಟನೆ ಎಂದು ಬಹಿರಂಗವಾಗಿ ಘೋಷಿಸಿದೆ.

ಈಗಾಗಲೇ ಪಾಕಿಸ್ತಾನ ಉಗ್ರರ ಪಾಲಿನ ಸ್ವರ್ಗ ಎಂದು ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್, “ಅಮೆರಿಕಾ ಮೂರ್ಖನಾಗಿ ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್ ಸೇನಾ ನೆರವು ನೀಡಿತು. ಇದಕ್ಕೆ ಪ್ರತಿಯಾಗಿ ನಮ್ಮ ನಾಯಕರನ್ನು ಮೂರ್ಖರು ಎಂದುಕೊಂಡು ಪಾಕಿಸ್ತಾನ ನಮಗೆ ನೀಡಿದ್ದು ಸುಳ್ಳು ಮತ್ತು ಮೋಸ ಮಾತ್ರ. ನಾವು ಅಫ್ಘಾನಿಸ್ತಾನದಲ್ಲಿ ಬೇಟೆಯಾಡುತ್ತಿರುವ ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗಗಳನ್ನು ದಯಾಪಾಲಿಸಿದೆ. ಇನ್ನು ಇದು ಸಾಧ್ಯವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ರಾಜಕೀಯಕ್ಕೆ ಧುಮುಕುವ ಉಮೇದಿನಲ್ಲಿರುವ ಮೋಸ್ಟ್ ವಾಂಟೆಂಡ್ ಉಗ್ರ ಸಯ್ಯದ್ ಹಫೀಜ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಅಮೆರಿಕಾ ಘೋಷಣೆ ಮಾಡಿದೆ. ಇದಲ್ಲದೆ, ಪಕ್ಷದ ಕೇಂದ್ರೀಯ ನಾಯಕತ್ವ ಮಂಡಳಿಯ ಏಳು ಸದಸ್ಯರನ್ನು ಜಾಗತಿಕ ಉಗ್ರರು ಎಂದು ಘೋಷಿಸಿದೆ. ಉಗ್ರ ಸಂಘಟನೆಗಳ ಪಟ್ಟಿಗೆ “ತೆಹ್ರೀಕ್ ಎ ಆಜಾದಿ ಎ ಕಾಶ್ಮೀರ್”(ಟಿಎಜೆಕೆ)ನ್ನೂ ಸೇರ್ಪಡೆಗೊಳಿಸಿದೆಯಲ್ಲದೇ ಲಷ್ಕರ್ ಎ ತೊಯ್ಬಾ(ಎಲ್ ಇಟಿ)ದ ಅಧೀನ ಸಂಘಟನೆ ಇದು ಎಂದು ಅಮೆರಿಕ ಹೇಳಿದೆ.

ಹೌದು…… ಅಮೆರಿಕ ಘೋಷಿಸಿರುವ ಜಾಗತಿಕ ಉಗ್ರರ ಪಟ್ಟಿಯಲ್ಲಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಈ ಎಂಎಂಎಲ್ ನ
ಸಂಸ್ಥಾಪಕನಾಗಿದ್ದು, ಉಗ್ರ ಹಣೆಪಟ್ಟಿ ಕಳಚಿಕೊಳ್ಳುವ ಸಲುವಾಗಿ ಹಫೀಜ್ ಈ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಈ ಸಲದ ಸಾರ್ವತ್ರಿಕ ಚುನಾವಣೆ (ಜುಲೈ 2018) ಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ. ಗೃಹ ಸಚಿವಾಲಯದಿಂದ ಪಡೆದ ಅನುಮತಿ ಪತ್ರವನ್ನು ಒದಗಿಸುವಂತೆ ಪಾಕಿಸ್ತಾನ ಚುನಾವಣಾ ಆಯೋಗ ಎಂಎಂಎಲ್ ಗೆ ಭಾನುವಾರ ಸೂಚಿಸಿತ್ತು. ಅದನ್ನು ಪರಿಶೀಲಿಸಿ ರಾಜಕೀಯ ಪಕ್ಷದ ಮಾನ್ಯತೆ ಒದಗಿಸಲು ಆಯೋಗ ಸಿದ್ಧತೆ ನಡೆಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಅಮೆರಿಕ ಸರ್ಕಾರ ಉಗ್ರ ನಿಗ್ರಹದ ವಿಚಾರವಾಗಿ ಸೋಮವಾರ ತೆಗೆದುಕೊಂಡ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

ರಾಜಕೀಯ ಪಕ್ಷವಾಗಿ ನೋಂದಾಯಿಸಲು ಎಂಎಂಎಲ್ ಇದಕ್ಕೂ ಮುನ್ನ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಹಾಗಾಗಿ ಎಂಎಂಎಲ್ ಗೆ ಉಗ್ರ ಸಂಘಟನೆಗಳೊಂದಿಗೆ ನಂಟಿದೆ ಎಂಬ ಕಾರಣ ನೀಡಿ ಗೃಹ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಎಂಎಂಎಲ್ ಅರ್ಜಿ ತಿರಸ್ಕೃತಗೊಂಡಿತ್ತು. ಅಷ್ಟೇ ಅಲ್ಲದೇ, ರಾಜಕೀಯ ಪಕ್ಷದ ಮಾನ್ಯತೆ ಪಡೆಯಲು ಎಂಎಂಎಲ್ ಮತ್ತೆ ಪ್ರಯತ್ನ ನಡೆಸಿದೆ ಎಂದು ತಿಳಿದು ಬಂದಿದೆ!! ಇನ್ನು ಈ ಬಗ್ಗೆ ಅಮೆರಿಕದ ಡಿಪಾರ್ಟ್‍ಮೆಂಟ್ ಆಫ್ ಸ್ಟೇಟ್ ನ ಉಗ್ರ ನಿಗ್ರಹ ಯೋಜನೆಯ ಸಮನ್ವಯಕಾರನಾದ ನತಾನ್ ಎ ಸೇಲ್ಸ್, “ಎಲ್ ಇಟಿ ತನ್ನನ್ನು ಯಾವೆಲ್ಲ ರೂಪದಲ್ಲಿ ಬಿಂಬಿಸಲು ಪ್ರಯತ್ನಿಸಿದರೂ ಪ್ರಯೋಜನವಿಲ್ಲ. ಅದು ಉಗ್ರ ಸಂಘಟನೆಯೇ ಹೊರತು ಬೇರೇನೂ ಅಲ್ಲ. ಜನರ ಮೇಲೆ ಪ್ರಭಾವ ಬೀರಲು ಹಿಂಸಾಚಾರವನ್ನೇ ಅದು ಬಿಂಬಿಸುತ್ತಿರುವಾಗ, ಪ್ರಜಾಪ್ರಭುತ್ವದ ರಾಜಕೀಯ ಧ್ವನಿ ಅದಕ್ಕೆ ಸಿಗಬಾರದು. ಅದಕ್ಕೆ ಅವಕಾಶ ಕೊಡಲಾರೆವು” ಎಂದು ಹೇಳಿದ್ದಾರೆ!!

ಈಗಾಗಲೇ ಎಂಎಂಎಲ್ ನ 7 ಸದಸ್ಯರನ್ನೂ ಕೂಡ ವಿದೇಶಿ ಉಗ್ರರು ಎಂದು ಪರಿಗಣಿಸಿರುವ ಪೆಂಟಗನ್ ಇಂದು ತನ್ನ ನೂತನ ವಿದೇಶಿ ಉಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಕಿಸ್ಥಾನದ ತೆಹ್ರೀಕ್ ಇ ಆಜಾದಿ ಇ ಕಾಶ್ಮೀರಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳನ್ನು ಉಗ್ರ ಪಟ್ಟಿಗೆ ಸೇರಿಸಿದೆ. ಟಿಎಜೆಕೆ ಸಂಘಟನೆ ಲಷ್ಕರ್ ಇ ತೊಯ್ಬಾ ಅಂಗ ಸಂಘಟನೆಯಾಗಿದ್ದು, ಕಾಶ್ಮೀರದಲ್ಲಿ ಇದು ಕಾರ್ಯಾಚರಣೆ ನಡೆಸುತ್ತಿದೆ. ಈ ಬಗ್ಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ರೀತಿಯ ತಪ್ಪು ಅಥವಾ ಪ್ರಮಾದಗಳಿಲ್ಲದೆ ಈ ಪಟ್ಟಿ ರಚಿಸಲಾಗಿದೆ. ಹಿಂಸಾ ಮನೋಭಾವ ಹೊಂದಿರುವ ಎಲ್ ಇಟಿ, ಎಂಎಂಎಲ್ ಗಳು ರಾಜಕೀಯ ಧನಿಯಾಗುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಹೇಳಿದ್ದಾರೆ.

”ಪಾಕಿಸ್ತಾನದಲ್ಲಿ ಲಷ್ಕರೆ ತಯ್ಬಾ (ಎಇಟಿ) ಮುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ನಿಷೇಧದ ನಂತರ ತೆಹ್ರೀಕ್-ಇ-ಆಜಾದಿ-ಇ-ಕಾಶ್ಮೀರ (ಟಿಎಜೆಕೆ) ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಾಕ್‍ನಲ್ಲಿ ಅನೇಕ ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಇದರೊಂದಿಗೆ ನಿಧಿ ಸಂಗ್ರಹಿಸುತ್ತಿದೆ, ಅಷ್ಟೇ ಅಲ್ಲದೇ ದಾಳಿಗಳನ್ನು ನಡೆಸುತ್ತಿದ್ದು, ತರಬೇತಿ ಸಹ ನೀಡುತ್ತಿದೆ. ಹಾಗಾಗಿ ಟಿಎಜೆಕೆ ಅನ್ನು ಸಹ ವಿದೇಶಿ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಲಾಗಿದೆ,” ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಅಲ್ಲದೆ ಎಂಎಂಎಲ್ ಅಧ್ಯಕ್ಷ ಸೈಫುಲ್ಲಾ ಖಲೀದ್, ಎಲ್‍ಇಟಿ ಪೇಶಾವರ ಪ್ರಧಾನ ಕಚೇರಿಯ ಮುಖ್ಯಸ್ಥನಾಗಿದ್ದು, ಜೆಯುಡಿ ಸಂಘಟನೆಯ ಪಂಜಾಬ್ ಪ್ರಾಂತ್ಯದ ಸಮಸ್ವಯ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದಾನೆ. ಜೆಯುಡಿ ಎಲ್‍ಇಟಿಯ ಅಂಗ ಸಂಸ್ಥೆಯಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟೆ ಅಲ್ಲದೇ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಪಕ್ಷನ್ನು ವಿದೇಶಿ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದ ಅಮೆರಿಕ ಸರಕಾರದ ಕ್ರಮವನ್ನು ಭಾರತ ಸ್ವಾಗತಿಸಿದೆ. ಈ ಕ್ರಮದ ಮೂಲಕ ಉಗ್ರರಿಗೆ ಸ್ವರ್ಗವಾಗಿರುವ ಪಾಕಿಸ್ತಾನದಲ್ಲಿ, ಉಗ್ರರ ಸಂಘನೆಗಳು ಮತ್ತು ಅದಕ್ಕೆ ಸೇರಿದ ವ್ಯಕ್ತಿಗಳ ವಿರುದ್ಧ ಅಲ್ಲಿನ ಸರಕಾರ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.

ಈಗಾಗಲೇ ಸಾಕಷ್ಟು ಬಾರಿ ರೂಪಾಂತರಗೊಂಡಿರುವ ಎಲ್ ಇ ಟಿ 26 ಡಿಸೆಂಬರ್ 2001 ರಂದು ವಿದೇಶಿ ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಿತ್ತು!! ಅಷ್ಟೇ ಅಲ್ಲದೇ 2017ರ ಜನವರಿಯಲ್ಲಿ ಎಲ್ ಇಟಿ ರೂಪ ಬದಲಾಯಿಸಿಕೊಂಡು ಟಿಎಜೆಕೆ ಹೆಸರಿನಲ್ಲಿ ಉಗ್ರ ಚಟುವಟಿಕೆ ಮುಂದುವರಿಸಿತು. ಇನ್ನು, 2017ರ ಆಗಸ್ಟ್ ನಲ್ಲಿ ಎಂಎಂಎಲ್ ಸ್ಥಾಪನೆ- ಟಿಎಜೆಕೆಯ ರಾಜಕೀಯ ಅಂಗವಾಗಿ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ ಎನ್ನುವುದು ತಿಳಿದು ಬಂದಿದೆ!!

ಒಟ್ಟಿನಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ರಾಜಕೀಯಕ್ಕೆ ಧುಮುಕುವ ಉಮೇದಿನಲ್ಲಿರುವ ಮೋಸ್ಟ್ ವಾಂಟೆಂಡ್ ಉಗ್ರ ಸಯ್ಯದ್ ಹಫೀಜ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ಅಮೆರಿಕಾ ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡುವ ಮೂಲಕ ಮತ್ತೊಂದು ಬಾರಿ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ್ದಂತೂ ಅಕ್ಷರಶಃ ನಿಜ!!

source:https://vijaykarnataka.indiatimes.com/news/world/us-designates-paks-hafiz-saeeds-milli-muslim-league-as-terrorist-outfit/articleshow/63599293.cms

– ಅಲೋಖಾ

Editor Postcard Kannada:
Related Post