X

ಪ್ರಜ್ವಲ್ ಲೈಂಗಿಕ ಹಗರಣ : ಪ್ರಧಾನಿ ಮೋದಿ ಏನಂದ್ರು?

ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಮಹಿಳಾ ದೌರ್ಜನ್ಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ‌.

ಅದೆಷ್ಟೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಜ್ವಲ್ ರೇವಣ್ಣ ಅವರಂತಹವರ ಬಗ್ಗೆ ಯಾವುದೇ ರೀತಿಯ ಸಹಿಷ್ಣುತೆ ಇರಬಾರದು ಎಂದಿದ್ದಾರೆ.

ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ‌. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿದ್ದು, ಅವರೇ ಪ್ರಜ್ವಲ್ ದೇಶ ಬಿಟ್ಟು ಹೊರ ಹೋಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾಗಿ ಹೇಳಿದ್ದಾರೆ. ಹಾಗೆಯೇ ಒಕ್ಕಲಿಗರ ಪ್ರಾಬಲ್ಯ ಇರುವ ಕಡೆಗಳಲ್ಲಿ ಮತದಾನ ಮುಗಿದ ಬಳಿಕ ಈ‌ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಈ‌ವಿಷಯ ಒಂದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕ್ರಮ ಕೈಗೊಳ್ಳುವ ಜವಾಬ್ದಾರಿ ಸಹ ರಾಜ್ಯ ಸರ್ಕಾರದ್ದೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಾವಿರಾರು ವಿಡಿಯೋಗಳು ಲಭ್ಯ ಎನ್ನುವುದಾದರೆ, ಅವೆಲ್ಲವನ್ನೂ ಕಾಂಗ್ರೆಸ್ ಮತ್ತು ಜೆ ಡಿ ಎಸ್ ಮೈತ್ರಿಯ ಸಂದರ್ಭದಲ್ಲಿಯೇ ಸಂಗ್ರಹ ಮಾಡಿರುವುದಾಗಿರಬಹುದು. ಯಾವಾಗ ಒಕ್ಕಲಿಗರ ಮತದಾನ ಮುಗಿಯಿತೋ, ಆಗ ಅದೆಲ್ಲವನ್ನೂ ಬಿಡುಗಡೆ ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

ಪ್ರಜ್ವಲ್ ದೇಶ ಬಿಟ್ಟು ಹೋದ ಬಳಿಕ ಈ ವಿಡಿಯೋಗಳು ಬಿಡುಗಡೆ ಆಗಿವೆ. ಹೀಗಾಗಿ ಈ ಪ್ರಕರಣವೇ ಸಂದೇಹಕ್ಕೆ ಎಡೆ ಮಾಡಿ ಕೊಡುತ್ತಿದೆ. ರಾಜ್ಯ ಸರ್ಕಾರಕ್ಕೆ ಮೊದಲೇ ಈ ಬಗ್ಗೆ ಮಾಹಿತಿ ಇತ್ತು ಎಂದಾದರೆ ಆರೋಪಿಯ ಮೇಲೆ ಕಣ್ಞಿಡಬೇಕಾಗಿತ್ತು. ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಬೇಕಾಗಿತ್ತು. ಆದರೆ ನೀವು ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಿಲ್ಲ. ಕಾಂಗ್ರೆಸ್‌ – ಜೆ ಡಿ ಎಸ್ ಮೈತ್ರಿ ಸಮಯದಲ್ಲೇ ಇವೆಲ್ಲವನ್ನೂ ಸಂಗ್ರಹ ಮಾಡಲಾಗಿದೆ. ಯಾವುದೇ ಆರೋಪಿಯನ್ನು ಸುಮ್ಮನೆ ಬಿಡಬಾರದು ಎನ್ನುವುದು ನನ್ನ ಉದ್ದೇಶ. ಇಂತಹ ಆಟಗಳು ಭಾರತದಲ್ಲಿ ನಡೆಯುವುದು ನಿಲ್ಲಬೇಕು ಎಂದು ಪಿ ಎಂ ಹೇಳಿದ್ದಾರೆ.

ಈ ರೀತಿಯ ಅಪರಾಧಗಳನ್ನು ಎಸಗುವ ಆರೋಪಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕು. ಎಲ್ಲಾ ರೀತಿಯ ಕಾನೂನುಗಳನ್ನು ಬಳಸಿ ಇಂಥವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಪ್ರಜ್ವಲ್‌ನನ್ನು ಕರೆತಂದು ಶಿಕ್ಷೆಗೆ ಗುರಿ ಮಾಡಬೇಕು. ಈ ವಿಚಾರದಲ್ಲಿ ಮೀನಾ ಮೇಷ ಸಲ್ಲ ಎಂದು ಅವರು ನುಡಿದಿದ್ದಾರೆ.

Post Card Balaga:
Related Post