X

ಸಿಎಂ ಅವಮಾನಕ್ಕೆ ರಾಹುಲ್ ಎದುರಲ್ಲೇ ಕಣ್ಣೀರಿಟ್ಟ ಕಾಂಗ್ರೆಸ್ ಮುಖಂಡ! ಹಿರಿಯ ನಾಯಕನನ್ನು ತಿರಸ್ಕರಿಸಿ ಹೊರಟ ‘ರಾಗಾ’!

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಂಕಾರ ಕೇವಲ ವಿರೋಧ ಪಕ್ಷ ಅಥವಾ ಜನತೆಯ ಮೇಲೆ ಮಾತ್ರವೇ ನಿರ್ಧರಿತವಾಗಿಲ್ಲ. ಬದಲಾಗಿ ಅವರ ಅಹಂಕಾರ ತಮ್ಮದೇ ಪಕ್ಷದವರ ಮೇಲೂ ನಿರ್ಧರಿತವಾಗಿದೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಸ್ವಪಕ್ಷದ ಮುಖಂಡರನ್ನೂ ಕಡೆಗಣಿಸಿಕೊಂಡು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅನೇಕ ಮುಖಂಡರನ್ನು ಕಳೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಂಸದ ಹೆಚ್.ವಿಶ್ವನಾಥ್ ಸಹಿತ ಅನೇಕ ಕಾಂಗ್ರೆಸ್‍ನ ಹಿರಿಯ ನಾಯಕರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಪಕ್ಷವನ್ನೇ ತ್ಯಜಿಸಿ ಬೇರೆ ಪಕ್ಷವನ್ನು ಸೇರಿಕೊಂಡಿದ್ದು ಈಗ ಇತಿಹಾಸ.

ಇದು ಪಕ್ಷ ಬಿಟ್ಟವರ ಸ್ಥಿತಿಯಾದರೆ ಇನ್ನು ಪಕ್ಷದ ಒಳಗಿರುವ ಸ್ಥಿತಿ ಇನ್ನೂ ಗಂಭೀರ. ತಾನು ಆರಂಭದಿಂದಲೂ ಬೆಳೆದು ಪಕ್ಷವನ್ನು ಬಿಡಲೂ ಆಗದೆ, ಈಗಿನ
ಸ್ಥಿತಿಯಲ್ಲಿ ಅದನ್ನು ಅಪ್ಪಿಕೊಳ್ಳಲೂ ಆಗದೆ, ತ್ರಿಶಂಕು ಸ್ಥಿತಿಯಲ್ಲಿ ಇದ್ದಾರೆ ಕೆಲವು ಕಾಂಗ್ರೆಸ್‍ನ ಹಿರಿಯ ನಾಯಕರು. ಒಂದೆಡೆ ವಿಫಲ ನಾಯಕತ್ವದ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಕಡೆಗಣನೆಯಾಗುತ್ತಿದ್ದರೆ ಮತ್ತೊಂದೆಡೆ ಕರ್ನಾಟಕದಲ್ಲಿ ತನ್ನ ದುರಹಂಕಾರಿ ನಡೆಯಿಂದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬೇಸತ್ತ ಮನಸ್ಸುಗಳು ಮತ್ತೊಂದು ಕಡೆ. ಈ ಎಲ್ಲಾ ಗೊಂದಲಗಳಿಂದ ಪಕ್ಷದಿಂದಲೇ ತೆರೆಮರೆಗೆ ಸರಿದಿರುವ ಕಾಂಗ್ರೆಸ್‍ನ ಹಿರಿಯ ಜೀವಗಳು ಅದೆಷ್ಟೋ. ಅದರಲ್ಲಿ ಪ್ರಮುಖರು ಮಂಗಳೂರಿನ ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ಧನ ಪೂಜಾರಿ.

ಬಿ.ಜನಾರ್ಧನ ಪೂಜಾರಿ. ತನ್ನ ನೇರ ನುಡಿಯಿಂದಲೇ ಹೆಸರು ವಾಸಿಯಾದವರು. ಬಾಲ್ಯ ವಯಸ್ಸಿನಿಂದಲೇ ವಿಶೇಷ ನಾಯಕತ್ವವನ್ನು ಹೊಂದಿಕೊಂಡೇ ಬೆಳೆದವರು. ವೃತ್ತಿಯಲ್ಲಿ ವಕೀಲರಾಗಿ ಸೇವೆಯನ್ನು ಸಲ್ಲಿಸಿ ಸಮಾಜ ಮುಖಿ ಬದಲಾವಣೆಯನ್ನೂ ಮಾಡಿಕೊಂಡು ಬಂದವರು ಬಿ.ಜನಾರ್ಧನ ಪೂಜಾರಿಯವರು. ನಂತರ ಕಾಂಗ್ರೆಸ್ ಪಕ್ಷವನ್ನು ಸೇರಿ ರಾಜಕೀಯದಲ್ಲೂ ಸೇವೆಯನ್ನು ಸಲ್ಲಿಸಿದವರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಅವಧಿಯಲ್ಲಿ ಸಂಸದ ಹಾಗೂ ಸಚಿವರಾಗಿ ಕೆಲಸ ಮಾಡಿದವರು. ಅದರಲ್ಲೂ ಸಂಪುಟದಲ್ಲೇ ಪ್ರಮುಖ ಸ್ಥಾನವಾಗಿರುವ ಕೇಂದ್ರದ ವಿತ್ತ ಸಚಿವ ಸ್ಥಾನವನ್ನೂ ಅಲಂಕರಿಸಿದವರು. ಇಷ್ಟೆಲ್ಲಾ ಅಧಿಕಾರವನ್ನು ಅನುಭವಿಸಿದರೂ ಅಹಂಕಾರವನ್ನು ತೋರ್ಪಡಿಸದೆ ತನ್ನಷ್ಟಕ್ಕೆ ರಾಜಕೀಯದಲ್ಲಿ ಬೆಳೆದವರು ಬಿ.ಜನಾರ್ಧನ ಪೂಜಾರಿ. ಇವರಿಗಿರುವ ಮತ್ತೊಂದು ಹೆಸರೇ ಶುದ್ಧ ಹಸ್ತ ರಾಜಕಾರಣಿ ಎಂದು.

ಇವರ ಇಂತಹ ವ್ಯಕ್ತಿತ್ವವನ್ನು ಕಂಡು ಸ್ವತಃ ದೇಶ ಕಂಡ ಶ್ರೇಷ್ಟ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಕೂಡಾ ಬಾಯ್ತುಂಬ ಹೊಗಳಿದ್ದರು. ಶುದ್ಧ ಹಸ್ತರಾಗಿರುವ ಪೂಜಾರಿಯವರು ನಮ್ಮೊಂದಿಗೆ ಇರಬೇಕಿತ್ತು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಮೋಸ ಮಾಡಿದ ಕಾಂಗ್ರೆಸ್ ಪಕ್ಷ..!

ಇಂತಹಾ ರಾಜಕೀಯ ನೇತಾರನನ್ನು ಕಾಂಗ್ರೆಸ್ ಇಂದು ಯಾವ ಸ್ಥಾನದಲ್ಲಿ ಇಟ್ಟಿದೆ ಎಂಬುವುದನ್ನು ನೋಡಿದರೆ ಸ್ವತಃ ವಿರೋಧ ಪಕ್ಷದ ಕಾರ್ಯಕರ್ತನಿಗೂ ಕಣ್ಣಲ್ಲಿ ನೀರು ಬರುತ್ತೆ. ರಾಜ್ಯದಲ್ಲಿ ಮುಖ್ಯಮಖಂತ್ರಿ ಸಿದ್ದರಾಮಯ್ಯರ ನೇತೃತ್ವದಲ್ಲಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನಾರ್ಧನ ಪೂಜಾರಿಯವರು ಕಾಂಗ್ರೆಸ್ ನಾಯಕರ ಕಾಲ ಕಸಕ್ಕಿಂತಲೂ ಕಡೆಯಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ದುರಾಡಳಿತವನ್ನು ಖಂಡಿಸುತ್ತಲೇ ಅವರಿಗೆ ಎಚ್ಚರಿಕೆಯನ್ನು ನೀಡುತ್ತಲೇ ಇದ್ದವರು ಪೂಜಾರಿ. ಮುಖ್ಯಮಂತ್ರಿಗಳೇ ನೀವು ಹೋಗುತ್ತಿರುವ ದಾರಿ ಸರಿಯಾಗಿಲ್ಲ ಎಂದು ಎಚ್ಚರಿಸುತ್ತಲೇ ಇದ್ದರು ಪೂಜಾರಿಯವರು. ಆದರೆ ಮುಖ್ಯಮಂತ್ರಿಗಳು ಮಾತ್ರ ಪೂಜಾರಿಯವರ ಎಚ್ಚರಿಕೆಯನ್ನು ಕೇಳಿಸಲೇ ಇಲ್ಲ. ಬದಲಾಗಿ ಪೂಜಾರಿಯವರಿಗೇ ಶಿಕ್ಷೆಯನ್ನು ನೀಡಿದ್ದರು. ಪಕ್ಷದ ಕಛೇರಿಗೆ ಪೂಜಾರಿಯವರ ಆಗಮನವನ್ನೇ ನಿಷೇಧಿಸಲಾಯಿತು. ಓರ್ವ ಕೇಂದ್ರದ ಮಾಜಿ ವಿತ್ತ ಸಚಿವನನ್ನು ಯಾವ ರೀತಿ ನೋಡಿಕೊಂಡರೆಂದರೆ ಅಂದೇ ಜನಾರ್ಧನ ಪೂಜಾರಿಯವರು ಕಣ್ಣೀರಿಟ್ಟು ಮುಖ್ಯಮಂತ್ರಿಗಳಿಗೆ ಹಿಡಿ ಶಾಪ ಹಾಕಿ ಬಿಟ್ಟಿದ್ದರು.

ವಾಚಾಮಗೋಚರವಾಗಿ ನಿಂದಿಸಿದ ಸಿಎಂ ಭಂಟ..!

ಇನ್ನು ಜನಾರ್ಧನ ಪೂಜಾರಿಯವರೇ ಬೆಳೆಸಿದ ಕಾಂಗ್ರೆಸ್ ನಾಯಕ, ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈ ಅವರು ತನ್ನನ್ನು ಬೆಳೆಸಿದ ಪೂಜಾರಿಯವರ ಬಗ್ಗೆ ವಾಚಾಮಗೋಚರವಾಗಿ ನಿಂದಿಸುತ್ತಾರೆ. ಏಕವಚನದಲ್ಲಿ ನಿಂದಿಸಿದ್ದು ಮಾತ್ರವಲ್ಲದೆ “ಬೋ…ಮಗ, ಸೂ…ಮಗ” ಎಂದು ಅತ್ಯಂತ ಕೆಳ ಮಟ್ಟದ ಶಬ್ದದ ಮಾತುಗಳಿಂದ ನಿಂದಿಸುತ್ತಾರೆ. ಇದು ಜನಾರ್ಧನ ಪೂಜಾರಿಯವರನ್ನು ಗಧ್ಗದಿತರಾಗುವಂತೆ ಮಾಡುತ್ತದೆ. ಸಾರ್ವಜನಿಕವಾಗಿಯೇ ಸಚಿವರ ಮಾತುಗಳನ್ನು ನೆನೆದು ಕಣ್ಣೀರಿಡುತ್ತಾರೆ. ಬಿಕ್ಕಿ ಬಿಕ್ಕಿ ಅಳುತ್ತಾರೆ. ಕರಾವಳಿಯ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದ ಪೂಜಾರಿ ಅಕ್ಷರಷಃ ಪಕ್ಷದಲ್ಲಿ ಮೂಲೆಗುಂಪಾಗಿ ಬಿಡುತ್ತಾರೆ. ಬಹುತೇಕ ತಾನೇ ಬೆಳೆಸಿದ ಸಚಿವರಾದ ರಮಾನಾಥ ರೈ, ಯುಟಿ ಖಾದರ್ ಹಾಗೂ ಶಾಸಕರಾದ ಅಭಯಚಂದ್ರ ಜೈನ್ ಸಹಿತ ಎಲ್ಲಾ ಶಾಸಕರು ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಕೇಳಿ ಅಧಿಕಾರದ ಆಸೆಗಾಗಿ ಪೂಜಾರಿಯವರನ್ನು ಕಡೆಗಣಿಸುತ್ತಾರೆ. ಪಕ್ಷದ ನಡೆಯ ಬಗ್ಗೆ ಪೂಜಾರಿಯವರು ಎಚ್ಚರಿಕೆ ನೀಡುತ್ತಿದ್ದರು ಎಂಬ ಕಾರಣಕ್ಕಾಗಿಯೇ ಅವರನ್ನು ಮೂಲೆಗುಂಪು ಮಾಡಿಬಿಟ್ಟರು ಕಾಂಗ್ರೆಸ್ ನಾಯಕರು.

ಕಲ್ಲಡ್ಕ ಪರ ಧ್ವನಿ ಎತ್ತಿದ್ದ ಪೂಜಾರಿ…

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕುತಂತ್ರದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರ ನೇತೃತ್ವದ ಶ್ರೀರಾಮ ವಿಧ್ಯಾ ಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನಕ್ಕೆ ಬರುತ್ತಿದ್ದ ಅನ್ನವನ್ನು ನಿಲ್ಲಿಸಿದ್ದರು. ಈ ವೇಳೆ ಕೇವಲ ಭಾರತೀಯ ಜನತಾ ಪಕ್ಷದ ನಾಯಕರು ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ನಾಯಕರಾದ ಪೂಜಾರಿಯವರೂ ಕೂಡಾ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದರು. ಬಡ ಮಕ್ಕಳ ಅನ್ನವನ್ನು ಕಸಿದ ನಿಮಗೆ ಒಳ್ಳೆಯದಾಗಲ್ಲ ಎಂದಿದ್ದರು. ಇದು ಅಹಂಕಾರಿ ರಾಜಕಾರಣಿಗಳ ಕಣ್ಣು ಕೆಂಪಗಾಗಿರಿಸಿತ್ತು. ನಂತರ ಪ್ರಭಾಕರ ಭಟ್ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಮಂಗಳೂರಿಗೆ ಬಂದರೂ ಪೂಜಾರಿ ಭೇಟಿ ಇಲ್ಲ..!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಅದೆಷ್ಟೋ ಬಾರಿ ಮಂಗಳೂರಿಗೆ ಆಗಮನಿಸಿದ್ದರು. ಆದರೆ ಕಾಂಗ್ರೆಸ್‍ನ ಧುರೀಣ ಜನಾರ್ಧನ
ಪೂಜಾರಿಯವರನ್ನು ಸೌಜನ್ಯಕ್ಕೂ ಭೇಟಿ ಮಾಡಲಿಲ್ಲ ಈ ಅಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ. ನೇರವಾಗಿ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜಾ ಅವರ ಮನೆಗೆ ತೆರಳಿ ಹೊಟ್ಟೆ ತುಂಬ ಊಟ ಮಾಡಿ ಅಲ್ಲಿಂದ ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಪೂಜಾರಿಯವರಿಗೆ ಆರೋಗ್ಯ ಕೈಕೊಟ್ಟಿದೆ ಎಂಬ ವಿಚಾರ ಗೊತ್ತಿದ್ದರೂ ಅವರನ್ನು ವಿಚಾರಿಸುವ ಗೋಜಿಗೆ ಹೋಗಲಿಲ್ಲ ಸಿದ್ದರಾಮಯ್ಯ.

ಮತ್ತೆ ಅವಮಾನ ಮಾಡಿದ ಸಿದ್ದರಾಮಯ್ಯ..!

ಅದು ರಾಹುಲ್ ಗಾಂಧಿಯ ಕರಾವಳಿ ಕರ್ನಾಟಕದ ಪ್ರವಾಸ. ಉಡುಪಿಯಿಂದ ನೇರವಾಗಿ ಮಂಗಳೂರಿನ ಕುದ್ರೊಳ್ಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಆಗಮಿಸಿದ ರಾಹುಲ್ ಗಾಂಧಿಯ ಜೊತೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರೂ ಇದ್ದರು. ಆದರೆ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವನೆಂಬ ಕನಿಷ್ಟ ಸೌಜನ್ಯನೂ ತೋರಿಸದೆ ಪೂಜಾರಿಯವರನ್ನು ಕಡೆಗಣಿಸಿಬಿಟ್ಟಿದ್ದರು. ಪೂಜಾರಿಯವರತ್ತ ಮುಖವನ್ನೂ ತಿರುಗಿಸಿ ನೋಡಲಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ಗಳಗಳನೆ ಅತ್ತ ಪೂಜಾರಿ..!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಹಿಂದೆ ತೆರಳೋಣ ಎಂದು ಹೇಳಿದಾಗ ಸ್ವತಃ ಪೂಜಾರಿಯವರೇ ರಾಹುಲ್ ಗಾಂಧಿಯ ಕೈ ಹಿಡಿದು ದೇವಸ್ಥಾನದ ವಠಾರವನ್ನೆಲ್ಲಾ ತೋರಿಸಿದ್ದಾರೆ. ಈ ವೇಳೆ ತನ್ನ ವೇದನೆಯನ್ನು ಹೇಳಿಕೊಳ್ಳಲಾಗದೆ ಪೂಜಾರಿಯವರು ಗಳಗಳನೆ ಅತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಬೀಳ್ಕೊಡುವ ಸಂದರ್ಭದಲ್ಲೂ ರಾಹುಲ್ ಗಾಂಧಿಯ ಕೆನ್ನೆಯನ್ನು ಹಿಡಿದುಕೊಂಡು ಗಳಗಳನೆ ಅತ್ತು ಬಿಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಂಕಾರಿ ಅಧಿಕಾರ ಹಾಗೂ ತನ್ನನ್ನು ಯಾವ ರೀತಿ ಇಂದು ನಡೆಸಿಕೊಳ್ಳುತ್ತಿದ್ದಾರೆ ಎಂಬುವುದನ್ನು ಆ ಕಣ್ಣೀರು ತೋರಿಸಿಕೊಡುತ್ತಿತ್ತು.

ಪ್ರಶ್ನಿಸಲೇ ಇಲ್ಲ ರಾಗಾ..!

ಕುದ್ರೊಳ್ಳಿ ದೇವಸ್ಥಾನಕ್ಕೆ ತೆರಳುತ್ತಿದ್ದಂತೆ ಕಾಂಗ್ರೆಸ್ ನಾಯಕರ ಭಿನ್ನಮತ ಸ್ಪೋಟಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜಾರಿಯವರನ್ನು ಮುಖವೆತ್ತಿಯೂ ಕೂಡಾ ನೋಡಲಿಲ್ಲ. ಮಾತ್ರವಲ್ಲದೆ ಅವರ ಎದುರೇ ಕಣ್ಣೀರಿಟ್ಟಿದ್ದಾರೆ. ಆದರೆ ಇದಿಷ್ಟೂ ಆದರೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸುಮ್ಮನಿದ್ದು ಬಿಡುತ್ತಾರೆ. ತನ್ನ ತಂದೆ ಹಾಗೂ ಅಜ್ಜಿಯ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ಜನಾರ್ಧನ ಪೂಜಾರಿಯವರು. ಸಧ್ಯ ಅವರ ಈ ಹೀನಾಯ ಪರಿಸ್ಥಿತಿಯನ್ನು ಸ್ವತಃ ಅವರೇ ಕಣ್ಣೀರಿನ ಮೂಲಕ ವಿವರಿಸಿದರೂ ರಾಹುಲ್ ಗಾಂಧಿ ತುಟಿಯೇ ಬಿಚ್ಚುತ್ತಿಲ್ಲ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವರಿಗೆ ತನ್ನ ರಾಜ್ಯ ನಾಯಕರನ್ನು ಪ್ರಶ್ನಿಸುವ ಗಟ್ಟಿತನ ಇಲ್ಲವೇ ಎಂಬ ಪ್ರಶ್ನೆಗಳೂ ಮೂಡುತ್ತಿವೆ.

ಒಟ್ಟಾರೆ ಕಾಂಗ್ರೆಸ್ ಧುರೀಣನ ಈ ರೀತಿಯ ಹಿಯಾಳಿಕೆಯಿಂದ ಕರಾವಳಿಯಲ್ಲಿ ಮುಂದಿನ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೋ ಇಲ್ಲವೋ ಎಂಬ ಚಿಂತೆ ಸ್ವತಃ ಕಾಂಗ್ರೆಸ್ ನಾಯಕರಲ್ಲೆ ಮನೆ ಮಾಡಿದೆ. ಮಾತ್ರವಲ್ಲದೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ಅಹಂಕಾರವನ್ನೂ ಬಿಂಬಿಸುತ್ತದೆ ಎಂಬುವುದಕ್ಕೆ ನಿದರ್ಶನವಾಗಿದೆ. ಇದು ಕರಾವಳಿಯಲ್ಲಿ ಕಾಂಗ್ರೆಸ್ ಪತನವಾಗುವ ಎಲ್ಲಾ ಸೂಚನೆಗಳನ್ನೂ ನೀಡುತ್ತಿದ್ದು, ಪೂಜಾರಿಯವರ ಕಣ್ಣೀರೇ ಕಾಂಗ್ರೆಸ್ ಪಕ್ಷಕ್ಕೆ ಶಾಪವಾಗುವ ಸಾಧ್ಯತೆಗಳಿವೆ.

-ಸುನಿಲ್ ಪಣಪಿಲ

Editor Postcard Kannada:
Related Post