X

ಮಹಾನ್ ಶಿವ ಭಕ್ತ ಲಂಕಾಧಿಪತಿ ರಾವಣನಿಗಾಗಿ ಕಟ್ಟಿಸಿದ ಹಲವಾರು ಮಂದಿರಗಳು ಭಾರತದಲ್ಲಿವೆ ಮತ್ತು ಈಗಲೂ ಅಲ್ಲಿ ರಾವಣನನ್ನು ಪೂಜಿಸಲಾಗುತ್ತದೆ!!

ರಾಮಾಯಣದಲ್ಲಿ ಬರುವ ಪೌರಾಣಿಕ ಖಳನಾಯಕ ರಾವಣ. ಸೀತಾಮಾತೆಯನ್ನು ಅಪಹರಣ ಮಾಡಿದ ರಾವಣನ ಬೃಹತ್ ಮೂರ್ತಿ ತಯಾರಿಸಿ ದಸರಾದಂದು ಉತ್ತರ ಭಾರತದಲ್ಲಿ ಸುಡಲಾಗುತ್ತದೆ. ಅದರೆ ಭಾರತದ ಕೆಲವು ಕಡೆಯಲ್ಲಿ ಈಗಲೂ ರಾವಣನ ಪೂಜೆ ನಡೆಸಲಾಗುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ರಾವಣ ಪಖಾಂಡ ಶಿವ ಭಕ್ತ. ತನ್ನ ಕಠೋರ ತಪಸ್ಸಿನಿಂದ ಶಿವನನ್ನೇ ಒಲಿಸಿಕೊಂಡವನು. ಭಾರತದ ಉದ್ದಗಲಗಳಲ್ಲಿಯೂ ರಾವಣ ಚಲಿಸಿದ ಕುರುಹುಗಳಿವೆ. ತನ್ನ ಅಸೀಮ ಬಲದಿಂದ ಆತ ಕೈಲಾಸ ಪರ್ವತವನ್ನೇ ಅಲುಗಾಡಿಸಿದವನು, ಸಾಕ್ಷಾತ್ ಶಿವನಿಂದಲೇ ಲಿಂಗವನ್ನು ಪಡೆದವನು. ಯಧ್ಬಾವಂ ತದ್ಭವತಿ ಎನ್ನುವಂತೆ ಅವರವರ ಭಾವಕ್ಕೆ ಅವರವರ ಭಕುತಿಗೆ ಅನುಗುಣವಾಗಿ ಕೆಲವರು ರಾಮನನ್ನು ಪೂಜಿಸುತ್ತಾರೆ ಮತ್ತೆ ಕೆಲವರು ರಾವಣನನ್ನು. ಇದೆ ಸನಾತನ ಧರ್ಮದ ಸೊಬಗು!!

ಭಾರತದಲ್ಲಿ ಹಲವಾರು ಕಡೆಗಳಲ್ಲಿ ಈಗಲೂ ರಾವಣನಿಗೆ ಪೂಜೆ, ಅರ್ಚನೆ ಮಾಡಲಾಗುತ್ತದೆ. ಕೆಲವರು ತಮ್ಮನ್ನು ತಾವು ರಾವಣನ ವಂಶಸ್ಥರೆಂದೂ ಕರೆದು ಕೊಳ್ಳುತ್ತಾರೆ! ಭಾರತದ ಹಲವಾರು ಕಡೆ ರಾವಣನ ಮಂದಿರಗಳಿವೆ ಅವುಗಳಲ್ಲಿ ಕೆಲವು:

1. ಉತ್ತರ ಪ್ರದೇಶದ ಬಿಸ್ರಖ್:

ಗೌತಮ ಬುದ್ದ ನಗರದಲ್ಲಿರುವ ಈ ಹಳ್ಳಿಯ ಹೆಸರು ಬಿಸ್ರಖ್. ರಾವಣನ ಹುಟ್ಟೂರಾದ ಈ ಹಳ್ಳಿಯ ಹೆಸರು ಪೂರ್ವದಲ್ಲಿ ವಿಶ್ವೇಷ್ವರಾ ಎಂದಾಗಿತ್ತು. ಹಳ್ಳಿಗೆ ಈ ಹೆಸರು ರಾವಣನ ತಂದೆ ವಿಶ್ರವಾ ಋಶಿಯಿಂದಾಗಿ ಬಂದಿತ್ತೆನಲಾಗುತ್ತದೆ. ಈ ಊರಿನಲ್ಲಿ ರಾವಣನನ್ನು ಪೂಜಿಸಲಾಗುತ್ತದೆ. ದಸರಾದಂದು ಇಲ್ಲಿ ರಾವಣನನ್ನು ಸುಡುವ ಪದ್ದತಿ ಇಲ್ಲ. ನವರಾತ್ರಿಯಂದು ರಾವಣನನ್ನು ನೆನೆಸಿ ಕಣ್ಣಿರಿಡುತ್ತಾ ಹೋಮ ಹವನ ಮಾಡುತ್ತಾರೆ ಇಲ್ಲಿನ ಜನರು!

2. ಆಂಧ್ರ ಪ್ರದೇಶದ ಕಾಕಿನಾಡ:

ಪುರಾಣಗಳ ಪ್ರಕಾರ ಸ್ವತಃ ರಾವಣನೇ ಇಲ್ಲಿ ಮಂದಿರವನ್ನು ಕಟ್ಟಿದ್ದನ್ನೆನ್ನಲಾಗುತ್ತದೆ. ತನ್ನ ಆರಾಧ್ಯ ದೈವ ಶಿವನಿಗಾಗಿ ಇಲ್ಲಿ ಮಂದಿರ ಕಟ್ಟಿಸಿ ಪೂಜೆ ಮಾಡುತ್ತಾನೆ ರಾವಣ. ಈ ಮಂದಿರದಲ್ಲಿ ಈಗಲೂ ರಾವಣನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ಬೆಸ್ತ ಸಮುದಾಯದವರು ಪೂಜೆ ಸಲ್ಲಿಸುತ್ತಾರೆ.

3. ಉತ್ತರ ಪ್ರದೇಶದ ಕಾನ್ಪುರ:

ವರ್ಷದಲ್ಲಿ ಒಂದೇ ಬಾರಿ ದಸರಾದಂದು ಮಾತ್ರ ತೆರೆಯಲಾಗುವ ಈ ಮಂದಿರವನ್ನು ಶಿವ ಶಂಕರ ಎಂಬುವರು ಕಟ್ಟಿಸಿದ್ದು. ಇಲ್ಲಿ ರಾವಣನನ್ನು ರಾಕ್ಷಸನಾಗಿ ಅಲ್ಲ ಬದಲಾಗಿ ದೇವತಾ ಸ್ವರೂಪನಾಗಿ ಕಾಣಲಾಗುತ್ತದೆ. ಈ ಮಂದಿರದಲ್ಲಿ ರಾವಣನ ಘನ ಪಾಂಡಿತ್ಯವನ್ನು, ಅವನ ಪ್ರಜಾ ಪ್ರೇಮವನ್ನು ಕೊಂಡಾಡಿ ಆತನನ್ನು ಪೂಜಿಸಲಾಗುತ್ತದೆ.

4. ರಾಜಸ್ಥಾನದ ಜೋಧಪುರ:

ಜೋಧಪುರದಲ್ಲೂ ಲಂಕಾಧಿಪತಿ ರಾವಣನ ಪೂಜೆ ನಡೆಸಲಾಗುತ್ತದೆ. ಇಲ್ಲಿಯ ದವೆ, ಗೋಧಾ ಮತ್ತು ಶ್ರೀಮಾಲಿ ಸಮಾಜದವರು ರಾವಣನನ್ನು ಪೂಜಿಸುತ್ತಾರೆ. ಇವರ ಪ್ರಕಾರ ಜೋಧಪುರ ರಾವಣನ ಮಾವನ ಮನೆಯಾಗಿತ್ತು. ಈ ಸಮುದಾಯದವರು ತಮ್ಮನ್ನು ತಾವು ರಾವಣನ ವಂಶಜರೆಂದು ಪರಿಚಯಿಸಿಕೊಳ್ಳುತ್ತಾರೆ. ಮಂದೌರ್ ನಲ್ಲಿಯೂ ರಾವಣನನ್ನು ದಸರಾದಂದು ದಹಿಸುವ ಪದ್ದತಿಯಿಲ್ಲ. ಇಲ್ಲಿಯ ದವೆ ಬ್ರಾಹ್ಮಣರು ರಾವಣನ ಪೀಳಿಗೆಯ ನೈಜ ವಂಶಸ್ಥರೆಂದು ನಂಬಲಾಗಿದೆ. ಆದ್ದರಿಂದ ದಸರಾದಂದು ಅವರು ಶ್ರಾದ್ಧ ಮತ್ತು ಪಿಂಡದಾನ ಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ.

5. ಮಧ್ಯ ಪ್ರದೇಶದ ಮಂದಸೌರ್:

ಮಂದಸೌರ್ ನ ಖಾನಾಪುರ ಕ್ಷೆತ್ರದ ರೂಂಡೀ ಎಂಬಲ್ಲಿ ರಾವಣನ ವಿಶಾಲ ಕಾಯ ಮೂರ್ತಿಯಿದೆ. ಇಲ್ಲಿಯ ಜನರ ಪ್ರಕಾರ ರಾವಣನ ಪತ್ನಿ ಮಾಂಡೋದರಿ ಮಂದಸೌರ್ ನವಳು. ದಶಪುರ ಎಂಬ ಜಾಗಕ್ಕೆ ಮಂದಸೌರ್ ಹೆಸರು ಬಂದಿರುವುದು ಮಂಡೋದರಿಯಿಂದಾಗಿಯೇ ಎಂಬುದು ಇವರ ಅಂಬೋಣ. ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿಯೂ ರಾವಣನ ಮಂದಿರವಿದೆ.

6.ಮಧ್ಯ ಪ್ರದೇಶದ ಉಜ್ಜಯಿನಿ:

ಉಜ್ಜಯಿನಿಯ ಚಿಖಲೀ ಗ್ರಾಮದಲ್ಲಿ ರಾವಣನ ಬಗ್ಗೆ ತಲೆತಲಾಂತರದಿಂದ ಪಾಲಿಸಿ ಕೊಂಡು ಬಂದ ಒಂದು ನಂಬಿಕೆ ಇದೆ. ಈ ಗ್ರಾಮದಲ್ಲಿ ರಾವಣನಿಗೆ ಪೂಜೆ ಕೊಡದಿದ್ದರೆ ಇಡಿಯ ಗ್ರಾಮವೇ ಭಸ್ಮವಾಗುವುದೆಂಬ ನಂಬಿಕೆ ಇದೆ. ಆದ್ದರಿಂದಲೇ ದಸರಾದಂದು ಇಲ್ಲಿ ರಾವಣನ ಮೂರ್ತಿಯನ್ನು ಸುಡುವುದಿಲ್ಲ ಬದಲಾಗಿ ಆತನಿಗೆ ಪೂಜೆ ಮಾಡಲಾಗುತ್ತದೆ.

7.ಕರ್ನಾಟಕದ ಕೋಲಾರ:

ಕರ್ನಾಟಕದ ಕೋಲಾರದಲ್ಲಿ ಫಸಲು ಮಹೋತ್ಸವದಂದು ರಾವಣನ ಪೂಜೆ ಮಾಡುತ್ತಾರೆ ಎನ್ನಲಾಗುತ್ತದೆ. ರಾವಣ ಮಹಾನ್ ಶಿವ ಭಕ್ತ, ಆದ್ದರಿಂದ ಲಂಕೇಶ್ವರ ಮಹೋತ್ಸವದಂದು ಶಿವನ ಜೊತೆ ರಾವಣನ ಪ್ರತಿಮೆಯನ್ನಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಮಂಡ್ಯದ ಮಳವಳ್ಳಿ ತಾಲೂಕಿನಲ್ಲೂ ರಾವಣನಿಗೆ ಸಮರ್ಪಿತ ಮಂದಿರವಿದೆಯೆನ್ನಲಾಗುತ್ತದೆ.

8. ಮಹಾರಾಷ್ಟ್ರದ ಅಮರಾವತಿ ಮತ್ತು ಗಢಚಿರೌಲೀ:

ಮಹಾರಾಷ್ಟ್ರದ ಈ ಎರಡೂ ಹಳ್ಳಿಗಳಲ್ಲಿಯೂ ಕೋರಕ ಮತ್ತು ಗೋಂಡಾ ಆದಿವಾಸಿಗಳಿಂದ ರಾವಣ ಪೂಜಿಸಲ್ಪುಡುತ್ತಾನೆ. ಫಾಲ್ಗುಣದ ನಿಶ್ಚಿತ ದಿನದಂದು ರಾವಣನಿಗೆ ಪೂಜೆ ಸಲ್ಲಿಸಲಾಗುತ್ತದೆ.

9. ಉತ್ತರ ಪ್ರದೇಶದ ಇಟಾವಾ:

ಇಟಾವದ ಜಸವಂತ ನಗರದಲ್ಲಿ ದಸರಾದಂದು ರಾವಣನನ್ನು ಸುಡುವುದಿಲ್ಲ ಬದಲಾಗಿ ಆತನ ಪ್ರತಿಮೆಗೆ ಮೊದಲು ಆರತಿ ಎತ್ತಿ ಪೂಜೆ ಮಾಡಲಾಗುತ್ತದೆ. ತದನಂತರ ಆ ಪ್ರತಿಮೆಗೆ ಹೊಡೆದು-ಬಡಿದು ಪ್ರತಿಮೆಯನ್ನು ತುಂಡರಿಸಲಾಗುತ್ತದೆ. ಪ್ರತಿಮೆಯ ತುಂಡುಗಳನ್ನು ಜನರು ತಮ್ಮ ಮನೆಗೆ ಎತ್ತಿಕೊಂಡು ಹೋಗುತ್ತರೆ. ಇದಾದ ಹದಿಮೂರನೇ ದಿನ ರಾವಣನಿಗೆ ಉತ್ತರಕ್ರಿಯಾ ವಿಧಾನಗಳನ್ನು ನಡೆಸುವ ಅತಿ ವಿಶಿಷ್ಟ ಪದ್ದತಿಯನ್ನು ಇಲ್ಲಿನ ಜನರು ಅನುಸರಿಸುತ್ತಾರೆ!

10. ಹಿಮಾಚಲ ಪ್ರದೇಶದ ಕಾಂಗಡಾ:

ಹಿಮಾಚಲದ ಕಾಂಗಡಾ ಎಂಬ ಊರಿನ ಬೈಜನಾಥದಲ್ಲಿ ರಾವಣ ಪ್ರತಿಮೆಯನ್ನು ಸುಡುವುದು ಮಹಾಪಾಪ. ಇಲ್ಲಿಯ ಜನರ ಪ್ರಕಾರ ರಾವಣ ಇದೇ ಸ್ಥಳದಲ್ಲಿ ಒಂಟಿ ಕಾಲಿನಲ್ಲಿ ನಿಂತು ಶಿವನ ತಪಸ್ಸನ್ನು ಮಾಡಿ ಭಗವಂತನನ್ನು ಒಲಿಸಿ ಕೊಂಡದ್ದು. ಬೈಜನಾಥದ ಬಿನವಾ ಸೇತುವೆಯ ಪಕ್ಕ ಮಂದಿರವಿದೆ. ಇಲ್ಲಿ ಶಿವಲಿಂಗದ ಪಕ್ಕ ಒಂದು ವಿಶಾಲ ಪಾದದ ಅಚ್ಚು ಇದೆ. ಈ ಪಾದದಚ್ಚು ರಾವಣನದ್ದೆನ್ನಲಾಗುತ್ತದೆ.

ರಾವಣ ವರ್ಣದಲ್ಲಿ ಬ್ರಾಹ್ಮಣನಾದರೂ ಆತನ ಕುಕರ್ಮಗಳಿಂದಾಗಿ ರಾಕ್ಷಸನೆನಿಸಿಕೊಳ್ಳುತ್ತಾನೆ. ಅದೆ ಭಕ್ತ ಪ್ರಹ್ಲಾದ ರಾಕ್ಷಸ ಕುಲದಲ್ಲಿ ಹುಟ್ಟಿಯೂ ಬ್ರಹ್ಮ ಜ್ಞಾನವನ್ನು ಪಡೆದ ಬ್ರಾಹ್ಮಣನಾಗುತ್ತಾನೆ. ಮನುಷ್ಯನ ಕರ್ಮಗಳೇ ಆತನನ್ನ ದೇವರನ್ನಾಗಿಸುತ್ತದೆ ಇಲ್ಲವೇ ದಾನವನನ್ನಾಗಿಸುತ್ತದೆ. ಮನುಷ್ಯ ನ ಕರ್ಮಗಳಿಗನುಗುಣವಾಗಿ ಫಲ ನಿಶ್ಚಿತವಾಗುತ್ತದೆ. ಕರ್ಮಕ್ಕೆ ತಕ್ಕ ಫಲ. ರಾವಣನ ಮಹಾನ್ ಶಿವ ಭಕ್ತನಾದರೂ, ಪ್ರಜೆಗಳನ್ನು ತನ್ನ ಮಕ್ಕಳಂತೇ ಕಂಡವನಾದರೂ ಒಬ್ಬ ವಿವಾಹಿತ ಸ್ತ್ರೀಯನ್ನು ಆಕೆಯ ಇಚ್ಚೆಗೆ ವಿರುದ್ದವಾಗಿ ಅಪಹರಣ ಮಾಡಿ ಬಂಧಿಯಾಗಿಸಿದ್ದು ಕುಕರ್ಮ. ಕುಕರ್ಮಕ್ಕೆ ಮೃತ್ಯುದಂಡವೇ ಫಲ.

source :http://www.india.com/buzz/6-ravana-temples-in-india-you-need-to-visit-atleast-once-in-your-life-609985/

  • ಶಾರ್ವರಿ
Editor Postcard Kannada:
Related Post