X

ಅಂಬರೀಶ್‍ಗೆ ಬಿಗ್ ಶಾಕ್ ನೀಡಿದ ಸಿಎಂ! ರೆಬೆಲ್ ಸ್ಟಾರ್ ವಿರುದ್ಧವೇ ರೆಬೆಲ್ ಆದ ಸಿದ್ದರಾಮಯ್ಯ!

ಅವರು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತು. ಒಂದೊಮ್ಮೆ ಕಾಂಗ್ರೆಸ್ ಪಕ್ಷವನ್ನು ಬಾಯ್ತುಂಬ ಹೊಗಳಿದರೆ ಮತ್ತೊಮ್ಮೆ ಅದೇ ಪಕ್ಷವನ್ನು ಜಾಡಿಸಿಬಿಡುತ್ತಾರೆ. ಒಂದೊಮ್ಮೆ ತಮ್ಮ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಾಯ್ತುಂಬ ಹೊಗಳಿದರೆ ಮತ್ತೊಮ್ಮೆ ವಿರೋಧ ಪಕ್ಷದ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಾರೆ. ಹೌದು… ಅವರು ಮತ್ಯಾರೂ ಅಲ್ಲ. ಅವರೇ ಕನ್ನಡ ಸಿನಿ ನಟ ಹಾಗೂ ಮಂಡ್ಯದ ಕಾಂಗ್ರೆಸ್ ಶಾಸಕ ಅಂಬರೀಶ್.

ಚಿತ್ರರಂಗದಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದ ಅಂಬರೀಶ್ ರೆಬೆಲ್ ಸ್ಟಾರ್ ಆಗಿ ಮಿಂಚಿದ್ದರು. ಅಂಬರೀಶ್ ಕೇವಲ ಚಿತ್ರರಂಗದಲ್ಲಿ ಮಾತ್ರವೇ ರೆಬೆಲ್ ಆಗದೆ ನಿಜಜೀವನದಲ್ಲೂ ರೆಬೆಲ್ ಆಗಿರುತ್ತಿರುವ ವಿಚಾರ ಇದೀಗ ಹೊಸದೇನಲ್ಲ. ಅಂತೆಯೇ ಅವರು ತನ್ನ ರಾಜಕೀಯ ಕ್ಷೇತ್ರದಲ್ಲೂ ರೆಬೆಲ್ ಆಗಿ ಪಕ್ಷಕ್ಕೇ ಮುಜುಗರ ತರುತ್ತಿರುತ್ತಾರೆ. ತನ್ನದೇ ರಾಜಕೀಯ ಶೈಲಿಯನ್ನು ತೋರ್ಪಡಿಸುತ್ತಿರುವ ಅಂಬರೀಶ್ ಇದೀಗ ಮತ್ತೆ ತನ್ನ ರಾಜಕೀಯ ಅಸಮಧಾನವನ್ನು ತೋರಿಸುತ್ತಿದ್ದಾರೆ.

ಕೇಳದೆನೇ ಟಿಕೆಟ್ ಕೊಟ್ಟ ಕಾಂಗ್ರೆಸ್..,!

ತನಗೆ ಟಿಕೆಟ್ ಬೇಕು ಅಂತ ಅಂಬರೀಶ್ ಅವರು ಈ ಬಾರಿ ಕೇಳಲೇ ಇಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹಿತ ಅನೇಕ ಮುಖಂಡರು ಈ ಬಾರಿಯೂ ಅಂಬರೀಶ್ ಅವರೇ ಮಂಡ್ಯದಲ್ಲಿ ಸ್ಪರ್ಧಿಸಬೇಕೆಂಬ ಒಲವನ್ನು ಹೊಂದಿದ್ದರು. ಒಂದು ವೇಳೆ ಅಂಬರೀಶ್ ಸ್ಪರ್ಧಿಸದಿದ್ದರೆ ಅವರು ತಮ್ಮ ಸ್ಥಾನದಿಂದ ತಟಸ್ಥರಾಗುತ್ತಾರೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ತಮ್ಮ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲಿ ಸೋಲಿಸುತ್ತಾರೆ. ಹೀಗಾಗಿಯೇ ಅವರು ಟಿಕೆಟ್‍ಗಾಗಿ ಯಾವುದೇ ಅರ್ಜಿ ಹಾಕದೇ ಸುಮ್ಮನಿದ್ದರು. ಆದರೂ ಕಾಂಗ್ರೆಸ್ ನಾಯಕರು ಅವರ ಅನಿವಾರ್ಯತೆಯನ್ನು ಅರಿತುಕೊಂಡು ಟಿಕೆಟ್ ನೀಡಿದ್ದರು.

 

ಬಿ-ಫಾರಂ ಕೊಳ್ಳಲೇ ಇಲ್ಲ ಅಂಬರೀಶ್..!

ಕೇಳದೆನೇ ಟಿಕೆಟ್ ನೀಡಿದ್ದರೂ ಅಂಬರೀಶ್ ಮಾತ್ರ ತನ್ನ ರೆಬೆಲ್‍ತನದಿಂದ ಹೊರ ಬರಲೇ ಇಲ್ಲ. ತಮ್ಮ ಪಕ್ಷದ ಮುಖಂಡರಾದ ಕೆಜೆ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಸಹಿತ ಕಾಂಗ್ರೆಸ್ ದಿಗ್ಗಜರೇ ಬಿ-ಫಾರಂ ಹಿಡಿದುಕೊಂಡು ಅಂಬರೀಶ್ ಮನೆಗೆ ಹುಡುಕುತ್ತಾ ಹೋಗಿದ್ದರು. ಆದರೂ ಅಂಬರೀಶ್ ಕಾಂಗ್ರೆಸ್ ನಾಯಕರ ಕೈಗೆ ಸಿಗಲೇ ಇಲ್ಲ. ಅಂಬರೀಶ್ ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದಿದ್ದರು. ಈ ಹಿಂದೆ ತನ್ನನ್ನು ಸಚಿವ ಸ್ಥಾನದಿಂದ ಕಿತ್ತೆಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ವಿರುದ್ಧ ಅಸಮಧಾನವನ್ನು ಹೊಂದಿದ್ದರು.

ಉಸ್ತುವಾರಿ ಕೊಡ್ತೀರಾ ಬರ್ತೀನಿ..!

ಈ ಮಧ್ಯೆ ಅಂಬರೀಶ್ ಅವರೊಂದಿಗೆ ಸಂಧಾನ ಮಾಡಲು ಹೋಗಿದ್ದ ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್‍ಗೆ ಶಾಕ್ ಕಾದಿತ್ತು. ಅಂಬರೀಶ್ ಜಾರ್ಜ್ ಮುಂದೆ ಅತಿದೊಡ್ಡ ಬೇಡಿಕೆಯೊಂದನ್ನು ಇಟ್ಟಿದ್ದರು. ಮುಂದಿನ ಸರಕಾರದಲ್ಲಿ ತನಗೆ ಉಸ್ತುವಾರಿ ಸಚಿವ ಸ್ಥಾನವನ್ನು ಕೊಡುತ್ತೇವೆಂದು ಈಗಲೇ ಬರೆದುಕೊಡಿ, ನಾನು ಬಿ-ಫಾರಂ ಸ್ವೀಕರಿಸುತ್ತೇನೆ. ಇಲ್ಲವಾದಲ್ಲಿ ನನಗೆ ಅಗತ್ಯವಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಬಿಟ್ಟಿದ್ದರು. ಇದು ಸ್ವತಃ ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್‍ಗೂ ಒಮ್ಮೆ ದಿಗಿಲು ಬಡಿದ ಹಾಗಿತ್ತು. ಬಂದ ದಾರಿಗೆ ಸುಂಕವಿಲ್ಲ ಎಂದು ಜಾರ್ಜ್ ವಾಪಾಸಾಗಿದ್ದರು.

ಡೋಂಟ್ ಕ್ಯಾರ್ ಎಂದ ಸಿದ್ದರಾಮಯ್ಯ..!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಬರೀಶ್ ನಡೆಗೆ ಗರಂ ಆಗಿದ್ದಾರೆ. ಒಮ್ಮೆ ಅಂಬರೀಶ್ ಅವರನ್ನು ಹುಡುಕಿಕೊಂಡು ಹೋಗುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಹೋಗಲ್ಲ ಹೋಗಲ್ಲ ಹೋಗಲ್ಲ ಎಂದು ಮೂರು ಬಾರಿ ಹೇಳಿ ತಮ್ಮ ಹಠವನ್ನೂ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳೇ ತಮ್ಮ ಕಾಲ ಬುಡಕ್ಕೆ ಬರಲಿ ಎಂದು ಕಾದುಕುಳಿತಿದ್ದ ಅಂಬರೀಶ್‍ಗೆ ಬಿಗ್ ಶಾಕ್ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಹಠ ಕಾಂಗ್ರೆಸ್‍ಗೆ ಭಾರೀ ನಷ್ಟ ತಂದು ಕೊಡುತ್ತದೆ ಎಂದೂ ಹೇಳಲಾಗುತ್ತಿದೆ.

ಒಟ್ಟಾರೆ ಮಂಡ್ಯಾದಲ್ಲಿ ಕಾಂಗ್ರೆಸ್‍ಗೆ ಅಂಬರೀಶ್ ಅವರ ಪವರ್ ಏನೆಂಬುವುದು ಅರ್ಥವಾಗಿದೆ. ತಮ್ಮದೇ ಪಕ್ಷದ ವಿರುದ್ಧ ತೊಡೆ ತಟ್ಟಿರುವ ಅಂಬರೀಶ್ ಕನಿಷ್ಟ ಬಿ-ಫಾರಂ ಪಡೆಯದೆ ಇರುವುದು ಕೂಡಾ ಅಚ್ಚರಿ ಮೂಡಿಸಿದೆ. ಆದರೆ ಎಲ್ಲಾ ಕಾಂಗ್ರೆಸ್ ನಾಯಕರು ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಮ್ಮ ಕಾಲಬುಡಕ್ಕೆ ಬರಬೇಕು ಎನ್ನುವ ಅಂಬರೀಶ್‍ಗೆ ಇದೀಗ ಹಿನ್ನೆಡೆಯಾಗಿದೆ. ಕಾಂಗ್ರೆಸ್‍ನ ಈ ಹೈಡ್ರಾಮ ಇನ್ನಾವ ಮಟ್ಟಕ್ಕೆ ಇಳಿಯುತ್ತೋ ಕಾದು ನೋಡಬೇಕಾಗಿದೆ.

-ಏಕಲವ್ಯ

Editor Postcard Kannada:
Related Post