X

ಕಾಂಗ್ರೆಸ್ ಶಾಸಕನ ವಿರುದ್ಧ ಸಿಡಿದೆದ್ದ ಸಂತ! ಏಕವಚನದಲ್ಲಿ ನಿಂದಿಸಿದ ಹಿಂದೂ ವಿರೋಧಿ ಶಾಸಕನ ವಿರುದ್ಧ ತೊಡೆತಟ್ಟಿದ ಭಜರಂಗಿಗಳು!!

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು ಕಾಂಗ್ರೆಸ್‍ನ ಶಾಸಕರವರೆಗೂ ಈಗ ಈ ಹಿಂದೆ ಮಾಡಿದ್ದ ಅಷ್ಟೂ ಅವಾಂತರಗಳ ಪಾಪವನ್ನು ಅನುಭವಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಒಂದಲ್ಲಾ ಒಂದು ಕಾರಣದಿಂದ ಕಾಂಗ್ರೆಸ್ ಶಾಸಕರು ಗೂಂಡಾಗಿರಿಯಲ್ಲಿ ತೊಡಗಿಕೊಂಡು ತಮ್ಮ ಅಹಂಕಾರವನ್ನು ಪ್ರದರ್ಶಿಸುತ್ತಲೇ ಇದ್ದಾರೆ. ಚುನಾವಣಾ ಸಮಯದಲ್ಲಿ ಇಂತಹಾ ಅವಾಂತರಗಳು ಬೇಕಾ ಎನ್ನುವಷ್ಟರಲ್ಲೇ ಮತ್ತೊಂದು ಮಗದೊಂದು ಎನ್ನುವ ಹಾಗೆ ಪ್ರಕರಣಗಳನ್ನು ಎದುರಿಸುತ್ತಲೇ ಇದ್ದಾರೆ ಕಾಂಗ್ರೆಸ್‍ನ ಶಾಸಕರು.

ಮೂಡುಬಿದಿರೆಯಲ್ಲಿ ನಡೆದಿತ್ತು ಸಾರ್ವಜನಿಕ ಶನಿಪೂಜಾ ಕಾರ್ಯಕ್ರಮ…

ದಿನಾಂಕ 11.03.2018ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಅರ್ಜುನಾಪುರ ಎಂಬಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ
ವತಿಯಿಂದ ಸಾರ್ವಜನಿಕ ಶ್ರೀ ಶನೀಶ್ಚರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಆಶೀರ್ವಾಚನವನ್ನು ನೀಡಲು
ಮೂಡುಬಿದಿರೆಯ ಕರಿಂಜೆ ಸಂಸ್ಥಾನದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಆಗಮಿಸಿದ್ದರು. ಮುಖ್ಯ ಭಾಷಣವನ್ನು ತುಳು ಅಖಾಡೆಮಿಯ ಸದಸ್ಯ, ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್‍ಸರ್ ಮಾಡಿದ್ದರು. ಆ ವೇದಿಕೆಯಲ್ಲಿ ಬಜರಂಗದಳದ ಮೂಡುಬಿದಿರೆ ಪ್ರಖಂಡ ಸಂಚಾಲಕ ಸೋಮನಾಥ್ ಕೋಟ್ಯಾನ್ ಕೂಡಾ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಆಶೀರ್ವಾಚನವನ್ನು ನೀಡಿದ್ದ ಶ್ರೀಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. “ರಾಜ್ಯದಲ್ಲಿ ರಾವಣನ ಅಧಿಕಾರ ನಡೆಯುತ್ತಿದೆ. ಅದನ್ನು ಹೋಗಲಾಡಿಸಿ ರಾಮ ರಾಜ್ಯ ನಿರ್ಮಾಣವಾಗುವತ್ತ ಹೆಜ್ಜೆ ಇಡಬೇಕು” ಎಂದು ಹೇಳಿದ್ದರು. ಶ್ರೀಗಳು ಎಂದಿನ ಶೈಲಿಯಂತೆಯೇ ಭಾಷಣವನ್ನು ಮಾಡಿ ಮುಗಿಸಿದ್ದರು. ಆದರೆ ನಂತರ ನಡೆದದ್ದೇ ಬೇರೆ.

ದೂರು ಹೇಳಿದ ಕಾಂಗ್ರೆಸ್ ಮೆಂಬರ್..!

ಶ್ರೀಗಳು ಭಾಷಣ ಮಾಡಿದ ಮರುದಿನವೇ ಮೂಡುಬಿದಿರೆ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಬಳಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನೋರ್ವ ದೂರು ನೀಡಿ ಇಲ್ಲ ಸಲ್ಲದ ಆರೋಪಗಳನ್ನು ಹಾಕಿದ್ದಾನೆ ಎನ್ನಲಾಗಿದೆ. ಮೊದಲೇ ಮುಂಗೋಪಿಯಾಗಿರುವ ಶಾಸಕ ಅಭಯ ಚಂದ್ರ ಜೈನ್ ಅವರು ಶ್ರೀಗಳಲ್ಲಿ ಅಥವಾ ಸ್ಥಳೀಯ ಇತರೆ ಯಾವುದೇ ನಾಯಕರಲ್ಲಿ ಮಾಹಿತಿಯನ್ನು ಪಡೆಯದೆ ಶ್ರೀಗಳ ವಿರುದ್ಧ ವಾಚಾಮಗೋಚರವಾಗಿ ನಿಂದಿಸಿದ್ದಾರೆ. ತಾನು ಓರ್ವ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಂಬುವುದನ್ನೂ ಮರೆತು ತನ್ನ ನೀಚ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದ್ದಾರೆ.

ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ..!

ಶ್ರೀಗಳ ವಿರುದ್ಧ ಕೇವಲವಾಗಿ ಆರೋಪ ನಡೆಸಿರುವ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಸ್ವಾಮೀಜಿ ಬಗ್ಗೆ ಏಕ ವಚನದಲ್ಲಿ ನಿಂದಿಸುತ್ತಾರೆ. “ಅವನು
ಯಾವನೇ ಸ್ವಾಮೀಜಿಯಾಗಲಿ ನಾನು ಸುಮ್ಮನೆ ಬಿಡೋದಿಲ್ಲ. ನನ್ನನ್ನು ಆತ ರಾಕ್ಷಸನೆಂದು ಕರೆದಿದ್ದಾನೆ. ಆದರೆ ಅದು ಪರವಾಗಿಲ್ಲ. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಾಕ್ಷಸ ಎಂದಿದ್ದಾನೆ. ನಾನು ಸುಮ್ಮನೆ ಬಿಡೋದಿಲ್ಲ. ಸರ್ಕಾರಿ ಜಾಗಗಳನ್ನು ಕಬಳಿಸಿ ದೇವಸ್ಥಾನವನ್ನು ನಿರ್ಮಿಸಿದ್ದಾನೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಭಾಷಣ ಬಿಗಿದಿದ್ದರು.

ಸಿಡಿದೆದ್ದ ಶ್ರೀಗಳಿಂದ ಸ್ಪಷ್ಟನೆ…

ಮೂಡುಬಿದಿರೆಯ ಕಾಂಗ್ರೆಸ್ ಶಾಸಕ ಇಂತಹ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಮೂಡುಬಿದಿರೆಯ ಕರಿಂಜೆ ಸಂಸ್ಥಾನದ ಶ್ರೀಶ್ರೀಶ್ರೀ ಮುಕ್ತಾನಂದ ಸ್ವಾಮೀಜಿಗಳು ಸಿಡಿದೆದ್ದಿದ್ದಾರೆ. ಸ್ವತಃ ಮೂಡುಬಿದಿರೆ ಶಾಸಕರಿಗೇ ಶ್ರೀಗಳು ಸವಾಲು ಹಾಕಿದ್ದಾರೆ. ಈವರೆಗೂ ಯಾವುದೇ ರಾಜಕೀಯ ವ್ಯಕ್ತಿಗಳಿಗೂ ಅಥವಾ ರಾಜಕೀಯ ಪಕ್ಷಗಳನ್ನೂ ಗುರಿಯಾಗಿಸಿ ಮಾತನಾಡದ ಶ್ರೀಗಳು ಇದೀಗ ಸ್ವತಃ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಂತರ ಸವಾಲ್…

“ಮೂಡುಬಿದಿರೆಯ ಶಾಸಕ ಅಭಯ ಚಂದ್ರ ಜೈನ್‍ರೇ, ನೀವು ನನ್ನನ್ನು ಏಕವಚನದಲ್ಲಿ ನಿಂದಿಸಿದ್ದೀರಿ. ನಾನು ಯಾವುದೇ ಕಾರಣಕ್ಕೂ ನಿಮ್ಮನ್ನಾಗಲಿ ಅಥವಾ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನಾಗಲಿ ರಾಕ್ಷಸ ಎಂದು ಸಂಭೋಧಿಸಲೇ ಇಲ್ಲ. ಆದರೂ ಯಾರೋ ನಿಮ್ಮ ಬಳಿ ಈ ರೀತಿ ಹೇಳಿದರೆಂದ ಮಾತ್ರಕ್ಕೆ ನೀವು ನನ್ನ ಮೇಲೆ ಪ್ರಹಾರವನ್ನು ಮಾಡಿ ತಪ್ಪು ಮಾಡಿದ್ದೀರಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದು ನಿಮ್ಮ ಅಧಿಕಾರದ ನಾಶದ ಸಂಕೇತ. ನಾನು ಹಿಂದೂ ಧರ್ಮದ ಹಾಗೂ ಹಿಂದೂ ಸಂಘಟನೆಯ ಯುವಕರ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಯಾವುದೇ ಕಾರಣಕ್ಕೂ ಒಂದು ನಿರ್ಧಿಷ್ಟ ಪಕ್ಷವನ್ನು ತಳೆದು ಮಾತನಾಡಿದವನಲ್ಲ. ಆದರೆ ನೀವು ನನ್ನ ಮೇಲೆ ಸುಕಾ ಸುಮ್ಮನೆ ಆರೋಪ ಮಾಡಿ ತಪ್ಪು ಮಾಡಿದ್ದೀರಿ. ನಾನು ಸರ್ಕಾರದ ಅಕ್ರಮ ಜಾಗದಲ್ಲಿ ಮಠವನ್ನು ಕಟ್ಟಿ ನೆಲೆಸಿದ್ದೇನೆ ಎಂದು ಹೇಳಿದ್ದೀರಿ. ಇದು ಸತ್ಯಕ್ಕೆ ದೂರವಾಗಿದೆ. ನೀವು ಯಾವ ಕ್ರಮವನ್ನು ಕೈಗೊಳ್ಳುತ್ತೀರೋ ಕೈಗೊಳ್ಳಿ. ನಾನು ಕಟ್ಟಿರುವ ಆಶ್ರಮ ಹಾಗೂ ಮಠದ 6 ಎಕರೆ ಜಾಗವೂ ನಾನು ಖರೀದಿಸಿರುವ ಪಟ್ಟ ಜಾಗವಾಗಿದ್ದು ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ನೀವು ಏನು ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ” ಎಂದು ಹೇಳಿದ್ದಾರೆ.

ಮಾತ್ರವಲ್ಲದೆ ಹಿಂದೂ ಯುವಕರ ಕೆಲಸವನ್ನೂ ಶಾಸಕರಿಗೆ ಮನಮುಟ್ಟುವಂತೆ ಮಾಡಿದ್ದ ಶ್ರೀಗಳು, “ನಮ್ಮ ಹಿಂದೂ ಸಂಘಟನೆಯ ಯುವಕರು ಹಿಂದೂ
ಧರ್ಮವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಗೋರಕ್ಷಣೆಗೆ ತಮ್ಮ ಜೀವವನ್ನೇ ನೀಡಿದ್ದಾರೆ. ಆದರೆ ನೀವು ಏನು ಮಾಡಿದ್ದೀರಿ. ಹೀಗೆ ಕೆಲಸ ಮಾಡುವ ಯುವಕರ ಮೇಲೆ ಕೇಸ್ ಜಡಿದು ಜೈಲಿಗಟ್ಟುತ್ತಿದ್ದೀರಿ. ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿಯ ಕೊಲೆ ಆಗಿತ್ತು. ಆದರೆ ನೀವು ಸೌಜನ್ಯಕ್ಕಾದರೂ ಆತನ ಮನೆಗೆ ಭೇಟಿ ನೀಡಿ ಸಂತಾಪವನ್ನು ಸೂಚಿಸಿದ್ದೀರಾ? ನಮ್ಮ ಹಿಂದೂ ಯುವಕರು ಕರೆದರೆ ನಾನು ಎಲ್ಲಿ ಹೋಗಲೂ ಸಿದ್ದನಿದ್ದೇನೆ. ಧರ್ಮವನ್ನು ರಕ್ಷಿಸುವ ಕಾರ್ಯ ಅವರಿಂದ ನಡೆಯುತ್ತಿದೆ. ಈ ಕಾರ್ಯಕ್ಕೆ ನಾನು ಬೆಂಬಲವನ್ನು ನೀಡುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ” ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಯಾಕೆ ತಾತ್ಸಾರ?

ಮೂಡುಬಿದಿರೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯಾಗುತ್ತೆ ಆದರೆ ಇಲ್ಲಿನ ಶಾಸಕರು ಯಾವುದೇ ಕ್ರಮವನ್ನೂ
ಕೈಗೊಳ್ಳಲಿಲ್ಲ. ಆತನ ಮನೆಗೆ ಪರಿಹಾರ ಕೊಡುವುದು ಬಿಡಿ, ಕನಿಷ್ಟ ಭೇಟಿಯನ್ನೂ ಮಾಡಿಲ್ಲ. ಅಷ್ಟೊಂದು ದುರಾಹಂಕಾರಿ ಶಾಸಕರಾಗಿದ್ದಾರೆ. ಮಾತ್ರವಲ್ಲದೆ ಬಿಸಿ ರೋಡಿನಲ್ಲಿ ಹತ್ಯೆಗೀಡಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳನ ಮನೆಯವರಿಗೂ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಗೂ ಕಾಂಗ್ರೆಸ್ ಶಾಸಕರಿಂದ ಅನ್ಯಾಯವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಮಾಡಿದ ಹಂತಕರ ಬೆನ್ನಿಗೆ ಈ ಕಾಂಗ್ರೆಸ್ ಶಾಸಕರು ನಿಲ್ಲೋದು ಯಾಕೆ ಎಂದು ಶ್ರೀಗಳು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ರಾಜಕೀಯದ ಗೀಳು ನನಗಿಲ್ಲ…

ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಪ್ರಶ್ನಿಸಿರುವ ಶಾಸಕರಿಗೆ ಉತ್ತರಿಸುವ ಶ್ರೀಗಳು, “ತನಗೆ ಚುನಾವಣೆಗೆ ನಿಲ್ಲುವ ಯಾವುದೇ ಆಸೆ ಇಲ್ಲ. ಎಲ್ಲವನ್ನೂ ತ್ಯಜಿಸಿ ಸಂತನಾಗಿದ್ದೇನೆ. ರಾಜಕೀಯದ ಗೀಳು ನನ್ನಲ್ಲಿಲ್ಲ. ಅದಕ್ಕೆ ಬೇಕಾದ ಉತ್ತರವನ್ನು ಬೇಕಾದವರೇ ನೀಡುತ್ತಾರೆ ಅದನ್ನು ಎದುರಿಸಲು ಸಿದ್ದರಾಗಿ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಶ್ರೀಗಳ ಭಾಷಣ “ಪೋಸ್ಟ್ ಕಾರ್ಡ್”ಗೆ ಲಭ್ಯ…

ಇನ್ನು ಶ್ರೀಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಡಿದ ಆ ವಿವಾದಾತ್ಮಕ ತುಣುಕು “ಪೋಸ್ಟ್ ಕಾರ್ಡ್” ಮಾಧ್ಯಮಕ್ಕೆ ಲಭಿಸಿದೆ. ಈ ಭಾಷಣದಲ್ಲಿ ಶ್ರೀಗಳು ಯಾವುದೇ ರೀತಿಯ ಸಾಮರಸ್ಯ ಕೆಡವುವ ಮಾತುಗಳನ್ನು ಆಡದಿದ್ದುದು ಧೃಢವಾಗಿದೆ. ಆದರೆ ಶಾಸಕರು ಮಾತ್ರ ಬಿಟ್ಟಿ ಪ್ರಚಾರಕ್ಕಾಗಿ ಮುಖ್ಯಮಂತ್ರಿಯನ್ನು ಒಲಿಸಲು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರಾ ಎಂಬ ಪ್ರಶ್ನೆಗಳೂ ಮೂಡುತ್ತಿದೆ.

ರೊಚ್ಚಿಗೆದ್ದ ಭಜರಂಗಿಗಳು…

ಇನ್ನು ಕರಾವಳಿಯಲ್ಲಿ ಹಿಂದೂ ಸಂಘಟನೆಗಳೆಂದರೆ ಅದಕ್ಕೆ ರಾಜ್ಯ ಹಾಗೂ ರಾಷ್ಟ್ರದಲ್ಲೇ ಹೆಸರಿದೆ. ಯಾವಾಗ ಶ್ರೀಗಳಿಗೆ ಕಾಂಗ್ರೆಸ್ ಶಾಸಕರಿಂದ ಇಂತಹಾ ಅವಮಾನ ಆಗಿತ್ತೋ ಆ ತಕ್ಷಣವೇ ಜಿಲ್ಲೆ ಹಾಗೂ ಪ್ರಾಂತದ ಹಿಂದೂ ಸಂಘಟನೆಗಳ ಮುಖಂಡರು ಸಿಡಿದೆದ್ದಿದ್ದರು. ಭಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪುವೆಲ್, ವಿಶ್ವ ಹಿಂದೂ ಸಂಘಟನೆಯ ಜಿಲ್ಲಾಧ್ಯಕ್ಷ ಜಗಧೀಶ್ ಶೇಣವ, ಗೋಪಾಲ್ ಕುತ್ತಾರ್ ಸಹಿತ ಹಿಂದೂ ಸಂಘಟನೆಯ ನಾಯಕರ ದಂಡೇ ಶ್ರೀಗಳಿಗೆ ಧೈರ್ಯ ತುಂಬಲು ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡರು ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಘೋಷಿಸಿದರು.

ಮೂಡುಬಿದಿರೆಗೆ ಬರಲಿದ್ದಾರೆ ಗೋಪಾಲ್ ಜಿ…

ಮಾರ್ಚ್ 19ರ ಸೋಮವಾರ ಮೂಡುಬಿದಿರೆಯಲ್ಲಿ ವಿಶ್ವಹಿಂದೂ ಪರಿಷತ್ತಿನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಹಿಂದೂ ಧರ್ಮದ ಶ್ರದ್ಧಾಕೇಂದ್ರವಾದ ಶ್ರೀಗಳನ್ನು ಏಕವಚನದಲ್ಲಿ ನಿಂದಿಸಿದ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಪ್ರಖರ ವಾಗ್ಮಿ ಗೋಪಾಲ್ ಜಿ ಆಗಮಿಸಲಿದ್ದಾರೆ ಎಂದು ಬಜರಂಗದಳ ಮುಖಂಡರು ಹೇಳಿದ್ದಾರೆ. ಇತ್ತ ಹಿಂದೂ ಸಂಘಟನೆಗಳ ಮುಖಂಡರೂ ತಯಾರಾಗುತ್ತಿದ್ದು, ಈ ಬಾರಿ ಕಾಂಗ್ರೆಸ್ ಶಾಸಕನನ್ನು ಕೆಳಗಿಳಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ.

ಇದೇ ಮೊದಲಲ್ಲ ಅ”ಭಯ” ವರ್ತನೆ…!

ಮೂಡುಬಿದ್ರಿಯ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್‍ರ ಗೂಂಡಾ ವರ್ತನೆ ಇದೇ ಮೊದಲಲ್ಲ. ಈ ಹಿಂದಿನ ಅನೇಕ ಪ್ರಕರಣಗಳು ಮೂಡುಬಿದ್ರೆ ಶಾಸಕರನ್ನು ಸುತ್ತುವರೆದಿದೆ. ತನ್ನ ದುರಹಂಕಾರದಿಂದಲೇ ಸುದ್ಧಿಯಾಗುವ ಶಾಸಕರು ತಮ್ಮ ಕಾರ್ಯಕರ್ತರನ್ನೂ ನೋಡದೆ ವಾಚಾಮಗೋಚವಾಗಿ ನಿಂದಿಸುತ್ತಾರೆ.

* ಮೂಡುಬಿದಿರೆಯ ಕೊಣಾಜೆ ಎಂಬಲ್ಲಿ ಮಾಲತಿ ಎಂಬ ಮಹಿಳೆಯನ್ನು ಆಕೆಯ ಮನೆಯಿಂದ ಹೊರದಬ್ಬಿ ಅಮಾನವೀಯತೆಯನ್ನು ಮೆರೆದು ತಾನೋರ್ವ
ಶಾಸಕನೆಂಬುವುದನ್ನೂ ಮರೆತಿದ್ದರು.

* ಮೂಲ್ಕಿಯಲ್ಲಿ ಓರ್ವ ಆಟೋ ಡ್ರೈವರ್‍ಗೆ ಹಲ್ಲೆ ಮಾಡಲು ಹೋಗಿ ಗೂಂಡಾ ವರ್ತನೆ ಮೆರೆದಿದ್ದರು ಶಾಸಕ ಜೈನ್.

* ಮೂಡುಬಿದಿರೆಯ ವಿಜಯವಾಣಿ ಪತ್ರಿಕೆಯ ವರದಿಗಾರನಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಪ್ರಕರಣವೂ ಇವರ ಮೇಲಿದೆ. ನಮ್ಮ ಕಾರ್ಯಕರ್ತರ ಕೈ ಕಾಲು ಗಟ್ಟಿ ಇದೆ ನಿಮ್ಮನ್ನು ಭಿಕ್ಷೆ ಬೇಡುವ ರೀತಿ ಮಾಡುತ್ತೇನೆ ಎಂದಿದ್ದರು.

* ನಂತರ ಮೂಡುಬಿದಿರೆ ಪೇಟೆಯಲ್ಲಿ ಓರ್ವ ಸಾಮಾನ್ಯ ಪ್ರಶ್ನೆಯೆತ್ತಿದ್ದಾನೆ ಎಂದಿದ್ದಕ್ಕೆ ಆತನನ್ನು ಅವಾಚ್ಯ ಪದಗಳಿಂದ ನಿಂದಿಸಿ ಬಂಧಿಸಿದ್ದರು.

* ಭಾರತೀಯ ಜನತಾ ಪಕ್ಷದ ಮುಖಂಡ ಕೆ.ಪಿ.ಜಗಧೀಶ್ ಅಧಿಕಾರಿಯವರನ್ನು ಚುನಾವಣಾ ಬೂತ್‍ನಲ್ಲೇ ಕಾಲು ಕೆರೆದು ಜಗಳಕ್ಕೆ ನಿಂತು ನಂತರ ಅವಮಾನ ಮಾಡಿಸಿಕೊಂಡು ಬಂದಿದ್ದರು.

* ಮೂಡುಬಿದಿರೆಯ ಪಣಪಿಲ ಎಂಬಲ್ಲಿ ರಸ್ತೆಯನ್ನು ಕೇಳಿಕೊಂಡು ಶಾಸಕರ ಬಳಿ ಮಾತನಾಡಲು ಹೋದಂತಹ ಓರ್ವ ಮಹಿಳೆಯನ್ನು ಏಕವಚನದಲ್ಲಿ ನಿಂದಿಸಿ ಅಸಹ್ಯ ಮಾತುಗಳನ್ನಾಡಿದ್ದು ಮಾತ್ರವಲ್ಲದೆ ಓರ್ವ ಗ್ರಾಮಸ್ಥನಿಗೆ ಹಲ್ಲೆಯನ್ನೂ ನಡೆಸಿದ್ದರು.

* ಕಿನ್ನಿಗೋಳಿ ಸಮೀಪದಲ್ಲಿ ಓರ್ವ ಮುಸ್ಲಿಂ ಮಹಿಳೆಗೆ ಕಾರು ಡಿಕ್ಕಿ ಹೊಡೆಸಿದ್ದು ಮಾತ್ರವಲ್ಲದೆ ಆಕೆಯನ್ನು ನಿಂದಿಸಿ ತನ್ನ ನಾಲಿಗೆಯನ್ನು ಹರಿಯಬಿಟ್ಟು ಆಕೆಯ ಮೇಲೆ ಹಲ್ಲೆ ನಡೆಸಿದ್ದರು.

ಮೂಡುಬಿದ್ರಿಯ ಈ ಕಾಂಗ್ರೆಸ್ ಶಾಸಕನ ಪೀಕಲಾಟ ತುಂಬಾನೆ ಇದೆ. ಆದರೆ ಮೂಡುಬಿದಿರೆಯ ಕೊಣಾಜೆ ಎಂಬಲ್ಲಿನ ಮಹಿಳೆಗೆ ಯಾವಾಗ ಕಿರುಕುಳ ನೀಡಲು ಆರಂಭಿಸಿದರೋ ಅಂದಿನಿಂದ ಶಾಸಕರಿಗೆ ಶಾಪ ತಟ್ಟಿ ಹೋಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಫೋಟೋವನ್ನು ಹಿಡಿದುಕೊಂಡೇ ನೆಲದ ಮೇಲೆ ಬಿದ್ದು ಕಣ್ಣೀರ ಶಾಪವನ್ನು ಹಾಕಿದ್ದ ಮಹಿಳೆಯ ಶಾಪದೊಂದಿಗೆ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹೆತ್ತವರ ಶಾಪವೂ ಈ ಶಾಸಕರ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.

ಪ್ರಶಾಂತ್ ಪೂಜಾರಿಯ ಕೊಲೆಯ ಹಿಂದಿದ್ದ ಶಾಸಕರ ಕೈಚಳಕದ ರೋಷ ಮೂಡುಬಿದಿರೆಯ ಜನತೆಯಲ್ಲಿ ಇನ್ನೂ ಕಡಿಮೆಯಾಗಿಲ್ಲ, ಅಷ್ಟರಲ್ಲೇ ಹಿಂದೂ ಸಂತರನ್ನು ಕೆಣಕಿ ಮತ್ತೊಂದು ಮಹಾ ಪ್ರಮಾದವನ್ನು ಮಾಡಿರುವ ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್ ತಾನು ಮಾಡಿರುವ ಪಾಪವನ್ನು ಅನುಭವಿಸುತ್ತಿದ್ದಾರೆ. ಈ ಬಾರಿ ತಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಸೋಲೋದು ಖಚಿತ ಎಂಬ ಮಾಹಿತಿ ತಿಳಿದೊಡನೆ ಬೇರೆಯವರಿಗೆ ಅವಕಾಶ ನೀಡುವ ನೆಪದಲ್ಲಿ ಶಾಸಕರು ಮುಂದಾಗಿದ್ದಾರೆ.

ಒಟ್ಟಾರೆ ಹಿಂದೂ ಸಂತನನ್ನು ಕೆಣಕಲು ಹೋಗಿ ತಾನೇ ಪೇಚಿಗೆ ಸಿಲುಕಿದಂತೆ ಆಗಿರುವ ಈ ಕಾಂಗ್ರೆಸ್ ಶಾಸಕರ ವರ್ತನೆಗೆ ಈಗ ರಾಜ್ಯವ್ಯಾಪಿ ಖಂಡನೆ
ವ್ಯಕ್ತವಾಗಿದೆ. ಇದು ತನ್ನ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಣ್ಣುವ ಸ್ಪಷ್ಟ ಸಂದೇಶ ಮಾತ್ರವಲ್ಲದೆ ಶಾಸಕರ ರಾಜಕೀಯ ಭವಿಷ್ಯವೂ ಅಂತ್ಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ ಎನ್ನುವುದೂ ಅಷ್ಟೇ ಸತ್ಯ.

-ಸುನಿಲ್ ಪಣಪಿಲ

Editor Postcard Kannada:
Related Post