X

ಸೂಫಿವಾದದ ವಿರುದ್ದ ಆದೋಂಲನ ಕೈಗೊಂಡು ಧರ್ಮ ಭ್ರಷ್ಟರನ್ನು ಸನಾತನ ಧರ್ಮದೆಡೆಗೆ ಎಳೆದು ತಂದವರು ಮಹಾನ್ ಧರ್ಮ ರಕ್ಷಕ ಗೋರಖನಾಥರು!!

ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾಯ ಸಂಭವಾಮೀ ಯುಗೇ ಯುಗೇ- ಶ್ರೀ ಕೃಷ್ಣ

ಹೌದು ಯಾವಾಗೆಲ್ಲ ಅನ್ಯ ಮತೀಯರಿಂದ ಸನಾತನ ಧರ್ಮದ ಮೇಲೆ ದಾಳಿಯಾಗುತ್ತೋ, ಯಾವಾಗೆಲ್ಲ ಸನಾತನಿಗಳು ಅಧರ್ಮದ ಮಾರ್ಗದಲ್ಲಿ ನಡೆಯುತ್ತಾರೋ ಆವಾಗೆಲ್ಲ ಭಗವಂತ ಭೂಮಿಯ ಮೇಲೆ ಅವತರಿಸಿ ಸನಾತನ ಧರ್ಮೋದ್ಧಾರ ಮಾಡಿದ್ದಾನೆ ಮತ್ತು ಮಾಡುತ್ತಲೇ ಇರುತ್ತಾನೆ. ಯಾವುದಾದರೊಂದು ರೂಪದಲ್ಲಿ ಬಂದು ಸಾಧು ಸಜ್ಜನರನ್ನು, ದುರ್ಜನರ ದೌರ್ಜನ್ಯದಿಂದ ರಕ್ಷಿಸಿದ್ದಾನೆ ಭಗವಂತ. ಸನಾತನವೆಂಬ ಸಾವಿಲ್ಲದ, ನಿತ್ಯ ನೂತನ, ಚಿರಂತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಮುಂದೆಯೂ ಸಾಧ್ಯವಾಗುವುದಿಲ್ಲ. ಸನಾತನವನ್ನು ಅಳಿಸಲು ಬಂದವರು ತಾವೇ ಅಳಿದು ಹೋದರು. ಸನಾತನ ಧರ್ಮ ರಕ್ಷಕರಲ್ಲಿ ಗೋರಖನಾಥರ ಹೆಸರು ಅಜರಾಮರವಾಗಿ ಉಳಿದಿದೆ.

ಆದಿ ಶಂಕಾರಾಚಾರ್ಯರಂತೆಯೇ ಗೋರಖನಾಥರು ಸಾಕ್ಷಾತ್ ಶಿವನ ಅವತಾರವೆಂದು ನಂಬಲಾಗಿದೆ. ಅಂತೆಯೇ ಆದಿ ಶಂಕಾರಾಚಾರ್ಯರ ಬಳಿಕ ಇಡಿಯ ಭಾರತವನ್ನೇ ಮತ್ತೆ ಸನಾತನತ್ವದೆಡೆಗೆ ತಂದ ಕೀರ್ತಿ ಗೋರಖನಾಥರಿಗೆ ಸಲ್ಲುತ್ತದೆ. ಸನಾತನ ಧರ್ಮದ ನಾಥ ಪರಂಪರೆಯ ಮಹಾನ್ ಗುರು ಗೋರಖನಾಥರು. ಇವರ ಜನ್ಮದ ಕಥೆಯೂ ಬಹಳ ಕುತೂಹಲಕಾರಿ. ಗೋರಖನಾಥರ ಜನ್ಮ ಹನ್ನೊಂದನೇ ಶತಮಾನದಲ್ಲಾದದ್ದು. ಇವರ ಗುರುಗಳಾದ ಮತ್ಸ್ಯೇಂದ್ರನಾಥರು ಗೋರಖನಾಥರ ಹೆತ್ತವರ ಊರಿನಲ್ಲಿ ಬೀಡುಬಿಟ್ಟಿದ್ದಾಗ, ಗೋರಖನಾಥರ ತಾಯಿ ತನಗೆ ಸಂತಾನ ಭಾಗ್ಯವಿಲ್ಲವೆಂದು ಗುರುಗಳ ಬಳಿ ಹೇಳಿಕೊಳ್ಳುತ್ತಾರೆ. ಆಗ ಗುರುಗಳು ವಿಭೂತಿಯನ್ನು ಕೊಟ್ಟು ಅದನ್ನು ಆಕೆಯ ಪತಿಗೆ ಸೇವಿಸಲು ಕೊಡುವಂತೆ ಹೇಳುತ್ತಾರೆ.

ಆದರೆ ಗೋರಖನಾಥರ ತಂದೆ ಅದನ್ನು ಸೇವಿಸಲು ನಿರಾಕರಿಸುತ್ತಾ ಮನೆಯ ಬಳಿಯಿರುವ ಗೊಬ್ಬರದ ರಾಶಿಗೆ ಬಿಸಾಡುತ್ತಾರೆ. ಹದಿನೆರಡು ವರ್ಷಗಳ ಬಳಿಕ ಅದೇ ಊರಿಗೆ ಮರಳಿ ಬಂದ ಮತ್ಸ್ಯೇಂದ್ರನಾಥರು ಆ ಮಹಿಳೆಯನ್ನು ಭೇಟಿಯಾಗಿ ಮಗನೆಲ್ಲಿ ಎಂದು ಕೇಳಿದಾಗ ಮಹಿಳೆ ನಡೆದ ಘಟನೆಯನ್ನು ವಿವರಿಸುತ್ತಾ ಕಣ್ಣೀರಿಡುತ್ತಾಳೆ. ಕೂಡಲೇ ಗೊಬ್ಬರದ ರಾಶಿಯೆಡೆಗೆ ತೆರಳಿದ ಗುರುಗಳು ಬಾಲಕನನ್ನು ಕರೆಯುತ್ತಾರೆ. ಗೊಬ್ಬರದ ರಾಶಿಯಿಂದ ಹನ್ನೆರಡು ವರ್ಷದ ಸುಂದರ ಮತ್ತು ತೇಜಸ್ವೀ ಬಾಲಕನೊಬ್ಬ ಹೊರಬರುತ್ತಾನೆ. ಗೊಬ್ಬರದ ರಾಶಿಯಿಂದ ಹೊರ ಬಂದಿದ್ದಕ್ಕಾಗಿ ಬಾಲಕನಿಗೆ ಗೋರಖ ಎಂದು ಹೆಸರಿಡಲಾಗುತ್ತದೆ ಎನ್ನುತ್ತಾರೆ. ತದ ನಂತರ ಈ ಬಾಲಕ ಮತ್ತ್ಯೇಂದ್ರನಾಥರ ಶಿಷ್ಯನಾಗಿ ಗೋರಖನಾಥ ಎಂಬ ಹೆಸರಿನಿಂದ ಧರ್ಮ ರಕ್ಷಣೆ ಮಾಡುತ್ತಾನೆ.

ಭಾರತದಲ್ಲಿ ಎಂಟನೇ ಶತಮಾನದಲ್ಲೇ ಇಸ್ಲಾಂಮಿನ ಪ್ರವೇಶವಾಗಿತ್ತು. ಹನ್ನೊಂದನೇ ಶತಮಾನದವರೆಗೆ ಇಸ್ಲಾಮಿನ ರಹಸ್ಯ ಪಂಥ ಸೂಫಿವಾದದ ಆಗಮನವಾಗಿ ಸನಾತನಿಗಳೆಲ್ಲರೂ ಸೂಫಿವಾದದ ಗುಂಗಿನಲ್ಲಿ ತೇಲಾಡುತ್ತಾ ಇಸ್ಲಾಮಿಗೆ ಮತಾಂತರ ಹೊಂದುತ್ತಿದ್ದರು. ಸೂಫಿ ಸಂತರ ಕಪಟ ನಾಟಕದ ಅರಿವಾದ ಗೋರಖನಾಥರು ಅವರ ವಿರುದ್ದ ತೊಡೆತಟ್ಟುತ್ತಾರೆ. ಧರ್ಮ ಭ್ರಷ್ಟರಾದ ಸನಾತನಿಗಳನ್ನು ಮರಳಿ ಮಾತೃ ಧರ್ಮಕ್ಕೆ ಎಳೆ ತರುತ್ತಾರೆ. ಆದಿ ಶಂಕರರಂತೆಯೇ ಭಾರತದೆಲ್ಲೆಡೆ ನಾಥ ಪಂಥದ ಯೋಗಿವರ್ಯರ ಶೃಂಖಲೆಯನ್ನೇ ನಿಲ್ಲಿಸಿ ಸೂಫಿವಾದಕ್ಕೆ ಸೆಡ್ಡು ಹೊಡೆಯುತ್ತಾರೆ.

ಧರ್ಮ ಭ್ರಷ್ಠರಾದ ಸನಾತನ ಹಿಂದೂಗಳಿಗೆ ದೀಕ್ಷೆ ಕೊಟ್ಟು ಮತ್ತೆ ಸನಾತನಿಗಳನ್ನಾಗಿಸುತ್ತಾರೆ. ಸೂಫಿವಾದದ ಬೆನ್ನು ಮುರಿಯಲು ಯೋಗಿಗಳ ಗುಂಪು ಮಾಡಿ ಪ್ರತಿ ಹಳ್ಳಿಗೂ ಕಳುಹಿಸಿ, ವೇದ-ಪುರಾಣ ಪಾರಾಯಣ ಮಾಡಿಸುತ್ತಾರೆ. ಭಾರತದ ಮೂಲೆ ಮೂಲೆಯಲ್ಲೂ ಧರ್ಮ ಪ್ರಚಾರ ಮಾಡಲು ತಮ್ಮ ಅನುಯಾಯಿಗಳನ್ನು ಕಳುಹಿಸಿ ಕೊಡುತ್ತಾರೆ. ಇವರ ಪ್ರಯತ್ನದಿಂದಾಗಿ ಸೂಫಿವಾದದ ಬಾಹುಗಳಲ್ಲಿ ಬಂಧಿಯಾಗಿ ಧರ್ಮ ತೊರೆದಿದ್ದವರು ಜಾಗೃತರಾಗಿ ಮತ್ತೆ ಮಾತೃ ಧರ್ಮದೆಡೆಗೆ ಹಿಂದಿರುಗಿ ಬರುತ್ತಾರೆ. ಹಿಂದೂ ಧರ್ಮದಲ್ಲಿ ಗೋರಖನಾಥರನ್ನು ಮಹಾಯೋಗಿಯೆಂದೇ ಬಣ್ಣಿಸಲಾಗಿದೆ. ಧರ್ಮ ರಕ್ಷಣೆಗಾಗಿ ಸನ್ಯಾಸಿಯರನ್ನೂ ಯೋಧರನ್ನಾಗಿಸಿದ ಕೀರ್ತಿ ಗೋರಖನಾಥರಿಗೇ ಸಲ್ಲಬೇಕು. ಮಾರ್ಷಿಯಲ್ ಆರ್ಟ್ಸ್ ನಲ್ಲಿ ಪರಿಣತಿ ಹೊಂದಿ, ಧರ್ಮಾಂಧರ ವಿರುದ್ದ ಸಶಸ್ತ್ರ ಹೋರಾಡಿದ ನಾಥ ಪಂಥದ ಗೋರಖನಾಥರಿಂದಾಗಿಯೇ ನೇಪಾಳದ ಒಂದಿಡೀ ಜಿಲ್ಲೆಗೆ ಹೆಸರು ಬಂದಿರುವುದು.

ಈ ಜಿಲ್ಲೆಯಲ್ಲಿ ಹುಟ್ಟಿದವರೆಲ್ಲರೂ ಗೋರಖಾ(ಗೋರ್ಖಾ)ಗಳು. ಇವರೇ ನಮ್ಮ ಭಾರತೀಯ ಸೈನ್ಯದ ಗೋರ್ಖಾ ರೆಜಿಮೆಂಟಿನ ಸಿಪಾಯಿಗಳು. ಗೋರ್ಖಾ ರೆಜಿಮೆಂಟಿನ ತಾಕತ್ತು ಇಡಿಯ ಜಗತ್ತಿಗೇ ಗೊತ್ತು. ಗೋರಖಪುರದ ನಾಥ ಪಂಥದ ಹಿಂದೂ ಸಿಂಹ ಯೋಗೀ ಆಧಿತ್ಯನಾಥರು ಗೋರಖನಾಥರ ಅನನ್ಯ ಭಕ್ತರು. ಭಗವಂತನೇ ಧರ್ಮ ರಕ್ಷಣೆ ಮಾಡಿರುವಾಗ ಭಕ್ತ ಮಾಡದಿರುತ್ತಾನೆಯೇ? ತಮ್ಮ ಆರಾಧ್ಯ ದೈವ ಗೋರಖನಾಥರು ಹಾಕಿ ಕೊಟ್ಟ ದಾರಿಯಲ್ಲೇ ನಡೆಯುತ್ತಾ ಸನಾತನವನ್ನು ಎತ್ತಿ ಹಿಡಿಯುತ್ತಿರುವ ಆದಿತ್ಯನಾಥರನ್ನು ಇವತ್ತು ದೇಶವೇ ಕೊಂಡಾಡುತ್ತಿದೆ. ಗೋರಖನಾಥರಂತಹ ಮಹಾ ಪುರುಷರು ಈ ಭೂಮಿಯಲ್ಲಿ ಜನ್ಮೆವೆತ್ತಿ ಸನಾತನ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಮುಂದೆಯೂ ಇಂತಹ ಮಹಾ ಪುರುಷರು ಜನ್ಮ ತಾಳುತ್ತಲೇ ಇರುತ್ತಾರೆ. ಸನಾತನ ಧರ್ಮಕ್ಕೆ ಸಾವಿಲ್ಲ. ಸಾಯುವುದು ಮನುಷ್ಯನಿಂದ ಹುಟ್ಟಿದ ಮತಗಳು ಮತ್ತು ಮತಗಳ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ದೌರ್ಜನ್ಯವೆಸಗುವ ಮತಾಂಧರು….

source: https://en.wikipedia.org/wiki/Gorakhnath
sharvari

Editor Postcard Kannada:
Related Post