X
    Categories: ಅಂಕಣ

ಅಮೇರಿಕಾ ತನ್ನ ಸೂಪರ್ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತಕ್ಕೆ ಕೊಡಲು ನಿರಾಕರಿಸಿದಾಗ ವಿಶ್ವವನ್ನೆ ದಂಗಾಗಿಸಿದವರು ಭಾರತದ ಸೂಪರ್ ಕಂಪ್ಯೂಟರ್ ಪಿತಾಮಹ ಡಾ.ವಿಜಯ್.ಪಿ.ಭಟ್ಕರ್!!

1985 ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅಮೇರಿಕಾ ಭೇಟಿಯಿಂದ ಕೆಂಪು ಮೋರೆ ಮಾಡಿಕೊಂಡು ಬರಿಗೈಲಿ ವಾಪಾಸಾಗಿದ್ದರು. ಭಾರತಕ್ಕೆ ಸೂಪರ್ ಕಂಪ್ಯೂಟರ್ ತಯಾರಿಸಲು ಸಹಾಯ ಮಾಡುವಂತೆ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಕೇಳಲು ರಾಜೀವ್ ಗಾಂಧಿ ಅಮೇರಿಕಾಕ್ಕೆ ತೆರಳಿದ್ದರು. ಆದರೆ ಅಮೇರಿಕಾ ಭಾರತದಂತಹ ದೇಶಕ್ಕೆ ತಂತ್ರಜ್ಞಾನ ಕೊಡಲು ಒಪ್ಪಲಿಲ್ಲ. ಎರಡು ವರ್ಷಗಳ ಮಾತುಕತೆಗಳ ಬಳಿಕ 1987 ರಲ್ಲಿ ಭಾರತದ ಸೂಪರ್ ಕಂಪೂಟ್ಯರ್ ಕನಸಿಗೆ ಶಾಶ್ವತ ತೆರೆ ಎಳೆದು ಬಿಟ್ಟಿತು ಅಮೇರಿಕಾ.

ಭಾರತಕ್ಕೆ ಸೂಪರ್ ಕಂಪ್ಯೂಟರ್ ತಂತ್ರಜ್ಞಾನ ನೀಡಲು ಅಮೇರಿಕಾ ಸಾರಾಸಗಟಾಗಿ ನಿರಾಕರಿಸಿದ ಕಾರಣ, ಭಾರತ ತನ್ನ ಘನಿಷ್ಟ ಮಿತ್ರ ಸೋವಿಯತ್ ಯುನಿಯನ್ ನ ಕದ ತಟ್ಟಿತು. ಸೋವಿಯತ್ ಯೂನಿಯನ್ ಭಾರತಕ್ಕೆ ತಂತ್ರಜ್ಞಾನ ನೀಡಲು ಒಪ್ಪಿಯೂ ಇತ್ತು, ಆದರೆ ಅಲ್ಲಿಯೂ ಮೂಗು ತೂರಿಸಿದ ಅಮೇರಿಕಾ ಭಾರತಕ್ಕೆ ತಂತ್ರಜ್ಞಾನ ಲಭಿಸದಂತೆ ಮಾಡುವಲ್ಲಿ ಸಫಲವಾಯಿತು. ಸೋವಿಯತ್ ಯೂನಿಯನ್ ಆಗ ತಾನೆ ಕ್ರಾಂತಿಯಿಂದ ಛಿದ್ರವಾಗಿತ್ತು, ಮತ್ತು ಅಮೇರಿಕಾ ಈ ಸ್ವತಂತ್ರ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿತ್ತು. ಹಾಗಾಗಿ ರಷ್ಯಾ ಕೂಡಾ ಭಾರತಕ್ಕೆ ತನ್ನ ತಂತ್ರಜ್ಞಾನ ನೀಡಲಿಲ್ಲ.

ತದನಂತರ IBM ಕಂಪ್ಯೂಟರ್ ಸಂಸ್ಥೆಯು ಭಾರತದಲ್ಲಿ ತನ್ನ ಘಟಕ ತೆರೆದು ತಂತ್ರಜ್ಞಾನ ಹಂಚಿಕೆಗೆ ನೆರವಾಗುವ ಪ್ರಯತ್ನದಲ್ಲಿತ್ತು. ಆದರೆ ಅಲ್ಲಿಗೂ ಬಂದ ಅಮೇರಿಕಾ ಭಾರತಕ್ಕೆ ತಂತ್ರಜ್ಞಾನ ದೊರೆತರೆ ತನ್ನ ಆಂತರಿಕ ಭದ್ರತೆಗೆ ಧಕ್ಕೆ ಎನ್ನುವ ಕಾರಣ ನೀಡಿ IBM ಸಂಸ್ಥೆ ಒಪ್ಪಂದದಿಂದ ಹಿಂದೆ ಸರಿಯುವಂತೆ ಮಾಡಿತು. ಭಾರತ ಪರಿಪರಿಯಾಗಿ ತಾನು ಸೂಪರ್ ಕಂಪ್ಯೂಟರ್ ಅನ್ನು ಕೇವಲ ಹವಾಮಾನ ವೀಕ್ಷಣೆಗಾಗಿ ಉಪಯೋಗಿಸುತ್ತೇನೆ ಎಂದರೂ ಕೇಳಲಿಲ್ಲ. ವಿಚಿತ್ರವೆಂದರೆ ರಾಜೀವ್ ಗಾಂಧಿಗೆ ತಮ್ಮ ದೇಶದ ವಿಜ್ಞಾನಿಗಳ ಪ್ರತಿಭೆ ಮತ್ತು ಬುದ್ದಿಮತ್ತೆಯ ಮೇಲೆ ನಂಬಿಕೆಯೆ ಇರಲಿಲ್ಲ!! ಬೇಡ ಬೇಡವೆಂದರೂ ಮತ್ತೆ ಮತ್ತೆ ವಿದೇಶಗಳಿಗೆ ದಂಬಾಲು ಬೀಳುತ್ತಿದ್ದರು. ಎಲ್ಲಾ ಕಡೆಗಳಿಂದಲೂ ಬಾಗಿಲು ಮುಚ್ಚಿದ ಕಾರಣ ಭಾರತ ತಲೆ ಮೇಲೆ ಕೈ ಇಟ್ಟುಕೊಂಡು ಕೂತು ಬಿಟ್ಟಿತು. ಆಗ ಬಂದವರೆ ಡಾ.ವಿಜಯ್ .ಪಿ. ಭಟ್ಕರ್!!

ಯಾರಿವರು ಡಾ.ವಿಜಯ್ ಭಟ್ಕರ್?

ಭಾರತದ ಸೂಪರ್ ಕಂಪ್ಯೂಟರ್ ಪಿತಾಮಹ ಡಾ.ಭಟ್ಕರ್. ಆವತ್ತು ಅವರೇನಾದರೂ ಸೂಪರ್ ಕಂಪ್ಯೂಟರ್ ತಯಾರಿಸುವ ಪಣ ತೊಟ್ಟಿಲ್ಲದಿದ್ದರೆ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಭಾರತ ಇವತ್ತು ಈ ಮಟ್ಟಕ್ಕೆ ಬೆಳೆದಿರುತ್ತಿರಲಿಲ್ಲ. ನೋಡಿ, ಕಾಲಯಾ ತಸ್ಮೈ ನಮಃ ಎನ್ನುವುದು ಇದಕ್ಕೆ. ಆವತ್ತು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಅಮೇರಿಕಾಕ್ಕೆ ದಂಬಾಲು ಬೀಳುತ್ತಿದ್ದ ಭಾರತ ಈಗ ಸಾಫ್ಟವೇರ್ ರಫ್ತು ಮಾಡುವ ದಿಗ್ಗಜ. ಇವತ್ತು ಭಾರತದ ವಿಜ್ಞಾನಿಗಳೇನಾದರೂ ಇಲ್ಲದೆ ಹೋದರೆ ಅಮೇರಿಕಾದ ನಾಸಾ-ಪಾಸಾಗಳೆಲ್ಲ ಹರೋಹರ!!

1987ರಲ್ಲಿ ಡಾ.ವಿಜಯ್.ಪಿ.ಭಟ್ಕರ್ ನೇತೃತ್ವದ ‘ಅಭಿವೃದ್ಧಿ ಮತ್ತು ಸುಧಾರಿತ ಕಂಪ್ಯೂಟಿಂಗ್ ಕೇಂದ್ರ’ ಅಸ್ತಿತ್ವಕ್ಕೆ ಬಂತು. ಯಾವಾಗ ರಾಜೀವ್ ಗಾಂಧಿ ಸೂಪರ್ ಕಂಪ್ಯೂಟರ್ ಗಾಗಿ ವಿದೇಶದ ಮೊರೆ ಹೋದರೋ ಆಗಲೇ ಭಾರತದ ವಿಜ್ಞಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಾರತದಲ್ಲಿ ಪ್ರತಿಭೆಗೆ ಏನೂ ಕೊರತೆ ಇಲ್ಲ, ಅಮೇರಿಕಾವನ್ನು ಮೀರಿಸುವ ತಂತ್ರಜ್ಞಾನವನ್ನು ಭಾರತದ ವಿಜ್ಞಾನಿಗಳು ಮಾಡಬಲ್ಲರು ಎಂದು ರಾಜೀವ್ ಗೆ ಸ್ಪಷ್ಟ ಪಡಿಸಿದ್ದರು. ಅದರಲ್ಲಿ ಮುಂಚೂಣಿಯಲ್ಲಿದ್ದವರೆ ಡಾ.ಭಟ್ಕರ್. ಇವರ ಸುಪರ್ದಿಯಲ್ಲಿ ಪುಣೆ ಮೂಲದ, ‘ಸಿಡಿಎಸಿ’ ಸಂಸ್ಥೆ, ಭಾರತದ ಅತಿದೊಡ್ಡ ಯೋಜನೆಗೆ ಕೊಡುಗೆ ನೀಡಲು ದೇಶದ ಎಲ್ಲೆಡೆಯ ವಿಜ್ಞಾನಿಗಳಿಗೆ ಕರೆ ನೀಡಿತು.

ದೇಶಾದ್ಯಂತದ ವಿಜ್ಞಾನಿಗಳು ಈ ಕರೆಗೆ ಓಗೊಟ್ಟು ಓಡೋಡಿ ಬಂದರು. ಇಡೀ ಯೋಜನೆಗೆ ಕೇವಲ 30 ಮಿಲಿಯನ್ ಡಾಲರ್ ನಿಧಿಯನ್ನು ಒದಗಿಸಲಾಯಿತು. ಆ ಕಾಲಕ್ಕೆ ಅದು ದೊಡ್ಡ ಮೊತ್ತವೆ ಆದರೂ ಯೋಜನೆಗೆ ಅರೆಕಾಸಿನ ಮಜ್ಜಿಗೆ ಆಗಿತ್ತು. ಆದರೆ ದೇಶಭಕ್ತ ವಿಜ್ಞಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಡಾ.ಭಟ್ಕರ್ ನೇತೃತ್ವದಲ್ಲಿ ಹಗಲಿರುಳೆನ್ನದೆ ದುಡಿದರು. ತಮ್ಮ ತನು-ಮನ-ಧನಗಳೆಲ್ಲವನ್ನೂ ಯೋಜನೆಗೆ ಸುರಿದರು. ಭಟ್ಕರ್ ಅವರ ಸಮರ್ಪಣೆ ಮತ್ತು ಪರಿಶ್ರಮದಿಂದಾಗಿ ಮೂರೆ ವರ್ಷಗಳಲ್ಲಿ ಭಾರತ ಅಸಾಧ್ಯವಾದುದ್ದನ್ನು ಸಾಧಿಸಿ ತೋರಿಸಿತು!!

1990 ರಲ್ಲಿ ಭಾರತ ತನ್ನ ಮೊತ್ತ ಮೊದಲ, ಸಂಪೂರ್ಣ ಸ್ವದೇಶೀ ನಿರ್ಮಿತ ಮತ್ತು ವಿಶ್ವದ ಅತ್ಯಂತ ಅಗ್ಗದ ಸೂಪರ್ ಕಂಪ್ಯೂಟರ್ “PARAM 8000” ಅನ್ನು ತಯಾರಿಸಿ ಜಗತ್ತನ್ನು ದಂಗು ಬಡಿಸಿತು. ಡಾ.ವಿಜಯ್.ಭಟ್ಕರ್ ಪರಿಶ್ರಮ ಫಲ ಕೊಟ್ಟಿತು. ದೇಶವೆ ಸಂತೋಷದಿಂಡ ಕುಣಿದಾಡಿತು. ಆ ನಂತರ ಭಾರತ ಹಿಂತಿರುಗಿ ನೋಡಲೆ ಇಲ್ಲ. 1998ರಲ್ಲಿ ಭಟ್ಕರ್ ನೇತೃತ್ವದಲ್ಲಿ ಸಿಡಿಎಸಿ ಸೂಪರ್ ಕಂಪ್ಯೂಟರ್ ನ ಎರಡನೆ ಆವೃತ್ತಿ “PARAM 10000” ಅನ್ನು ಬಿಡುಗಡೆ ಮಾಡಿತು. ಉಳಿದದ್ದು ಇತಿಹಾಸ. ಇವತ್ತು ಕಂಪ್ಯೂಟರ್ ಜಗತ್ತಿನಲ್ಲಿ ಭಾರತ ಯಾವ ಮಟ್ಟಕ್ಕೆ ಬೆಳೆದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದುವರೆಗೂ ಪರಮ್ ನ ನಾಲ್ಕು ಆವೃತಿಗಳು ಬಿಡುಗಡೆಗೊಂಡಿವೆ.

ಭಾರತದ ಅಭಿವೃದ್ದಿಯಲ್ಲಿ ವಿಜ್ಞಾನಿಗಳ ಕೊಡುಗೆ ಅತ್ಯಂತ ಮಹತ್ವಪೂರ್ಣ. ತನ್ನ ದೇಶಕ್ಕಾಗಿ ತೆರೆಮರೆಯಲ್ಲೆ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ನಿಜವಾದ ನಾಯಕರು. ತಮ್ಮದೆಲ್ಲವನ್ನೂ ಭಾರತದ ಏಳಿಗೆಗೆ ಸಮರ್ಪಿಸಿ ಅನಾಮಿಕರಂತೆ ಬದುಕುವ ಈ ವಿಜ್ಞಾನಿಗಳು ಯಾವತ್ತೂ ಕೀರ್ತಿ ಪ್ರತಿಷ್ಠೆಯ ಹಿಂದೆ ಹೋದವರಲ್ಲ. ಡಾ.ಭಟ್ಕರ್ ನಂತಹ ನಿಸ್ವಾರ್ಥ-ದೂರದರ್ಶಿ ವ್ಯಕ್ತಿತ್ವದ ವಿಜ್ಞಾನಿಗಳಿಂದಾಗಿ ಭಾರತವೀಗ ಕಂಪ್ಯೂಟರ್ ಕ್ಷೇತ್ರದ ಬಾಹುಬಲಿ.

ಭಾರತದಲ್ಲಿ ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗಾಗಿ ರಾಷ್ಟ್ರೀಯ ಪರಮ್ ಸೂಪರ್-ಕಂಪ್ಯೂಟಿಂಗ್ ಫೆಸಿಲಿಟಿ ಸಂಸ್ಥೆಯನ್ನು ಸ್ಥಾಪಿಸಿದ ಡಾ.ಭಟ್ಕರ್ 2017ರಲ್ಲಿ ನಲಂದಾ ವಿಶ್ವವಿದ್ಯಾಲಯದ ಚಾನ್ಸೆಲರ್ ಆಗಿ ನಿಯುಕ್ತಿ ಹೊಂದಿದ್ದಾರೆ. ನಲಂದಾ ವಿಶ್ವವಿದ್ಯಾಲಯ ಮತ್ತು ಡಾ.ಭಟ್ಕರ್ ಭಾರತದ ಅಭಿಮಾನ. ವಿಶ್ವವನ್ನೆ ಬೆರಗಾಗಿಸಿದ ನಲಂದಾ ಮತ್ತು ಭಟ್ಕರ್ ಅವರ ಕೀರ್ತಿ ದಶ ದಿಕ್ಕುಗಳಿಗೂ ಪಸರಿಸಲಿ. ಪದ್ಮ ಭೂಷಣ ಡಾ.ಭಟ್ಕರ್ ಮಾರ್ಗದರ್ಶನದಲ್ಲಿ ಹಲವಾರು ವಿಜ್ಞಾನಿಗಳು ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಲಿ…ಜೈ ಜವಾನ್…ಜೈ ಕಿಸಾನ್…ಜೈ ವಿಜ್ಞಾನ್…

-ಶಾರ್ವರಿ

Editor Postcard Kannada:
Related Post