X

ಇತಿಹಾಸದಲ್ಲೇ ಪ್ರಧಾನಿಯೊಬ್ಬರು ಚೀನಾಕ್ಕೆ ಎರಡು ಬಾರಿ ಭೇಟಿ!! ಅನೌಪಚಾರಿಕ ಶೃಂಗಸಭೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಭಾರತ-ಚೀನಾ!!

ದೋಕ್ಲಾಂ ಬಿಕ್ಕಟ್ಟಿನ ಬಳಿಕ ಉಭಯ ದೇಶಗಳ ನಾಯಕರು ಭೇಟಿಯಾಗುತ್ತಿರುವುದು ಬಹಳ ಕುತೂಹಲ ಮೂಡಿಸಿದ್ದು, ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆಯನ್ನು ಶಮನ ಮಾಡಲು ‘ಅನೌಪಚಾರಿಕ ಶೃಂಗಸಭೆ’ ನೆರವಾಗಲಿದೆ ಎಂಬ ಭರವಸೆ ಮೂಡಿದ್ದಂತೂ ಅಕ್ಷರಶಃ ನಿಜ. ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಚೀನಾಕ್ಕೆ ಎರಡು ಬಾರಿ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದ್ದು, ದ್ವಿಪಕ್ಷೀಯ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರ ನಡುವಿನ ಎರಡು ದಿನಗಳ ಅನೌಪಚಾರಿಕ ಶೃಂಗ, ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವ ಲಕ್ಷಣಗಳು ಗೋಚರಿಸಿವೆ.

ಉಭಯ ದೇಶಗಳ ನಡುವಣ ಗಡಿ ವಿವಾದ ಮತ್ತು ಪಾಕಿಸ್ತಾನದಲ್ಲಿ ಚೀನಾ ನಡೆಸುತ್ತಿರುವ ಆರ್ಥಿಕ ಕಾರಿಡಾರ್ ನಿರ್ಮಾಣ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ, ಈ ಭೇಟಿ ವೇಳೆ ಯಾವುದೇ ನಿರ್ದಿಷ್ಟ ವಿಷಯದ ಕುರಿತು ಚರ್ಚೆ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು!! ಅದರಂತೆಯೇ ಉಭಯ ನಾಯಕರು ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧದ ಅನಿವಾರ್ಯತೆ ಹಾಗೂ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಮಾತುಕತೆ ವೇಳೆ ಪ್ರಧಾನಿ ಮೋದಿ, ಪ್ರತಿ ವರ್ಷವೂ ಅನೌಪಚಾರಿಕ ಸಭೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಮುಂದಿನ 2019ರಲ್ಲಿ ಭಾರತವು ಈ ಸಭೆಯ ಆತಿಥ್ಯಕ್ಕೆ ಸಿದ್ಧವಾಗಿದೆ ಎಂದು ಚೀನಾ ಅಧ್ಯಕ್ಷರಿಗೆ ಮೋದಿ ಆಹ್ವಾನಿಸಿದ್ದಾರೆ.

ಹೌದು…. ಚೀನೀ ಅಧ್ಯಕ್ಷರೊಬ್ಬರು ಭಾರತದ ಪ್ರಧಾನಿಯನ್ನು ಬೀಜಿಂಗ್‍ನಿಂದ ಹೊರಬಂದು ಸ್ವಾಗತಿಸಿದ್ದು ಇದೇ ಮೊದಲು. ಇಂತಹ ಗೌರವ ತಮಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದೇ ಸಂದರ್ಭದಲ್ಲಿ ಕ್ಸಿ ಅವರನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ, ಭಾರತ ಮತ್ತು ಚೀನಾ ಜಗತ್ತಿನ ಶೇ 40ರಷ್ಟು ಜನಸಂಖ್ಯೆ ಹೊಂದಿರುವುದರಿಂದ ಜಾಗತಿಕವಾಗಿ ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ!! ಅಷ್ಟೇ ಅಲ್ಲದೇ ತಮ್ಮ 2015ರ ಚೀನ ಭೇಟಿಯ ವೇಳೆ, ಜಿನ್‍ಪಿಂಗ್ ಅವರ ತವರೂರಾದ ಕ್ಸಿಯಾನ್‍ನಲ್ಲಿ ತಮಗೆ ಸ್ವಾಗತ ಸಿಕ್ಕಿದ್ದನ್ನು ನೆನಪಿಸಿಕೊಂಡ ಮೋದಿ, “”ಈಗ ನನಗೆ ವುಹಾನ್‍ನಲ್ಲಿ ಸ್ವಾಗತ ನೀಡಲಾಗಿದೆ. ಬೀಜಿಂಗ್ ಹೊರತು ಪಡಿಸಿ ಇತರ ನಗರಗಳಲ್ಲಿ ಸ್ವಾಗತ ಪಡೆದ ಭಾರತದ ಮೊದಲ ಪ್ರಧಾನಿ ನಾನೇ ಇರಬಹುದು” ಎಂದು ಹೆಮ್ಮೆಪಟ್ಟರು.

ಚೀನಾ ಕಮ್ಯುನಿಸ್ಟರ ಶಕ್ತಿ ಕೇಂದ್ರ ವುಹಾನ್ ನಲ್ಲಿ ನಡೆಯುತ್ತಿರುವ ಈ ಸಭೆಯು ವಿಶ್ವದ ಗಮನ ಸೆಳೆದಿದೆ. ಉಭಯ ನಾಯಕರು ಎರಡು ದಿನಗಳಲ್ಲಿ 6 ಬಾರಿ ಸಭೆ ಸೇರಲಿದ್ದು, ಸಭೆಯ ಚರ್ಚಾ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬರುವ ಸಾಧ್ಯತೆಯಿಲ್ಲ. ಹಾಗೆಯೇ ಯಾವುದೇ ಒಪ್ಪಂದಗಳಿಗೂ ಸಹಿ ಹಾಕುತ್ತಿಲ್ಲ. ಬದಲಾಗಿ ಎರಡೂ ದೇಶಗಳ ನಡುವಿನ ವಿವಿಧ ಸಮಸ್ಯೆಗಳು ಹಾಗೂ ವಾಣಿಜ್ಯ ವ್ಯವಹಾರದ ಕುರಿತು ಚರ್ಚಿಸಲಾಗುತ್ತಿದೆ.

8 ಈಸ್ಟ್ ಲೇಕ್ ನಲ್ಲಿರುವ ಪ್ರಸಿದ್ಧ ಅತಿಥಿ ಗೃಹದಲ್ಲಿ ಮೋದಿಗೆ ಜಿನ್ ಪಿಂಗ್ ಔತಣಕೂಟ 8 ಈಸ್ಟ್ ಲೇಕ್ ಬದಿಯ ಉದ್ಯಾನದಲ್ಲಿ ಇಬ್ಬರು ನಾಯಕರ ಮಾತುಕತೆ 8 ಅಲ್ಲಿಯೇ ಬೋಟ್ ನಲ್ಲಿ ಸುತ್ತಾಟ ಹಾಗೂ ಫೆರ್ರಿಯಲ್ಲಿ ಚಾಯ್ ಪೇ ಚರ್ಚಾ ನಡೆಸಿದ್ದಾರೆ!! ಅಷ್ಟೇ ಅಲ್ಲದೇ, ಕಳೆದ ಬಾರಿ ಭಾರತಕ್ಕೆ ಜಿನ್ ಪಿಂಗ್ ಭೇಟಿ ನೀಡಿದಾಗ ಸಾಬರ್ ವುತಿಯಲ್ಲಿ ಇಂಥದ್ದೇ ಸ್ವಾಗತವನ್ನು ಮೋದಿ ನೀಡಿದ್ದರು. ಇನ್ನು, ‘ಅನೌಪಚಾರಿಕ ಶೃಂಗಸಭೆ’ಯ ವೇಳೆ ಮಾತನಾಡಿದ ಜಿನ್ ಪಿಂಗ್, “ವಿಶ್ವಕ್ಕೆ ಧನಾತ್ಮಕ ಸಂದೇಶ ನೀಡಲು 2 ದೇಶದ ನಡುವಿನ ಸಂಬಂಧ ಉತ್ತಮವಾಗಬೇಕಿದೆ. ಭಾರತದೊಂದಿಗಿನ ವ್ಯವಹಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ಚೀನಾ ಬದ್ಧವಾಗಿದೆ”ಮುಕ್ತ ಅವಕಾಶಗಳುಳ್ಳ ಹೊಸ ವಿಶ್ವವನ್ನು ಕಟ್ಟುವಲ್ಲಿ ಭಾರತ, ಚೀನ ಪ್ರಧಾನ ಪಾತ್ರ ವಹಿಸಲಿವೆ” ಎಂದಿದ್ದಾರೆ!!

‘2000 ವರ್ಷಗಳ ಇತಿಹಾಸದಲ್ಲಿ 1,600ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತ ಮತ್ತು ಚೀನಾ ಜಾಗತಿಕ ಆರ್ಥಿಕ ಪ್ರಗತಿಯ ಚಾಲಕ ಶಕ್ತಿಯಾಗಿ ಕೆಲಸ ಮಾಡಿವೆ’ ಎಂದು ಮೋದಿ ತಿಳಿಸಿದರು. ಡೋಕ್ಲಾಂ ಬಿಕ್ಕಟ್ಟು ಶಮನವಾದ ಬಳಿಕ ಇದೇ ಮೊದಲ ಬಾರಿಗೆ ಉಭಯ ನಾಯಕರ ಭೇಟಿ ನಡೆದಿದೆ. ಇದೊಂದು ‘ಅಚ್ಚರಿಯ ರಾಜತಾಂತ್ರಿಕ ನಡೆ’ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ಬಣ್ಣಿಸಿದೆ.

ಮೂಲ: https://www.udayavani.com/kannada/news/world-news/289454/in-wuhan-modi-tells-xi-my-new-india-your-new-era-will-help-in-world-progress

– ಅಲೋಖಾ

Editor Postcard Kannada:
Related Post