X

ಮುಕ್ಕೋಟಿ ದೇವತೆಗಳನ್ನು ಪೂಜಿಸುವ ನಾವು ಬ್ರಹ್ಮನನ್ನೇಕೆ ಪೂಜೆ ಮಾಡುವುದಿಲ್ಲ ಗೊತ್ತೇ?!

ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನು ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ ಇದೆ. ಹಾಗಾಗಿ ಬ್ರಹ್ಮನಿಗೆ ಜಡಜ ಎನ್ನುವ ಹೆಸರಿನಿಂದಲೂ ಕರೆಯುವುದುಂಟು. ಈಡೀ ವಿಶ್ವವನ್ನೇ ಸೃಷ್ಟಿಸಿದ ಸೃಷ್ಟಿಕರ್ತ ಎನ್ನುವ ಬ್ರಹ್ಮ ದೇವನಿಗೆ ಮಾತ್ರ ಯಾವ ಪೂಜೆಯೂ ಸಲ್ಲುವುದಿಲ್ಲ ಮತ್ತು ಯಾವ ಪೂಜೆಯನ್ನೂ ಕೂಡ ಮಾಡಲಾಗುವುದಿಲ್ಲ!! ಆದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸುವ ನಾವು ಬ್ರಹ್ಮನಿಗೇಕೆ ಪೂಜೆ ಮಾಡುವುದಿಲ್ಲ ಅಥವಾ ಬ್ರಹ್ಮದೇವನಿಗೆ ಪ್ರತ್ಯೇಕವಾಗಿ ಯಾಕೆ ಗುಡಿ ಗೋಪುರಗಳಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಪುರಾಣಗಳ ಪ್ರಕಾರ, ಬ್ರಹ್ಮ ಸ್ವಂ ಜನಿಸಿದಾತ!! ವಿಷ್ಣುವಿನ ಹೊಕ್ಕಳದಲ್ಲಿ ಬೆಳೆದ ತಾವರೆಯಲ್ಲಿ ಬ್ರಹ್ಮ ಜನಿಸಿದ ಕಾರಣ ಬ್ರಹ್ಮನಿಗೆ ನಾಭಿಜನೆಂಬ ಹೆಸರೂ ಇದೆ. ಇನ್ನೊಂದು ದಂತಕತೆಯ ಪ್ರಕಾರ ಬ್ರಹ್ಮ ನೀರಿನಲ್ಲಿ ಜನಿಸಿದನೆಂದು ಹೇಳಲಾಗಿದೆ. ಇದರ ಪ್ರಕಾರ ಬೀಜವೊಂದು ನಂತರ ಚಿನ್ನದ ಮೊಟ್ಟೆಯಾಯಿತು. ಈ ಚಿನ್ನದ ಮೊಟ್ಟೆಯಿಂದ ಬ್ರಹ್ಮ ಜನಿಸಿದ್ದು, ಹಿರಣ್ಯಗರ್ಭವೆಂದು ಕರೆಯಲಾಗುತ್ತದೆ.

ಅಷ್ಟೇ ಅಲ್ಲದೇ, ಬ್ರಹ್ಮನ ಜನನದ ಬಳಿಕ ಚಿನ್ನದ ಮೊಟ್ಟೆಯ ಉಳಿದ ವಸ್ತುಗಳು ಬ್ರಹ್ಮಾಂಡ ಅಥವಾ ವಿಶ್ವವಾಗಿ ವಿಸ್ತಾರವಾಯಿತಲ್ಲದೇ, ಬ್ರಹ್ಮ ನೀರಿನಲ್ಲಿ ಜನಿಸಿದ ಕಾರಣ ಕಂಜ ಎಂದು ಕರೆಯಲಾಗುತ್ತದೆ. ಬ್ರಹ್ಮನನ್ನು, ವಿಶ್ವದ ಶ್ರೇಷ್ಠ ಶಕ್ತಿ ಬ್ರಹ್ಮನ್ ಮತ್ತು ಸ್ತ್ರೀ ಶಕ್ತಿ ಪ್ರಕೃತಿ ಅಥವಾ ಮಾಯೆಯ ಪುತ್ರನೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬ್ರಹ್ಮನನ್ನು ನಾಲ್ಕು ತಲೆ ಮತ್ತು ನಾಲ್ಕು ಕೈಗಳುಳ್ಳವನೆಂದು ಸಾಂಪ್ರದಾಯಿಕವಾಗಿ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೇ, ತನ್ನ ನಾಲ್ಕು ತಲೆಗಳ ಮುಖಾಂತರ ಬ್ರಹ್ಮ ನಿರಂತರವಾಗಿ ನಾಲ್ಕು ವೇದಗಳಲ್ಲಿ ಒಂದನ್ನು ಪಠಿಸುತ್ತಿರುತ್ತಾನೆ. ಬ್ರಹ್ಮನನ್ನು ಬಿಳಿಯ ಗಡ್ಡ ಹಾಗೂ ನಾಲ್ಕು ಕೈಗಳಿರುವಂತೆ ಕೂಡ ಚಿತ್ರಿಸಲಾಗಿದೆ.

ಅಷ್ಟೇ ಅಲ್ಲದೇ, ಹಿಂದೂ ದೇವರುಗಳು ತಮ್ಮ ಕೈಯಲ್ಲಿ ಆಯುಧ ಹಿಡಿದಂತೆ ಬಿಂಬಿಸಲಾಗುತ್ತಿದ್ದರೂ, ಬ್ರಹ್ಮ ತನ್ನ ಯಾವುದೇ ಕೈಗಳಲ್ಲಿ ಆಯುಧ ಹಿಡಿದಂತೆ ತೋರಿಸಲಾಗಿಲ್ಲ. ಬ್ರಹ್ಮನ ಕೈಯೊಂದರಲ್ಲಿ ದಂಡವೊಂದಿದ್ದು, ಅದರಿಂದ ಪವಿತ್ರವಾದ ತುಪ್ಪ ಅಥವಾ ತೈಲ ಸುರಿಯುತ್ತಿದೆ. ಇದು ಬ್ರಹ್ಮ ತ್ಯಾಗದೇವತೆ ಎಂಬುದನ್ನು ಕೂಡ ಸಂಕೇತಿಸುತ್ತದೆ.

ಇನ್ನೊಂದು ಕೈಯಲ್ಲಿ ನೀರಿನ ಮಡಿಕೆ ಇದ್ದು, ಇದು ಎಲ್ಲ ಸೃಷ್ಟಿ ಕ್ರಿಯೆಯಲ್ಲಿ ನೀರಿನಾಂಶ ಇದೆ ಎಂಬುದನ್ನು ಹೇಳುತ್ತದೆ. ಇನ್ನೊಂದು ಕೈಯಲ್ಲಿ ಜಪಮಾಲೆಯೊಂದಿದ್ದು, ಇದರ ಮೂಲಕ ಬ್ರಹ್ಮ ವಿಶ್ವದ ಮೇಲಿನ ಸಮಯದ ಮೇಲೆ ನಿಗಾ ಇಡುತ್ತಾನೆ ಎಂದು ಹೇಳಲಾಗಿದೆ. ಮತ್ತೊಂದು ಕೈಯಲ್ಲಿ ವೇದಗಳನ್ನು ಹಿಡಿದಂತೆ, ಕೆಲವೊಮ್ಮೆ ತಾವರೆ ಹೂವನ್ನು ಹಿಡಿದಂತೆಯೂ ತೋರಿಸಲಾಗಿದೆ. ಹೀಗಿರಬೇಕಾದರೆ, ಮುಕ್ಕೋಟಿ ದೇವತೆಯನ್ನು ಪೂಜಿಸೋ ನಮಗೆ ಬ್ರಹ್ಮನನ್ನೇಕೆ ಪೂಜಿಸೋದನ್ನು ರೂಢಿ ಮಾಡಿಲ್ಲ ಎಂಬಿತರ ಪ್ರಶ್ನೆಗಳು ಕಾಡುತ್ತಿದ್ದರು ಉತ್ತರ ಕಂಡುಕೊಳ್ಳುವ ಗೋಜಿಗೆ ಹೋಗೋದಿಲ್ಲ!! ಹಾಗಾದರೆ, ಈಡೀ ವಿಶ್ವದಲ್ಲಿ ಬ್ರಹ್ಮ ದೇವನ್ನನ್ನೇಕೆ ನಾವು ಪೂಜಿಸೋದಿಲ್ಲ ಅನ್ನೋದಕ್ಕೆ ಇಲ್ಲಿದೆ ಕೆಲ ಉತ್ತರ!!

ಒಮ್ಮೆ ವಿಷ್ಣು ಮತ್ತು ಬ್ರಹ್ಮನಿಗೆ ತಮ್ಮ ನಡುವೆ ಯಾರು ಶ್ರೇಷ್ಠ ಎಂಬ ಬಗ್ಗೆ ಚರ್ಚೆಯಾಗುತ್ತಿರುತ್ತದೆ. ಆ ಚರ್ಚೆಯೂ ಮುಂದುವರಿಯುತ್ತಿರುವುದರಿಂದ ತಮ್ಮ ನಡುವೆ ತರ್ಕ ಬೇಡ ಶಿವನನ್ನೇ ಈ ಬಗ್ಗೆ ಕೇಳೋಣವೆಂದು ಅವರಿಬ್ಬರು ಶಿವನನ್ನು ತಲುಪುತ್ತಾರೆ. ಶಿವನ ತಲೆಯನ್ನು ಯಾರು ಮೊದಲು ನೋಡುತ್ತಾರೋ ಅವರೇ ಶ್ರೇಷ್ಠ ಎಂಬುದಾಗಿ ಶಿವನು ತಿಳಿಸುತ್ತಾರೆ. ಇದಕ್ಕಾಗಿ ಶಿವನು ಲಿಂಗ ರೂಪವನ್ನು ಧರಿಸುತ್ತಾರಲ್ಲದೇ ಇಡೀ ವಿಶ್ವವನ್ನೇ ಮೀರಿ ಬೆಳೆಯುತ್ತಾರೆ. ಇದರ ಆರಂಭವನ್ನು ಅರಿಯುವುದು ಅಷ್ಟು ಸುಲಭವಲ್ಲ ಎಂಬುದು ಬ್ರಹ್ಮ ಮತ್ತು ವಿಷ್ಣುವಿಗೆ ತಿಳಿಯುತ್ತದೆ.

 

ಇದರ ಆದಿ(ತುದಿ) ಮತ್ತು ಅಂತ್ಯ(ಬುಡ) ಎಲ್ಲಿವರೆಗೆ ಇದೆ ಎನ್ನುವುದೇ ತಿಳಿಯದ ಸಂದರ್ಭದಲ್ಲಿ, ವಿಷ್ಣುವು ವರಾಹರೂಪಿಯಾಗಿ ಭೂಮಿಯನ್ನು ಅಗೆಯುತ್ತಾ, ಶಿವಲಿಂಗದ ಮೂಲವನ್ನು ಹುಡುಕಲು ಹೊರಟರೆ, ಬ್ರಹ್ಮನು ಹಂಸ ರೂಪ ತಾಳಿ ಆಕಾಶದಲ್ಲಿ ಹಾರಾಡುತ್ತಾ ಶಿವಲಿಂಗದ ತುದಿಯನ್ನು ತಲುಪಲು ಹೊರಡುತ್ತಾರೆ. ಬಹಳಷ್ಟು ಪ್ರಯತ್ನಿಸಿದರೂ ಇಬ್ಬರಿಗೂ ತಮ್ಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ತನ್ನ ಪ್ರಯತ್ನ ವಿಫಲವಾದಾಗ ವಿಷ್ಣು ಶಿವನಿಗೆ ವಂದಿಸಿ ಆತನನ್ನು ಬ್ರಹ್ಮಾಂಡ ಸ್ವರೂಪಿ ಎಂದು ಒಪ್ಪಿಕೊಂಡ.

ಅಷ್ಟೇ ಅಲ್ಲದೇ, ವಿಷ್ಣುವು ಬುದ್ಧಿವಂತನಾಗಿದ್ದು ಶಿವನನ್ನು ಪ್ರಾರ್ಥಿಸಿ ಅವರ ಪಾದಕ್ಕೆ ಎರಗಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಅವರನ್ನು ಮೇಲಕ್ಕೆತ್ತಲು ಶಿವನು ತಲೆಬಾಗುತ್ತಾರೆ. ಹೀಗೆ ವಿಷ್ಣುವು ಪಂದ್ಯದಲ್ಲಿ ಗೆಲ್ಲುತ್ತಾರೆ. ಆದರೆ ಬ್ರಹ್ಮನು ಕುಟಿಲ ಮಾರ್ಗದಿಂದ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಬ್ರಹ್ಮನೂ ಶಿವಲಿಂಗದ ತುದಿಯನ್ನು ತಲುಪಲು ವಿಫಲನಾದರೂ ಸೋಲೊಪ್ಪಲು ಮನಸ್ಸಿಲ್ಲದೇ, ಇನ್ನೂ ಹಾರಾಡುತ್ತಿರುವಾಗ ಆಕಾಶದಲ್ಲಿ ಒಂದು ಕೇತಕಿ ಅಥವಾ ಕೇದಗೆ ಪುಷ್ಪವು ಮೇಲಿನಿಂದ ಕೆಳಕ್ಕೆ ಬರುವುದನ್ನು ಕಂಡರು.

ಆ ಸಂದರ್ಭದಲ್ಲಿ, ಕೇತಕಿ ಅಥವಾ ಕೇದಗೆ ಹೂವಿಗೆ ತನಗೆ ಸಹಾಯ ಮಾಡುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಬ್ರಹ್ಮನು ತಾನು ಶಿವಲಿಂಗದ ಆದಿಯನ್ನು ತಲುಪಿದುದರ ಬಗ್ಗೆ ಸಾಕ್ಷಿ ನುಡಿಯಬೇಕೆಂದು, ತಾನು ಶಿವನ ತಲೆಯನ್ನು ಕಂಡಿದ್ದೇನೆಂದು ಹೂವಿಗೆ ಸುಳ್ಳು ಹೇಳುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ. ಹೀಗೆಯೇ ಕೇತಕಿಯು ಇದನ್ನು ತಾನೇ ನೋಡಿದೆನೆಂದು ಶಿವನ ಬಳಿ ಸುಳ್ಳು ಸಾಕ್ಷ್ಯ ನುಡಿಯಿತು. ಎಲ್ಲವನ್ನೂ ಬಲ್ಲ ಶಿವನು ಇವರ ಸುಳ್ಳುಕಥೆ ಕೇಳಿ ಕುಪಿತನಾಗಿ, ಇನ್ನು ಮುಂದೆ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಬಾರದು ಎಂದೂ, ಕೇತಕಿಯನ್ನು ಶಿವಪೂಜೆಗೆ ಬಳಸಬಾರದೆಂದೂ ಶಾಪವಿತ್ತನು ಎಂದು ಹೇಳಲಾಗಿದೆ.

ಇನ್ನು, ಬ್ರಹ್ಮ ದೇವನು ಬ್ರಹ್ಮಾಂಡದ ಸೃಷ್ಟಿಯ ವೇಳೆಗೆ ಶತರೂಪವೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ಇವರಿಗೆ ಸರಸ್ವತಿ ಎಂಬ ಹೆಸರಿನಿಂದಲೂ ಕರೆಯುತ್ತೇವೆ!!. ಆದರೆ ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ತುಂಬಾ ಸುಂದರಿಯಾಗಿದ್ದ ಶತರೂಪಳ ಮೇಲೆ ನೋಟವಿಡಲು ಬ್ರಹ್ಮನು ಆರಂಭಿಸುತ್ತಾರೆ. ಬ್ರಹ್ಮನ ಈ ಉದ್ಧೇಶವು ಶತರೂಪಳಿಗೆ ಅಷ್ಟೊಂದು ಸೂಕ್ತವೆನಿಸುವುದಿಲ್ಲ. ಆತನಿಂದ ತಪ್ಪಿಸಿಕೊಳ್ಳಲು ಆಕೆ ಭೂಮಿಗೆ ಬೀಳುತ್ತಾಳೆ. ಅಷ್ಟೇ ಅಲ್ಲದೇ, ಬ್ರಹ್ಮನ ದೃಷ್ಟಿಯನ್ನು ತಪ್ಪಿಸಲು ಶತರೂಪ ವಿವಿಧ ದಿಕ್ಕುಗಳಲ್ಲಿ ಸಾಗಿದಳಾದರೂ, ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ. ಹಾಗಾಗಿ ನಾಲ್ಕು ದಿಕ್ಕುಗಳು ಮತ್ತು ಇವುಗಳ ಮೇಲೊಂದು ಹೀಗೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ.

ಆದರೆ ಕೆಲವೊಂದು ಅಂಶಗಳ ಪ್ರಕಾರ ಬ್ರಹ್ಮನ ಈ ಐದನೆಯ ತಲೆಯನ್ನು ಶಿವನು ಕತ್ತರಿಸಿದ್ದಾರೆ ಎಂಬ ಮಾತೂ ಇದೆ. ಯಾಕೆಂದರೆ, ಬ್ರಹ್ಮನನ್ನು ನಿಯಂತ್ರಿಸಲು ಶಿವ ಮೇಲಿನ ತಲೆಯನ್ನು ಕತ್ತರಿಸಿ ಹಾಕಿದ. ಶತರೂಪಳನ್ನು ಬ್ರಹ್ಮನೇ ಸೃಷ್ಟಿಸಿದ ಕಾರಣ ಆಕೆಯನ್ನು ಮೋಹಿಸುವುದು ತಪ್ಪೆಂದು ಶಿವ ನಿರ್ಧರಿಸಿದ. ಹಾಗಾಗಿ ‘ಅಪವಿತ್ರ’ ಬ್ರಹ್ಮನಿಗೆ ಯಾರೂ ಪೂಜೆ ಸಲ್ಲಿಸಬಾರದೆಂದು ಶಿವ ನಿರ್ದೇಶನ ನೀಡಿದನೆಂದು ಹೇಳಲಾಗಿದೆ.

ಆದರೆ ಕೆಲವೊಂದು ಅಂಶಗಳ ಪ್ರಕಾರ, ಶತರೂಪಳು ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಸಂಚರಿಸುತ್ತಲೇ ಇರುವ ಸಂದರ್ಭದಲ್ಲಿ, ತನ್ನನ್ನು ಸೃಷ್ಟಿಸಿದವನ್ನು ತಂದೆಯ ಸ್ಥಾನದಲ್ಲಿ ಆಕೆ ನೋಡುತ್ತಾರೆ. ಆದರೆ ಬ್ರಹ್ಮನ ವಿಕಾರ ಕಾಮನೆ ಬೇರೆಯಾಗಿರುತ್ತದೆ. ಹಾಗಾಗಿ ಬ್ರಹ್ಮನ ವರ್ತನೆಯಿಂದ ಬೇಸತ್ತ ಸರಸ್ವತಿಯು ಬ್ರಹ್ಮನಿಗೆ ಪೂಜೆ ಸಲ್ಲಲೇಬಾರದು ಎಂದು ಶಪಿಸುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಬ್ರಹ್ಮನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಆ ಘಟನೆಯ ಬಳಿಕ ಪಶ್ಚಾತಾಪವಾಗಿ ಬ್ರಹ್ಮ ವೇದಗಳ ಪಠಣ ಮಾಡಲು ಆರಂಭಿಸಿದ ಎಂದು ಹೇಳಲಾಗಿದೆ.

ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ಬ್ರಹ್ಮನಿಗೆ ವಿಷ್ಣು ಮತ್ತು ಶಿವನಿಗಿರುವಂತಹ ಗೌರವವಿಲ್ಲ ಪೂಜೆ ಪುನಸ್ಕಾರಗಳಿಲ್ಲ. ಬ್ರಹ್ಮನಿಗೆ ಮೀಸಲಾಗಿರುವ ಯಾವುದೇ ದೇವಸ್ಥಾನವಿಲ್ಲ. ಆದರೆ ರಾಜಸ್ಥಾನದಲ್ಲಿ ಬ್ರಹ್ಮನಿಗೆ ದೇವಾಲಯವೊಂದಿದ್ದು, ಆ ದೇವಾಲಯವೂ ಪುಷ್ಕರ್ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆ ತಪ್ಪುವುದಕ್ಕೆ ಹಲವು ಪುರಾಣಗಳಲ್ಲಿ ಹಲವು ರೀತಿಯ ವಿವರಣೆಗಳಿವೆ ಅನ್ನೋದು ತಿಳಿದೇ ಇದೆ.

ಆದರೆ, ಈ ಪೈಕಿ ಒಂದು ವಿವರಣೆ ಪ್ರಕಾರ ವಜ್ರನಭ ಎಂಬ ರಾಕ್ಷಸ ಭೂಮಿಯಲ್ಲಿ ಅತ್ಯಂತ ಉಪಟಳ ನೀಡುತ್ತಿದ್ದ. ಬ್ರಹ್ಮ ಕಮಲದ ಹೂವನ್ನು ಆಯುಧವನ್ನಾಗಿ ಬಳಸಿಕೊಂಡು ಆತನನ್ನು ವಧೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಕಮಲದ ಹೂವಿನ ಎಸಳುಗಳು ಭೂಮಿಯ ಮೂರು ಭಾಗಗಳಲ್ಲಿ ಬೀಳುತ್ತದೆ. ಆ ಪ್ರದೇಶಗಳಲ್ಲಿ ಜ್ಯೇಷ್ಠ, ಮಧ್ಯ, ಕನಿಷ್ಟ ಎಂಬ ಮೂರು ಸರೋವರಗಳು ಸೃಷ್ಟಿಯಾಗುತ್ತವೆ. ಬ್ರಹ್ಮನ ಕೈಯ್ಯಿಂದ ಕಮಲ ಬಿದ್ದಿದ್ದರಿಂದಾಗಿ ಅದಕ್ಕೆ ಪುಷ್ಕರ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ಪುರಾಣಗಳ ಪ್ರಕಾರ ಬ್ರಹ್ಮ ಯಜ್ಞ ಮಾಡಬೇಕಿರುತ್ತದೆ. ಮಡದಿ ಇಲ್ಲದೇ ಯಜ್ಞ ಮಾಡುವಂತಿಲ್ಲ. ಆದರೆ ಬ್ರಹ್ಮನ ಮಡದಿ ಸಾವಿತ್ರಿ ಆ ವೇಳೆಯಲ್ಲಿ ಅಲ್ಲಿರುವುದಿಲ್ಲ. ಯಜ್ಞ ಮಾಡಲೇಬೇಕಾದ್ದರಿಂದ ಬ್ರಹ್ಮ ಗಾಯತ್ರಿಯನ್ನು ವಿವಾಹವಾಗಿ ಯಜ್ಞವನ್ನು ಪೂರೈಸುತ್ತಾನೆ. ಸಾವಿತ್ರಿ ಬಂದು ನೋಡಿದಾಗ ಗಾಯತ್ರಿ ಬ್ರಹ್ಮನನ್ನು ವಿವಾಹವಾಗಿರುವುದು ತಿಳಿಯುತ್ತದೆ. ಇದರಿಂದ ಕೋಪಗೊಂಡ ಸಾವಿತ್ರಿ “ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ” ಎಂದು ಶಾಪ ನೀಡುತ್ತಾಳೆ. ಆದರೆ ಯಜ್ಞದಲ್ಲಿ ಭಾಗಿಯಾಗಿದ್ದ ಗಾಯತ್ರಿ ತನ್ನ ಶಕ್ತಿಯಿಂದ ಯಜ್ಞ ನಡೆದಿದ್ದ ಪುಷ್ಕರವನ್ನು ರಕ್ಷಿಸುತ್ತಾಳೆ, ಅದಕ್ಕಾಗಿಯೇ ಇಂದಿಗೂ ಪುಷ್ಕರದಲ್ಲಿ ಮಾತ್ರ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ ಎಂಬ ನಂಬಿಕೆ ಇದೆ.

ಆದ್ದರಿಂದಲೇ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಬ್ರಹ್ಮನಿಗೆ ಒಂದು ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಪೂಜೆ ಸಲ್ಲಿಸಲಾಗುವುದಿಲ್ಲ!! ಅಷ್ಟೇ ಅಲ್ಲದೇ, ಹಿಂದೂ ಧರ್ಮದಲ್ಲಿ, ಮೂಲಭೂತ ಆಸೆಗಳು ಮೋಕ್ಷ ಮಾರ್ಗದ ಅಡಚಣೆ ಎಂಬುವುದಾಗಿ ನಂಬಲಾಗಿದೆ. ಅಂತೆಯೇ, ಸೃಷ್ಟಿಕರ್ತನೇ ಮೂಲಭೂತ ಆಸೆಗಳಿಗೆ ಒಳಗಾಗಿ ಅವನತಿಯನ್ನು ಕಂಡುಕೊಂಡಿದ್ದಾರೆ ಎನ್ನುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

– ಅಲೋಖಾ

Editor Postcard Kannada:
Related Post