X

ಸರ್ಕಾರ ಪತನ?! ಕರ್ನಾಟಕ ಕಾಂಗ್ರೆಸ್‍ನ 2000 ಮಂದಿ ರಾಜೀನಾಮೆ! ಕಂಗೆಟ್ಟು ಹೋದ ಮೈತ್ರಿ ಸರ್ಕಾರ..!

ಅಧಿಕಾರ ಹಿಡಿದಾಗಿನಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಗ್ರಹಚಾರ ನೆಟ್ಟಗಿಲ್ಲ ಅನ್ನೋದು ಇದೀಗ ಮತ್ತೊಮ್ಮೆ ಸಾಭೀತಾಗಿದೆ. ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳು ಹತ್ತಿರ ಆಗುತ್ತಿದ್ದರೂ ಇನ್ನೂ ನೆಟ್ಟಗೆ ಸರ್ಕಾರದ ಕೆಲಸ ಕಾರ್ಯಗಳು ಆರಂಭವಾಗಿಲ್ಲ. ಮಂತ್ರಿ ಸ್ಥಾನಗಳನ್ನೂ ನೀಡಿದ್ದರೂ ಇಷ್ಟರವರೆಗೂ ಯಾವೊಬ್ಬ ಸಚಿವನೂ ವಿಧಾನ ಸೌಧಾದ ಬಳಿ ತಲೆ ಹಾಕಿಯೂ ಮಲಗಿಲ್ಲ ಎಂದರೆ ಏನರ್ಥ? ಇದರ ಮಧ್ಯೆ ಸಚಿವ ಸ್ಥಾನ ವಂಚಿತರ ಬಂಡಾಯದ ಬಿಸಿ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 

ಸಚಿವ ಸ್ಥಾನ ಹಂಚಿಕೆಯ ನಂತರ ಭುಗಿಲೆದ್ದಿದ್ದ ಭಿನ್ನಮತ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಎಂಬಿ ಪಾಟಿಲ್ ಸಹಿತ ಅನೇಕ ಶಾಸಕರು ಸಚಿವ ಸ್ಥಾನ ಸಿಗಲಿಲ್ಲವೆಂದು ಬಂಡಾಯದ ಬಾವುಟವನ್ನು ಹಾರಿಸುತ್ತಿದ್ದಾರೆ. ಭಿನ್ನಮತೀಯರು ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಮೈತ್ರಿ ಸರ್ಕಾರಕ್ಕೆ ಕಗ್ಗಂಟಾಗಿದ್ದಾರೆ

.

2000 ಕಾಂಗ್ರೆಸ್ಸಿಗರ ರಾಜೀನಾಮೆ..!

ಸಚಿವ ಸ್ಥಾನ ಸಿಗಲಿಲ್ಲವೆಂದು ಕೆಲ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಇದೀಗ ಮತ್ತೊಂದು ಅವತಾರವನ್ನು ತಾಳಿದ್ದಾರೆ. ತನ್ನ 2000 ಕಾಂಗ್ರೆಸ್ ಬೆಂಬಲಿಗರ ರಾಜೀನಾಮೆಯನ್ನು ಕೊಡಿಸುವ ಮೂಲಕ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಬೀದರ್ ಜಿಲ್ಲೆಯ ಬಾಲ್ಕಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಅವರ 2000 ಮಂದಿ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಹಿತ ಜನಪ್ರತಿನಿಧಿ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಕಾರ್ಯಕರ್ತರು ಹಾಗೂ ಕಾಂಗ್ರೆಸ್‍ನ ಪ್ರಮುಖ ನಾಯಕರೂ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ನೀಡಬೇಕೆಂದು ರಾಜೀನಾಮೆಯನ್ನು ನೀಡಿದ್ದಾರೆ.

ಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ 2000ಕ್ಕೂ ಅಧಿಕ ಮಂದಿ ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡಿದ್ದು ಈ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ರವಾನಿಸಿದ್ದಾರೆ. ಈ ಕುರಿತು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ರವಿವಾರ ಬೀದರ್‍ನಲ್ಲಿ ಸುದ್ಧಿಗೋಷ್ಟಿ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈಶ್ವರ್ ಖಂಡ್ರೆಗೆ ಯಾವ ಆಧಾರದಲ್ಲಿ ಸಚಿವ ಸ್ಥಾನವನ್ನು ತಪ್ಪಿಸಿದ್ದೀರಿ. ಈ ಕೂಡಲೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ಉಳಿಯಬೇಕೆಂದರೆ ಮೈತ್ರಿ ಸರ್ಕಾರದಲ್ಲಿ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಈ ಮೈತ್ರಿ ಸರ್ಕಾರವೇ ಇರೋದಿಲ್ಲ ಎಂದು ಗುಡುಗಿದ್ದಾರೆ.

ಒಟ್ಟಾರೆ ಸಚಿವ ಸ್ಥಾನ ವಂಚಿತರ ಖ್ಯಾತೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಶತಾಯ ಗತಾಯ ಈ ಬಾರಿ ಸಚಿವ ಸ್ಥಾನಕ್ಕೆ ಏರಲೇ ಬೇಕೆಂಬ ಹಠದಲ್ಲಿ ಟೊಂಕ ಕಟ್ಟಿ ನಿಂತಿದ್ದಾರೋ ಅಥವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೇಮ್ ಪ್ಲಾನ್‍ನಂತೆ ಈ ಮೈತ್ರಿ ಸರ್ಕಾರವನ್ನೇ ಉರುಳಿಸುವ ವ್ಯವಸ್ಥಿತ ಸಂಚನ್ನು ನಡೆಸುತ್ತಿದ್ದರೋ ಎಂಬುವುದೇ ಇದೀಗ ಯಕ್ಷ ಪ್ರಶ್ನೆ.

-ಏಕಲವ್ಯ

Editor Postcard Kannada:
Related Post