X

2024ರ ಜನವರಿಯಲ್ಲಿ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ!

ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಪ್ರಭು ಶ್ರೀ ರಾಮನ ಭವ್ಯ ರಾಷ್ಟ್ರ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಂದಿರ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ಶ್ರೀರಾಮನ ಮಂದಿರವನ್ನು ೨೦೨೪ ರ ಜನವರಿ ೧ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ತ್ರಿಪುರಾದಲ್ಲಿ ನಡೆದ ಜನವಿಶ್ವಾಸ್ ಯಾತ್ರೆಗೆ ನಿನ್ನೆ ತೆರಳುವ ಮುನ್ನ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಅಡ್ಡಿಯನ್ನುಂಟು ಮಾಡಿತ್ತು‌. ಆ ನಂತರ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಪರ ತೀರ್ಪು ನೀಡಿದ ಬಳಿಕ ಪ್ರಧಾನಿ ಮೋದಿ ಅವರು ರಾಮ ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಿದರು ಎಂದು ಶಾ ತಿಳಿಸಿದ್ದಾರೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಸಂಪೂರ್ಣವಾಗಿರುವುದಾಗಿ ತಿಳಿಸಿದ್ದರು. ೨೦೨೩ ರ ಡಿಸೆಂಬರ್ ವೇಳೆಗೆ ಈ ಕಾಮಗಾರಿ ಸಂಪೂರ್ಣವಾಗಲಿದೆ ಎಂಬುದಾಗಿಯೂ ಯೋಗಿ ಮಾಹಿತಿ ನೀಡಿದ್ದರು.

೨೦೨೦ ರ ಆಗಸ್ಟ್ ಸಂದರ್ಭದಲ್ಲಿ ಅಯೋಧ್ಯಾ ವಿವಾದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಯೋಧ್ಯೆ ಶ್ರೀ ರಾಮನಿಗೆಯೇ ಸೇರಿದ್ದು ಎಂಬುದಾಗಿ ಈ ತೀರ್ಪಿನಲ್ಲಿ ಹೇಳಲಾಗಿತ್ತು. ಆ ಬಳಿಕ ಆಗಸ್ಟ್ ೫ ರಂದು ಪ್ರಧಾನಿ ಮೋದಿ ಅವರು ಇಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

Post Card Balaga:
Related Post