X

ಮತದಾನೋತ್ತರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ..! ಗದ್ದುಗೆ ಏರಲು ಕ್ಷಣಗಣನೆ..!

ರಾಜ್ಯ ವಿಧಾನಸಭಾ ಚುನಾವಣೆ ಈಗ ತಾನೇ ಮುಗಿದಿದೆ.‌ ಭಾರೀ ಕಾವೇರಿಸಿದ್ದ ಈ ಚುನಾವಣೆ ಭರ್ಜರಿಯಾಗಿ ನಡೆದಿದ್ದು ಇನ್ನೇನು ಎರಡೇ ದಿನದಲ್ಲಿ ಫಲಿತಾಂಶವೂ ಹೊರಬೀಳಲಿದೆ.‌ ರಾಜಕೀಯ ಪಕ್ಷಗಳ ಎದೆಬಡಿತ ಇನ್ನು ಎರಡು ದಿನ ಯಾವ ರೀತಿ ಇರುತ್ತದೆ ಎಂಬುದು ಊಹಿಸಲೂ ಅಸಾಧ್ಯ. ‌ ಯಾಕೆಂದರೆ ಒಂದೆಡೆ ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಪ್ರತಿಷ್ಟೆಯ ಕಣವಾದರೆ, ಇತ್ತ ಬಿಜೆಪಿ ಈಗಾಗಲೇ ದೇಶಾದ್ಯಂತ ನಡೆದ ಎಲ್ಲಾ ಚುನಾವಣೆಯಲ್ಲಿ ಗೆದ್ದು ವಿಜಯ ಪತಾಕೆ ಹಾರಿಸಿರುವುದರಿಂದ ಕರ್ನಾಟಕವೂ ಬಹಳ ಮುಖ್ಯವಾಗಿದೆ..!

ಚುನಾವಣೆ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು ನಡೆದಿದ್ದು, ಜನಾಭಿಪ್ರಾಯದಂತೆ ಫಲಿತಾಂಶವನ್ನೂ ಹೊರಹಾಕಿದ್ದಾರೆ.

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಬಿಜೆಪಿ..!

ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ವಿಚಾರ ತಿಳಿದಿತ್ತು. ಅದೇ ರೀತಿ ಇದೀಗ ಮತದಾನೋತ್ತರ ಸಮೀಕ್ಷೆಯೂ ನಡೆದಿದ್ದು, ಈ ಬಾರಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗುತ್ತಿದೆ.

ಬಿಜೆಪಿ ೯೫-೧೧೪ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಕೇವಲ ೭೩-೮೨ ಸೀಟ್ ಮಾತ್ರ ತನ್ನದಾಗಿಸಿಕೊಳ್ಳಲಿದೆ ಮತ್ತು ಜನತಾ ದಳ (ಜೆಡಿಎಸ್) ಸುಮಾರು ೩೨-೪೩ ಸೀಟ್ ಗೆ ತೃಪ್ತಿಪಡೆದುಕೊಳ್ಳಲಿದೆ ಹಾಗೂ ಇತರೆ ಕೇವಲ ೨-೩ ಸೀಟ್ ಮಾತ್ರ ಗೆಲ್ಲಲಿದೆ ಎನ್ನಲಾಗುತ್ತಿದೆ.

ಒಂದೆಡೆ ರಾಜ್ಯ ಸರಕಾರದ ವೈಫಲ್ಯ, ಮತ್ತೊಂದೆಡೆ ಮೋದಿ ಸರಕಾರದ ಅಭಿವೃದ್ಧಿ ಯೋಜನೆಗಳೇ ಬಿಜೆಪಿ ಕೈಹಿಡಿಯಲಿದೆ ಎಂಬುದು ಮಾತ್ರ ಸ್ಪಷ್ಟ.

ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತೆ..?

ರಾಜ್ಯದ ಜನರ ಅಭಿಪ್ರಾಯವನ್ನು ಕೇಳಿ ಸಿಎನ್ಎಕ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿ ಸುಮಾರು ೧೦೬ ಸೀಟ್ ಗೆದ್ದರೆ, ಕಾಂಗ್ರೆಸ್ ಕೇವಲ ೭೫ ಕ್ಷೇತ್ರ ಮಾತ್ರ ತನ್ನದಾಗಿಸಿಕೊಳ್ಳಲಿದೆ. ಇದೇ ರೀತಿ ಜೆಡಿಎಸ್ ೩೭ ಸೀಟ್ ಗೆ ತೃಪ್ತಿಪಡೆದುಕೊಳ್ಳಲಿದೆ ಹಾಗೂ ಇತರೆ ಕೇವಲ ೪ ಸೀಟ್ ಗೆಲ್ಲಲಿದೆ ಎಂದು ಹೇಳಲಾಗುತ್ತದೆ.

ಇದೇ ರೀತಿ ಇಂಡಿಯಾ ಟುಡೆ-ಅಕ್ಸಿಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಗಲಿದೆ. ಯಾಕೆಂದರೆ ಈ‌ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ೧೦೬-೧೧೮ ಸೀಟ್ , ಬಿಜೆಪಿಯ ೭೯-೯೨ ಮತ್ತು ಜೆಡಿಎಸ್ ೨೨-೩೦ ಕ್ಷೇತ್ರ ಗೆಲ್ಲಲಿದೆ ಮತ್ತು ಇತರೆ ಕೇವಲ ೧-೪ ಸೀಟ್ ಗೆ ತೃಪ್ತಿಪಡೆದುಕೊಳ್ಳಲಿದೆ ಎಂಬುದಾಗಿ ವರದಿ ಮಾಡಿದೆ.

ಟೈಮ್ಸ್ ನೌ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ೮೦-೯೪ ಸೀಟ್ ಗೆದ್ದರೆ, ಕಾಂಗ್ರೆಸ್ ೯೦-೧೦೧ ಕ್ಷೇತ್ರ ಗೆಲ್ಲಲಿದೆ ಮತ್ತು ಜೆಡಿಎಸ್ ೩೧-೩೯ ಮತ್ತು ಇತರೆ ಕೇವಲ ೨-೩ ಸ್ಥಾನ ಪಡೆಯಲಿದೆ.‌

ಚುನಾವಣಾ ಪೂರ್ವ ಸಮೀಕ್ಷೆ ಮತ್ತು ಮತದಾನೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿಯೇ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಈ ಬಾರಿ ಬಿಜೆಪಿ ಸರಕಾರ ರಚನೆಯಾಗಬೇಕಾದರೆ ಕಿಂಗ್ ಮೇಕರ್ ಯಾರಾಗುತ್ತಾರೆ ಎಂಬುದೇ ಕುತೂಹಲ..!

–ಅರ್ಜುನ್

Editor Postcard Kannada:
Related Post