X

ಇರಲಾರದೆ ಇರುವೆ ಬಿಟ್ಟುಕೊಂಡ ಜೆಡಿಎಸ್

ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದು ಕೆಂಪೇಗೌಡರ 108 ಅಡಿ ಎತ್ತರದ ‘ಪ್ರಗತಿ ಪ್ರತಿಮೆ’ ಯನ್ನು ಅನಾವರಣ ಮಾಡಿದ್ದಾರೆ. ಹಾಗೆಯೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ‌ದ ಟರ್ಮಿನಲ್ 2 ನ್ನು ಸಹ ಉದ್ಘಾಟಿಸಿ‌ದ್ದಾರೆ. ಇದೆಲ್ಲ ಕಾರ್ಯಕ್ರಮ ಸುಸೂತ್ರವಾಗಿ ನಡೆದ ಬೆನ್ನಲ್ಲೇ, ಜೆಡಿಎಸ್ ‘ಮೊಸರಿನಲ್ಲಿ ಕಲ್ಲು’ ಹುಡುಕುವ ಕೆಲಸವನ್ನು ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕಾರ್ಯಕ್ರಮ‌ಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ಹಿರಿಯ ನಾಯಕ ದೇವೇಗೌಡರನ್ನು ಸರ್ಕಾರ ಆಹ್ವಾನ ಮಾಡಿಲ್ಲ ಎಂಬುದಾಗಿ ಆಕ್ರೋಶ ಹೊರಹಾಕಿರುವ ಜೆಡಿಎಸ್ ಪಕ್ಷ, ಟ್ವೀಟ್ ಮೂಲಕ ಸರ್ಕಾರ‌ದ ಈ ನಿಲುವನ್ನು ಪ್ರಶ್ನೆ ಮಾಡುವ ಕೆಲಸವನ್ನು ಮಾಡಿದೆ. ಕನ್ನಡದ ನೆಲದಿಂದ ಪ್ರಧಾನಿ‌ಯಾದ ಏಕೈಕ ಕನ್ನಡಿಗ ದೇವೇಗೌಡರು. ಅವರನ್ನು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ‌ಕ್ಕೆ ಆಹ್ವಾನಿಸದಿರುವುದು ಎಲ್ಲಾ ಕನ್ನಡಿಗರಿಗೆ ಮಾಡಿದ ಅಪಮಾನ. ಈ ಪ್ರತಿಮೆ ನಿರ್ಮಾಣ‌ಕ್ಕೆ ಅಡಿಗಲ್ಲು ಹಾಕುವಾಗ ಮಾಜಿ ಪ್ರಧಾನಿ ದೇವೇಗೌಡರನ್ನು ಬಿಜೆಪಿ ಸರ್ಕಾರ ಆಹ್ವಾನಿಸಿತ್ತು. ಆದರೆ ಪ್ರಧಾನಿ ಈ ಪ್ರತಿಮೆ‌ಯನ್ನು ಲೋಕಾರ್ಪಣೆ ಮಾಡುವಾಗ ಅವರನ್ನು ಆಹ್ವಾನಿಸಿಲ್ಲ ಯಾಕೆ..? ಕೆಂಪೇಗೌಡ‌ರು ರಾಜಕೀಯ‌ಕ್ಕೆ ಬಳಸುವ ವಿಷಯವಲ್ಲ. ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮೆಲ್ಲರ ಆರಾಧ್ಯ ದೈವ. ಬೆಂಗಳೂರು ಸಮಸ್ತ ಕನ್ನಡಿಗರ ಜೀವನಾಡಿ. ಈ ಸೂಕ್ಷ್ಮ‌ವನ್ನು ಬಿಜೆಪಿ ಮರೆತು ಕನ್ನಡಿಗರನ್ನು ಅವಮಾನ ಮಾಡಿದೆ. ಪ್ರಧಾನಿ ಮೋದಿ ಅವರನ್ನು ರಾಜ್ಯ ಬಿಜೆಪಿ ನಾಯಕರು ಹಾದಿ ತಪ್ಪಿಸಿದ್ದಾರೆ. ದೇವೇಗೌಡ ಅವರ ಬಗ್ಗೆ ಅಪಾರ ಗೌರವ ಇರಿಸಿರುವ ಪ್ರಧಾನಿ‌ಗಳ ಬಗ್ಗೆ ಕನ್ನಡಿಗರಲ್ಲಿ ತಪ್ಪು ಅಭಿಪ್ರಾಯ ಮೂಡುವ ಹಾಗೆ ಸರ್ಕಾರ, ಬಿಜೆಪಿ ನಾಯಕರು ವರ್ತಿಸಿದ್ದಾರೆ ಎಂದು ಜೆಡಿಎಸ್ ಆರೋಪ ಮಾಡಿದೆ.

ಹಾಗೆಯೇ, ಬಿಜೆಪಿ ಸರ್ಕಾರ ರಾಜಕೀಯ ಕಾರಣದಿಂದ ಮಾಜಿ ಪ್ರಧಾನಿ ಅವರನ್ನು ಕಡೆಗಣಿಸಿದೆ. ಈ ಕಾರ್ಯಕ್ರಮ‌ವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂಬಂತೆ ನಡೆಸಲಾಗಿದ್ದು, ಇದು ಮಾಜಿ ಪ್ರಧಾನಿ ಮಾತ್ರವಲ್ಲದೆ ಸಮಸ್ತ ಕನ್ನಡಿಗರಿಗೆ, ನಾಡಪ್ರಭು ಕೆಂಪೇಗೌಡ ಅವರಿಗೆ ಮಾಡಿದ ಅವಮಾನ. ಇದು ಅಕ್ಷಮ್ಯ‌ದ ಪರಮಾವಧಿ ಎಂದಿದೆ. ಈ ಕಾರ್ಯಕ್ರಮ ಯಾವುದೋ ಸ್ಥಳೀಯ ಮಟ್ಟದ ಕಾರ್ಯಕ್ರಮ‌ವಲ್ಲ. ಇದಕ್ಕೆ ಪ್ರಧಾನಿ‌ಗಳೇ ಬರುತ್ತಾರೆ ಎಂದಾಗ ಮಾಜಿ ಪ್ರಧಾನಿ‌ಗಳನ್ನು ಅಧಿಕೃತವಾಗಿ ಕರೆಯಬೇಕಿತ್ತು. ಮಾಜಿ ಪ್ರಧಾನಿ‌ಗಳ ಬಗ್ಗೆ ಅನಾದರ ತೋರಿರುವುದು ಕನ್ನಡಿಗರಿಗೆ ಅಪಾರ ನೋವು ಮಾಡಿದೆ. ಎಲ್ಲರನ್ನೂ ಸಮಾನವಾಗಿ ಕಂಡ ಆದರ್ಶ ವ್ಯಕ್ತಿ ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸುವ ಕೆಲಸವನ್ನು ಸ್ವತಃ ಪ್ರಧಾನಿ ಅವರೇ ಮಾಡಿದ್ದು ದುರಾದೃಷ್ಟ. ಈ ಕಾರ್ಯಕ್ರಮ‌ವನ್ನು ಮುಂದಿನ ವಿಧಾನಸಭಾ ಚುನಾವಣೆ‌ಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.

ಬಿಜೆಪಿ ತಿರುಗೇಟು

ಇನ್ನು ಜೆಡಿಎಸ್‌ನ ಈ ಆರೋಪಕ್ಕೆ ಸಾಕ್ಷಿ ಸಮೇತ ಬಿಜೆಪಿ ತಿರುಗೇಟು ನೀಡಿದ್ದು, ಜೆಡಿಎಸ್ ಪಕ್ಷದ ಸುಳ್ಳುಗಳನ್ನು ಜಗಜ್ಜಾಹೀರು ಮಾಡಿದೆ.

ಈ ಕಾರ್ಯಕ್ರಮ‌ಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಹ್ವಾನಿಸಿರುವ ಅಧಿಕೃತ ಆಹ್ವಾನ ಪತ್ರಿಕೆಯ ಪ್ರತಿಯನ್ನು ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಪ್ರಧಾನಿ ದೇವೇಗೌಡರಿಗೆ ಮೊದಲ ಆಹ್ವಾನ ಪತ್ರಿಕೆ ಹೋಗಿರುವುದು ಮಾತ್ರವಲ್ಲ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಮೂಲಕ ಕರೆ ಮಾಡಿ ಕಾರ್ಯಕ್ರಮ‌ಕ್ಕೆ ಆಹ್ವಾನಿಸಿದ್ದಾರೆ. ಈ ವಿಚಾರದಲ್ಲೂ ಸುಳ್ಳು ಹೇಳಿರುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ. ಇದಷ್ಟೇ ಅಲ್ಲ, ಕನ್ನಡದ ಅಸ್ಮಿತೆ‌ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ, ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯ‌ಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನು ಪಕ್ಷವಾಗಿಸಿಕೊಂಡ ಜೆಡಿಎಸ್‌ಗೆ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಬಿಜೆಪಿ ತಿರುಗೇಟು ನೀಡಿದೆ.

ಒಟ್ಟಿನಲ್ಲಿ ಇರಲಾರದೆ ಇರುವೆ ಬಿಟ್ಕೊಂಡ ಎಂಬಂತೆ, ಜೆಡಿಎಸ್ ಪಕ್ಷ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿಕೊಳ್ಳುವ ಭರದಲ್ಲಿ, ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದೆ. ತಾನೇ ತೋಡಿದ ಹಳ್ಳಕ್ಕೆ ತಾನೇ ಬೀಳುವ ಮೂಲಕ ಸಾರ್ವಜನಿಕ ವಲಯದಲ್ಲಿಯೂ ಜೆಡಿಎಸ್ ವ್ಯಾಪಕ ಟೀಕೆಗೆ ಒಳಗಾಗಿದ್ದು ಹಾಸ್ಯಾಸ್ಪದ.

Post Card Balaga:
Related Post