X

ನಾನು, ನೀನು, ಇವನು!! ನಟ ಉಪೇಂದ್ರನ ಪ್ರಜಾಕೀಯ ಅವಾಂತರಗಳು!!

ಹಾ! ಮತ್ತದೇ ಪದಗಳ ಆಟ!! ಸಿನಿಮಾದಲ್ಲಿ ಆಟ ಆಡಿದಷ್ಟು ಸುಲಭವೇ ಅಲ್ಲ ಈ ರಾಜಕೀಯ ಎನ್ನುವುದು ‘ಪ್ರಜ್ಞಾವಂತ’ನಿಗೆ ಅರ್ಥವಾಗಲಿಲ್ಲವೋ, ಅಥವಾ , ಬುದ್ಧಿ ಹೆಚ್ಚಾದ ಕಾರಣಕ್ಕೆ ‘ಬುದ್ದಿವಂತ’ನಿಗೆ ವಾಸ್ತವ ಅರ್ಥವಾಗಲಿಲ್ಲವೋ!! ಒಟ್ಟಾರೆಯಾಗಿ, ಕರ್ನಾಟಕದ ಜನತೆಗೊಂದು ದೊಡ್ಡದಾಗಿ ಹೈಪ್ ಕೊಟ್ಟು, ಕಾರ್ಮಿಕರಿಗೆ ಅಕ್ಷರಶಃ ಅವಮಾನ ಮಾಡಿ, ಅಭಿಮಾನಿಗಳನ್ನು ಮೂರ್ಖರೆಂದುಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು, ವಿಧಾನಸಭೆ
ಚುನಾವಣೆಗೆ ಇನ್ನು ಕೆಲವೇ ತಿಂಗಳಿದೆ ಎಂದಾಗ ಪಕ್ಷ ಕಟ್ಟುತ್ತೇನೆಂದು ಬಂದ ಉಪೇಂದ್ರರಂತಹ ವರಿಗೆ ಸ್ವಲ್ಪವಾದರೂ ಮೆಚೂರಿಟಿ ಇರಬಹುದೆಂದುಕೊಂಡಿದ್ದೆ! ಆದರೆ, ಉಹೂಂ!! ಪ್ರಜ್ಞಾಹೀನರೆಂದು ಅರಿವಾಗುವ ಹೊತ್ತಿಗೆ ಚುನಾವಣೆ ಹತ್ತಿರ ಬಂದಿದೆ!

ಅಲ್ಲ ರೀ?! ಉಪೇಂದ್ರರವರ ಈ ರಾಜಕೀಯ ನಡೆಯೊಂದು ಅವರ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು, ಪ್ರಜಾಕೀಯ ಎಂಬ ಸಿದ್ಧಾಂತದ ಬಗ್ಗೆ ಜನರಲ್ಲಿ ಸಾಮಾಜಿಕ ಕಳಕಳಿ ಮೂಡಿದ್ದನ್ನೆಲ್ಲ, ಗೌರವಿಸುವುದಾದರೂ ಸಹ, ಉಪೇಂದ್ರರವರ ಈ ಸಿನಿಮೀಯ ನಡೆಯೊಂದು ಕರ್ನಾಟಕದ ಭವಿಷ್ಯಕ್ಕೆ ಎಷ್ಟು ಹೊಡೆತ ಕೊಡಬಲ್ಲದು?! ಪಕ್ಷಗಳ ಮೇಲೆ ಪಕ್ಷಗಳನ್ನ ಕಟ್ಟುವುದು! ಇದೇ ಕೆಲಸವಾ?! ಅಥವಾ, ಮತ ಒಡೆಯುವ ಹುನ್ನಾರವಾ?! ಪ್ರಜ್ಞಾವಂತರ ಪಕದಷ ಅಥವಾ ,ಈ ಪ್ರಜಾಕೀಯ ಎನ್ನುವಂತಹ ಸಿದ್ಧಾಂತವನ್ನು ಹಾಗಾದರೆ ಯಾರೂ ಪಾಲಿಸುತ್ತಲ್ಲವೇ ಇಲ್ಲವೇ?! ಅರ್ಧಕ್ಕರ್ಧ ಮೋದಿಯ ಆಡಳಿತವನ್ನೇ ಕಾಪಿ ಪೇಸ್ಟು ಮಾಡಿ, ಅದಕ್ಕೊಂದು ರೆಕ್ಕೆ ಪುಕ್ಕ ಹಚ್ಚಿ, ತನ್ನದೇನು ಕನಸಿದೆ ಎಂಬುದನ್ನೇ ಸರಿಯಾಗಿ ಹೇಳದೇ, ಪದೇ ಪದೇ ಪ್ರಜಾಕೀಯ ಪ್ರಜಾಕೀಯ ಎಂಬುದನ್ನೇ ಜನರ ಮುಂದೆ ಉರು ಹೊಡೆದು, ಜಾಗ್ವಾರಿನಲ್ಲೋ, ಆಡಿ ಕಾರಿನಲ್ಲಿಯೋ ಇಳಿದು, ಕಾಖಿ ವೇಷ ಹಾಕಿಬಿಟ್ಟಷ್ಟು ಸುಲಭವೇ ಅಲ್ಲ ಒಂದು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು! ಅಥವಾ, ಆಡಳಿತದ ಬಗ್ಗೆಯಾಗಲಿ, ಅಥವಾ ಯಾವುದೇ ಸಾಮಾಜಿಕ ಕರ್ತವ್ಯದ ಅನುಭವವೂ ಇಲ್ಲದೇ, ಅದ್ಯಾವುದೋ ಹುನ್ನಾರಕ್ಕೆ ಪಕ್ಷ ಕಟ್ಟಿದ ಉಪೇಂದ್ರರವರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ!!

ನೇರವಾಗಿಯೇ ಹೇಳಿಬಿಡುತ್ತೇನೆ! ಪ್ರಜಾಕೀಯ ಮಾಡುತ್ತೇನೆಂದು ಹೊರಟ ಉಪೇಂದ್ರರವರು, ಮಹೇಶ್ ಗೌಡರೊಡಗೂಡಿ ಕಟ್ಟಿದ ಮೊದಲನೇ ಪಕ್ಷವಾದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಪರ್ಧಿಸುವ ಮೊದಲೇ ಭಿನ್ನಮತ ಕಂಡು, ಚಿತ್ರಾನ್ನವಾಗಿದೆ! ಆರೋಪವೊಂದು ಏನೇ ಇರಲಿ! ಆದರೆ, ಸಿನಿಮಾದಲ್ಲಿ ಅಹಂಕಾರ ಗೆದ್ದಂತೆ ನಟನೆ ಮಾಡುವಷ್ಟು ಸುಲಭವೇ ರಾಜಕೀಯ?!

ಬಿಡಿ! ಮಾತು ಮಾತಿಗೂ ರಾಜಕೀಯ ಮಾಡೋಲ್ಲ, ಪ್ರಜಾಕೀಯ ಮಾಡುತ್ತೇನೆಂದು ಹೊರಟ ಉಪೇಂದ್ರರವರು ಚುನಾವಣೆಗೆ ಸ್ಪರ್ಧಿಸುತ್ತಿರುವುದ್ಯಾಕೆ ಸ್ವಾಮಿ?! ಅಥವಾ, ಮತ್ತದೇ “ಪಕ್ಷ ಕಟ್ಟುವ” ಜಿದ್ದಿಗೆ ಬಿದ್ದಿದ್ಯಾಕೆ?! ರಾಜ್ಯದ ಚುನಾವಣೆ ರಾಜಕೀಯವಲ್ಲವೇ?! ಪ್ರಜಾಕೀಯವೆಂದರೆ ಹಾಗಾದರೆ ರಾಜಕೀಯವೆಂಬ ಅರ್ಥವೇ?! ಪ್ರಜಾಕೀಯ ಮಾಡುವವರಾಗಿದ್ದರೆ ಚುನಾವಣೆಗಿಳಿಯುತ್ತಿರಲಿಲ್ಲ! ಬದಲಾಗಿ, ಸಾಮಾಜಿಕ ಸೇವೆ ಮಾಡುತ್ತ, ಅಗತ್ಯ ಬಿದ್ದಾಗ ರಾಜ್ಯದ ಸರಕಾರಕ್ಕೆ ಸಲಹೆ ನೀಡುವಂತಹದ್ದು ಮಾತ್ರ ಪ್ರಜಾಕೀಯವಷ್ಟೇ!!

ವಿಚಿತ್ರವೆಂದರೆ, ಇದೇ ಉಪೇಂದ್ರರವರು ಅದ್ಯಾವುದೋ ಸಿನಿಮಾ ಮಾಡಿದ್ರು! ಅದರಲ್ಲಿ, ನಾಯಕನ ಹೆಸರೇ ‘ನಾನು’! ಅಂದರೆ ಅಹಂಕಾರ ಪ್ರಧಾನವಾಗಿ ಮಾಡಿದ ಚಿತ್ರವೊಂದು ಸಮಾಜಕ್ಕೊಂದು ಸಂದೇಶ ನೀಡಿತ್ತು! ಕೇವಲ ನಾನೆಂಬ ಅಹಂಕಾರಕ್ಕೊಳಪ್ಪಟ್ಟು ಹೋದರೆ, ಏನೆಲ್ಲ ಆಗಬಹುದು ಎಂಬ ಸಿನಿಮಾವೊಂದು ಬಹಳ ಪ್ರಸಿದ್ಧಿಯನ್ನೂ ಗಳಿಸಿತ್ತು! ಕೊನೆಗೆ, ಸಾಲದೆಂಬಂತೆ ಇನ್ನೊಂದು ಸಿನಿಮಾವನ್ನೂ ಮಾಡಿ ನಾಯಕ ‘ನೀನು’ ಎನ್ನತೊಡಗಿದಾಗ, ಅಬ್ಬೋ! ಮನುಷ್ಯನಿಗೆ ಅಹಂಕಾರ ಇಳಿಯಿತಾ ಎಂದುಕೊಳ್ಳುವಾಗ, ಉಪೇಂದ್ರರ ವೈಯುಕ್ತಿಕ ಜ್ಯೋತಿಷಿಯೊಬ್ಬರು ತನಗೆವ ತಾನು ‘ಇವನು’ ಎನ್ನತೊಡಗಿದ್ದರು!! ಸಿನಿಮಾಗಳಲ್ಲೇನೋ ತನ್ನ ತಾ ನಾನು, ನೀನು ಎಂದೆಲ್ಲ ಅದ್ಭುತ ಸಿದ್ದಾಂತಗಳನ್ನು ಕೊಟ್ಟ ಉಪೇಂದ್ರರು ಒಂದು ಪುಸ್ತಕವನ್ನೂ ಬರೆದು, ಇದನ್ನು ಯಾರೂ ಓದಬೇಡಿ ಎನ್ನುವ ಶೀರ್ಷಿಕೆ ಕೊಡುತ್ತಿದ್ದ ಹಾಗೆ ಪುಸ್ತಕಗಳು ಯರ್ರಾಬಿರ್ರಿ ಬಿಕರಿಯಾಗುತ್ತವೆ! ಒಂದು ಸಿನಿಮಾ ಮಾಡಿ, ಇದು ಬುದ್ದಿವಂತರಿಗೆ ಮಾತ್ರ ಎನ್ನುವ ಅಡಿ ಬರಹ ನೀಡುತ್ತಲೇ, ಬುದ್ದಿವಂತನೆಂದು ತೋರಿಸಿಕೊಳ್ಳಲು ಟಾಕೀಸಿಗೆ ಹೋಗುವ ಜನರಿಂದ ಸಿನಿಮಾ ಒಂದೇ ದಿನದಲ್ಲೊ ಕೋಟಿಗಟ್ಟಲೇ ಬಾಚುತ್ತದೆ! ಆದರೆ, ರಾಜಕೀಯ ಎಂಬುವುದು ಪದಗಳ ಆಟವೇ!? ಎಲ್ಲೋ ಸಿನಿಮಾ ಮಾಡಿಕೊಂಡಿದ್ದವರು, ಸಮಾಜದ ಯಾವುದೇ ರೀತಿಯ ಕಷ್ಟಗಳನ್ನು ನೋಡದೇ, ಸಾಮಾಜಿಕವಾದ ಸೇವೆಯನ್ನೂ ನಿರ್ವಹಿಸದೇ, ಯಾವುದೇ ಯಾರದೇ ಅನುಭವಸ್ಥ ರಾಜಕೀಯ ನಾಯಕರ ಬೆಂಬಲವಿಲ್ಲದೇ, ತನ್ನದೇ ಆದ ವೈಯುಕ್ತಿಕ ಸಿದ್ಧಾಂತಗಳನ್ನು ಸಾರ್ವಜನಿಕವಾಗಿ ಹೇರಿ ಒಂದು ಪಕ್ಷ ಕಟ್ಟುತ್ತೇನೆಂದು ಅಬ್ಬರಿಸಿದ ಮಾತ್ರಕ್ಕೆ ಜನ ನಂಬಿ ಬಿಡುತ್ತಾರೆಯೇ?!

ಇವತ್ತು, ಕೆಪಿಜೆಪಿ ಪಕ್ಷದಿಂದ ಹೊರ ಬಂದಿರುವ ಉಪೇಂದ್ರರ ಪ್ರಕಾರ ಅಭ್ಯರ್ಥಿಗಳಿಗೆ ಬಿ ಫಾರ್ಮ್ ನೀಡುವಾಗ ಸಹಿ ತನ್ನದು ಮಾತ್ರ ಇರಬೇಕೆಂಬ ಹಠವಾದರೆ, ಮಹೇಶ್ ಗೌಡರದ್ದು ಇಬ್ಬರದ್ದು ಸಹಿ ಇರಲಿ ಎಂಬ ಮುಂದಾಲೋಚನೆ! ಸಿನಿಮಾದಲ್ಲಿ ತೋರಿದ ಸಿದ್ದಾಂತವನ್ನು ಗಾಳಿಗೆ ತೂರಿ, ನಾನು ನಾನು ಎನ್ನುತ್ತಿರುವ ಉಪೇಂದ್ರರವರಿಗೆ ಸಿನಿಮಾದಲ್ಲಿ ಮಾತ್ರವಷ್ಟೇ ಜ್ಞಾನೋದಯವಾಯಿತೇ?! ವಾಸ್ತವದಲ್ಲಿ, ಮತ್ತದೇ ನಾನೆಂಬ ಕಟ್ಟು ಪಾಡಿಗೆ ಬಿದ್ದ ಉಪೇಂದ್ರರವರಿಗೆ ಕಲಿಯುವುದು ಬಹಳಷ್ಟಿದೆ ಎನ್ನುವುದು ಸುಳ್ಳಲ್ಲ!! ಸಿನಿಮಾದಲ್ಲಿ ಪದಗಳಲ್ಲಾಡಿದಷ್ಟು ಆಟವನ್ನು ರಾಜಕೀಯದಲ್ಲಾಡುವುದಕ್ಕೆ ಸಾಧ್ಯವಿದೆಯೇ?! ಅಥವಾ, ರಾಜಕೀಯವೂ ಸಹ ಪದಗಳ ಆಟ ಎಂಬಂತೆ ಭ್ರಮಿಸಿದ್ದಾರೋ ಗೊತ್ತಿಲ್ಲ ಬಿಡಿ!!

ಇವೆಲ್ಲವನ್ನೂ ಹೊರತು ಪಡಿಸಿ ಒಂದೇ ಮಾತು ಉಪೇಂದ್ರರವರಿಗೆ ಅರ್ಥವಾಗಲೇಬೇಕಿತ್ತು!! ಯಾವಾಗಲೂ ಸಹ ಕಾರ್ಮಿಕರನ್ನು ಬಿಂಬಿಸಲು ಖಾಕಿ ತೊ್ಟ್ಟು ಬರುವ ಉಪೇಂದ್ರರಿಗೆ ಒಬ್ಬ ಆಟೋ ವಾಲಾನ ಬದುಕಿನ ಗತಿಯ ಅರಿವಿದೆಯೇ?!! ವಿಷಯ ಇಷ್ಟೇ!! ಕಾರ್ಮಿಕನ ವೇಷ ತೊಟ್ಟು, ಮರ್ಸೀಡಿಸ್ ಕಾರಿನಲ್ಲಿಯೋ, ಆಡಿ ಕಾರಿನಲ್ಲಿಯೋ ಇಳಿಯುವ ಉಪೇಂದ್ರರಂತಹವರು ಆಟೋವಾಲಾನ ಬದುಕನ್ನು ನಿಜವಾಗಿಯೂ ಅರಿಯುವ ಪ್ರಯತ್ನ ಮಾಡುವುದು ವ್ಯಂಗ್ಯವಾಡುತ್ತಲೇ?! ಒಬ್ಬ ಶ್ರೀಮಂತ ಹರಕು ಅಂಗಿಯನ್ನು ಧರಿಸಿ, ಮರ್ಸೀಡಿಸ್ ಕಾರಿನಿಂದಿಳಿದರೆ ಅದು ಫ್ಯಾಶನ್ನು! ಇವತ್ತಿನ ಟ್ರೆಂಡು! ಅದೇ, ಒಬ್ಬ ಬಡವನಾದವನು ಹರಿದ ಬಟ್ಟೆ ಹಾಕಿದರೆ, ಆತ ದರಿದ್ರ!! ಇದನ್ನು ಹೇಳ ಹೊರಟಿರುವರೇ ಉಪೇಂದ್ರರವರು?! ಕೇಳಿದಾಗಲೆಲ್ಲ, ನೋಡಿದಾಗಲೆಲ್ಲ ಕಾರ್ಮಿಕನನ್ನು ಭಜಿಸುವ ಇದೇ ಉಪೇಂದ್ರರು ತಾವು ಆಸ್ತಿ ಮಾರುವುದು ಬೇಡ! ತಮ್ಮ ಕುಟುಂಬದೊಂದಿಗೆ ಕಾರ್ಮಿಕರು ವಾಸಿಸುವ ಹಾಗೆ ಆಟೋ ಓಡಿಸಿಕೊಂಡೋ ಬಂದಷ್ಟು ದುಡ್ಡಿನಲ್ಲಿ ಸಂಸಾರ ನಡೆಸಿ ತದನಂತರ, ಅವರ ನೋವುಗಳ ಬಗ್ಗೆ ಮಾತನಾಡಿದರೆ ಅದಕ್ಕೊಂದು ಅರ್ಥವಿದೆಯೇ ಹೊರತು, ಸುಖಾ ಸುಮ್ಮನೆ ಪ್ರಜಾಕೀಯ, ಈ ಕೀಯ ಎಂದೆಲ್ಲ ಮಾಧ್ಯಮದ ಮುಂದೆ ಹೈಪು ಕೊಟ್ಟುಕೊಳ್ಳುವುದನ್ನು ಬಿಟ್ಟು, ಮತ ಒಡೆಯುವ ಹುನ್ನಾರವೊಂದನ್ನು ಇಲ್ಲಿಗೆ ನಿಲ್ಲಿಸಿದರೆ ಬಹುಷಃ ಮರ್ಯಾದೆಯಾದರೂ ಉಳಿದಿತೇನೋ?!

ಉಪೇಂದ್ರರವರ ನಡೆ ನೋಡಿದರೆ, ಇವರೊಬ್ಬರು ಭರವಸೆ ನೀಡುವ ಒಬ್ಬ ನಾಯಕನಾಗಿ ಕಾಣುವುದೇ ಇಲ್ಲ! ಬದಲಿಗೆ, ಅರವಿಂದ್ ಕೇಜ್ರಿವಾಲ್ ಪಾರ್ಟ್ ೨ ಎನ್ನಿಸದೇ ಇರದು! ಕೇಜ್ರಿವಾಲ್ ರು ಅಣ್ಣಾ ಹಜಾರೆ ಜೊತೆ ಭ್ರಷ್ಟಾಚಾರ ರಹಿತವಾದ ಸರಕಾರದ ಸಂಕಲ್ಪ ಮಾಡಿ, ಆಮ್ ಆದ್ಮಿ ಪಕ್ಷ – ಶ್ರೀ ಸಾಮಾನ್ಯರ ಪಕ್ಷ ಎಂದೆಲ್ಲ ಆಕರ್ಷಕ ಹೆಸರುಗಳನ್ನು ನೀಡಿ, ಮೊದಲ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದರೇನೋ ಸರಿ! ಆದರೆ, ಇವತ್ತು?! ನಂಬಿದ ಕಾರ್ಯಕರ್ತರಿಗೆ ಸ್ವತಃ ಕೇಜ್ರೀವಾಲರೇ ಭ್ರಷ್ಟಾಚಾರದ ಪ್ರಕರಣ ಎದುರಿಸಿ ಆಘಾತ ನೀಡಿದ್ದಲ್ಲದೇ, ಸಮಾಜದ ನಂಬಿಕೆಗೆ ಕೊಡಲಿ ಏಟನ್ನೂ ಕೊಟ್ಟಿದ್ದು ಸಾಲದೆಂಬಂತೆ, ಭಾರತದ ಆಡಳಿತ ವ್ಯವಸ್ಥೆಯನ್ನೇ ಅವ್ಯವಸ್ಥೆಯನ್ನಾಗಿಸಿದ ಪ್ರಕರಣವಿದೆಯಲ್ಲವಾ?! ಅದು ಇಂತಹ ಎಡಬಿಡಂಗಿ ಸ್ವತಂತ್ರ್ಯ ಪಕ್ಷ ಕಟ್ಟುವಂತಹ ಅವಿವೇಕಿಗಳಿಗೆ ಹೇಳಿ ಮಾಡಿಸಿದ ಜ್ವಲಂತ ಉದಾಹರಣೆ ಅಷ್ಟೇ!

ರಾಜಕೀಯವೆಂದರೆ ಪದಗಳ ಆಟವೂ ಅಲ್ಲ! ಪ್ರಜಾಕೀಯ ಎಂದರೆ ಸಿನಿಮಾಗಳ ಸಿದ್ದಾಂತಗಳೂ ಅಲ್ಲ! ಇದು ಉಪೇಂದ್ರರಂತಹವರಿಗೆ ಅರ್ಥವಾಗಬೇಕಿದೆ! ಆವೇಶಕ್ಕೆ ಬಿದ್ದು, ಸ್ವತಂತ್ರ್ಯ ಪಕ್ಷ ಕಟ್ಟಿ, ಮತಗಳನ್ನು ಒಡೆದು, ಕರ್ನಾಟಕವನ್ನು ಅತಂತ್ರಗೊಳಿಸುವಲ್ಲಿ ಹೆಜ್ಜೆ ಇಟ್ಟಿರುವ ಉಪೇಂದ್ರರವರ ಪ್ರಜಾಕೀಯದ ಕನಸಿಗೆ ವ್ಯಂಗ್ಯಪೂರ್ಣ ಅಭಿನಂದನೆಗಳು!

– ತಪಸ್ವಿ

Editor Postcard Kannada:
Related Post