X

ಕೊನೆಗೂ ಚುನಾವಣಾ ಅಖಾಡಕ್ಕಿಳಿದ ರಾಕಿಂಗ್ ಸ್ಟಾರ್..! ಮೈಸೂರಿನಲ್ಲಿ ಭರ್ಜರಿ ಪ್ರಚಾರ ಮಾಡಲಿರುವ ಯಶ್…

ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ, ರಾಜಕಾರಣಿಗಳ ಗದ್ದಲವೂ ಮುಗಿಲು ಮುಟ್ಟುತ್ತಿದೆ. ಉಧ್ಯಮಿಗಳು ರಾಜಕಾರಣಿಗಳು ಎಂಬಂತೆ ಸಾಲು ಸಾಲು ನಾಯಕರುಗಳು ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ಮಧ್ಯೆ ರಾಜಕೀಯದಲ್ಲಿ ಹೆಚ್ಚಾಗಿ ಸದ್ದು ಮಾಡೋದು ಸಿನಿ ರಂಗ. ಇದೀಗ ಸಿನಿ ರಂಗವೂ ರಾಜಕೀಯ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಭರ್ಜರಿ ಪ್ರಚಾರದತ್ತ ಮುಖ ಮಾಡುತ್ತಿದೆ.

ರಾಜಕೀಯ ಅಖಾಡಕ್ಕೆ ಇಳಿದೇ ಬಿಟ್ಟ ರಾಕಿಂಗ್ ಸ್ಟಾರ್ ಯಶ್…

ಈ ಹಿಂದೆಯೂ ರಾಜಕೀಯದ ಬಗ್ಗೆ ಮಾತನಾಡಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಚುನಾವಣಾ ಅಖಾಡಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಗ್ಗೆ ಮತನಾಡಿದ್ದ ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಇದೀಗ ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿಕೊಂಡಿರುವ ಯಶ್ ಇದೀಗ ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಮಾಜಿ ಸಚಿವ ರಾಮದಾಸ್ ಪರ ಪ್ರಚಾರ..!

ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ರಾಮದಾಸ್ ಅವರ ಪರ ಪರವಾಗಿ ಸ್ಯಾಂಡಲ್ ವುಡ್ ನಟ ಯಶ್ ಭರ್ಜರಿ ಪ್ರಚಾರವನ್ನು ನಡೆಸಲಿದ್ದಾರೆ. ಮೈಸೂರಿನ ಕೆ.ಆರ್. ಕ್ಷೇತ್ರದಿಂದ ಕಣಕ್ಕಿಳಿದಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಮದಾಸ್ ಅವರ ಪರವಾಗಿ ಚಿತ್ರ ನಟ ಯಶ್ ಪ್ರಚಾರ ನಡೆಸಲಿದ್ದಾರೆ. ಈ ಬಾರಿ ಕೆಆರ್ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವ ಮೂಲಕ ರಾಮದಾಸ್ ಅವರನ್ನು ಆಯ್ಕೆ ಮಾಡಿ ಎಂದು ಭರ್ಜರಿ ಮಾಡಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

“ಯುವಕರು ಜನಪರ ಕಾಳಜಿಯನ್ನು ಹೊಂದಿಕೊಂಡಿರಬೇಕು. ಹೀಗಿದ್ದಲ್ಲಿ ಮಾತ್ರವೇ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಓರ್ವ ಅಭಿವೃದ್ಧಿಯ ಚಿಂತಕ. ಅವರು ಅಗ್ರೆಸಿವ್ ನಾಯಕ. ಇಂತಹಾ ನಾಯಕ ದೇಶಕ್ಕೆ ತುಂಬಾನೇ ಅಗತ್ಯ. ದಿನದ 18 ಗಂಟೆಯೂ ಅವರು ದೇಶಕ್ಕಾಗಿ ಕೆಲ ಮಾಡೋದು ಅವರ ದೇಶಭಕ್ತಿಯನ್ನು ಬಿಂಬಿಸುತ್ತದೆ” ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಯಶ್ ಹೇಳಿದ್ದರು.

“ರಾಜಕೀಯಕ್ಕೆ ತಾನು ಪ್ರವೇಶಿಸುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡೋದಿಲ್ಲ. ನನ್ನ ಆತ್ಮೀಯ ಸ್ನೇಹಿತರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ” ಎಂದು ಹೇಳಿದ್ದಾರೆ. “ಕೆ ಆರ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಮದಾಸ್ ಅವರು ನನ್ನ ಆತ್ಮೀಯ ಸ್ನೇಹಿತರು. ಅವರಿಗೆ ಮತ್ತೊಮ್ಮೆ ಅಧಿಕಾರ ಕೊಡಿ” ಎಂದು ಕೇಳಿಕೊಂಡರು. ಮಾತ್ರವಲ್ಲದೆ ತಾನು ಜೆಡಿಎಸ್ ಪಕ್ಷದ ಸಾರಾ ಮಹೇಶ್ ಪರವೂ ಪ್ರಚಾರ ನಡೆಸುವುದಾಗಿಯೂ ಹೇಳಿಕೊಂಡಿದ್ದಾರೆ.

ನಟ ಯಶ್ ಈ ಹಿಂದೆ ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆಗೂಡಿ ಬರ ಪ್ರದೇಶಕ್ಕೆ ತೆರಳಿ ನೀರಿನ ಭವಣೆಯನ್ನು ತಣಿಸುವ ಕೆಲಸಗಳನ್ನು ಮಾಡಿದ್ದರು. ಅನೇಕ ಕೆರೆಗಳ ಹೂಳೆತ್ತಿ ನೀರು ಉಕ್ಕುವಂತೆ ಮಾಡಿ ಸರ್ಕಾರವೇ ನಾಚಿ ತಲೆ ತಗ್ಗಿಸುವಂತಹ ಕೆಲಸಗಳನ್ನು ಮಾಡಿದ್ದರು. ಇದು ರಾಜ್ಯದಾದ್ಯಂತ ಭಾರೀ ಶ್ಲಾಘನೆಗೆ ಕಾರಣವಾಗಿತ್ತು.

ಒಟ್ಟಾರೆ ಈ ಬಾರಿ ಸಿನಿ ತಾರೆಯರ ಚುನಾವಣಾ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದ್ದು ಪ್ರಚಾರದ ಕೇಂದ್ರಬಿಂದುವಾಗಿದೆ. ಈಗಾಗಲೇ ಚಿತ್ರನಟರಾದ ತಾರಾ, ಮಾಳವಿಕ, ಜಗ್ಗೇಶ್, ಸಾಯಿಕುಮಾರ್, ಶಶಿಕುಮಾರ್, ರವಿಶಂಕರ್ ಸಹಿತ ಅನೇಕ ಸಿನಿ ದಿಗ್ಗಜರು ಚುನಾವಣಾ ಅಖಾಡಕ್ಕೆ ಧುಮುಕಿ ಪ್ರಚಾರ ಕೈಗೊಳ್ಳುತ್ತಿದ್ದು ಇದೀಗ ಯಶ್ ಕೂಡಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post