X

2 ನಿಮಿಷದಲ್ಲಿ ಸರ್ಕಾರ ಉರುಳಿಸುತ್ತಾರಂತೆ ಸಿದ್ದರಾಮಯ್ಯ! ಕಾಂಗ್ರೆಸ್ ವಿರುದ್ಧವೇ ತೊಡೆ ತಟ್ಟುವರೇ ಮಾಜಿ ಮುಖ್ಯಮಂತ್ರಿ..?

ಅದೆಷ್ಟೇ ಪ್ರಯತ್ನ ಪಟ್ಟರೂ ಕಾಂಗ್ರೆಸ್ ಶಾಸಕರ ಭಿನ್ನರಾಗವನ್ನು ಅಂತ್ಯಮಾಡಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಮೈತ್ರಿ ಸರ್ಕಾರ ನಡೆಸಿದ್ದ ಕಾರಣ ಈ ಬಾರಿ ಅದೇನೇ ಕಸರತ್ತು ನಡೆಸಿದರೂ ಮಂತ್ರಿ ಸ್ಥಾನ ನೀಡಬಹುದು ಎಂಬ ಆಸೆಯಲ್ಲಿದ್ದ ಕಾಂಗ್ರೆಸ್ ಶಾಸಕರಿಗೆ ಭಾರೀ ನಿರಾಸೆಯಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಭಿನ್ನಮತ ಇದೀಗ ಮುಗಿಯುವ ಹಂತಕ್ಕೆ ಕಾಣುತ್ತಿಲ್ಲ.

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಧಶಾಸಕ ಎಂಬಿ ಪಾಟೀಲ್ ಸಹಿತ ಅನೇಕ ಶಾಸಕರು ಭಿನ್ನರಾಗ ಹಾಡುತ್ತಿರುವಾಗಲೇ ಇತ್ತ ಮತ್ತೊಂದು ಕಾಂಗ್ರೆಸ್‍ನ ತಂಡ ಭಿನ್ನಮತವನ್ನು ಮತ್ತಷ್ಟು ಭುಗಿಲೇಳುವಂತೆ ಮಾಡುತ್ತಿವೆ. ಬೀದರ್ ಜಿಲ್ಲೆಯ ಶಾಸಕರು ಕೆಂಡಾಮಂಡಲವಾಗಿದ್ದಾರೆ. ಸರ್ಕಾರವನ್ನು ನಾವು ಬೀಳಿಸಿಯೇ ಸಿದ್ದ ಎಂಬಷ್ಟರ ಮಟ್ಟಿಗೆ ತಮ್ಮ ಆಕ್ರೋಶವನ್ನು ತೋರ್ಪಡಿಸುತ್ತಿದ್ದಾರೆ.

2 ನಿಮಿಷದಲ್ಲೇ ಸರ್ಕಾರ ಪತನ..?

ಬೀದರ್ ಶಾಸಕ ಹಾಗೂ ಮಾಜಿ ಸಚಿವ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಯನ್ನು ಹಾಕುತ್ತಲೇ ಬರುತ್ತಿದ್ದ ಬೀದರ್‍ನ ಕಾಂಗ್ರೆಸ್ ಶಾಸಕರು ಇದೀಗ ತಮ್ಮ ನಾಯಕನ ಪರ ಆಕ್ರೋಶದ ಲಾಬಿ ಮಾಡಲು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನವರ ಹೆಸರನ್ನು ಮುಂದಿಟ್ಟುಕೊಂಡು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಬೀದರ್‍ನಲ್ಲಿ ಸುದ್ಧಿಗೋಷ್ಟಿ ನಡೆಸಿದ ಸಚಿವ ಸ್ಥಾನ ವಂಚಿತ ಶಾಸಕ ಈಶ್ವರ್ ಖಂಡ್ರೆ, ಬಸವ ಕಲ್ಯಾಣ ಶಾಸಕ ಪಿ.ನಾರಾಯಣ ಹಾಗೂ ಬೀದರ್ ಉತ್ತರ ಶಾಸಕ ರಹೀಂಖಾನ್ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ. ಯಾರ್ಯಾರಿಗೋ ಸಚಿವ ಸ್ಥಾನವನ್ನು ನೀಡುತ್ತೀರಿ. ನಮ್ಮ ಮಾತು ಕೇಳದಿದ್ದಲ್ಲಿ ಸರ್ಕಾರವನ್ನೇ ಬೀಳಿಸುವಷ್ಟು ಸಾಮಾರ್ಥ್ಯ ನಮಗಿದೆ ಎಂದು ಹೇಳಿದ್ದಾರೆ.

“ಕುಮಾರ ಸ್ವಾಮಿಯವರು 5 ವರ್ಷಗಳ ಸುಭದ್ರ ಸರ್ಕಾರದ ಕನಸನ್ನು ಕಟ್ಟುತ್ತಿದ್ದಾರೆ. ಆದರೆ ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸು ಮಾಡಿದ್ರೆ ಎರಡೇ ನಿಮಿಷದಲ್ಲಿ ಸರ್ಕಾರವನ್ನೇ ಬೀಳಿಸುತ್ತಾರೆ. ನೀವು ನಮ್ಮ ಸಿದ್ದರಾಮಯ್ಯನವರನ್ನು ಕಡೆಗಣಿಸುತ್ತಿದ್ದೀರಿ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಂದು ಕೂದಲನ್ನೂ ಅಲುಗಾಡಿಸಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ಪಿ.ನಾರಾಯಣ ಹೇಳಿದ್ದಾರೆ.

ಇನ್ನು ಈಶ್ವರ್ ಖಂಡ್ರೆ ಕೂಡಾ ಕಾಂಗ್ರೆಸ್ ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿದ್ದು “ನಮ್ಮ ಕಾರ್ಯಕರ್ತರು ನಮಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನೀಡಬೇಕಿತ್ತು. ನಮ್ಮ ಜಿಲ್ಲೆಯ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ರಹೀಮ್ ಖಾನ್ ಅವರೂ ಈ ಭಾಗದ ಅಲ್ಪಸಂಖ್ಯಾತರಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನೂ ಕಡೆಗಣಿಸಿದ್ದು ಅಕ್ಷಮ್ಯ” ಎಂದು ರಹೀಂ ಖಾನ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈವಾಡ ಸ್ಪಷ್ಟವಾಗುತ್ತಿದ್ದಂತೆಯೇ ಈ ಮೂವರು ಶಾಸಕರ ಹೇಳಿಕೆಯಲ್ಲಿ ಭಾರೀ ಅರ್ಥ ಬರುವಂತೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸು ಮಾಡಿದ್ರೆ 2 ನಿಮಿಷದಲ್ಲಿ ಸರ್ಕಾರ ಉರುಳಿಸುತ್ತಾರೆ ಎಂಬ ಘೋಷಣೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.

-ಏಕಲವ್ಯ

Editor Postcard Kannada:
Related Post