X

ಪಾಕಿಸ್ತಾನದ ಸೇನೆಯಲ್ಲಿ ಸೇರಿ ಕೊಂಡಿದ್ದ ಆ ಭಾರತದ ಗೂಢಾಚಾರ ಸಿಕ್ಕಿ ಬಿದ್ದ ನಂತರ ಹಿಂಸಿಸಿದರೂ ಬಾಯಿ ಬಿಡಲೇ ಇಲ್ಲ..!!

ಬರೋಬ್ಬರಿ ಹದಿನಾರು ವರ್ಷಗಳು….!!!

ಆತನನ್ನು ಯಾವ ಪರಿ ಹಿಂಸಿಸಿದರೂ ತಾನ್ಯಾರೆಂದು ಕೊನೆವರೆಗೂ ಬಾಯಿ ಬಿಡಲೇ ಇಲ್ಲ. ದಾಂಡಿಗರಂತಿದ್ದ ದೈತ್ಯ ದೇಹಿಗಳು ಆತನ ಚರ್ಮ ಸುಲಿಯುವಂತೆ ಹೊಡೆಯುತ್ತಿದ್ದರು. ಉಗುರನ್ನು ಕಿತ್ತು ಅದಕ್ಕೆ ಉಪ್ಪು ಖಾರ ಹಾಕಿ ನೀನ್ಯಾರೆಂದು ತಿಳಿಸುವಂತೆ ಕ್ರೂರವಾಗಿ ಹಿಂಸಿಸಿದರು. ಚಿತ್ರಹಿಂಸೆ ನೀಡಿದರು.. ಅವನ ಗಂಟುಗಳನ್ನು, ಮೂಳೆಗಳನ್ನು ಕೋಲಿನಿಂದ ಬಾರಿಸಿ ಹುಡಿ ಮಾಡಿದರು.. ಬಾಯಾರಿದಾಗ ಒಂದು ತೊಟ್ಟು ನೀರನ್ನೂ ಕೊಡಲಿಲ್ಲ.. ಹಸಿದಾಗ ಅನ್ನವನ್ನೂ ಹಾಕಲಿಲ್ಲ. ಕತ್ತಲ ಕೋಣೆಯಲ್ಲಿ ಕುಳಿತು ಭಾವರಹಿತ ಶೂನ್ಯ ನೋಟ ಬೀರುತ್ತಿದ್ದ ಆತನಿಗೆ ಬದುಕೆಂಬುದು ಬರೀ ಭರವಸೆಯಾಗಿಯೇ ಉಳಿಯಿತು. ಭೀಭತ್ಸ ಶಿಕ್ಷೆಗೆ ಎದೆನೋವು ಕಾಣಿಸಿತು, ಕ್ಷಯ ರೋಗ ಅಂಟಿಬಿಟ್ಟಿತು. ಆದರೂ ಶಿಕ್ಷೆ ತಪ್ಪಲಿಲ್ಲ. ಕೊನೆಗೊಂದು ದಿನ ಕ್ಷಯ ಹಾಗೂ ಹೃದಯ ಬೇನೆ ಉಲ್ಪಣಿಸಿ ಜೀವವನ್ನೇ ತೊರೆದುಬಿಟ್ಟ…

ಪಾಕಿಸ್ತಾನದಂತಹಾ ಕ್ರೂರ ರಾಷ್ಟ್ರವನ್ನು ಹೊಕ್ಕು, ಅಲ್ಲಿನ ಸ್ಫೋಟಕ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸಿ ಸಿಕ್ಕಿಬಿದ್ದ ಆತ ದೇಹದ ಮೇಲೆ ಚಪ್ಪಡಿ ಕಲ್ಲು ಹಾಕಿದಂತೆ ಹಿಂಸಿಸಿದರೂ ಜೀವಹೋಗುವವರೆಗೂ ತಾನ್ಯಾರೆಂದು ಬಾಯಿಬಿಡದೆ ಪಾಕಿಗಳ ಪಾಲಿಗೆ ನಿಗೂಢವಾಗಿಯೇ ಉಳಿದುಬಿಟ್ಟ.

ಹೌದು ಇದು ಪಾಕಿಸ್ತಾನ ಹೊಕ್ಕ ಗೂಢಚಾರಿಯ ಕಥೆ ಇದು. ಅವನನ್ನು ಬ್ಲ್ಯಾಕ್ ಟೈಗರ್ ಎಂದೇ ಕರೆಯಲಾಗುತ್ತದೆ. ಇಂತಹಾ ಎಂಟೆದೆ ಬಂಟ ಗೂಢಚಾರಿಯ ಅಸಲಿ ಹೆಸರು ರವೀಂದ್ರ ಕೌಶಿಕ್… ಈತನ ಕಥೆ ಕೇಳಿದರೆ ರಕ್ತವೆಲ್ಲಾ ಹೆಪ್ಪುಗಟ್ಟುತ್ತದಲ್ಲದೆ ಕಥೆ ಪೂರ್ತಿಯಾಗುವ ಹೊತ್ತಿಗೆ ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತದೆ. ಯಾಕೆಂದರೆ ರವೀಂದ್ರ ಕೌಶಿಕ್‍ನ ತಾಖತ್ತು ಅಂಥದ್ದು…!

ನಿಜಹೇಳಬೇಕೆಂದರೆ ರವೀಂದ್ರ ಕೌಶಿಕ್ ಯಾರೆಂದು ಪಾಕಿಸ್ತಾನಕ್ಕೆ ಇದುವರೆಗೂ ಗೊತ್ತಿಲ್ಲ.. ಈತ ಯಾರೆಂದು ಪತ್ತೆಹಚ್ಚಲು ವ್ಯರ್ಥ ಪ್ರಯತ್ನ ಮಾಡಿ ಕೊನೆಗೂ ಸೋತುಬಿಟ್ಟಿತ್ತು ಪಾಕಿಸ್ತಾನ.

ರಾಜಸ್ತಾನದ ಗಂಗಾನಗರದಲ್ಲಿ ಹುಟ್ಟಿದ ಕೌಶಿಕ್‍ಗೆ ರಂಗಭೂಮಿಯಲ್ಲಿ ನಟಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಒಂದು ವೇಳೆ ಸೈನಿಕನಾಗದೇ ಉಳಿದಿದ್ದರೆ ಇಂದು ದೊಡ್ಡ ಸ್ಟಾರ್ ನಟನಾಗುತ್ತಿದ್ದ. ಆದರೆ ಆ ಒಂದು ಘಟನೆ ಕೌಶಿಕ್‍ನ ಜೀವನದ ದಿಕ್ಕನ್ನೇ ಬದಲಿಸಿತು. ಭಾರತೀಯ ಗುಪ್ತಚರ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ ಮಂಡಳಿಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸಾಧರಣ ಪ್ರತಿಭೆ ತೋರಿದ ಕೌಶಿಕ್‍ಗೆ ಗೂಢಚಾರನಾಗುವಂತೆ ಅದ್ಯಾವನೋ ಪುಣ್ಯಾತ್ಮ ಪ್ರೇರಣೆ ನೀಡಿದ. ಮುಂದೆ ತನ್ನ ವಯೋಮಾನದ 20 ಸಂವತ್ಸರದಲ್ಲೇ ಗೂಢಚಾರನಾಗಿ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್(ರಾ) ಸಂಸ್ಥೆಗೆ ಸೇರಿಕೊಂಡ ರವೀಂದ್ರ ಕೌಶಿಕ್ ನೇರವಾಗಿ ಪಾಕಿಸ್ತಾನಕ್ಕೆ ಹೊಕ್ಕು ಅಲ್ಲಿದ್ದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಈತ ಪಾಕಿಸ್ತಾನಕ್ಕೆ ಹೊಕ್ಕಾಗ ವಯಸ್ಸು ಬರೇ 30.

ಪಾಕಿಸ್ತಾನವನ್ನು ನೋಡಿ ಒಂದೇ ನೋಟದಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಂಡ ಕೌಶಿಕ್ ಪಾಕಿಸ್ತಾನದಲ್ಲಿರಬೇಕಾದರೆ ಮುಸಲ್ಮಾನ ಸಂಸ್ಕøತಿ, ಕುರಾನ್ ಮುಂತಾದುವುಗಳನ್ನು ಲೀಲಾಜಾಲವಾಗಿ ಕರಗತ ಮಾಡಿಕೊಂಡಿದ್ದ. ಉರ್ದು ಭಾಷೆಯನ್ನು ಕಲಿತು ಕೊನೆಗೆ ಅಪ್ಪಟ ಪಾಕಿಸ್ತಾನಿಯಂತೆ ಬದಲಾದ. ಈತನನ್ನು ನೋಡಿದರೆ ಯಾರೂ ಕೂಡಾ ಪಾಕಿಸ್ತಾನಿಯಲ್ಲ ಎಂದು ಹೇಳುವಷ್ಟೂ ಅನುಮಾನ ಬರಲಿಲ್ಲ. 1975 ಬಳಿಕ ಈತ ಭಾರತೀಯ ಎಂಬ ಅಸ್ತಿತ್ವವನ್ನೇ ಅಳಿಸಿ ಹಾಕಿ, ಭಾರತೀಯನೆಂಬುವುದಕ್ಕೆ ಸುಳಿವೇ ಸಿಗದಂತೆ ಮಾಡಿಬಿಟ್ಟಿತು ಭಾರತದ ಗುಪ್ತಚರ ಸಂಸ್ಥೆ.

ರವೀಂದ್ರ ಕೌಶಿಕ್ ಆಗಿದ್ದವ ಪಾಕಿಸ್ತಾನದಲ್ಲಿ ತನ್ನ ಹೆಸರನ್ನು `ನಬಿ ಅಹ್ಮದ್ ಶಕೀರ್’ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ಕರಾಚಿ ವಿಶ್ವವಿದ್ಯಾಲಯಕ್ಕೆ ಕಾನೂನು ವಿದ್ಯಾರ್ಥಿಯಾಗಿ ಸೇರಿಕೊಂಡು ಪಾಕಿಸ್ತಾನ ಕಾನೂನನ್ನೇ ಅರಗಿಸಿಕೊಂಡ. ಪಾಕಿಸ್ತಾನ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಇದ್ದರಷ್ಟೇ ಪಾಕ್ ಸೈನ್ಯಕ್ಕೆ ಸೇರಲು ಸಾಧ್ಯ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ಕೌಶಿಕ್ ಕೊನೆಗೆ ಅದನ್ನೂ ಸಾಧಿಸಿಬಿಟ್ಟ. ಸೇನಾ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿ ಸೇನೆಗೆ ಸೇರಿದ ಈತ ಕೊನೆಗೊಂದು ದಿನ `ಮೇಜರ್’ ಆಗಿ ಪದೋನ್ನತಿಗೊಂಡ.

ಆ ಬಳಿಕ ಕೌಶಿಕ್ ಸುಮ್ಮನಿರಲೇ ಇಲ್ಲ. 10973ರಿಂದ 1983ರವರೆಗೆ ನಿರಂತರವಾಗಿ ಪಾಕಿಸ್ತಾನದ ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಕೆಲವೊಂದು ಮಾಹಿತಿಗಳು ಎಷ್ಟೊಂದು ಸ್ಫೋಟಕವಾಗಿತ್ತೆಂದರೆ ಇಷ್ಟೊಂದು ಕ್ಲಿಷ್ಟಕರ ಮಾಹಿತಿಗಳನ್ನು ಅದು ಹೇಗೆ ಸಂಗ್ರಹಿಸಿದ್ದಾನೆ ಎಂದು ಸ್ವತಃ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯೇ ತಲೆ ಚಚ್ಚಿಕೊಂಡಿದ್ದರು.

ಈತನ ಧೈರ್ಯ ಸಾಹಸವನ್ನು ಕಂಡು ಇಂದಿರಾಗಾಂಧಿ ರವೀಂದ್ರ ಕೌಶಿಕ್‍ಗೆ `ಬ್ಲ್ಯಾಕ್ ಟೈಗರ್’ ಅಂದರೆ ಕಪ್ಪು ಹುಲಿ ಎಂದು ಬಿರುದು ನೀಡಿದ್ದಳು..

ಗುಪ್ತಚರ ಇಲಾಖೆಯಂತೂ ಈತನಿಂದ ಸಿಕ್ಕ ಅಮೂಲ್ಯ ಮಾಹಿತಿಯಿಂದ ಅನೇಕರ ಬಂಡವಾಳ ಬಯಲು ಮಾಡಿತು. ದೇಶದೊಳಗಿದ್ದ ಪಾಕಿಸ್ತಾನಿ ಬೆಂಬಲಿತ ರಾಜಕಾರಣಿಗಳ ಪಟ್ಟಿ, ಪ್ರತ್ಯೇಕತಾವಾದಿಗಳ ಬೆಂಬಲ, ಉಗ್ರ ಬೆಂಬಲ, ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಇತ್ಯಾದಿ ರಹಸ್ಯ ಸಂಗತಿಗಳು ಇಲಾಖೆಗೆ ದೊರಕಿತ್ತು.

ಇಷ್ಟಾಗುವ ಹೊತ್ತಿಗೆ ರವೀಂದ್ರನಿಗೆ `ಅಮಾನತ್’ ಎಂಬ ಹುಡುಗಿ ಜೊತೆ ಲವ್ವಾಗಿ ಮದುವೆಯನ್ನೂ ಆದ. ಇವರಿಬ್ಬರ ಪ್ರೀತಿಯ ಫಲವಾಗಿ ಮುದ್ದು ಗಂಡುಮಗುವೊಬ್ಬ ಜನಿಸಿದ..

1983ರಲ್ಲಿ ಕೌಶಿಕ್‍ನ ಅದೃಷ್ಟ ಕೈಕೊಟ್ಟು ಬಿಟ್ಟಿತು. ಯಾಕೆ ಗೊತ್ತೇ? ಭಾರತ ಇನ್ಯಾತ್ ಮಸೀಹಾ ಎನ್ನುವ ಇನ್ನೊಬ್ಬ ಗೂಢಚರನನ್ನು ಪಾಕಿಸ್ತಾನಕ್ಕೆ ಕಳುಹಿಸಿಬಿಟ್ಟಿತು. ನಬೀ ಅಹ್ಮದ್ ಎಂಬಾತನಿಂದ ರಹಸ್ಯ ಮಾಹಿತಿ ಕಲೆ ಹಾಕುತ್ತಿದ್ದ ಸಂದರ್ಭ ನ್ಯಾತ್ ಮಸೀಹಾನ ಅನುಮಾನಾಸ್ಪದ ನಡುವಳಿಕೆಯಿಂದಾಗಿ ಪಾಕ್ ಸೈನಿಕರ ವಶವಾದ. ಇದರಿಂದಾಗಿ ರವೀಂದ್ರ ಕೌಶಿಕ್ ಕೂಡಾ ನಿರಾಯಾಸವಾಗಿ ಸಿಕ್ಕಿಬಿದ್ದ.

ನೀನ್ಯಾರು? ನಿನ್ನ ಅಸ್ತಿತ್ವವೇನು? ನಿನ್ನ ಕೆಲಸವೇನು? ಎಂದೆಲ್ಲಾ ನಾನಾ ತರದ ಪ್ರಶ್ನೆಗಳ ಮೂಲಕ ಕೌಶಿಕ್‍ನನ್ನು ಹಿಂಸಿಸಿ ಹಿಂಸಿಸಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಇದ್ದರು. ಆದರೆ ಕೌಶಿಕ್ ಮಾತ್ರ ತಾನು ಭಾರತೀಯ ಗುಪ್ತಚರ ಎಂದು ಕೊನೆಯವರೆಗೂ ಬಾಯಿಬಿಡಲೇ ಇಲ್ಲ. ಈ ವೇಳೆ ಈತನಿಗೆ ಯಾವ ರೀತಿ ಹಿಂಸಿಸಿದರೆಂದರೆ ಕೌಶಿಕ್‍ನ ಮೂಳೆಗಳ ಚಕ್ಕಳಗಳನ್ನು ಹುಡಿ ಮಾಡಿ ಹಿಪ್ಪೆ ಮಾಡಿದ್ದರು. ಆದರೂ ಒಂದಕ್ಷರ ಮಾಹಿತಿಯನ್ನೂ ಕಲೆಹಾಕದ ಹೇಡಿ ಪಾಕಿಸ್ತಾನ ಈತನ ಹಠಕ್ಕೆ ಶರಣಾಗಿಬಿಟ್ಟಿತು. ಕೊನೆಗೆ 1985ರಲ್ಲಿ ಈತನಿಗೆ ಪಾಕಿಸ್ತಾನ ಸರಕಾರ ಕೌಶಿಕ್‍ಗೆ ಗಲ್ಲು ಶಿಕ್ಷೆ ನೀಡಿತು. ಆದರೆ ಉಚ್ಛ ನ್ಯಾಯಾಲಯ ಈತನ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿಬಿಟ್ಟಿತು.

ಆ ಬಳಿಕ ಜೀವಮಾನ ಪೂರ್ತಿ ಮಿಯಾನ್‍ವಾಲಿ ಹಾಗೂ ಸಿಯಾಲ್‍ಕೋಟ್ ಜೈಲಲ್ಲೇ ಕೊಳೆಯಬೇಕಾಯಿತು. ಬರೋಬ್ಬರಿ ಹದಿನಾರು ವರ್ಷಗಳ ಕಾಲ ದಿನವೂ ಶಿಕ್ಷೆ, ದಿನವೂ ಹಿಂಸೆ. ಶಿಕ್ಷೆಯ ಪೆಟ್ಟಿಗೆ ಕೌಶಿಕ್‍ಗೆ ಅನಾರೋಗ್ಯ ಉಂಟಾಗಿ ಅಸ್ತಮಾ, ಕ್ಷಯರೋಗ ಅಂಟಿಬಿಟ್ಟು ಅಕ್ಷರಶಃ ನಲುಗಿ ಹೋದ. ಕೊನೆಗೆ ಎದೆನೋವು ಉಲ್ಬಣಿಸಿ ಪಾಕಿಸ್ತಾನದ ಸೆಂಟ್ರಲ್ ಮುಲ್ತಾನ್ ಜೈಲಿನಲ್ಲಿದ್ದಾಗ ರೋಗ ಉಲ್ಬಣಿಸಿ 2001ರಲ್ಲಿ ಅಸುನೀಗಿದ. ಈತನನ್ನು ಸೆಂಟ್ರಲ್ ಜೈಲಿನ ಹಿಂಭಾಗದಲ್ಲಿ ಹೂಳಲಾಯಿತು.

ಈತನ ತ್ಯಾಗದಿಂದಾಗಿ ಪಾಕಿಸ್ತಾನದ ನರಿಬುದ್ಧಿಯೆಲ್ಲಾ ಭಾರತಕ್ಕೆ ಸುಲಭವಾಗಿ ಸಿಗುತ್ತಿತ್ತು. ಜೊತೆಗೆ ಒಂದಷ್ಟು ಮಂದಿ ಗೂಢಚರಿಗಳಿಗೆ ಈತನ ಧೈರ್ಯ ಪ್ರೇರಣೆಯಾಯಿತು.

ಈತನ ಧೈರ್ಯ ಸಾಹಸ ಎಲ್ಲಾ ಈ ಜಗತ್ತಿಗೆ ಗೊತ್ತಾಗಿದ್ದು ಹೇಗೆ ಗೊತ್ತೇ? ಆತ ತನ್ನ ತಾಯಿಗೆ ಬರೆಯುತ್ತಿದ್ದ ಪತ್ರಗಳಿಂದ. ಜೈಲಲ್ಲಿದ್ದರೂ ಕೂಡಾ ರಹಸ್ಯವಾಗಿ ತನ್ನ ತಾಯಿಗೆ ಪತ್ರ ಬರೆಯುತ್ತಲೇ ಪಾಕಿಸ್ತಾನಕ್ಕೆ ಸೆಡ್ಡು ಹೊಡೆದಿದ್ದ. ಅದು ಹೇಗೆ ಪತ್ರ ಬರೆಯುತ್ತಿದ್ದನೋ ಅವನಿಗೇ ಗೊತ್ತು. ಈತನ ಪತ್ರ ಬಹಿರಂಗವಾಗುತ್ತಿದ್ದಂತೆ ಭಾರತದ ಗುಪ್ತಚರ ರವೀಂದ್ರ ಕೌಶಿಕ್‍ನ ಮೂವತ್ತು ವರ್ಷಗಳ ಸಾಹಸ ಇಡೀ ಜಗತ್ತಿಗೆ ಪರಿಚಯವಾಯಿತು. ಈತನ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡಿತು.

ರವೀಂದ್ರ ಕೌಶಿಕ್ ಅಂದು ಮಾಡಿದ ಧೈರ್ಯ ಸಾಹಸದಿಂದ ಪಾಕಿಸ್ತಾನದ ನಿಜಮುಖ ಇಂದು ಇಡೀ ಜಗತ್ತಿಗೆ ಪರಿಚಯವಾಗಿದೆ. ಆತ ಅಂದಿನ ರಹಸ್ಯ, ಸ್ಫೋಟಕ ಮಾಹಿತಿಗಳು ಇಂದಿಗೂ ಭಾರತದ ಸೈನ್ಯಕ್ಕೆ ಅಮೂಲ್ಯ ಕೊಡುಗೆಯಾಗಿ ಪರಿಣಮಿಸಿದೆ.

ಇಂಥಹಾ ರವೀಂದ್ರ ಕೌಶಿಕನ ಧೈರ್ಯ ಸಾಹಸವನ್ನು ಭಾರತೀಯರು ನೆನಪಿಸಲೇಬೇಕು..

 

ಚೇಕಿತಾನ

Editor Postcard Kannada:
Related Post