X

ಸ್ವದೇಶಿ ಪರಮಾಣು ಗಡಿಯಾರ ಅಭಿವೃದ್ಧಿಪಡಿಸಿದ ಇಸ್ರೋ!! ಭಾರತೀಯ ಬಾಹ್ಯಾಕಾಶ ಸಂಶೋಧನೆಯಿಂದ ಮತ್ತೊಂದು ಮಹತ್ವದ ಮೈಲಿಗಲ್ಲು!!

ಭಾರತೀಯ ಬಾಹ್ಯಾಕಾಶ ಸಂಶೋಧನೆಯು ಒಂದರ ಮೇಲೆ ಒಂದರಂತೆ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಲೇ ಬರುತ್ತಿದೆ!! ಇತ್ತೀಚೆಗೆಷ್ಟೇ ನೂರನೇ ಉಪಗ್ರಹವನ್ನು ಉಡಾಯಿಸಿ ಇತಿಹಾಸವನ್ನೇ ಸೃಷ್ಟಿ ಮಾಡಿದ ಬೆನ್ನಲ್ಲಿ ಇಸ್ರೋ ಮತ್ತೊಂದು ಹೊಸ ಕಾರ್ಯವನ್ನು ಮಾಡಲು ಹೊರಟಿದೆ!!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಮುಖ ಬೆಳವಣಿಗೆಯೊಂದರಲ್ಲಿ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಪರಮಾಣು ಗಡಿಯಾರವನ್ನು ಅಭಿವೃದ್ಧಿ ಪಡಿಸಿದೆ. ಅಹಮದಾಬಾದ್‍ನಲ್ಲಿರುವ ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್‍ನಲ್ಲಿ ಪರಮಾಣು ಗಡಿಯಾರವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಗಡಿಯಾರದ ಸಹಾಯದಿಂದ ಉಪಗ್ರಹಗಳು ಇರುವ ಸ್ಥಳವನ್ನು ನಿಖರವಾಗಿ ಗುರುತಿಸಬಹುದಾಗಿದೆ. ಗಡಿಯಾರವನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, ಪರೀಕ್ಷೆ ಪೂರ್ಣಗೊಂಡ ನಂತರ ಅದನ್ನು ಮುಂದಿನ ದಿನಗಳಲ್ಲಿ ಉಡಾಯಿಸಲಿರುವ ನ್ಯಾವಿಗೇಷನ್ ಉಪಗ್ರಹಗಳಲ್ಲಿ ಬಳಸಲು ಇಸ್ರೋ ಉದ್ದೇಶಿಸಿದೆ.

ಇದುವರೆಗೂ ಪರಮಾಣು ಗಡಿಯಾರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಇಸ್ರೋ ದೇಶಿಯವಾಗಿ ಗಡಿಯಾರವನ್ನು ಅಭಿವೃದ್ಧಿ ಪಡಿಸಿದೆ. ಈ ಮೂಲಕ ಈ ತಂತ್ರಜ್ಞಾನವನ್ನು ಹೊಂದಿದ ಕೆಲವೇ ದೇಶಗಳ ಪೈಕಿ ಭಾರತವೂ ಒಂದೆನಿಸಲಿದೆ. ಈ ಗಡಿಯಾರವು 5 ವರ್ಷ ಕಾರ್ಯನಿರ್ವಹಿಸಲಿದೆ ಎಂದು ಎಸ್‍ಎಸಿಯ ನಿರ್ದೇಶನಕ ತಾಪನ್ ಮಿಶ್ರಾ ತಿಳಿಸಿದ್ದಾರೆ.

ಇಸ್ರೋ ಉಡಾಯಿಸಿರುವ 7 ನ್ಯಾವಿಗೇಷನ್ ಉಪಗ್ರಹಗಳಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲಾದ 21 ಪರಮಾಣು ಗಡಿಯಾರಗಳನ್ನು ಬಳಸಲಾಗಿದೆ. ಆದರೆ ಇವುಗಳಲ್ಲಿ 9 ಗಡಿಯಾರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ನಾವಿಕ್ ನ್ಯಾವಿಗೇಷನ್ ಉಪಗ್ರಹ ಸಮೂಹದ ಭಾಗವಾಗಿ ಇನ್ನೂ ನಾಲ್ಕು ನ್ಯಾವಿಗೇಷನ್ ಉಪಗ್ರಹ ಉಡಾಯಿಸಲು ಇಸ್ರೋ ಚಿಂತನೆ ನಡೆಸಿದೆ. ಇದರಲ್ಲಿ ಸ್ವದೇಶಿ ನಿರ್ಮಿತ ಗಡಿಯಾರ ಅಳವಡಿಸಲಾಗುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಅದಲ್ಲದೆ ಇತ್ತೀಚೆಗೆ ಉಪಗ್ರಹ ಉಡಾವಣೆಗಾಗಿ ಮುಂದುವರಿದ ದೇಶ, ಖಾಸಗಿ ಸಂಸ್ಥೆಗಳು ಭಾರತೀಯ ಬಾಹ್ಯಾಕಾಶ ಸಂಸ್ಥೆಯತ್ತ ಮುಖಮಾಡಿದ್ದು ಇದರ ಬೆನ್ನಲ್ಲೇ, ಸಂಸ್ಥೆಯನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಲು ಇಸ್ರೋ ನಿರ್ಧರಿಸಿದೆ. ಸಣ್ಣ ಉಪಗ್ರಹಗಳ ಉತ್ಪಾದನೆ, ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಬೃಹತ್ ಒಕ್ಕೂಟ ರಚನೆಗೆ ಇಸ್ರೋ ಮುಂದಾಗಿತ್ತು. ಇಸ್ರೋದ ವಾಣಿಜ್ಯ ಅಂಗವಾಗಿರುವ ಆಂಟ್ರಿಕ್ಸ್ ಕಾರ್ಪೆರೇಷನ್ ನೇತೃತ್ವದಲ್ಲಿ ಈ ಒಕ್ಕೂಟ ರಚನೆಗೆ ನಿರ್ಧರಿಸಿದೆ. ಜಾಗತಿಕ ಬೇಡಿಕೆಗೆ ತಕ್ಕಂತೆ 700 ಕೆ.ಜಿಗಿಂತ ಕಡಿಮೆ ತೂಕದ ಉಪಗ್ರಹಗಳ ಉತ್ಪಾದನೆ ಹೆಚ್ಚಿಸುವುದು ಹಾಗೂ ಮಾರುಕಟ್ಟೆ ವಿಸ್ತರಿಸುವುದು ಈ ಒಕ್ಕೂಟದ ಪ್ರಮುಖ ಉದ್ದೇಶ!!

ಈ ಒಕ್ಕೂಟ ರಚನೆಯಿಂದ ಉಪಗ್ರಹ ನಿರ್ಮಾಣ ವೆಚ್ಚ ಹಾಗೂ ಅವಧಿಯಲ್ಲಿ ಕಡಿತವಾಗಲಿದೆ. ಉಪಗ್ರಹ ಉಡಾವಣೆ ವೆಚ್ಚವು 10ನೇ ಒಂದಂಶ ಕಡಿಮೆಯಾಗಲಿದ್ದು, 2019ರಲ್ಲಿ ಮೊದಲ ಉಡಾವಣೆ ನಡೆಯಲಿದೆ. ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಈ ವಿಷಯ ಬಹಿರಂಗಪಡಿಸಿದ್ದರು. ಆಂಟ್ರಿಕ್ಸ್ ಕಾರ್ಪೆರೇಷನ್ ನೇತೃತ್ವದ ಒಕ್ಕೂಟದಲ್ಲಿ ಎಲ್ ಆಂಡ್ ಟಿ, ಗೋದ್ರೇಜ್ ಏರೋಸ್ಪೇಸ್ ಹಾಗೂ ಎಚ್‍ಎಎಲ್ ಭಾಗಿಯಾಗಲಿದೆ.

ಇನ್ನು ಕೆಲವೇ ತಿಂಗಳಲ್ಲಿ ಇಸ್ರೋ ವಿಜ್ಞಾನಿಗಳು ಮಾದರಿ ಉಪಗ್ರಹ ಹಾಗೂ ರಾಕೆಟ್ ತಯಾರಿಸಲಿದ್ದಾರೆ. ಈ ಮಾದರಿ ಇರಿಸಿಕೊಂಡು ಉಳಿದ ಖಾಸಗಿ ಸಂಸ್ಥೆಯೊಂದಿಗೆ ಚರ್ಚಿಸಿ 2019ರ ಮಧ್ಯದಲ್ಲಿ ಉಪಗ್ರಹ ಉಡಾವಣೆ ನಡೆಯಲಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಜಾಗತಿಕ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ತೆರೆದುಕೊಳ್ಳುತ್ತಿದೆ ಎಂದು ಶಿವನ್ ಅಭಿಪ್ರಾಯಪಟ್ಟಿದ್ದಾರೆ.

ಇಸ್ರೋ ಮಾಹಿತಿ ಪ್ರಕಾರ ಒಂದು ಪಿಎಸ್‍ಎಲ್‍ವಿ ಉಡಾವಣೆಗೆ ಸದ್ಯಕ್ಕೆ 150 ಕೋಟಿ ರೂ. ವೆಚ್ಚವಾಗಲಿದೆ. ಒಂದು ಸಣ್ಣ ಉಪಗ್ರಹ ನಿರ್ವಣಕ್ಕೆ 40-45 ದಿನ ಬೇಕಾಗುತ್ತದೆ. ಒಕ್ಕೂಟ ರಚನೆ ಬಳಿಕ ಕೇವಲ 3-4 ದಿನದಲ್ಲಿ ಉಪಗ್ರಹ ನಿರ್ವಿಸಬಹುದು. ಜತೆಗೆ ಕೇವಲ 15 ಕೋಟಿ ರೂಪಾಯಿಯಲ್ಲಿ ಪಿಎಸ್‍ಎಲ್‍ವಿ ಉಡಾವಣೆ ಮಾಡಬಹುದಾಗಿದೆ. ಇದರಿಂದ ಇಸ್ರೋ ಸಂಸ್ಥೆಯು ಜಾಗತಿಕವಾಗಿ ಉಪಗ್ರಹ ಉಡಾವಣೆ ಮಾಡುವ ಬೃಹತ್ ಉದ್ಯಮವಾಗಿ ಬೆಳೆಯಲು ಸಾಧ್ಯವಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗುವ ಮೂಲಕ ಬಾಹ್ಯಾಕಾಶ ಯೋಜನೆಗಳಿಗೆ ಕೇಂದ್ರ ಸರ್ಕಾರದತ್ತ ಆರ್ಥಿಕ ನೆರವಿಗೆ ನೋಡುವುದು ತಪ್ಪುತ್ತದೆ. ನಾಸಾ ಹಾಗೂ ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಇದು ಇಸ್ರೋ ಸಹಕಾರಿಯಾಗಲಿದೆ.

source: https://timesofindia.indiatimes.com/india/isro-develops-desi-atomic-clock-to-be-used-in-navigation-satellites/articleshow/64056352.cms

ಪವಿತ್ರ

Editor Postcard Kannada:
Related Post