X

ತನ್ನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತೆಯರ ಚಿತ್ರ ಮುದ್ರಿಸಿ ಧರ್ಮ ಸಹಿಷ್ಣುತೆಗೆ ಹೊಸ ಭಾಷ್ಯ ಬರೆದ ಉತ್ತರ ಪ್ರದೇಶದ ಮುಸ್ಲಿಂ ಪರಿವಾರ!! 

ಒಂದೆಡೆ “ಸೆಕ್ಯೂಲರ್ ಬ್ರಿಗೇಡ್” ಹಿಂದೂ ಮುಸ್ಲಿಂರ ಮಧ್ಯೆ ತಂದಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ನಿಜವಾದ ಹಿಂದೂ-ಮುಸ್ಲಿಮರು ಧರ್ಮ ಸಹಿಷ್ಣುತೆ ಮೆರೆದು ಜಾತ್ಯಾತೀತ ಬ್ರಿಗೇಡ್ ನ ಕುತಂತ್ರಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಭಾರತಕ್ಕೂ ನೈಜ ಭಾರತಕ್ಕೂ ಬಹಳ ವ್ಯತಾಸ ಇದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕೆಲವು ದೇಶ ವಿಭಜಿಸುವ ಶಕ್ತಿಗಳ ಹಿಂದೆ ಕಾಣುವ “ಕೈ” ಗಳಿವೆ. ಈ “ಕೈ”ಗಳು ಭಾರತವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಶತಾಯ ಗತಾಯ ಪ್ರಯತ್ನ ಮಾಡುತ್ತಿವೆ.

ಆದರೆ ಈ ದೇಶ ಒಡೆಯುವ “ಕೈ”ಗಳನ್ನು ಕತ್ತರಿಸಲು ಭಾರತದ ನಾಗರಿಕರೂ ಪಣ ತೊಟ್ಟಿದ್ದಾರೆ. ಇದಕ್ಕೆ ನಿದರ್ಶನ ಉತ್ತರ ಪ್ರದೇಶದ ಸುಲ್ತಾನ್ ಪುರದ ಮುಸ್ಲಿಂ ಪರಿವಾರವೊಂದು ತನ್ನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರಾದ ರಾಮ-ಸೀತೆಯರ ಚಿತ್ರ ಮುದ್ರಿಸಿದ್ದು! ಫ಼ೈಜಾಬಾದಿನ ಬಾಗ್ ಸರಾಯಿಯೆಂಬ ಹಳ್ಳಿಯಲ್ಲಿರುವ ಸುಲ್ತಾನಪುರದ ನಿವಾಸಿಯಾದ ಮೊಹಮ್ಮದ್ ಸಲೀಂ ಅವರು ತಮ್ಮ ಮಗಳ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತೆಯರ ಚಿತ್ರ ಮುದ್ರಿಸಿ ಅದನ್ನು ತಮ್ಮ ಹಿಂದೂ ಗೆಳೆಯರಿಗೆ ನೀಡಿದ್ದಾರೆ. ಈ ಆಮಂತ್ರಣ ಪತ್ರಿಕೆ ನೋಡಿದವರೆಲ್ಲರಿಗೂ ಅಚ್ಚರಿಯಾಗಿದೆ ಮಾತ್ರವಲ್ಲ ಸಲೀಂ ಅವರನ್ನು ಬಾಯಿ ತುಂಬಾ ಕೊಂಡಾಡಿದ್ದಾರೆ. 

ಸಲೀಂ ಅವರ ಮಗಳು ಜಹಾನಾ ಬಾನುವಿನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತೆಯರ ಮದುವೆಯ ಚಿತ್ರವಿದೆ. ಆಮಂತ್ರಣ ಪತ್ರಿಕೆಯಲ್ಲಿ ಕಲಶ, ದೀಪಗಳು, ಬಾಳೆಎಲೆಗಳು  ತೆಂಗಿನಕಾಯಿ, ಹೂವು ಮತ್ತು ಹಣ್ಣುಗಳನ್ನೊಳೊಗೊಂಡ ಸಾಂಪ್ರದಾಯಿಕ ಹಿಂದೂ ಪೂಜಾ ವಸ್ತುಗಳನ್ನು ತುಂಬಿದ ‘ಪೂಜಾ ಥಾಲಿ’ ಯ ಚಿತ್ರವೂ ಇದೆ. ಈ ಬಗ್ಗೆ ಸಲೀಂ ಅವರನ್ನು ಕೇಳಿದಾಗ ಅವರು ” ಹಿಂದೂಗಳು ಮತ್ತು ಮುಸ್ಲಿಮರ ಧಾರ್ಮಿಕ ನಂಬಿಕೆಗಳ ನಡುವಿನ ಅಂತರವನ್ನು ನಾನು ಕಡಿಮೆ ಮಾಡಲು ಬಯಸುತ್ತೇನೆ. ಇದು ನಾನು ನನ್ನ ಹಿಂದೂ ಗೆಳೆಯರಿಗೆ ನೀಡುವ ಹೃತ್ಪೂರ್ವಕ ಗುರುತು, ಏಕೆಂದರೆ ಅವರೂ ಕೂಡಾ ತಮ್ಮ ಹೃದಯಾಂತರಾಳದಿಂದ ನಮ್ಮ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತಾರೆ. ನಾವು ಅವರ ಧಾರ್ಮಿಕ ವ್ಯಕ್ತಿತ್ವಗಳನ್ನು ಗೌರವಿಸಿದರೆ, ಅವರು ಖಂಡಿತವಾಗಿಯೂ ಮುಸ್ಲಿಂ ಸಮುದಾಯಕ್ಕೆ ಗೌರವವನ್ನು ತೋರಿಸುತ್ತಾರೆ.” ಎಂದು ಹೇಳುತ್ತಾರೆ.

 

ಸಲೀಂ ಅವರ ನೆರೆಮನೆಯಲ್ಲಿ ವಾಸವಾಗಿರುವ ರಾಧೆ ಶ್ಯಾಮ್ ಅವರು ಮುಸ್ಲಿಂ ಪರಿವಾರದ ಈ ನಿರ್ಧಾರವನ್ನು ಹೊಗಳುತ್ತಾ ಈ ನಿರ್ಧಾರ ಸಲೀಂ ಅವರು ಹಿಂದೂ ಧರ್ಮಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಹೃದಯ ತುಂಬಿ ಹೇಳುತ್ತಾರೆ. ಮೇಲಾಗಿ ಸಲೀಂ ಅವರ ಈ ನಿರ್ಧಾರವನ್ನು ಮುಸ್ಲಿಂ ಸಮುದಾಯದ ಯಾವೊಬ್ಬ ವ್ಯಕ್ತಿಯೂ ಟೀಕಿಸಿಲ್ಲ ಎನ್ನುವುದು ಇನ್ನೂ ಹರ್ಷದಾಯಕ ವಿಚಾರ. ಒಂದಂತೂ ನಿಜ, ಪ್ರೀತಿ ಗೌರವಗಳನ್ನು ಕೊಟ್ಟು ಪಡೆದು ಕೊಳ್ಳಬೇಕು. ಎದುರಿನ ವ್ಯಕ್ತಿ ಯಾ ಸಮುದಾಯ ಹಿಂದೂಗಳನ್ನು ಗೌರವಿಸಿದರೆ ಹಿಂದೂಗಳೂ ಅವರನ್ನು ಗೌರವಿಸುತ್ತಾರೆ. “ವಸುದೈವ ಕುಟುಂಬಕಂ” ಎಂದು ಕಲಿಸುವ ಏಕ ಮಾತ್ರ ಧರ್ಮ ಸನಾತನ ಧರ್ಮ. ಹಿಂದೂ-ಮುಸ್ಲಿಂ ಏಕತೆಗೆ ಸಾಕ್ಷಿಯಾಗುವ ಇಂತಹ ಬೆಳವಣಿಗೆಗಳು ಇನ್ನಷ್ಟು ಮತ್ತಷ್ಟು ಮೂಡಿ ಬರಲಿ.

ಸಲೀಂ ಅವರದ್ದು ಎಂತಹ ಒಳ್ಳೆಯ ಮನಸ್ಸು, ಎಂತಹ ಒಳ್ಳೆಯ ನಿರ್ಧಾರ. ವೈಯಕ್ತಿಕ ರಾಜಕೀಯ ಲಾಭಗಳನ್ನು ಸಾಧಿಸಲು ಜನರನ್ನು ಜಾತಿ-ಧರ್ಮದ ಆಧಾರದ ಮೇಲೆ ವಿಭಜಿಸುವ ವಿಭಜನಕಾರಿ ಶಕ್ತಿಗಳು ಈ ಸಾಮಾನ್ಯ ಮುಸ್ಲಿಂ ಕುಟುಂಬವು ತೆಗೆದುಕೊಂಡ ನಿರ್ಧಾರವನ್ನು ಕಣ್ಣು ಬಿಟ್ಟು ನೋಡಲಿ. ತಮ್ಮ ರಾಜಕೀಯದಾಟಕ್ಕೆ ಹಿಂದೂ -ಮುಸ್ಲಿಮರನ್ನು ದಾಳವಾಗಿ ಬಳಸಿಕೊಳ್ಳುವ  “ಜಾತ್ಯಾತೀತ ಬ್ರಿಗೇಡ್” ಗೂ ಮದುವೆಯ ಆಮಂತ್ರಣ ಪತ್ರಿಕೆಯ ಪ್ರತಿ ಕಳುಹಿಸಿಕೊಟ್ಟರೆ ಅವರೂ ಎರಡು ಧರ್ಮಗಳ ನಡುವೆ ಇರುವ ಸೌಹಾರ್ದತೆಯನ್ನು ಕಣ್ಣಾರೆ ನೋಡಿ ಹೊಟ್ಟೆ ಕಿಚ್ಚು ಪಡಲಿ.

-ಶಾರ್ವರಿ

Editor Postcard Kannada:
Related Post