X

ಇಡೀ ಚೀನಾವನ್ನೆ ಉಡೀಸ್ ಮಾಡಲಿರುವ ಕ್ಷಿಪಣಿಯೊಂದು ಭಾರತದ ಬತ್ತಳಿಕೆಗೆ!! ಅಣ್ವಸ್ತ್ರ ಕ್ಷಿಪಣಿ ಹೊಂದಿದ ವಿಶ್ವದ ಬೆರಳೆಣಿಕೆ ರಾಷ್ಟ್ರಗಳ ಪಟ್ಟಿಗೆ ಸೇರಲಿದೆಯೇ ಭಾರತ??

ಶೀಘ್ರದಲ್ಲೇ ಇಡೀ ಚೀನಾವನ್ನೇ ಗುರಿಯಾಗಿಸಿ ದಾಳಿ ಮಾಡುವ ಶಕ್ತಿ ಹೊಂದಿರುವ ಕ್ಷಿಪಣಿಯೊಂದು ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲು ಸಜ್ಜಾಗಿ ನಿಂತಿದೆ!! ಮುಡಿಯಲ್ಲಿ ಅಣ್ವಸ್ತ್ರಗಳ ಸಿಡಿತಲೆಯನ್ನು ಹೊತ್ತು 5000 ಕಿಲೋ ಮೀಟರ್ ದೂರದ ಗುರಿಯನ್ನೂ ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಈ ಕ್ಷಿಪಣಿಯು ಸಾಲು ಸಾಲಾಗಿ ನಡೆಸಿದ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಯಶಸ್ವಿ ಮುಗಿಸಿದ್ದು, ಇದೀಗ ರಕ್ಷಣೆ ವಿಷಯದಲ್ಲಿ ಭಾರತ ಹೇಗೆ ಭದ್ರ ಎಂಬುದನ್ನು ಜಗತ್ತಿಗೆ ಸಾರಲು ಮುಂದಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಮೇಕ್ ಇನ್ ಇಂಡಿಯಾ ಮೂಲಕ ಶಸ್ತ್ರಾಸ್ತ್ರ ಉತ್ಪಾದನೆ, ಖಂಡಾಂತರ ಕ್ಷಿಪಣಿ ತಯಾರು ಸೇರಿ ರಕ್ಷಣೆ ವಿಷಯದಲ್ಲೂ ಹಲವು ಕ್ರಮ ಕೈಗೊಂಡಿರುವ ಬೆನ್ನಲೇ, ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಹಾಗಾಗಿ ಇದೀಗ ಶೀಘ್ರದಲ್ಲೇ ಇಡೀ ಚೀನಾವನ್ನೇ ಗುರಿಯಾಗಿಸಿ ದಾಳಿ ಮಾಡುವ ಶಕ್ತಿ ಹೊಂದಿರುವ ಕ್ಷಿಪಣಿಯೊಂದನ್ನು ಅಳವಡಿಸಿಕೊಳ್ಳಲಿರುವ ಮೂಲಕ ಗಡಿಯಲ್ಲಿ ಪದೇಪದೆ ಉಪಟಳ ಮಾಡುವ ಚೀನಾ ಹಾಗೂ ಪಾಕಿಸ್ತಾನಕ್ಕೆ ಟಾಂಗ್ ನೀಡಲಿದೆ.

ಹೌದು… ಏಷ್ಯಾ ಖಂಡದ ಎಲ್ಲಾ ಗುರಿಗಳ ಮೇಲೆ ದಾಳಿ ನಡೆಸಬಲ್ಲ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ “ಅಗ್ನಿ-5″ರ ಪರೀಕ್ಷೆ ಯಶಸ್ವಿಯಾಗಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‍ಡಿಒ) ಅಭಿವೃದ್ಧಿಪಡಿಸಿರುವ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿ ಭಾನುವಾರ ಮುಂಜಾನೆ ನಡೆಸಲಾಗಿದೆ.

ಫೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ 20 ವರ್ಷಗಳು ತುಂಬಿದ ಸಮಯದಲ್ಲಿಯೇ ಮಹತ್ವಾಕಾಂಕ್ಷಿ ಕ್ಷಿಪಣಿ ಅಗ್ನಿ-5 ಸೇನೆಗೆ ಸೇರ್ಪಡೆಗೊಳ್ಳಲು ಸಜ್ಜಾಗುತ್ತಿರುವುದು ಭಾರತೀಯ ರಕ್ಷಣಾ ಕ್ಷೇತ್ರದ ಸಂಶೋಧನೆಯ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ. ಕ್ಷಿಪಣಿಯ ಸೇನಾ ನಿಯೋಜನೆ ದೃಡವಾಗುತ್ತಿರುವ ಹಿನ್ನಲ್ಲೆಯಲ್ಲಿ ಭಾರತ ಕೂಡ 5 ಸಾವಿರ ಕಿಲೋ ಮೀಟರ್ ಗುರಿ ತಲುಪುವ ಅಣ್ವಸ್ತ್ರ ಕ್ಷಿಪಣಿ ಹೊಂದಿದ ವಿಶ್ವದ ಬೆರಳೆಣಿಕೆ ರಾಷ್ಟ್ರಗಳ ಪಟ್ಟಿಗೆ ಸೇರಲಿರುವುದಂತೂ ಅಕ್ಷರಶಃ ನಿಜ!!

ಅಷ್ಟಕ್ಕೂ ಈ ಅಗ್ನಿ-5 ಕ್ಷಿಪಣಿ ವಿಶೇಷತೆ ಏನು ಗೊತ್ತೇ??

5,500 ರಿಂದ 5,800 ಕಿಲೋ ಮೀಟರ್ ಗುರಿ ತಲುಪುವ ಸಾಮರ್ಥ್ಯವನ್ನು ಅಗ್ನಿ 5 ಕ್ಷಿಪಣಿ ಹೊಂದಿದ್ದು, ಸುಮಾರು 1500 ಕೆ.ಜಿ. ತೂಕದ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಶಕ್ತಿ ಈ ಕ್ಷಿಪಣಿಗಿದೆ. ಡಿಆರ್ ಡಿಒನಿಂದ ಅಭಿವೃದ್ಧಿಗೊಂಡಿರುವ ಕ್ಷಿಪಣಿಯಾಗಿದ್ದು, ಚೀನಾ, ಆಫ್ರಿಕಾ ಹಾಗೂ ಐರೋಪ್ಯ ದೇಶಗಳ ಮೇಲೆ ದಾಳಿ ಮಾಡಬಹುದಾಗಿದೆ. 5 ಸಾವಿರ ಕಿಲೋ ಮೀಟರ್ ಗೂ ಅಧಿಕ ದೂರ ತಲುಪುವ ಕ್ಷಿಪಣಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ಪಟ್ಟಿಗೆ ಭಾರತ ಸೇರಲಿದೆ.

ಒಡಿಶಾ ಕರಾವಳಿಯಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿ ಭಾನುವಾರ ಮುಂಜಾನೆ 9.50 ಕ್ಕೆ ಇದರ ಪರೀಕ್ಷೆ ನಡೆದಿದ್ದು ಅಗ್ನಿ-5 ಯಶಸ್ವಿ ಪರೀಕ್ಷೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ ಎಂದು ಸೇನಾ ಮೂಲಗಳು ಹೇಳಿದೆ. ಮೂರು ಹಂತಗಳ ಎಂಜಿನ್ ಹೊಂದಿರುವ, ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿ ಇದಾಗಿದ್ದು ಪಥದರ್ಶಕ, ಪಥ ನಿರ್ದೇಶನ ವ್ಯವಸ್ಥೆ, ಅಣ್ವಸ್ತ್ರ ಸಿಡಿತಲೆ ಮತ್ತು ಎಂಜಿನ್ ಅಭಿವೃದ್ಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ನಿಖರವಾಗಿ ಗುರಿಯನ್ನು ತೋರುವ ವ ರಿಂಗ್ ಲೇಸರ್ ಗೈರೊ ಬೇಸ್ಡ್ ಇನರ್ಷಿಯಲ್ ನೇವಿಗೇಷನ್ ಸಿಸ್ಟಮ್ (ಆರ್‍ಐಎನ್‍ಎಸ್) ಮತ್ತು ಅತ್ಯಾಧುನಿಕವಾದ ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್‍ಎಸ್) ಕ್ಷಿಪಣಿಯಲ್ಲಿ ಅಳವಡಿಸಲಾಗಿದೆ.

ಚೀನಾದ ಬೀಜಿಂಗ್, ಶಾಂಘೈ ನಗರ ಹಾಗೂ ಹಾಂಕಾಂಗ್ ರಾಷ್ಟ್ರವನ್ನೂ ತಲುಪಬಲ್ಲ ಸಾಮರ್ಥ್ಯ ಅಗ್ನಿ -5 ಕ್ಷಿಪಣಿಗಿದೆ. ಕಾಲಕಾಲಕ್ಕೆ ಬದಲಾಗುವ ನವನವೀನ ತಂತ್ರಜ್ಞಾನ ಬಳಸಿಕೊಂಡು ಕ್ಷಿಪಣಿಯ ಚಲನೆಯ ವೇಗ ಹಾಗೂ ದಾಳಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐದಾರು ವರ್ಷಗಳಿಂದ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿಕೊಂಡು ಬರಲಾಗಿದೆ. ಈಗಾಗಲೇ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಹಾಗೂ ಉತ್ತರ ಕೊರಿಯಾ ಬಳಿ ಇಂತಹ ಸಾಮರ್ಥ್ಯದ ಖಂಡಂತಾರ ಕ್ಷಿಪಣಿಗಳಿವೆ. ಭಾರತದ ಬಳಿ ಅಗ್ನಿ -1 ( 700 ಕಿ.ಮೀ)ಅಗ್ನಿ -2 (2,000 ಕಿ.ಮೀ), ಅಗ್ನಿ -3 ಮತ್ತು ಅಗ್ನಿ- 4 (2500 ದಿಂದ 3500 ಕಿ.ಮೀ) ಸುಧಾರಿತ ರೂಪವೇ ಅಗ್ನಿ -5 ಕ್ಷಿಪಣಿಯಾಗಿದೆ.

ಒಟ್ಟಿನಲ್ಲಿ, ಕಡಿಮೆ ಅಂತರದ ಪೃಥ್ವಿ, ಧನುಷ್ ಮತ್ತು ಅಗ್ನಿ-1, 2, ಮತ್ತು 3 ಕ್ಷಿಪಣಿಗಳು ಪಾಕಿಸ್ತಾನವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದ್ದಲ್ಲದೇ ಅಗ್ನಿ- 4 ಮತ್ತು 5 ಚೀನಾವನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಿದ ಕ್ಷಿಪಣಿಗಳಾಗಿವೆ. ಹಾಗಾಗಿ ಈ ಅತ್ಯಾಧುನಿಕ ಅಗ್ನಿ-5 ಕ್ಷಿಪಣಿ ಚೀನಾದ ಉತ್ತರ ಭಾಗದ ಬಹುಪಾಲು ಪ್ರದೇಶವನ್ನು ಮುಟ್ಟಬಲ್ಲದಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದ್ದು, ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕು ಹುಟ್ಟಿಸಿದೆ.

ಮೂಲ:
https://www.ndtv.com/

– ಅಲೋಖಾ

Editor Postcard Kannada:
Related Post