X

ಮೋದಿಯನ್ನೇ ಅಚ್ಚರಿಗೊಳಿಸಿದ ಕರಾವಳಿ ಜನತೆ! ದಾಖಲೆ ಸೃಷ್ಟಿಸಿದ ನಮೋ ಝೇಂಕಾರ…

ಮೋದಿ ಮೋದಿ ಮೋದಿ… ವಿಧಾನಸಭಾ ಚುನಾವಣೆಯ ಅಂಚಲ್ಲಿರುವ ಕರ್ನಾಟಕ ರಾಜ್ಯ ಮೂಲೆ ಮೂಲೆಯಿಂದಲೂ ಕೇಳಿಬರುತ್ತಿರುವ ನಾದ ಮೋದಿ. ಇನ್ನೇನು ಚುನಾವಣೆ ಹತ್ತಿರ ಇರುವಾಗಲೇ ಮ್ಯಾಜಿಕ್ ಮಾಡಲು ಹೊರಟಿರುವ ದೇಶ ಕಂಡ ಶ್ರೇಷ್ಠ ಪ್ರಧಾನ ಮಂತ್ರಿ ಮೋದಿಯವರನ್ನು ಚುನಾವಣಾ ಪ್ರಚಾರದ ಅಖಾಡಕ್ಕಿಳಿಸಿದೆ. ಈ ಮೂಲಕ ಈ ಬಾರಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿದೆ.

ಕುಡ್ಲದ ಮೋಕೆಗ್ (ಮಂಗಳೂರಿನ ಪ್ರೀತಿಗೆ) ನಮೋ ನಮಃ…

ಹಿಂದಿನಿಂದಲೂ ಪ್ರಧಾನಿ ಮೋದಿಯವರಿಗೆ ಮಂಗಳೂರು ಅಂದರೆ ತುಂಬಾನೆ ಇಷ್ಟ. ಅದಕ್ಕೆ ಕಾರಣ ಮೋದಿ ಮೇಲೆ ಕರಾವಳಿಗರು ಇಟ್ಟಿರುವ ಪ್ರೀತಿ. ಮೋದಿ ಬರ್ತಾರೆಂದರೆ ಸಾಕು ನಡುರಾತ್ರಿಯವರೆಗೂ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತು ಸಾವಿರಾರು ಸಂಖ್ಯೆಯಲ್ಲಿ ಸ್ವಾಗತಿಸಿದ್ದಿದೆ. ಇದು ಮೋದಿಯವರನ್ನು ಮತ್ತಷ್ಟು ಪುಳಕಿತಗೊಳ್ಳುವಂತೆ ಮಾಡಿತ್ತು.

ಮೋದಿಯ ಹಾದಿಯುದ್ದಕ್ಕೂ ಮೋದಿ ಮೋದಿ ಝೇಂಕಾರ..!

ಪ್ರಧಾನಿ ಇಷ್ಟೊತ್ತಿಗೆ ಬರಬೇಕಿತ್ತು, ಆದರೆ ಇನ್ಪೂ ಯಾಕೆ ತಡವಾಗುತ್ತಿದೆ ಎಂದು ಸಭೆಯಲ್ಲಿದ್ದ ಲಕ್ಷಾಂತರ ಜನರ ಪ್ರಶ್ನೆಯಾಗಿತ್ತು. ಆದರೆ ಇದಕ್ಕೆ ಮೋದಿ ನೀಡಿದ ಉತ್ತರ ಅದ್ಭುತವಾಗಿತ್ತು. ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೂ ಜನತೆ ಕಿಕ್ಕಿರಿದು ನನ್ನನ್ನು ಸ್ವಾಗತಿಸಲು ನಿಂತಿದ್ದರು. ಅವರಿಗೆ ನಾನು ವಿಶ್ ಮಾಡುತ್ತಲೇ ಬಂದೆ. ಹೀಗಾಗಿ ಕೊಂಚ ತಡವಾಯಿತು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ಮಂಗಳೂರಿನ ಕೇಂದ್ರ ಮೈದಾನದವರೆಗೆ ಆಗಮಿಸುವ ರಸ್ತೆಯಲ್ಲಿ ಜನರು ಸಾಲುಗಟ್ಟಿ ನಿಂತು ಮೋದಿಯವರನ್ನು ಸ್ವಾಗತಿಸಿದ್ದರು. ಇದು ಮೋದಿಯವರನ್ನು ಇನ್ನೆಲ್ಲಿಲ್ಲದ ಅಚ್ಚರಿಗೆ ಮೂಡಿತ್ತು . ಕಡಲತಡಿಯ ಜನತೆಯ ಅಭಿಮಾನ ಕಂಡು ನಮೋ ಅಂದುಬಿಟ್ಟರು.

ತುಳು ಭಾಷೆಯಲ್ಲಿ ಭಾಷಣ ಆರಂಭ…

ಪ್ರಧಾನಿ ಮೋದಿ ಮಂಗಳೂರಿನಲ್ಲಿ ತುಳು ಭಾಷೆಯಲ್ಲಿ ಭಾಷಣ ಆರಂಭಿಸಿದ್ದಾರೆ. ತುಳುನಾಡಿನ ನನ್ನ ಪ್ರೀತಿಯ ಬಂಧುಗಳಿಗೆ ನನ್ನ ಪ್ರೀತಿಯ ನಮಸ್ಕಾರ ಎಂದು ಹೇಳಿದ್ದಾರೆ. ಮೋದಿ ಪ್ರತಿ ಪ್ರದೇಶಗಳನ್ನು ಭೇಟಿಯಾದಾಗಲೂ ಆಯಾ ಪ್ರದೇಶದ ಭಾಷೆಯಲ್ಲಿ ಮಾತನಾಡೋದು ವಿಶೇಷ.

ವೀರ ಪುರುಷರಿಗೆ ನಮೋ ನಮಃ…

ಭಾಷಣದ ಆರಂಭದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ್ಯರಿಗೆ ನಮನವನ್ನು ಸಲ್ಲಿಸಿದ್ದಾರೆ. ಅಂತೆಯೇ ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸಹಿತ ಅನೇಕ ದಿವ್ಯ ತೇಜಸ್ಸುಗಳನ್ನು ನೆನೆದರು.

ನೀರ್ ದೋಸೆ, ಸಜ್ಜಿಗೆ ಬಜಿಲ್ ಗೆ ಮೋದಿ ಫಿದಾ..!

ಈ ಹಿಂದೆ ಮೋದಿ ಕೇರಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ತಂಗಿದ್ದರು. ಈ ವೇಳೆ ಮೋದೀಜಿಗೆ ಕರಾವಳಿಯ ತಿನಿಸುಗಳಾದ ನೀರು ದೋಸೆ,ಮೂಡೆ ಹಾಗೂ ಸಜ್ಜಿಗೆ ಬಜೆಲ್ ನ್ನು ಉಣಬಡಿಸಲಾಗಿತ್ತು. ನೀರ್ ದೋಸೆಯನ್ನು ಮೋದೀಜಿ ಮಗದೊಮ್ಮೆ ಕೇಳಿ ಹಾಕಿಸಿಕೊಂಡಿದ್ದರು. ಇದನ್ನು ಮಂಗಳೂರಿನ ಬೃಹತ್ ಸಮಾವೇಶದಲ್ಲಿ ನೆನಪಿಸಿಕೊಂಡರು. ಕರಾವಳಿ ಖಾದ್ಯಗಳನ್ನು ಹೇಳುತ್ತಿರುವಾಗಲೇ ಜನತೆ ಹುಚ್ಚೆದ್ದು ಕುಣಿಯುತ್ತಿದ್ದರು.

ಮೂಕವಿಸ್ಮಿತನಾದ ಮೋದಿ…!

ನಿಮ್ಮ ಇಂತಹಾ ಪ್ರೀತಿಯನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿಯನ್ನು ಎಂದೂ ಮರೆಯಲಾರೆ. ನಿಮ್ಮ ಋಣವನ್ನು ನಾನು ಅಭಿವೃದ್ಧಿ ಮೂಲಕ ತೀರಿಸುತ್ತೇನೆ. ನಾವೆಲ್ಲರೂ ಈ ದೇಶಕ್ಕಾಗಿ ದುಡಿಯೋಣ. ಕೆಲ ರಾಜಕೀಯ ಪಕ್ಷಗಳು ತಮ್ಮ ಪರಿವಾರಕ್ಕಾಗಿ ದುಡಿಯುತ್ತಿದ್ದಾರೆ. ನಾನೂ ನನ್ನ ಪರಿವಾರಕ್ಕಾಗಿ ದುಡಿಯುತ್ತಿದ್ದೇನೆ. 125ಕೋಟಿ ಜನರೇ ನನ್ನ ಪರಿವಾರ. ಈ ಪರಿವಾರದ ಹೊಣೆ ನನ್ನ ಮೇಲಿದೆ ಎಂದು ಮೋದಿ ಭಾವನಾತ್ಮಕವಾಗಿ ಮಾತನಾಡಿದರು.

ಮೋದಿಯ ಕಳೆದಷ್ಟೂ ಸಮಾವೇಶಗಳಿಂತಲೂ ಮಂಗಳೂರು ಸಮಾವೇಶ ಭಿನ್ನವಾಗಿತ್ತು. ಕಿಕ್ಕಿರಿದು ಸೇರಿದ್ದ ಜನಸಾಗರದಿಂದ ಮೋದಿಯೇ ಮೂಕವಿಸ್ಮಿತರಾಗಿದ್ದರು. ಈ ಬಾರಿ ಬಿಜೆಪಿ ಎನ್ನುವ ಮೂಲಮಂತ್ರ ಸಾಕಾರಗೊಳ್ಳುವ ಎಲ್ಲಾ ಲಕ್ಷಣಗಳೂ ಮೋದಿ ಸಭೆಯಲ್ಲಿ ಕಂಡುಬರುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post