ಪ್ರಚಲಿತ

ಕರ್ನಾಟಕದ ಚುನಾವಣೆಗೆ ಅಮಿತ್ ಶಾ ರಚಿಸಿದ್ದಾರೆ ಚಕ್ರವ್ಯೂಹ!! ಏನದು ಗೊತ್ತೇ?!

ಕರ್ನಾಟಕದಲ್ಲಿ ಕಾಂಗ್ರೆಸ್‍ನ ಔರಂಗಜೇಬ್ ಆಡಳಿತವನ್ನು ಈ ಬಾರಿ ಮಟ್ಟಹಾಕಲೇಬೇಕು ಎಂದು ಬಿಜೆಪಿ ಪಾಳಯ ನಾನಾ ಕಸರತ್ತು ನಡೆಸುತ್ತಿದೆ. ಬಿಜೆಪಿಯ ಪ್ಲಾನ್ ಮಾಸ್ಟರ್, ಚಾಣಕ್ಯ ಎಂದೇ ಖ್ಯಾತಿವೆತ್ತ ಅಮಿತ್ ಶಾ ಅವರು ಈ ಬಾರಿ ಭರ್ಜರಿ ಆದ ಪ್ಲಾನ್ ಒಂದನ್ನು ಮಾಡಿದ್ದಾರೆ. ಈ ಪ್ಲಾನ್ ಸಕ್ಸಸ್ ಆದ್ರೆ ಕರ್ನಾಟಕದಲ್ಲಿ ಬಹುಮತದಿಂದ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಅಮಿತ್ ಶಾ ಅವರ ಪ್ಲಾನ್ ಎಲ್ಲೂ ಪ್ಲಾಪ್ ಆಗದೇ ಇರುವುದು ಬಿಜೆಪಿ ಪಾಳಯದಲ್ಲಿ ಹೊಸ ಹುಮ್ಮಸಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಮಿಶನ್-150 ಕನಸು ಕಾಣುತ್ತಿರುವ ಬಿಜೆಪಿಗೆ ಶಾ ಪ್ಲಾನ್ ಖಂಡಿತಾ ವರ್ಕೌಟು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ..

ಅಮಿತ್ ಶಾ ಅವರ ಪ್ಲಾನ್ ಏನು?

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲವು ಸಾಧಿಸಿ ಅಧಿಕಾರದ ಗದ್ದುಗೆಯನ್ನು ಪಡೆದುಕೊಂಡಿದೆ. ಇನ್ನು ಅಮಿತ್ ಶಾ ಅವರ ಕಣ್ಣು ಕರ್ನಾಟಕದ ಮೇಲೆ ನೆಟ್ಟಿದೆ. ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಅಧಿಕಾರವನ್ನು ಕಳೆದುಕೊಂಡಿದೆ ಎನ್ನುವುದು ಅಮಿತ್ ಶಾ ಗೆ ಚೆನ್ನಾಗಿ ಗೊತ್ತಿದೆ. ಆದರೆ ಈ ಬಾರಿ ಅಂಥಾ ಪರಿಸ್ಥಿತಿ ಇಲ್ಲ.

ಕರ್ನಾಟಕದ ಚುನಾವಣೆಯ ಬಗ್ಗೆ ಚೆನ್ನಾಗಿ ಅಧ್ಯಯನ ನಡೆಸಿರುವ ಅಮಿತ್ ಶಾ, ಇಲ್ಲಿನ ಪರಿಸ್ಥಿತಿಗನುಗುಣವಾಗಿ ಮತದಾರರ ಮನೋಸ್ಥಿತಿಯನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಿ ಪ್ಲಾನ್ ಹಾಕಬೇಕು. ಈ ಪ್ಲಾನ್ 2014ರ ಲೋಕ ಸಭಾ ಚುನಾವಣೆಯಲ್ಲಿ ಕೆಲಸ ಮಾಡಿ ಹೇಗೆ ಬಿಜೆಪಿ ಅಧಿಕಾರವನ್ನು ಪಡೆಯಿತೋ ಅದೇ ರೀತಿ ಕರ್ನಾಟಕದಲ್ಲೂ ನಡೆಯಬೇಕು. ಜೆಡಿಎಸ್‍ನ ಕುಟುಂಬ ರಾಜಕಾರಣ, ಕಾಂಗ್ರೆಸ್‍ನ ದ್ವೇಷದ ರಾಜಕಾರಣಕ್ಕೆ ತಕ್ಕಂತೆ ಮದ್ದು ಅರೆದು ಬಿಜೆಪಿಯನ್ನು ಬಹುಮತಗಳಿಂದ ಗೆಲ್ಲಿಸಬೇಕಾಗಿರುವುದು ಅಮಿತ್ ಶಾ ಅವರ ಪ್ಲಾನ್..

ಅದಕ್ಕಾಗಿಯೇ ಅಮಿತ್ ಶಾ ಅವರು ತಂಡವೊಂದನ್ನು ರಚನೆ ಮಾಡಿದ್ದು, ಶಾ ಅವರ ಪ್ರತಿಯೊಂದು ಚುನಾವಣೆಯ ಹಿಂದೆಯೂ ಈ ತಂಡ ಕೆಲಸ ಮಾಡುತ್ತಿದೆ. ಈ ತಂಡ ಎಷ್ಟೊಂದು ಚೆನ್ನಾಗಿ ಕೆಲಸ ಮಾಡುತ್ತದೆಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ತಂತ್ರಗಾರಿಕೆ ಹೆಣೆಯುವುದರಲ್ಲಿ ಈ ತಂಡದವರು ನಿಸ್ಸೀಮರು. ಈ ದೇಶ ಕೇಸರಿಮಯ ಆಗಲು ಈ ತಂಡದ ತಂತ್ರಗಾರಿಕೆ ಬಲುಚೆನ್ನಾಗಿ ಕೆಲಸ ಮಾಡಿದೆ.

ಅಧ್ಯಯನಶೀಲ ಅಮಿತ್ ಶಾ…

ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಸುಮ್ಮನೆ ಕೂರಲಿಲ್ಲ. ಅವರು ಮೊದಲು ಮಾಡಿದ ಕೆಲಸವೇ ತಂತ್ರಗಾರಿಕೆ ಹೆಣೆಯಲು ಒಂದು ತಂಡ ರಚನೆ ಮಾಡುವುದು. ಅದರ ಪ್ರಕಾರ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುವುದಾದರೆ ಆ ರಾಜ್ಯದ ಸಂಪೂರ್ಣ ಸ್ಥಿತಿಗತಿಯನ್ನು ಅರಿಯಲು ಒಂದು ಖಾಸಗಿ ಸಂಸ್ಥೆಯನ್ನು ನಿಯೋಜಿಸುತ್ತಾರೆ. ಈ ಸಂಸ್ಥೆ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಈ ಮೂಲಕ ಅಮಿತ್ ಶಾ ಅವರು ರಾಜ್ಯದ ರಾಜಕೀಯ ವಿದ್ಯಾಮನಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

ಇದರ ಮಾಹಿತಿಯಾಧಾರದಲ್ಲಿ ತಾನು ಮಾಡಿರುವ ತಮ್ಮ ತಂಡದೊಂದಿಗೆ ಕುಳಿತು ಅದಕ್ಕೆ ತಕ್ಕಂತೆ ಏನೇನು ತಂತ್ರಗಾರಿಕೆಗಳನ್ನು ರೂಪಿಸಬಹುದು ಎನ್ನುವುದರ ಬಗ್ಗೆ ಬಗ್ಗೆ ಚರ್ಚೆ ನಡೆಸಿ ಯೋಜನೆಗಳನ್ನು ರೂಪಿಸುತ್ತಾರೆ. ಇದಾದ ಬಳಿಕ ಈ ತಂಡದ ಪ್ರಮುಖರು ರಾಜ್ಯಕ್ಕೆ ಭೇಟಿ ನೀಡಿ ಮತ್ತೊಮ್ಮೆ ಮಾಹಿತಿ ಸಂಗ್ರಹಿಸಿ ತೆರಳುತ್ತಾರೆ. ಇದನ್ನೆಲ್ಲಾ ಚೆನ್ನಾಗಿ ಅಧ್ಯಯನ ನಡೆಸಿದ ಬಳಿಕ ಆಯಾಯ ರಾಜ್ಯದ ಸ್ಥಿತಿಗತಿಗೆ ತಕ್ಕಂತೆ ತಂತ್ರಗಾರಿಕೆ ಸಿದ್ಧವಾಗುತ್ತದೆ.

ಈ ತಂತ್ರಗಾರಿಕೆಯನ್ನು ಹಿಡಿದುಕೊಂಡು ಆಯಾಯ ರಾಜ್ಯದ ಬಿಜೆಪಿ ಪ್ರಮುಖರೊಂದಿಗೆ ತಮ್ಮ ತಂತ್ರದ ಬಗ್ಗೆ ಸಮಾಲೋಚನೆ ನಡೆಸಿ ಅವರಿಂದಲೂ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಈ ಎಲ್ಲಾ ಸಲಹೆ ಸೂಚನೆಗಳನ್ನು ಆದರಿಸಿ ಅಂತಿಮವಾಗಿ ಪರಿಣಾಮಕಾರಿ ತಂತ್ರಗಾರಿಕೆ ಸಿದ್ಧವಾಗುತ್ತದೆ. ಈ ತಂತ್ರ ಎಲ್ಲೂ ಕೂಡಾ ವಿಫಲಗೊಂಡಿದ್ದೇ ಇಲ್ಲ..

ತಂತ್ರಗಾರಿಕೆ ಹೆಣೆಯುವ ನಿಸ್ಸೀಮರ್ಯಾರು?

ಅಮಿತ್ ಶಾ ಕೋರ್ ತಂಡದಲ್ಲಿರುವ ಪ್ರಮುಖರೆಂದರೆ ಭೂಪೇಂದ್ರ ಯಾದವ್, ಓಂಪ್ರಕಾಶ್ ಮಾಥುರ್, ಅರುಣ್ ಸಿಂಗ್, ರಾಮ್‍ಲಾಲ್, ರಾಮ್ ಮಾಧವ್, ಅನಿಲ್ ಜೈನ್. ಇನ್ನು ಕರ್ನಾಟಕ ರಾಜಕೀಯದ ನಾಡುಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕರ್ನಾಟಕದವರೇ ಆಗಿರುವ ಬಿ.ಎಲ್. ಅವರು ಚುನಾವಣೆ ಹತ್ತಿರ ಬಂದಾಗ ತಂಡದಲ್ಲಿ ಸೇರುತ್ತಾರೆನ್ನುವುದು ದೊಡ್ಡ ವಿಷಯ. ಇವರೆಲ್ಲಾ ರಾಜಕೀಯ ತಂತ್ರಗಳನ್ನು ಹೆಣೆಯುವುದರ ಜತೆಗೆ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದನ್ನೂ ಸ್ಪಷ್ಟವಾಗಿ ತಿಳಿದುಕೊಂಡು ಅದರಂತೆ ಈ ಎಲ್ಲ ಮುಖಂಡರು, ಸಂಘಟನೆ ಬಲಪಡಿಸುವುದು, ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಎಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಾರೆ.

ಈ ಎಲ್ಲಾ ತಂತ್ರಗಾರಿಕೆಯ ಹಿಂದೆ ಇರುವುದು ಅಮಿತ್ ಶಾ ಎಂಬ ಚಾಣಕ್ಯ. ಅವರ ನೀತಿಯಿಂದ ಇಂದು ಇಡೀ ರಾಷ್ಟ್ರವೇ ಕೇಸರಿಮಯವಾಗುತ್ತದೆ. ಎಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವುದರಿಂದ ಈ ತಂಡ ಈಗಲೇ ಕೆಲಸದಲ್ಲಿ ಕಾರ್ಯೋನ್ಮುಖವಾಗಿದೆ. ಈ ತಂಡದ ಸದಸ್ಯರಲ್ಲಿ ಕೆಲವರು ರಾಜ್ಯಕ್ಕೆ ಬಂದು ಕೆಲಸ ಮಾಡಿದರೆ, ಇನ್ನು ಕೆಲವರು ಕೇಂದ್ರ ಸ್ಥಾನದಲ್ಲೇ ಕುಳಿತು ರಾಜ್ಯದಿಂದ ಪ್ರತಿನಿತ್ಯ ಬರುವ ವರದಿಗಳನ್ನು ಆಧರಿಸಿ ಸಲಹೆಗಳನ್ನು ನೀಡುತ್ತಾರೆ. ಅದರಂತೆ ಭರ್ಜರಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಅಮಿತ್ ಶಾ ಕೋರ್ ತಂಡದ ಪ್ರಮುಖರಿವರು!

ಭೂಪೇಂದ್ರ ಯಾದವ್

ಭೂಪೇಂದ್ರ ಯಾದವ್ ಇವರು ಮೂಲತಃ ರಾಜಸ್ತಾನದ ಅಜ್ಮೇರ್‍ನ ನಿವಾಸಿಯಾಗಿದ್ದಾರೆ… ಪ್ರಸ್ತುತ ಇವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಕ್ಷದಲ್ಲಿರುವ ಭಿನ್ನಮತಕ್ಕೆ ಸರಿಯಾದ ರೀತಿಯಲ್ಲಿ ಮದ್ದರೆದು ಶಮನಗೊಳಿಸುವಲ್ಲಿ ಇವರು ನಿಸ್ಸೀಮರು. ಚುನಾವಣೆಗೆ ಸರಿಯಾದ ತಂತ್ರಗಾರಿಗೆ ರೂಪಿಸುವಲ್ಲಿ ಇವರನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಕೆ ಮಾಡಲಾಗುತ್ತದೆ. ಇವರು ಯಾವತ್ತೂ ಬಹಿರಂಗವಾಗಿ ಕಾಣಿಸುವುದೇ ಇಲ್ಲ. ಅಮಿತ್ ಶಾ ಅವರು ಯಾವುದೇ ರಾಜ್ಯದಲ್ಲಿ ಪಕ್ಷದ ಆಂತರಿಕ ವಿಚಾರದ ಕುರಿತು ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಅದು ಯಾದವ್ ಅವರು ನೀಡುವ ವರದಿಯನ್ನು ಆಧರಿಸಿರುತ್ತದೆ. ಹೀಗಾಗಿ ಪಕ್ಷ ಸಂಘಟನೆಯ ಕೆಲಸಕ್ಕಾಗಿ ಅಮಿತ್ ಶಾ ಯಾವುದೇ ರಾಜ್ಯಕ್ಕೆ ಹೋಗುವ ಮುನ್ನ ಯಾದವ್ ಅಲ್ಲಿರುತ್ತಾರೆ. ಅದರಂತೆ ನಡೆದುಕೊಳ್ಳುತ್ತಾರೆ.

ಅರುಣ್ ಸಿಂಗ್

ಇವರು ಉತ್ತರ ಪ್ರದೇಶ ಮೂಲದವರು. ಜೊತೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಇದರೊಂದಿಗೆ ವಿಶ್ವಬ್ಯಾಂಕ್ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ ಅಗಾಧ ಅನುಭವವಿದೆ. ಯುವ ಮೋರ್ಚಾದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿದ್ದ ಸಿಂಗ್ ಹುದ್ದೆಯನ್ನು ಬಿಟ್ಟು ಪಕ್ಷದ ಚಟುವಟಿಕೆಗೆ ಸೇರ್ಪಡೆಯಾದರು. ಬಿಜೆಪಿ ಕೇಂದ್ರ ಕಚೇರಿಯ ನಿರ್ವಹಣೆ ಮಾಡುವುದರೊಂದಿಗೆ ಆರ್ಥಿಕ ಜ್ಞಾನವಿರುವುದರಿಂದ ಪಕ್ಷದ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸುವಲ್ಲಿ ಎತ್ತಿದ ಕೈ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕಟ್ಟಾ ಅನುಯಾಯಿಯಾಗಿರುವ ಇವರಾಗಿದ್ದಾರೆ. ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಅರುಣ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದೇ ಒಂದು ವಿಶೇಷ.

ಓಮ್ ಮಾಥುರ್

ಓಂಜಿ ಬಾಯಿ ಎಂದೇ ಖ್ಯಾತಿ ಪಡೆದ ಓಮ್ ಮಾಥುರ್ ರಾಜಸ್ಥಾನ ಮೂಲದವರು. ಆರ್‍ಎಸ್‍ಎಸ್ ಪ್ರಚಾರಕರಾಗಿ ಕೆಲಸ ಮಾಡಿ ನಂತರ ಬಿಜೆಪಿ ಸೇರಿದ್ದ ಅವರು ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಯುವಕರಿಗೆ ಸ್ಫೂರ್ತಿ ಓಮ್ ಮಾಥುರ್. ಯುವಕರನ್ನು ಗುರುತಿಸಿ ಅವರ ಸಾಮಥ್ರ್ಯಕ್ಕನುಸಾರ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ನಿಸ್ಸೀಮರು ಇವರು. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಬಿಜೆಪಿಯತ್ತ ಆಕರ್ಷಿತವಾಗುತ್ತಿರುವುದರಿಂದ ಅಮಿತ್ ಶಾಗೆ ಓಂ ಮಾಥುರ್ ಅವರ ತಂತ್ರಗಾರಿಕೆ ಹೆಚ್ಚು ಅನುಕೂಲವಾಗಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಇದೀಗ ಬಿಜೆಪಿ ಗೆದ್ದಿರುವುದು ಒಂದು ಇತಿಹಾಸ.

ರಾಮ್‍ಲಾಲ್

ರಾಮ್‍ಲಾಲ್ ಮೂಲತಃ ಉತ್ತರ ಪ್ರದೇಶದವರು. ಆರ್‍ಎಸ್‍ಎಸ್‍ನಿಂದ ಬಂದಿರುವ ಇವರು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡವರು. ಹಿಂದೆ ಆರ್‍ಎಸ್‍ಎಸ್ ಪ್ರಚಾಕರಾಗಿದ್ದ ಅವರ ಸಂಘಟನಾ ಶಕ್ತಿಯ ಸಾಮಥ್ರ್ಯವನ್ನು ಕಂಡುಕೊಂಡ ಅಮಿತ್ ಇದರ ಆಧಾರದಲ್ಲಿ ಅಮಿತ್ ಶಾ ಅವರನ್ನು ಪಕ್ಷಕ್ಕೆ ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಸೌಮ್ಯ ಸ್ವಭಾವದ ರಾಮ್‍ಲಾಲ್ ಸಂಘಟನೆ ವಿಚಾರದಲ್ಲಿ ಮಾತ್ರ ಅಷ್ಟೇ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ನಿಸ್ಸೀಮರಾಗಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಿ ಕಾರ್ಯಕರ್ತರಿಗೆ ಆದ್ಯತೆ ನೀಡುವ ತಂತ್ರಗಾರಿಗೆ ಇವರದ್ದು. ಇದು ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟನೆಯ ಸಾಮಥ್ರ್ಯವನ್ನು ಹೆಚ್ಚಿವಲ್ಲಿ ಸಹಕಾರಿಯಾಗಿದೆ. ಪ್ರಮುಖ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೊಂದಿಗೆ ಬೆರೆಯುವ ಗುಣ ಎಲ್ಲರಿಗೂ ಇಷ್ಟವಾಗುತ್ತದೆ.

ರಾಮ್‍ಮಾಧವ್

ಆಂಧ್ರಪ್ರದೇಶ ಮೂಲದ ರಾಮ್‍ಮಾಧವ್ ಕೂಡ ಆರ್‍ಎಸ್‍ಎಸ್ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಸಂಘಟನೆಯಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡವರು. ಪತ್ರಕರ್ತರೂ ಆಗಿದ್ದ ಅವರು ಆರ್‍ಎಸ್‍ಎಸ್‍ನ “ಥಿಂಕ್ ಟ್ಯಾಂಕ್’ ಆಗಿದ್ದವರು. ಸಂಘಟನಾತ್ಮಕವಾಗಿ ಕೆಲಸ ಮಾಡುವ ಮತ್ತು ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಹೋಗುವ ಅವರ ಕಾರ್ಯವೈಖರಿಯಿಂದಾಗಿ ಅಮಿತ್ ಶಾ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಿದೆ. ವಿಶೇಷವೆಂದರೆ ಅವರು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ಜತೆಗೆ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬಲ್ಲವರು.

ಅನಿಲ್ ಜೈನ್

ಮೂಲತಃ ಮಧ್ಯಪ್ರದೇಶದವರಾಗಿರುವ ಅನಿಲ್ ಜೈನ್ ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಆ ಬಳಿಕ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡು ರಾಜಕಾರಣಿಯಾಗಿ ಬದಲಾದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಜೈನ್, ಆಯಾಯ ರಾಜ್ಯದ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಗಾರಿಕೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ಸಂದರ್ಭ ಉಸ್ತುವಾರಿಯಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ತುಂಬಾ ಶ್ರಮಿಸಿದ್ದರು. ಯಾವುದಾದರೂ ಒಂದು ಕೆಲಸ ಆರಂಭಿಸಿದರೆ ಅದನ್ನು ಕೊನೆಮುಟ್ಟಿಸುವವರೆಗೆ ವಿರಮಿಸುವುದಿಲ್ಲ. ಹೀಗಾಗಿ ಅಮಿತ್ ಶಾಗೆ ಆಪ್ತರಾಗಿ ಅವರ ಕೋರ್ ತಂಡದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಬಿಜೆಪಿಯ ತಾವರೆ ಅರಳಲು ಕೆಲಸ ಮಾಡುತ್ತಾರೆ.

ಬಿ.ಎಲ್.ಸಂತೋಷ್

ಕರ್ನಾಟಕದವರೇ ಆಗಿರುವ ಬಿ.ಎಲ್.ಸಂತೋಷ್ ಅವರು ಕರ್ನಾಟಕದ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು. ಇವರು ಕರ್ನಾಟಕದ ವಿಧಾನ ಸಭೆ ಚುನಾವಣೆ ಬಂದಾಗ ಅಮಿತ್ ಶಾ ಕೋರ್ ತಂಡದಲ್ಲಿ ಸೇರಿಕೊಳ್ಳುತ್ತಾರೆ. ಆರ್‍ಎಸ್‍ಎಸ್‍ನಿಂದ ರಾಜ್ಯ ಬಿಜೆಪಿ ಸಂಘನಾ ಕಾರ್ಯದರ್ಶಿಯಾಗಿ ಮತ್ತು ಈಗ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಅನುಭವಿ ವ್ಯಕ್ತಿ. 2013ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ರಾಜ್ಯದಲ್ಲಿ ಬಿಜೆಪಿ ಚುನಾವಣೆ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ಅಮಿತ್ ಶಾ ಅವರು ಹಮ್ಮಿಕೊಂಡಿದ್ದ ಯಾತ್ರೆಯ ಮೇಲುಸ್ತುವಾರಿ ವಹಿಸಿ ಅದನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗಿದ್ದರು. ಗುಜರಾತ್ ಚುನಾವಣೆಯಲ್ಲಿ ಆರು ರಾಜ್ಯಗಳ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿದ್ದರು. .

ಇಷ್ಟು ಮಾತ್ರವಲ್ಲ

ಎಲ್ಲಾ ತಂಡದವರು ಸೇರಿಕೊಂಡು ತಂತ್ರಗಾರಿಕೆ ಹೆಣೆದು ಅದನ್ನು ಕಾರ್ಯಗತಗೊಳಿಸುವುದು ಅಮಿತ್ ಶಾ ಅವರ ಹೊಣೆಯಾಗಿರುತ್ತದೆ. ಇದರ ಪ್ರಕಾರ ಸ್ಥಳೀಯ ಮುಖಂಡರು ಕೆಲಸ ನಿರ್ವಹಿಸಬೇಕಾಗುತ್ತದೆ. ತಂಡದಲ್ಲಿ ಪ್ರಮುಖರಾಗಿರುವ ಅಮಿತ್ ಶಾ ಕೂಡಾ ಸುಮ್ಮನೆ ಕೂರುವುದಿಲ್ಲ. ಅವರು ಕೂಡಾ ತಮ್ಮದೇ ಮೂಲಗಳಿಂದ ತನ್ನದೇ ಶೈಲಿಯಲ್ಲಿ ಕೆಲಸ ಮಾಡುತ್ತಾರೆ.

ಹಿಂದಿನ ಕಾರ್ಯಶೈಲಿ, ತಂತ್ರಗಾರಿಕೆ ಯಶಸ್ವಿಯಾಗಿರುವುದು, ವಿಫಲವಾಗಿರುವುದು ಎಲ್ಲದರ ಕೂಲಂಕುಶ ಅಧ್ಯಯನ ನಡೆಸುತ್ತಾರೆ. ಇದರ ಜತೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಸಹ ಉಸ್ತುವಾರಿ ಪುರಂದೇಶ್ವರಿ, ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯೆಲ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅದರಂತೆ ಕೆಲಸ ನಿರ್ವಹಿಸುತ್ತಾರೆ.

ಈ ಬಾರಿ ಕರ್ನಾಟಕದಲ್ಲಿ ತಾವರೆ ಅರಳಿಸಲೇಬೇಕು ಎಂದು ಸೂಚಿಸಿರುವ ಅಮಿತ್ ಶಾ ಅದಕ್ಕಾಗಿ ರಾಜ್ಯ ನಾಯಕರ ವಿಶ್ವಾಸವನ್ನೂ ಪಡೆದುಕೊಂಡು ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ತಿಳಿಸಿದ್ದಾರೆ. ಗುಜರಾತ್ ಹಾಗೂ ಹಿಮಾಚಲಪ್ರದೇಶದಲ್ಲಿನ ಭರ್ಜರಿ ಜಯ ಮುಖಂಡರಲ್ಲಿ ವಿಶ್ವಾಸ ಮೂಡಿಸಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಶೈಲಿ, ಅವರ ಮೇಲಿರುವ ಜನತೆಗಿರುವ ಅಭಿಮಾನ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆ ಇವೆಲ್ಲಾ ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಬರಲು ಪೂರಕ ಅಂಶಗಳಾಗಿ ಕೆಲಸ ಮಾಡಲಿವೆ.

ಚೇಕಿತಾನ

Tags

Related Articles

Close