ಪ್ರಚಲಿತ

ಬಾಬ್ರಿ ಮಸೀದಿ ಗೋಡೆಯಲ್ಲಿ ರಾಮ ನಾಮ ಬರೆದ ಸಿಖ್ಖರ ವಂಶಜರಿಂದ ಶ್ರೀರಾಮನ ಪ್ರಾಣ ಪ್ರತಿಷ್ಠೆಯಂದು ಅಯೋಧ್ಯೆಯಲ್ಲಿ ಅನ್ನದಾನ

ಮುಂದಿನ ಕ್ಯಾಲೆಂಡರ್ ವರ್ಷಾರಂಭದಲ್ಲಿ ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ನೂತನ ಮಂದಿರದ ಲೋಕಾರ್ಪಣೆ ನಡೆಯಲಿದೆ. ಪ್ರಭು ಶ್ರೀರಾಮ ಆ ಮಂದಿರದಲ್ಲಿ ಕುಳಿತು ಭಕ್ತ ಜನರನ್ನು ಹರಸಲಿದ್ದಾನೆ. ಈ ಸಂಭ್ರಮವನ್ನು ವಿಶ್ವದೆಲ್ಲೆಡೆಯ ರಾಮ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

ಮಂದಿರದಲ್ಲಿ ಜ. 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲ್ದಿದು, ಈ‌ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಅನ್ನದಾನ ಆಯೋಜನೆ ಮಾಡಲು ನಿಹಾಂಗ್ ಬಾಬಾ ಫಕೀರ್ ಸಿಂಗ್ ಖಲ್ಸಾ ಅವರ ವಂಶದ ಕುಡಿ ಜತೇದಾರ್ ಬಾಬಾ ಹರ್ಜಿತ್ ಸಿಂಗ್ ಅವರು ಅನುಮತಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಹರ್ಜಿತ್ ಸಿಂಗ್ ಮಾತನಾಡಿದ್ದು, ನಾವು ಸನಾತನ ಧರ್ಮದ ಭಾಗವಾಗಿದ್ದೇವೆ. ಇದು ನಮ್ಮ ಧರ್ಮವಾಗಿದ್ದು, ನಾವು ಈ ಧರ್ಮವನ್ನು ಜೀವಂತವಾಗಿಡಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗೆಯೇ ಅಯೋಧ್ಯೆಯಲ್ಲಿ ರಾಮಲಲ್ಲಾ ನನ್ನು ಪ್ರತಿಷ್ಠಾಪನೆ ಮಾಡುವಂದು, ಈ ಸಂಭ್ರಮವನ್ನು ಹಿಂದೂಗಳು ಮತ್ತು ಸಿಖ್ಖರು ಒಟ್ಟಾಗಿ ಆಚರಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಸನಾತನ ಹಿಂದೂ ಧರ್ಮ ಮತ್ತು ಸಿಖ್ಖ್ ಧರ್ಮಗಳೆರಡರಲ್ಲೂ ಸಮಾನ ನಂಬಿಕೆಗಳು ಇರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮೂಲಭೂತವಾದಿಗಳು ಸಿಖ್ಖರು ಮತ್ತು ಹಿಂದೂಗಳನ್ನು ವಿಭಜನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ರಾಮ ಮಂದಿರ ಮರಳಿ ಪಡೆಯುವ ಸಮಯದಲ್ಲಿ ಈ ಎರಡೂ ಧರ್ಮಗಳಲ್ಲಿ ಮೊದಲ ಎಫ್‌ಐಆರ್ ಯಾರ ಮೇಲೆ ದಾಖಲಾಗಿತ್ತು ಎಂದು ತಿಳಿಯಬೇಕು. ನಿಹಾಂಗ್‌ಗಳು ಮತ್ತು ಸನಾತನ ಧರ್ಮದ ನಡುವಿನ ಸಂಬಂಧ ಉಳಿಸಿಕೊಳ್ಳಲು ನಾನು ಪ್ರಯತ್ನ ಪಟ್ಟ ಕಾರಣಕ್ಕೆ ಹಲವಾರು ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ರಾಮನ ಪ್ರತಿಷ್ಠಾಪನೆಯಂದು ಅಯೋಧ್ಯೆಯಲ್ಲಿ ತಮ್ಮ ಸಲುವಾಗಿ ಅನ್ನದಾನ ಸೇವೆ ನಡೆಯುವ ಮಾಹಿತಿ ನೀಡಿದ ಅವರು, ಮುಂದಿನ ಕ್ಯಾಲೆಂಡರ್ ವರ್ಷದ 10 ರಿಂದ ಫೆಬ್ರವರಿ ಅಂತ್ಯದ ವರೆಗೆ ಈ ಸೇವೆ ಮುಂದುವರಿಸಲು ಪ್ರಯತ್ನ ಪಡುವುದಾಗಿಯೂ ತಿಳಿಸಿದ್ದಾರೆ.

ನಿಹಾಂಗ್ ಬಾಬಾ ಫಕೀರ್ ಸಿಂಗ್ ಖಲ್ಸಾ ಅವರು ಸಿಖ್ಖರ ಜೊತೆಗೆ 1858 ರಲ್ಲಿ ವಿವಾದಿತ ಬಾಬ್ರಿ ಮಸೀದಿ ಕಟ್ಟಡಕ್ಕೆ ನುಗ್ಗಿದ್ದರು. ಹಾಗೆಯೇ ಮಸೀದಿಯ ಗೋಡೆಯ ಮೇಲೆ ರಾಮ ಎಂದು ಬರೆದಿದ್ದರು. ಕೇಸರಿ ಧ್ವಜವನ್ನು ಹಾರಿಸಿದ್ದರು.

Tags

Related Articles

Close