ಪ್ರಚಲಿತ

ಶ್ರೀರಾಮ ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ವಿತರಣೆ ಆರಂಭ

ಪ್ರಭು ಶ್ರೀರಾಮನ ಅಸಂಖ್ಯಾತ ಭಕ್ತರು ಎದುರು ನೋಡುತ್ತಿರುವ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆ ಇನ್ನೇನು ಕೆಲವೇ ದಿನಗಳಲ್ಲಿ ನೆರವೇರಲಿದೆ. ಈ ಲಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

ಮುಂದಿನ ವರ್ಷದ ಜನವರಿ 24 ರಂದು ಪ್ರಭು ಶ್ರೀರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಲಿದ್ದಾನೆ. ಶ್ರೀರಾಮ ಮಂದಿರದ ಉದ್ಘಾಟನೆಗೆ ‌ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಂದಿರದಲ್ಲಿ ಪ್ರಭು ರಾಮ ಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನ ಮಾಡುವ ಸಲುವಾಗಿ ಆಮಂತ್ರಣ ಪತ್ರಿಕೆಗಳನ್ನು ಹಂಚುವ ಕಾರ್ಯ ಪ್ರಾರಂಭಿಸಲಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣ ಪತ್ರಿಕೆಯ ಝಲಕ್ ಅನ್ನು ಈಗಾಗಲೇ ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಂಡಿದೆ.

ಪ್ರಭು‌ ಶ್ರೀ ರಾಮನ ಜನ್ಮ ಸ್ಥಾನ ಅಯೋಧ್ಯೆಯಲ್ಲಿ‌ ನಿರ್ಮಾಣವಾಗಿರುವ‌ ನೂತನ ಮಂದಿರದಲ್ಲಿ‌ ನಡೆಯುವ, ಶ್ರೀರಾಮನ ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸಲು ಸುಮಾರು ಆರು ಸಾವಿರ ಜನರಿಗೆ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

ಈ ರಾಷ್ಟ್ರ ಮಂದಿರ ಲೋಕಕ್ಕೆ ಸಮರ್ಪಿತವಾಗುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಉಪಸ್ಥಿತರಿರಲಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಲು ಸಾಧ್ಯವಾಗದ‌ ಜನರಿಗೆ ದೇಶದೆಲ್ಲೆಡೆ ಸ್ಕ್ರೀನ್ ಅಳವಡಿಸಿ ನೇರ ಪ್ರಸಾರದ ಮೂಲಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡುವಂತೆಯೂ ಟ್ರಸ್ಟ್ ಮನವಿ ಮಾಡಿದೆ. ಜೊತೆಗೆ ಪ್ರಾಣ ಪ್ರತಿಷ್ಠೆ ಸಮಯದಲ್ಲಿ ದೇಶದ ದೇವಾಲಯಗಳಲ್ಲಿ ಪೂಜೆ, ಭಜನೆ,‌ ಧಾರ್ಮಿಕ ಕಾರ್ಯಕ್ರಮಗಳನ್ನು ಟ್ರಸ್ಟ್ ಮನವಿ ಮಾಡಿದೆ.‌ ರಾಮ ಮಂದಿರ ಉದ್ಘಾಟನಾ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಮಂತ್ರಾಕ್ಷತೆಯನ್ನೂ ದೇಶದ ವಿವಿಧ ದೇಗುಲಗಳಿಗೆ ಈಗಾಗಲೇ ಕಳುಹಿಸಲಾಗಿದೆ.

ಪ್ರಾಣ ಪ್ರತಿಷ್ಠೆಯಂದು ಮನೆ ಮನೆಗಳಲ್ಲಿ ದೀಪ ಬೆಳಗುವಂತೆಯೂ ಟ್ರಸ್ಟ್ ಈಗಾಗಲೇ ಮನವಿ‌ ಮಾಡಿದೆ.

Tags

Related Articles

Close