ಪ್ರಚಲಿತ

ರಿಸಲ್ಟ್ ಮುಂಚೆಯೇ ಸೋಲೊಪ್ಪಿಕೊಂಡ ಸಿದ್ದರಾಮಯ್ಯ…! ನಿವೃತ್ತಿಯ ವಿಚಾರ ಮುಂದಿಟ್ಟ ಸಿಎಂ..!

ಅಂತೂ ಇಂತೂ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಅಬ್ಬರ ಮುಗಿಯಿತು. ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ನಾಯಕರು ಈ ಹಿಂದಿನ ಆರ್ಭಟವನ್ನು ಮುಗಿಸಿ ನೈಜ ಮುಖಪ್ರದರ್ಶನಕ್ಕೆ ಮುಂದಾಗಿದ್ದಾರೆ. ಚುನಾವಣೆಯವರೆಗೂ ನಾವೇ ಗೆಲ್ಲೋದು ಎಂಬ ಭಾಷಣ ಮಾಡುತ್ತಿದ್ದ ರಾಜಕೀಯ ನೇತಾರರು ಇದೀಗ ಮುಂದಿನ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.

ನಿವೃತ್ತಿ ಸೂಚನೆ ನೀಡಿದ ಸಿದ್ದರಾಮಯ್ಯ..!

“ಈವರೆಗೂ ನಾನು ಚುನಾವಣಾ ರಾಜಕಾರಣದಲ್ಲಿ ಇದ್ದೆ. ಆದರೆ ಇನ್ನು ನಾನು ಚುನಾವಣಾ ರಾಜಕಾರಣದಲ್ಲಿ ಇರೋದಿಲ್ಲ. ಚುನಾವಣೆಯಿಂದ ನಿವೃತ್ತಿ ಹೊಂದುತ್ತೇನೆ. ಕೇವಲ ಸಕ್ರಿಯ ರಾಜಕಾರಣದಲ್ಲಿ ಮಾತ್ರ ಬರುತ್ತೇನೆ. ರಾಜ್ಯದ ಜನತೆ ಕೇಳುತ್ತಿದ್ದಾರೆ. ಈ ಕಾರಣಕ್ಕಾಗಿ ಸಕ್ರಿಯ ರಾಜಕಾರಣದಲ್ಲಿ ಮಾತ್ರ ಇರುತ್ತೇನೆ” ಎಂದು ಹೇಳಿದರು.

ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ..!

ಕಾಂಗ್ರೆಸ್ ಪಕ್ಷದ ರಾಷ್ಟ್ರ ರಾಜಕೀಯ ಪರಿಸ್ಥಿತಿ ತುಂಬಾನೇ ಹದಗೆಟ್ಟಿದೆ. ರಾಹುಲ್ ಗಾಂಧಿ ಮತ್ತಷ್ಟು ರಾಜ್ಯವನ್ನು ಕಳೆದುಕೊಳ್ಳುತ್ತಲೇ ಹೋಗುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರದ ರಾಜಕಾರಣಕ್ಕೆ ಧುಮುಕುತ್ತಾರೆ, ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ಆಗುತ್ತಾರೆ ಎಂದೆಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳು ಆಡಿಕೊಳ್ಳುತ್ತಿದ್ದರು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾನು ಇನ್ನು ಯಾವುದೇ ರಾಜಕಾರಣಕ್ಕೆ ಹೋಗೋದಿಲ್ಲ. ರಾಷ್ಟ್ರೀಯ ರಾಜಕಾರಣಕ್ಕೆ ಹೋಗುವ ಚಿಂತನೆಯೇ ಇಲ್ಲ. ಇನ್ನೇನಿದ್ದರೂ ನನ್ನ ಊರು ಸಿದ್ದರಾಮನ ಹುಂಡಿಯಲ್ಲಿ ಇರ್ತೇನೆ ಅಷ್ಟೇ. ಬೇರಾವ ರಾಜಕಾರಣವೂ ಇಲ್ಲ” ಎಂದು ಹೇಳಿದ್ದಾರೆ.

ಸೋಲೊಪ್ಪಿಕೊಂಡರಾ ಸಿದ್ದರಾಮಯ್ಯ…?

ಚುನಾವಣೆ ಮುಗಿಯಿತಷ್ಟೆ. ಫಲಿತಾಂಶ ಬರೋದಕ್ಕೂ ಮುಂಚೆನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೊಪ್ಪಿಕೊಂಡಂತಾಗಿದೆ. ಈಗಾಗಲೇ ಸೋಲಿನ ಭೀತಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಮೊದಲು ಆಯ್ಕೆ ಮಾಡಿಕೊಂಡಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂದು ಮನಗಂಡ ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಮೊರೆ ಹೋಗಿದ್ದರು. ಆದರೆ ಅಲ್ಲಿ ಬಳ್ಳಾರಿ ಸಂಸದ ಶ್ರೀ ರಾಮುಲು ಅವರನ್ನು ಭಾರತೀಯ ಜನತಾ ಪಕ್ಷ ಕಣಕ್ಕಿಳಿಸಿದ್ದರಿಂದ ಬಾದಾಮಿಯ ಗೆಲುವೂ ದೂರದ ಮಾತಾಯಿತು.

ಚುನಾವಣೆ ಗೆಲ್ಲಲು ಕೋಟಿ ಕೋಟಿ ಖರ್ಚು ಮಾಡಿದರೂ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಈ ಚುನಾವಣೆ ಅಂತ್ಯ ಹಾಡುವ ಸೂಚನೆಗಳು ದೊರಕುತ್ತಿದ್ದವು. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹಾ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತದೆ.

ಒಟ್ಟಾರೆ ಈ ಬಾರಿಯ ಚುನಾವಣೆ ಅನೇಕ ರಾಜಕೀಯ ನೇತಾರರಿಗೆ ಸೋಲು ಗೆಲುವಿನ ಲೆಕ್ಕಾಚಾರ ದಲ್ಲಿ ಕೊನೆಯ ಚುನಾವಣೆ ಆಗಿದ್ದು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸೋತದ್ದೇ ಆದಲ್ಲಿ ಅವರ ರಾಜಕೀಯ ಜೀವನ ಅಂತ್ಯವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗಿದೆ.

-ಸುನಿಲ್ ಪಣಪಿಲ

Tags

Related Articles

Close