ಪ್ರಚಲಿತ

ಖನಿಜ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿಶ್ವದ ಉದ್ದಿಮೆದಾರರಿಗೆ ಆಹ್ವಾನ ನೀಡಿದ ಪ್ರಲ್ಹಾದ ಜೋಶಿ

ಭಾರತದ ಅಭಿವೃದ್ಧಿ ದೇಶದ ಎಲ್ಲಾ ಕ್ಷೇತ್ರಗಳಲ್ಲಾಗುವ ಅಭಿವೃದ್ಧಿಯನ್ನು ಆಧರಿಸಿಯೇ ನಿರ್ಧರಿತವಾಗುವುದು. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಲೋಚನೆಯಿಂದ ಕೆಲಸ ಮಾಡುತ್ತಿದೆ. ಇಂತಹ ದೂರದೃಷ್ಟಿಯ ಪರಿಣಾಮವಾಗಿ ಭಾರತ ಪ್ರಪಂಚದಲ್ಲಿ ಮಾನ್ಯತೆ ಪಡೆಯುವಂತಾಗಿದೆ. ಜೊತೆಗೆ ಭಾರತ ಆರ್ಥಿಕ ವಲಯದ ಬೆಳವಣಿಗೆಯ ವೇಗ ಹೆಚ್ಚಿದೆ.

ಇದೀಗ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆಯೂ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾಹಿತಿ ನೀಡಿದ್ದು, ಖನಿಜಗಳ ಗಣಿ ಹರಾಜಿನಲ್ಲಿ ಭಾಗವಹಿಸುವಂತೆ ಜಗತ್ತಿನಾದ್ಯಂತ ಇರುವ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿರುವುದಾಗಿ ತಿಳಿಸಿದ್ದಾರೆ.

ನಿರ್ಣಾಯಕ ಖನಿಜಗಳ ಹರಾಜಿನ ಮೊದಲ ಕಂತಿನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಜೋಶಿ, ಇದೇ ಪ್ರಪ್ರಥಮ ಬಾರಿಗೆ ಎಂಬಂತೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಖನಿಜ ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ನಡೆಯುತ್ತಿರುವುದಾಗಿ ಹೇಳಿದ್ದಾರೆ. ಈ ಹರಾಜಿನಲ್ಲಿ ಭಾಗವಹಿಸಲು ವಿಶ್ವದೆಲ್ಲೆಡೆಯಿಂದ ನಿರೀಕ್ಷಿತ ಬಿಡ್ಡರ್‌ಗಳನ್ನು ಆಹ್ವಾವಿಸುವ ಅವಕಾಶವನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವನಾಗಿ ತಾವು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಗುಜರಾತ್, ಬಿಹಾರ, ಚತ್ತೀಸ್‍ಗಢ, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರ ಗಳಲ್ಲಿ ಇಪ್ಪತ್ತು ಬ್ಲಾಕ್‌ಗಳ ನಿರ್ಣಾಯಕ ಮತ್ತು ಕಾರ್ಯತಂತ್ರದ ಮೂಲಕ ಖನಿಜಗಳ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇವೆಲ್ಲದರ ಮೌಲ್ಯ ಸುಮಾರು ನಲವತ್ತೈದು ಸಾವಿರ ಕೋಟಿ ರೂ. ಗಳಷ್ಟಿರಲಿರುವುದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ.

ಆ ಬಳಿಕ ನಡೆಯಲಿರುವ ನಂತರದ ಹರಾಜು ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಖನಿಜಗಳ ಮತ್ತಷ್ಟು‌ ಬ್ಲಾಕ್‌‌ಗಳನ್ನು ಸೇರಿಸಲಾಗುತ್ತದೆ. ಈ ಸಂಬಂಧ ಷರತ್ತುಗಳಲ್ಲಿರುವ ಅಗತ್ಯ ತಿದ್ದುಪಡಿಗಳನ್ನು ಮಾಡುವುದನ್ನು ಮುಂದುವರಿಸುವುದಾಗಿಯೂ ಅವರು ಹೇಳಿದ್ದಾರೆ.

ಪ್ರಸ್ತುತ ವಿಶ್ವಾದ್ಯಂತ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವುಗಳ ಬೇಡಿಕೆಯನ್ನು ಸಾಮಾನ್ಯವಾಗಿ ಆಮದು ಮಾಡಿಕೊಳ್ಳುವ ಮೂಲಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಿರ್ಣಾಯಕ ಖನಿಜಗಳು ನವೀಕರಿಸಬಹುದಾದ ಶಕ್ತಿ, ರಕ್ಷಣೆ, ಕೃಷಿ ಕ್ಷೇತ್ರಗಳ ಅಗತ್ಯತೆಯನ್ನು ಪೂರೈಸಲಿದೆ. ಈ ಹರಾಜು ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ, ರಾಷ್ಟ್ರೀಯ ಭದ್ರತೆ ಹೆಚ್ಚಿಸುವ, ಶುದ್ಧ ಇಂಧನ ಭವಿಷ್ಯಕ್ಕೆ ಸಹಕಾರಿಯಾಗುವ ಉಪಕ್ರಮಗಳ ಹೆಗ್ಗುರುತಾಗಿದೆ.

Tags

Related Articles

Close