ಪ್ರಚಲಿತ

ಭಾರತೀಯ ನೌಕಾಪಡೆಯ ಹಡಗಿನ ಮೊದಲ ಮಹಿಳಾ ಮುಖ್ಯಸ್ಥರಾದ ಲೆ. ಕಮಾಂಡರ್ ಪ್ರೇರಣಾ

ಹಿಂದೆಲ್ಲಾ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ನಡುವೆ ಬದುಕಬೇಕು. ಅವರು ಕೇವಲ ಅಡುಗೆ ಕೆಲಸಕ್ಕೆ, ಮನೆ ಕೆಲಸಕ್ಕಷ್ಟೇ ಸೀಮಿತ ಎಂಬ ಮಾತು ಸಮಾಜದಲ್ಲಿತ್ತು. ಆದರೆ‌‌ ಕಾಲ ಬದಲಾಗಿದೆ. ಪುರುಷರಷ್ಟೇ ಮಹಿಳೆಯರು ಕೂಡಾ ಸಬಲರು ಎನ್ನುವುದು ಆಗಾಗ್ಗೆ ಸಾಬೀತಾಗುತ್ತಿದೆ. ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ಯಾವುದೇ ಗುರಿಯನ್ನಾದರೂ ತಲುಪಲು ಅವಳ ಕೈಯಲ್ಲಿ‌‌ ಸಾಧ್ಯವಿದೆ ಎನ್ನುವುದಕ್ಕೆ ಲೆಫ್ಟಿನೆಂಟ್ ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಸಾಕ್ಷಿಯಾಗಿದ್ದಾರೆ.

ಭಾರತೀಯ ನೌಕಾಪಡೆಯು ಇದೇ ಮೊದಲ ಬಾರಿಗೆ ಎಂಬಂತೆ ನೌಕಾಪಡೆಯ ಹಡಗಿನ ಮುಖ್ಯಸ್ಥರ ಸ್ಥಾನಕ್ಕೆ ಮಹಿಳೆಯೋರ್ವರನ್ನು ನೇಮಕ ಮಾಡಿದೆ‌. ಡಿಸೆಂಬರ್ 4 ರಂದು ನೌಕಾ ದಿನಾಚರಣೆಯಾಗಿದ್ದು, ಅದಕ್ಕೂ ಮುನ್ನವೇ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಹರಿ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೋವಾ ಮೂಲದ ಐಎನ್‌ಎಸ್‌ ಟ್ರಿಂಕಾಟ್ ಕಮಾಂಡ್ಂಗ್ ಅಧಿಕಾರಿಯಾಗಿ ಲೆ. ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಅವರನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಹರಿ ಕುಮಾರ್ ಮಾತನಾಡಿದ್ದು, ಭಾರತೀಯರ ನೌಕಾಪಡೆಯ ಮೊದಲ‌ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನಾವು ನೇಮಕ ಮಾಡಿದ್ದೇವೆ. ನೌಕಾಪಡೆಯ ಭವಿಷ್ಯದಲ್ಲಿ ಮಹತ್ವಾಕಾಂಕ್ಷೆಯ ಮತ್ತು ಕ್ರಿಯಾತ್ಮಕ ಪಥದಲ್ಲಿ ಉಳಿಯುವುದನ್ನು ಖಚಿತ ಪಡಿಸಿಕೊಳ್ಳಲು ಯಥಾಸ್ಥಿತಿಗೆ ನಿರಂತರವಾಗಿ ಸವಾಲೊಡ್ಡುವ ಪ್ರಯತ್ನ ನಮ್ಮದಾಗಿದೆ ಎಂದು ಹೇಳಿದ್ದಾರೆ.

ಲೆ. ಕಮಾಂಡರ್ ಪ್ರೇರಣಾ ಅವರು ಟಿ ಯು ನಲ್ಲಿ ಪ್ರಥಮ ಮಹಿಳಾ ವೀಕ್ಷಕರಾಗಿದ್ದಾರೆ. ಅವರು ಮುಂಬೈ ಮೂಲದವರಾಗಿದ್ದಾರೆ. 2009 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡವರು. ಅವರ ಪತಿ ಮತ್ತು ಸಹೋದರ ಸಹ ಭಾರತೀಯ ನೌಕಾಪಡೆಯ ಅಧಿಕಾರಿಗಳಾಗಿದ್ದಾರೆ.

Tags

Related Articles

Close