ಪ್ರಚಲಿತ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಈ ಬಾರಿಯೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ಸಮ್ಮತಿ ವಾಡುವುದಕ್ಕೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನ ಯಾರೊಬ್ಬರೂ ವೈಯಕ್ತಿಕ ಆಸ್ತಿಯಲ್ಲ. ಅದು ಸಾರ್ವಜನಿಕ ಆಸ್ತಿ. ಅಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಕಳೆದ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ವರ್ಷಕ್ಕೆ ಎರಡು ಬಾರಿ ಈ ಮೈದಾನದಲ್ಲಿ ಮುಸ್ಲಿಮರಿಗೆ ನಮಾಜ್‌ಗೂ ಅವಕಾಶ ಮಾಡಿ ಕೊಡಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಈ ಬಾರಿಯೂ ಇಲ್ಲಿ ಗಣೇಶೋತ್ಸವ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸದೆ ಅನುಮತಿ ನೀಡಬೇಕು ಎಂದು ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಹಾಗೆಯೇ ಈದ್ಗಾ ಮೈದಾನವು ಸಾರ್ವಜನಿಕ ಆಸ್ತಿಯಾಗಿದ್ದು, ಪಾಲಿಕೆಯ ಒಡೆತನಕ್ಕೆ ಒಳಪಟ್ಟಿದೆ. ಇದನ್ನು ಉಪಯೋಗ ಮಾಡಿಕೊಳ್ಳುವ, ಬಳಸುವ ಹಕ್ಕು ಎಲ್ಲರಿಗೂ ಇದೆ. ಮುಸಲ್ಮಾನರಿಗೆ ವರ್ಷದ ಎರಡು ಬಾರಿ ಇಲ್ಲಿ ನಮಾಜ್‌ಗೆ ಅವಕಾಶ ನೀಡಲಾಗಿದೆ. ಹಾಗೆಂದು ಇದು ಅವರ ಆಸ್ತಿಯಲ್ಲ. ಕಳೆದ ವರ್ಷದಲ್ಲಿಯೂ ಇದೇ ಮೈದಾನದಲ್ಲಿ ನಾವು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದೆವು. ಈ ಸಂಬಂಧ ರಾಜ್ಯದ ಕಾಂಗ್ರೆಸ್ ಸರ್ಕಾರ ಅನಗತ್ಯ ವಿವಾದಗಳನ್ನು ಸೃಷ್ಟಿ ಮಾಡಿ ಯಾವುದೇ ಗೊಂದಲಗಳು ಹುಟ್ಟಿಕೊಳ್ಳುವ ಹಾಗೆ ಮಾಡಬಾರದು ಎಂಬುದಾಗಿಯೂ ಜೋಶಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯ ಗಣೇಶೋತ್ಸವವನ್ನು ಸಹ ಅಷ್ಟೇ ವಿಜೃಂಭಣೆಯಿಂದ ಹುಬ್ಬಳ್ಳಿಯಲ್ಲಿ ಆಚರಣೆ ಮಾಡಲಾಗುತ್ತದೆ. ಹಬ್ಬದ ಮೆರವಣಿಗೆಗೆ ಸಂಬಂಧಿಸಿದ ಹಾಗೆ ಪೊಲೀಸ್ ಇಲಾಖೆ ಗಣೇಶೋತ್ಸವ ಸಮಿತಿಗಳ ಜೊತೆಗೆ ಸೂಕ್ತ ಚರ್ಚೆ ನಡೆಸಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು. ಹಬ್ಬದ ಸಂಭ್ರಮದ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆಯೂ ಅವರು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹನ್ನೊಂದು ದಿನಗಳ ವರೆಗೆ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಲು ಅವಕಾಶ ನೀಡುವ ಹಾಗೆ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಯು ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಅವಕಾಶ ದೊರೆಯದೇ ಹೋದಲ್ಲಿ ಈದ್ಗಾ ಮೈದಾನದ ವಿಚಾರದಲ್ಲಿ ಮತ್ತೆ ವಿವಾದ ಭುಗಿಲೇಳುವ ಸಂಭವವೂ ಇದೆ. ಕಳೆದ ವರ್ಷ ಸಂಘಟನೆ ಮಾಡಿದ ಹೋರಾಟದ ಫಲ ಎಂಬಂತೆ ಮೂರು ದಿನಗಳ ಕಾಲ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ದೊರೆತಿತ್ತು. ಈ ಬಾರಿ ಹನ್ನೊಂದು ದಿನಗಳ ಕಾಲ ಆಚರಣೆಗೆ ಅವಕಾಶ ನೀಡುವಂತೆ ಸಮಿತಿಯು ಪಾಲಿಕೆಗೆೆ ಮನವಿ ಮಾಡಿರುವುದಾಗಿದೆ. ಕಳೆದ ವರ್ಷ ಹಬ್ಬದ ಹಿಂದಿನ ದಿನ ಇಲ್ಲಿ ಆಚರಣೆ ನಡೆಸಲು ಪಾಲಿಕೆ ಅನುಮತಿ ನೀಡಿತ್ತು. ಆದರೆ ಸಾಕಷ್ಟು ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ ಹದಿನೈದು ದಿನ ಮುಂಚಿತವಾಗಿಯೇ ಅನುಮತಿ ನೀಡುವಂತೆಯೂ ಪಾಲಿಕೆಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Tags

Related Articles

Close